ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರವು ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಾಗಿರುವ ಕ್ಷೇತ್ರ.
ಈ ಕ್ಷೇತ್ರವನ್ನು ಮೊದಲು ಉತ್ತರ ಲೋಕಸಭಾ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು (ಅಂದರೆ ಬಾಂಬೆ ರಾಜ್ಯ). 1952ರಿಂದ 2009ರವರಗೆ ಜನರಲ್ ಕೆಟಗರಿಯ ಅಭ್ಯರ್ಥಿಗಳು ಪ್ರತಿನಿಧಿಸುತ್ತಿದ್ದ ಕ್ಷೇತ್ರವಾಗಿತ್ತು. ಕಳೆದ 25 ವರ್ಷಗಳಿಂದ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿದೆ. 2009ರಿಂದ 2024ರವರೆಗೂ ಬಿಜೆಪಿಯ ರಮೇಶ್ ಜಿಗಜಿಣಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಪರಿಶಿಷ್ಟ ಪಂಗಡದವರಿಗೆ ಮೀಸಲಿರುವ ಕ್ಷೇತ್ರ ಇದಾಗಿದೆ.
1952 ರಿಂದ 2009ರ ಅವಧಿಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜನತಾದಳದ ಅಭ್ಯರ್ಥಿಗಳು ಸಂಸದರಾಗಿ ಆಯ್ಕೆಯಾಗಿದ್ದಾರೆ. ವಿಜಯಪುರ ಲೋಕಸಭಾ ಕ್ಷೇತ್ರದ ಮತದಾರರು ಎಲ್ಲಾ ಪಕ್ಷದ ಅಭ್ಯರ್ಥಿಗಳ ಅಭಿವೃದ್ಧಿ ಕೆಲಸಗಳನ್ನು ನೋಡಿದ್ದಾರೆ. ಕಳೆದ 20ರಿಂದ 30ವರ್ಷಗಳ ಆಚೆಗಿನ ರಾಜಕಾರಣ ಬೇರೆಯೇ ಇತ್ತು. ಆದರೆ, ಇವತ್ತಿನ ರಾಜಕಾರಣ ಸಂಪೂರ್ಣ ಬದಲಾಗಿದೆ ಎನ್ನುತ್ತಾರೆ ವಿಜಯಪುರ ನಗರದ ಶಿಕಾರಿಕಾನೆ ಸ್ಲಂ ನಿವಾಸಿ ರೇಷ್ಮಾ ಬಂಡಿವಡ್ಡರ.
ಮುಂಚಿನ ರಾಜಕಾರಣ ಬದ್ಧತೆಯಿಂದ ಕೂಡಿತ್ತು. ಪ್ರಾಮಾಣಿಕರಾಗಿದ್ದರು. ಈಗಿನ ರಾಜಕಾರಣ ಜಾತಿ, ಧರ್ಮ, ಹಣಬಲದಿಂದ ಕೂಡಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಇಲ್ಲಿನ ಮತದಾರರು.
2009ರಿಂದ ಕ್ಷೇತ್ರದ ಅಭಿವೃದ್ಧಿಯಾಗಿದೆಯೇ ಅಂತ ನೋಡಿದರೆ, ಪರಿಣಾಮಕಾರಿ ಎನ್ನುವಂತಹ ಯಾವುದೇ ಅಭಿವೃದ್ಧಿಯ ಕೆಲಸಗಳು ಜಿಲ್ಲೆಯಲ್ಲಿ ಆಗಿಲ್ಲ. ನಮ್ಮ ಕ್ಷೇತ್ರದ ಎಂಪಿ ಯಾರು ಎಂದು ಗೊತ್ತೇ ಇಲ್ಲ ಎಂದು ಅಸಮಾಧಾನಗೊಳ್ಳುತ್ತಾರೆ, ವಿಜಯಪುರ ಜಿಲ್ಲೆಯ ನಾಗಠಾಣ ತಾಲೂಕಿನ ಮುತ್ತು ಛಲವಾದಿ.
ನಮ್ಮ ಸಂಸದರು ಎರಡು ಬಾರಿ ಗೆದ್ದು ಬಂದಿರುವುದು ಮೋದಿ ಅಲೆಯಿಂದ ಮಾತ್ರ. ಅದು ಬಿಟ್ಟರೆ, ಹೇಳಿಕೊಳ್ಳುವಂತಹ ಕೆಲಸಗಳನ್ನು ಮಾಡಿಲ್ಲ ಎನ್ನುತ್ತಾರೆ ಮುದ್ದೇಬಿಹಾಳದ ನಾ ಪರಶುರಾಮ.
ʼನೋಡ್ರಿ ಸರ್ ನಮ್ಮ ಊರು ಗಂಗೂರು. ಆದರ, ಮುದ್ದೇಬಿಹಾಳದಾಗ ಎಂಪಿ ಸಾಹೇಬ್ರನಾ ನೋಡಿಲ್ಲಾರಿ ಒಂದು ಸಲಾನೂʼ ಎನ್ನುತ್ತಾರೆ 60 ವರ್ಷದ ಮಲ್ಲಮ್ಮ ಅಜ್ಜಿ.
2009ರಿಂದ 2024ರವರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇದ್ದರೂ ಕೂಡ, ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕೆಲಸಗಳಾಗದೆ ಇರುವುದು ದುರಂತವೇ ಸರಿ ಎನ್ನುತ್ತಾರೆ ಸಿಂದಗಿ ತಾಲೂಕಿನ ಮೊರಟಾಗಿ ಗ್ರಾಮದ ಪ್ರಗತಿಪರ ಹೋರಾಟಗಾರ ಅಣ್ಣಾರಾಯ ಇಳೆಗೇರರವರು.
ಒಟ್ಟಿನಲ್ಲಿ ನಮ್ಮ ಸಂಸದರು ಚುನಾವಣೆಗೆ ಮಾತ್ರ ಸೀಮಿತವಾಗಿದ್ದು, ಜನಗಳ ಹತ್ತಿರ ಹೋಗುವುದನ್ನು ಮರೆತಿದ್ದಾರೆ ಎನ್ನುವ ಅಭಿಪ್ರಾಯ ಕ್ಷೇತ್ರದ ಜನರಲ್ಲಿದೆ. ಮೂರು ಬಾರಿ ಆಯ್ಕೆಯಾಗಿರುವ ಸಂಸದ ರಮೇಶ್ ಜಿಗಜಿಗಣಿಯವರು ಹೇಳಿಕೊಳ್ಳುವಂತಹ ಯಾವುದೇ ಕೆಲಸಗಳನ್ನು ಕ್ಷೇತ್ರದಲ್ಲಿ ಮಾಡದೆ ಇರುವುದು ಕ್ಷೇತ್ರದ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಮತ್ತೇ ಚುನಾವಣೆ ಬಂದಿದೆ.
ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಯದ ಕಾರಣ ಹಾಗೂ ಬಿಜೆಪಿಯಲ್ಲಿ ಆಂತರಿಕವಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ತೀವ್ರವಾಗಿದೆ.
ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವು 39 ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ ಮಾಡಿದೆ. ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಪ್ರೊ. ರಾಜು ಅಲಗೂರ ಆಯ್ಕೆ ಮಾಡಿದ್ದಾರೆ. ಪ್ರೊ. ರಾಜು ಆಲಗೂರ ದಲಿತಪರ ಚಳುವಳಿಯಲ್ಲಿ ಮುಂಚೂಣಿ ನಾಯಕರಾಗಿ ಬೆಳೆದು ಬಂದವರು. ಇವರು ಛಲುವಾದಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ದಿ. ಬಿ.ಎಂ. ಪಾಟೀಲರು ಇವರನ್ನು ರಾಜಕೀಯಕ್ಕೆ ಪರಿಚಯಿಸಿದವರು. ನಂತರದ ದಿನಗಳಲ್ಲಿ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತನಾಗಿ ರಾಜು ಅಲಗೂರವರು ಹೊರಹೊಮ್ಮಿದರು.
ಈ ಹಿಂದೆ 1999-2004ರಲ್ಲಿ ಬಳ್ಳೋಳ್ಳಿ ಮೀಸಲು ವಿಧಾನಸಭಾ ಕ್ಷೇತ್ರ ಹಾಗೂ 2013-18ರ ಅವಧಿಯಲ್ಲಿ ನಾಗತಾನ್ ಮೀಸಲು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದವರು. ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮ(ಕೆಎಸ್‌ಡಿಎಲ್)ದ ಅಧ್ಯಕ್ಷರಾಗಿ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ ಅಲಗೂರ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ, ಆರು ಕಾಂಗ್ರೆಸ್‌ನ ಎಂಎಲ್ಎಗಳಿದ್ದಾರೆ. ಇಬ್ಬರು ಸಂಪುಟ ಸಚಿವರಾಗಿದ್ದಾರೆ.
ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷವು ಈ ಬಾರಿ ಮೀಸಲು ಕ್ಷೇತ್ರದಿಂದ ಅಭ್ಯರ್ಥಿಯನ್ನು ಮುಂಚೆಯೇ ಘೋಷಣೆ ಮಾಡಿ ಗೆಲ್ಲಲೇಬೇಕೆಂಬ ಪಣ ತೊಟ್ಟಂತಿದೆ. 17ನೇ ಲೋಕಸಭಾ ಚುನಾವಣೆ ಎದುರಿಸುತ್ತಿರುವ ಮತದಾರರು ಯಾರಿಗೆ ಮಣೆ ಹಾಕುತ್ತಾರೆ ಕಾದು ನೋಡಬೇಕು.
Good work