ನಿರಂತರವಾಗಿ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಿರುವ ಬೈಜೂಸ್ ಸಂಸ್ಥೆ ಈಗ ಬೆಂಗಳೂರಿನಲ್ಲಿರುವ ತನ್ನ ಮುಖ್ಯ ಕಚೇರಿಯನ್ನು ಹೊರತುಪಡಿಸಿ ಉಳಿದೆಲ್ಲ ಕಚೇರಿಗಳನ್ನು ಮುಚ್ಚಿದೆ. ಜೊತೆಗೆ 14,000 ಉದ್ಯೋಗಿಗಳಿಗೆ ‘ವರ್ಕ್ ಫ್ರಮ್ ಹೋಮ್’ ನೀಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಸುಮಾರು ಒಂದು ಸಾವಿರ ಉದ್ಯೋಗಿಗಳು ಕಾರ್ಯನಿರ್ವಹಿಸುವ ಬೆಂಗಳೂರಿನಲ್ಲಿರುವ ತನ್ನ ಮುಖ್ಯಕಚೇರಿ ಬಿಟ್ಟು ದೇಶದಾದ್ಯಂತ ಇರುವ ಉಳಿದೆಲ್ಲ ಕಚೇರಿಯನ್ನು ಬೈಜೂಸ್ ಮುಚ್ಚಿದೆ. ಕಳೆದ ಕೆಲವು ತಿಂಗಳುಗಳಿಂದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಬೈಜೂಸ್, ಈ ಕಚೇರಿಗಳ ಒಪ್ಪಂದವನ್ನು ಮತ್ತೆ ಮಾಡಿಕೊಳ್ಳದೆ ಖಾಲಿ ಮಾಡಿದೆ ಎಂದು ವರದಿ ಉಲ್ಲೇಖಿಸಿದೆ. ಆದರೆ 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿರುವ ಸುಮಾರು 300ರಷ್ಟು ಟ್ಯೂಷನ್ ಸೆಂಟರ್‌ಗಳನ್ನು ಬೈಜೂಸ್ ಮುಚ್ಚಿಲ್ಲ.
ಇನ್ನು ಕಳೆದ ತಿಂಗಳು ಷೇರುದಾರರು ಬೈಜೂ ರವೀಂದ್ರನ್‌ರನ್ನು ಸಿಇಒ ಸ್ಥಾನದಿಂದ ಕೆಳಗಿಳಿಸುವುದರ ಪರವಾಗಿ ಮತ ಚಲಾಯಿಸಿದ್ದಾರೆ. ಆದರೆ ಈ ನಿರ್ಣಯವನ್ನು ತಿರಸ್ಕರಿಸಿರುವ ಬೈಜೂಸ್, “ಕೆಲವೇ ಷೇರುದಾರರು ಇರುವಾಗ ಕೈಗೊಂಡ ನಿರ್ಣಯ ಇದಾಗಿದೆ, ಇದನ್ನು ಮಾನ್ಯ ಮಾಡಲಾಗದು” ಎಂದು ಹೇಳಿದೆ.
ಈ ಬಿಕ್ಕಟ್ಟಿನ ಮಧ್ಯೆ ಬೈಜೂ ರವೀಂದ್ರನ್ ತನ್ನ ಪ್ರಮುಖ ಹೂಡಿಕೆದಾರರ ಬೆಂಬಲವನ್ನು ಕಳೆದುಕೊಂಡಿದ್ದಾರೆ ಮತ್ತು ಸಂಸ್ಥೆಗೆ ಸಾಲ ನೀಡಿದ ಯುಎಸ್ ಸಂಸ್ಥೆಯೊಂದಿಗೆ ಕಾನೂನು ಸಮರ ನಡೆಸುತ್ತಿದ್ದಾರೆ. ಇನ್ನು “ಫೆಬ್ರವರಿಯ ವೇತನವನ್ನು ನೀಡಲು ಸಾಧ್ಯವಾಗುತ್ತಿಲ್ಲ, ತಡವಾಗಿ ಸಂಬಳ ನೀಡಲಾಗುವುದು” ಎಂದು ಕಳೆದ ತಿಂಗಳು ರವೀಂದ್ರನ್ ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ನಗದು ಕೊರತೆಯನ್ನು ಎದುರಿಸುತ್ತಿರುವ ಬೈಜೂಸ್, 1.2 ಬಿಲಿಯನ್ ಡಾಲರ್ ಸಾಲದ ಹೊರೆಯಲ್ಲಿ ಸಿಲುಕಿದೆ. ಈ ಹಿಂದೆ ಸುಮಾರು 20 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದ ಬೈಜೂಸ್ ಕಳೆದ ಒಂದು ವರ್ಷದಲ್ಲಿ ಶೇಕಡ 90ರಷ್ಟು ಮೌಲ್ಯವನ್ನು ಕಳೆದುಕೊಂಡಿದೆ.