ಉತ್ತರ ಪ್ರದೇಶದ ಹಾಪುರ್‌ನ ಸ್ಥಳೀಯ ನ್ಯಾಯಾಲಯವು 2018ರ ಗುಂಪು ಹತ್ಯೆ ಪ್ರಕರಣದಲ್ಲಿ ಎಲ್ಲ 10 ಮಂದಿ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದೆ. ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ (ಪೋಕ್ಸೊ) ಶ್ವೇತಾ ದೀಕ್ಷಿತ್ ಅವರು ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಗೋಹತ್ಯೆ ಎಂಬ ಸುಳ್ಳು ವದಂತಿಯ ಮೇಲೆ 45 ವರ್ಷದ ಖಾಸಿಂನನ್ನು ಹತ್ಯೆಗೈದು, ಸಮಯದೀನ್ (62) ಮೇಲೆ ಹಲ್ಲೆ ನಡೆಸಿದ 10 ಮಂದಿ ಆರೋಪಿಗಳನ್ನು ದೋಷಿ ಎಂದು ತೀರ್ಪು ನೀಡಿದ್ದಾರೆ.
ಸರ್ಕಾರಿ ವಕೀಲ ವಿಜಯ್ ಚೌಹಾಣ್ ಅವರ ಪ್ರಕಾರ, ಧೌಲಾನಾದ ಬಜೈದಾ ಗ್ರಾಮದ ರಾಕೇಶ್, ಹರಿಓಮ್, ಯುಧಿಷ್ಠಿರ್, ರಿಂಕು, ಕರನ್‌ಪಾಲ್, ಮನೀಶ್, ಲಲಿತ್, ಸೋನು, ಕಪ್ತಾನ್ ಮತ್ತು ಮಂಗೇರಾಮ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, ತಲಾ 58,000 ರೂ. ದಂಡವ ವಿಧಿಸಲಾಗಿದೆ.
ಸಂತ್ರಸ್ತ ಕುಟುಂಬದ ಪರವಾಗಿ ವಾದಿಸಿದ ವಕೀಲರು, “ಸಂತ್ರಸ್ತ ಕುಟುಂಬವು ಆರೋಪಿಗಳ ವಿರುದ್ಧ ಯಾವುದೇ ದ್ವೇಷ ಹೊಂದಿಲ್ಲ. ಅವರು ನ್ಯಾಯವನ್ನು ಕೋರುತ್ತಾರೆ. ಅಪರಾಧಿಗಳಿಗೆ ಮರಣದಂಡನೆ ವಿಧಿಸುವುದು ಬೇಡ” ಎಂದು ನ್ಯಾಯಾಲಯವನ್ನು ಕೋರಿದ್ದರು.
2018ರ ಜೂನ್‌ನಲ್ಲಿ ಗೋಹತ್ಯೆ ಮಾಡಿದ್ದಾರೆಂದು ಆರೋಪಿಸಿ ಬಜೈದಾ ಗ್ರಾಮದ ನಿವಾಸಿ ಖಾಸಿಮ್ ಅವರನ್ನು ಗುಂಪೊಂದು ಹತ್ಯೆ ಮಾಡಿತ್ತು. ಅಲ್ಲದೆ, ಸಮಯದೀನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಘಟನೆಯನ್ನು ಬೈಕ್ ಅಪಘಾತವೆಂದು ತಿರುಚಿ ಪೊಲೀಸರು ಸುಳ್ಳು ಎಫ್‌ಐಆರ್ ದಾಖಲಿಸಿದ್ದರು. ಸಂತ್ರಸ್ತ ಸಮಯ್‌ದೀನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ, ಪ್ರಕರಣವನ್ನು ನ್ಯಾಯಯುತ ರೀತಿಯಲ್ಲಿ ತನಿಖೆ ನಡೆಸಲಾಗಿತ್ತು.