ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಭೇಟಿಗೆ ಚೀನಾದ ಆಕ್ಷೇಪವನ್ನು ಭಾರತ ತಳ್ಳಿ ಹಾಕಿದೆ. “ರಾಜ್ಯವು ಭಾರತದ ಅವಿಭಾಜ್ಯ ಅಂಗವಾಗಿದೆ. ಅದನ್ನು ಬೇರ್ಪಡಿಸಲು ಎಂದಿಗೂ ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿದೆ.
ಚೀನಾದ ದೂರನ್ನು ತಳ್ಳಿಹಾಕಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಪ್ರಧಾನಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವ ಕುರಿತು ಚೀನಾದ ಕಡೆಯಿಂದ ಮಾಡಿದ ಹೇಳಿಕೆಗಳನ್ನು ನಾವು ತಿರಸ್ಕರಿಸುತ್ತೇವೆ. ಭಾರತೀಯ ನಾಯಕರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದನ್ನು ಮತ್ತು ಸರ್ಕಾರದ ಯೋಜನೆಗಳನ್ನು ವಿರೋಧಿಸಲು ಚೀನಾಕ್ಕೆ ಅಧಿಕಾರವಿಲ್ಲ” ಎಂದು ಹೇಳಿದ್ದಾರೆ.
ಕಳೆದ ವಾರ ಪ್ರಧಾನಿ ಮೋದಿಯವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರ ಬಗ್ಗೆ ಭಾರತಕ್ಕೆ ದೂರು ಸಲ್ಲಿಸಿರುವುದಾಗಿ ಚೀನಾ ಸೋಮವಾರ ಹೇಳಿದೆ. ಭಾರತದ ನಡೆಗಳು ಬಗೆಹರಿಯದ ಗಡಿ ಸಮಸ್ಯೆಯನ್ನು ಸಂಕೀರ್ಣಗೊಳಿಸತ್ತದೆ ಎಂದು ಹೇಳಿರುವ ಚೀನಾ, ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕಿದೆ ಎಂಬ ವಾದವನ್ನು ಪುನರುಚ್ಚರಿಸಿದೆ.
“ಭಾರತದ ನಾಯಕರು ಕಾಲಕಾಲಕ್ಕೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಅಂತಹ ಭೇಟಿಗಳು ಅಥವಾ ಭಾರತದ ಅಭಿವೃದ್ಧಿ ಯೋಜನೆಗಳನ್ನು ವಿರೋಧಿಸಲು ಸಾಧ್ಯವೇ ಇಲ್ಲ. ಅಲ್ಲದೆ, ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂಬ ವಾಸ್ತವತೆಯನ್ನು ಚೀನಾದ ಆಕ್ಷೇಪ ಬದಲಾಯಿಸುವುದಿಲ್ಲ” ಎಂದು ಜೈಸ್ವಾಲ್ ಹೇಳಿದ್ದಾರೆ.