ಟಿಕೆಟ್ ಕೈತಪ್ಪುವುದು ಬಹುತೇಕ ಖಚಿತವೆಂದು ತಿಳಿದಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಸೋಮವಾರ ರಾತ್ರಿ ಫೇಸ್‌ಬುಕ್ ಲೈವ್‌ನಲ್ಲಿ ಗೋಳಾಡಿದ್ದಾರೆ. ಇದೀಗ, ಮೈಸೂರು ಕ್ಷೇತ್ರದಲ್ಲಿ ಅವರ ಬದಲು ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂಬ ವರದಿಗಳೂ ಇವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, “ಮಹಾರಾಜರನ್ನೇ ರಾಜಕೀಯಕ್ಕೆ ತಂದ ನಮ್ಮ ಮುಖಂಡರಿಗೆ ಧನ್ಯವಾದ” ಎಂದು ವ್ಯಂಗ್ಯವಾಡಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, “ಯದುವೀರ್ಗೆ ಟಿಕೆಟ್ ಕೊಡುವುದಾದರೆ ಸ್ವಾಗತ. ಅರಮನೆಯ ದರ್ಬಾರಿನಲ್ಲಿರುವ ಬದಲು ಸಾಮಾನ್ಯ ಪ್ರಜೆಗಳಂತೆ ಬದುಕಲು ಸ್ವಾಗತಿಸಬೇಕಲ್ಲವೇ” ಎಂದು ಕುಹಕವಾಡಿದ್ದಾರೆ.
“ರಾಜರೇ ಪ್ರಜೆಗಳ ಜೊತೆ ಇರಲು ಬರುವುದಾದರೆ ಸ್ವಾಗತ. ಅರಮನೆಯಲ್ಲಿ ಅರಾಮವಾಗಿದ್ದ ವ್ಯಕ್ತಿ ಹೋರಾಟಕ್ಕೆ ಬರುತ್ತಿದ್ದಾರೆ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೋರಾಡಲು ಬೀದಿಗೆ ಬಂದರೆ ಸಂತೋಷ” ಎಂದಿದ್ದಾರೆ.
“ಅರಮನೆ ಆಸ್ತಿ ವಿಚಾರದಲ್ಲಿ ರಾಜವಂಶಸ್ಥರು ಮತ್ತು ಸರ್ಕಾರದ ನಡುವೆ ವ್ಯಾಜ್ಯಗಳಿವೆ. ಅದರಲ್ಲಿ ಬಹುತೇಕ ಆಸ್ತಿಗಳು ಸಾರ್ವಜನಿಕ ಬಳಕೆಯಲ್ಲಿವೆ. ಯದುವೀರ್ ಜನಪ್ರತಿನಿಧಿಯಾಗಿ ಆಯ್ಕೆಯಾಗಿ, ಆ ಆಸ್ತಿಗಳನ್ನು ಸರ್ಕಾರಕ್ಕೆ ಕೊಡಿಸುತ್ತಾರೆ” ಎಂದು ಕಾಲೆಳೆದಿದ್ದಾರೆ.
ಹಿಂದುತ್ವದ ಬಗ್ಗೆ ಮಾತನಾಡಿರುವ ಪ್ರತಾಪ್, “ಹಿಂದುತ್ವದ ವಿಚಾರದಲ್ಲಿ ನನ್ನಷ್ಟು ಬದ್ದತೆ ಇರುವ ಸಂಸದರು ಬೇರೆ ಯಾರಿದ್ದಾರೆ? ಸಂಘಟನೆ ಸಿದ್ದಾಂತಕ್ಕೆ ಬದ್ದನಾಗಿದ್ದೇನೆ. ನನಗೆ ಟಿಕೆಟ್ ಸಿಗುತ್ತದೆ. ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಅವರು ಭೇಟಿ ಮಾಡಲು ಕರೆದಿದ್ದಾರೆ. ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುತ್ತೇನೆ” ಎಂದು ಹೇಳಿದ್ದಾರೆ.