ಈವರೆಗೆ ಯಾವುದೇ ಸರ್ಕಾರಗಳು ಶಾಶ್ವತ ನೀರಾವರಿ ಭದ್ರತೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಒದಗಿಸಿಲ್ಲ ಎಂದು ನೀರಾವರಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ನೀರಾವರಿ ತಜ್ಞ ದಿ. ಪರಮಶಿವಯ್ಯ ಅವರ 10ನೇ ಪುಣ್ಯಸ್ಮರಣೆ ಅಂಗವಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಮತ್ತು ಯುವಶಕ್ತಿ ಸಂಘಟನೆ ಹಮ್ಮಿಕೊಂಡಿದ್ದ ನೀರಾವರಿಗಾಗಿ ಸಂಕಲ್ಪ ಸಮಾವೇಶದಲ್ಲಿ ರೈತ ಮುಖಂಡರು, ಹೋರಾಟಗಾರರು ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ತೋಡಿಕೊಂಡರು.
ನಗರದ ಮರಳ ಸಿದ್ದೇಶ್ವರ ದೇವಸ್ಥಾನ ಬಳಿಯಿಂದ ಆರಂಭವಾದ ರ್‍ಯಾಲಿಯು ಶಿಡ್ಲಘಟ್ಟ ವೃತ್ತದ ಮೂಲಕ ಸಾಗಿತು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್ ಆಂಜನೇಯ ರೆಡ್ಡಿ ಮಾತನಾಡಿ, “ಪರಮಶಿವಯ್ಯ ಅವರು ತಮ್ಮ ಕೊನೆಯಸಿರಿರುವವರೆಗೆ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಕೊಡಿ ಎಂದು ಹೋರಾಟ ಮಾಡಿದವರು” ಎಂದರು.
“ಈವರೆಗೂ ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಯಡಿ ಒಂದೇ ಒಂದು ಟಿಎಂಸಿ ಅಡಿ ನೀರು ದೊರೆತಿಲ್ಲ. ಕುಡಿಯುವ ನೀರಿನಲ್ಲಿ ಅಪಾಯಕಾರಿ ಯುರೇನಿಯಂ, ಅರ್ಸೆನಿಕ್ ಅಂಶಗಳು ಅಪಾಯದ ಮಟ್ಟದಲ್ಲಿವೆ. ಆದರೆ ಈ ಬಗ್ಗೆ ಸರ್ಕಾರಗಳು, ಜನಪ್ರತಿನಿಧಿಗಳು ತಲೆ ಕೆಡಿಕೊಳ್ಳುತ್ತಿಲ್ಲ” ಎಂದು ಕಿಡಿಕಾರಿದರು.
“ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಳಕೆಗಾಗಿ ಕೊಳಚೆ ನೀರನ್ನು ಮೂರು ಹಂತದಲ್ಲಿ ಶುದ್ದೀಕರಿಸಲಾಗುತ್ತಿದೆ. ಕಬ್ಬನ್ ಪಾರ್ಕ್‌ನಲ್ಲಿ ಗಿಡಗಳಿಗಾಗಿ ಮೂರು ಹಂತದಲ್ಲಿ ಶುದ್ದೀಕರಿಸಲಾಗುತ್ತಿದೆ. ಆದರೆ ಈ ಮೂರು ಜಿಲ್ಲೆಗಳಿಗೆ ಕೆ ಸಿ ವ್ಯಾಲಿ ಮತ್ತು ಎಚ್ ಎನ್ ವ್ಯಾಲಿ ಯೋಜನೆ ಮೂಲಕ ಮನುಷ್ಯರಿಗಾಗಿ ಹರಿಸುತ್ತಿರುವ ನೀರನ್ನು ಎರಡು ಹಂತದಲ್ಲಿ ಶುದ್ದೀಕರಿಸಲಾಗುತ್ತಿದೆ. ಇದು ಎಷ್ಟು ಸರಿ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ | ಜಯಪ್ರಕಾಶ್ ಹೆಗ್ಡೆಗೆ ಕೈ ತಪ್ಪುತ್ತಾ ಕಾಂಗ್ರೆಸ್ ಟಿಕೆಟ್?
“ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನೇ ಪಾಲಿಸುತ್ತಿಲ್ಲ. ಕೊಳಚೆ ನೀರಿನಿಂದ ಕೆರೆಗಳು ನಾಶವಾಗುತ್ತಿವೆ. ನಾವೇನು ಪಾಪ ಮಾಡಿದ್ದೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ, ರೈತ ಮುಖಂಡರುಗಳಾದ ಆಯೇಷಾ, ಬಿ ಎನ್ ಗಂಗಾಧರಪ್ಪ, ಲೋಕೇಶ್ ಗೌಡ, ಉಷಾ ಕಿರಣ, ಕನ್ನಡ ಸೇನೆ ರವಿಕುಮಾರ್, ಪ್ರಕಾಶ್, ಮಲ್ಲುರಿ ಹರೀಶ ಸೇರಿದಂತೆ ಇತರರು ಇದ್ದರು.