ತುಮಕೂರು ಜಿಲ್ಲೆ ಹೇಮಾವತಿ ನಾಲೆ ಸುತ್ತ ಮಾ.12ರಿಂದ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಶುಭ ಕಲ್ಯಾಣ್ ಆದೇಶ ಹೊರಡಿಸಿದ್ದಾರೆ.
ತುಮಕೂರು ಜಿಲ್ಲಾ ವ್ಯಾಪ್ತಿಯ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲು ಹೇಮಾವತಿ ಜಲಾಶಯದಿಂದ ನೀರು ಹರಿಸುತ್ತಿರುವ ತುಮಕೂರು, ತಿಪಟೂರು, ಗುಬ್ಬಿ ಹಾಗೂ ತುರುವೇಕೆರೆ ತಾಲೂಕು ವ್ಯಾಪ್ತಿಯಲ್ಲಿನ ಹೇಮಾವತಿ ನಾಲೆಯ ಉದ್ದಕ್ಕೂ ಸುತ್ತಮುತ್ತಲ 100ಮೀಟರ್ ವ್ಯಾಪ್ತಿಯಲ್ಲಿ ಮಾರ್ಚ್ 12ರಿಂದ ಮುಂದಿನ ಆದೇಶದವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶುಭ ಕಲ್ಯಾಣ್ ಆದೇಶಿಸಿದ್ದಾರೆ.
2023-24ನೇ ಸಾಲಿನಲ್ಲಿ ಹೇಮಾವತಿ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿಗಾಗಿ ಮೀಸಲಿಟ್ಟಿರುವುದರಿಂದ. 2024ನೇ ವರ್ಷದ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿಗೆ ಅಭಾವವಾಗದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲು, ಹೇಮಾವತಿ ನಾಲಾ ಜಾಲಕ್ಕೆ ಸಂಬಂಧಿಸಿದ ಕೆರೆ-ಕಟ್ಟೆಗಳನ್ನು ತುಂಬಿಸಲು ಹೇಮಾವತಿ ಜಲಾಶಯದಿಂದ ನೀರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಅದರಂತೆ ತುಮಕೂರು ಶಾಖಾ ನಾಲೆ ಸರಪಳಿ 70 ಕಿ.ಮೀ. ನಿಂದ 145 ಕಿ.ಮೀವರೆಗೆ ನೀರನ್ನು ಹರಿಸಲು ಉದ್ದೇಶಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಕೆರೆಗಳಿಗೆ ನೀರನ್ನು ಹರಿಸಲು ಆದೇಶವಾಗಿದ್ದು, ತುಮಕೂರು ಜಿಲ್ಲೆಯ ತುಮಕೂರು, ಗುಬ್ಬಿ, ತುರುವೇಕೆರೆ ಹಾಗೂ ತಿಪಟೂರು ತಾಲ್ಲೂಕುಗಳಲ್ಲಿ ಹೇಮಾವತಿ ನಾಲೆಯ ಮೂಲಕ ನೀರನ್ನು ಹರಿಸಲಾಗುವುದರಿಂದ ಸದರಿ ನಾಲೆಯ ಭಾಗದ ಜನರು ಅನಧಿಕೃತವಾಗಿ ಜಮೀನು/ತೋಟಗಳಿಗೆ ನೀರು ಹರಿಸಿಕೊಳ್ಳುವ ಸಾಧ್ಯತೆಯಿದ್ದು, ಈ ಹಿನ್ನಲೆಯಲ್ಲಿ ನಾಲೆಯ ಸುತ್ತಲೂ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ನಾಶಪಡಿಸದಂತೆ ತಡೆಗಟ್ಟಲು, ನಾಲೆಯ ಸುರಕ್ಷತೆಯ ಹಿತದೃಷ್ಟಿಯಿಂದ ಈ ನಿಷೇದಾಜ್ಞೆಯನ್ನು ಜಾರಿಗೊಳಿಸುವುದು ಅವಶ್ಯವೆಂದು ಪರಿಗಣಿಸಿ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.