ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರುಪುರ ಗ್ರಾಮದ ಶ್ರೀಕಲ್ಲೇಶ್ವರಸ್ವಾಮಿ ದೇವಾಲಯದ ರಥಕ್ಕೆ ಯಾರೋ ಅಪರಿಚಿತ ವ್ಯಕ್ತಿ ಬೆಂಕಿ ಹಚ್ಚಿದ್ದು ರಥ ಸಂಪೂರ್ಣವಾಗಿ ಸುಟ್ಟುಹೋಗಿದೆ.
ಮರದ ರಥಕ್ಕೆ ಬೆಂಕಿಹಚ್ಚಿ ಸಂಪೂರ್ಣ ಸುಟ್ಟುಹಾಕಿದ ಎನ್ನಲಾದ ಓರ್ವ ಅನುಮಾನಾಸ್ಪದ ವ್ಯಕ್ತಿಯನ್ನು ಗ್ರಾಮಸ್ಥರೇ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.
ದೇವಾಲಯದ ರಥವನ್ನು ಇರಿಸಿದ್ದ ತೇರಿನ ಮನೆಯಲ್ಲಿ ಮರದ ರಥ ಧಗ ಧಗನೇ ಹತ್ತಿ ಉರಿಯುತ್ತಿರುವುದನ್ನು ಕಂಡ ಗ್ರಾಮಸ್ಥರು ಕೂಡಲೇ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಗುಬ್ಬಿ ಪೊಲೀಸರು ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಆದರೆ, ರಥ ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಸುಟ್ಟುಹೋಗಿದೆ.
ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬನನ್ನು ಹಿಡಿದು ಗ್ರಾಮಸ್ಥರು ವಿಚಾರಿಸಿದ್ದಾರೆ. ಆತ ಯಾವುದೇ ಉತ್ತರ ನೀಡದೇ ಇದ್ದಾಗ ಅನುಮಾನಗೊಂಡ ಗ್ರಾಮಸ್ಥರು ಯುವಕನನ್ನು ಗುಬ್ಬಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ಆತ ಹಿಂದಿ ಮಾತನಾಡುವ ವ್ಯಕ್ತಿಯಾಗಿದ್ದು ಗ್ರಾಮದ ನಿವಾಸಿಯಲ್ಲ. ಆದರೆ, ಸಂಪೂರ್ಣ ಮರದ ರಥಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಿರುವ ಹಿನ್ನಲೆ ತಿಳಿಯುತ್ತಿಲ್ಲ. ಇಡೀ ಗ್ರಾಮದ ಕ್ಷೇತ್ರ ಪಾಲಕ ಶ್ರೀಕಲ್ಲೇಶ್ವರಸ್ವಾಮಿಯ ಭಕ್ತರಲ್ಲಿ ಈ ಘಟನೆ ತೀರಾ ನೋವು ತಂದಿದೆ. ಘಟನೆಯ ಹಿನ್ನೆಲೆ ಏನು ಎಂಬುದು ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕುತ್ತಿದ್ದಾರೆ.
