ಕಾರಿನ ಮೇಲೆ ಕಬ್ಬಿನ ಲಾರಿ ಉರುಳಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿರುವ ತಮಿಳುನಾಡಿನ ದಿಂಬಂ ಘಾಟ್‌ನಲ್ಲಿ ನಡೆದಿದೆ.
ಕರ್ನಾಟಕ-ತಮಿಳುನಾಡು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಘಟನೆ ನಡೆದಿದೆ. ಮೃತರನ್ನು ತಮಿಳುನಾಡಿನ ಈರೋಡ್ ಮೂಲದವರು ಎಂದು ಗುರುತಿಸಲಾಗಿದೆ.
ಒಂದೇ ಕುಟುಂಬದ ಐವರು ಮೈಸೂರಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ, ಕಬ್ಬು ತುಂಬಿದ ಲಾರಿಯೊಂದು ಕಾರಿನ ಮೇಲೆ ಪಲ್ಟಿಯಾಗಿದೆ. ಕಬ್ಬಿನ ಕಂತೆಗಳ ರಾಶಿ ಕಾರಿನ ಮೇಲೆ ಬಿದ್ದಿವೆ. ತಕ್ಷಣವೇ ಸ್ಥಳೀಯರು ಮತ್ತು ವಾಹನ ಸವಾರರು ಕಬ್ಬಿನ ತಂತೆಗಳನ್ನು ತೆಗೆದಿದ್ದಾರೆ. ಅಲ್ಲದೆ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆ ನಡೆಸಿದ್ದಾರೆ. ಇಬ್ಬರನ್ನು ರಕ್ಷಿಸಲಾಗಿದೆ. ಆದರೆ, ಇನ್ನುಳಿದ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ರಕ್ಷಿಸಲಾದ ಇಬ್ಬರನ್ನು ಚಿಕಿತ್ಸೆಗಾಗಿ ಸತ್ಯಮಂಗಲಂ ಸರ್ಕಾರಿ ಆಸ್ಪತ್ರೆ ದಾಖಲಿಸಲಾಗಿದೆ. ಆಸನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.