ದೆಹಲಿಯಲ್ಲಿ ಕಳೆದ ಶುಕ್ರವಾರ(ಮಾ.8) ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದವರಿಗೆ ಪೊಲೀಸ್ ಅಧಿಕಾರಿಯೋರ್ವ ಕಾಲಿನಿಂದ ಒದ್ದದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಈ ನಡುವೆಯೇ ಮಾ.12ರಿಂದ ದೇಶಾದ್ಯಂತ ಮುಸ್ಲಿಮರ ಪವಿತ್ರ ತಿಂಗಳು ಹಾಗೂ ಉಪವಾಸದ ತಿಂಗಳಾಗಿರುವ ರಮಝಾನ್ ಕೂಡ ಆಗಮಿಸಿದೆ.
ರಮಝಾನ್ ತಿಂಗಳು ಬಂತೆಂದರೆ ಸಾಕು, ರಾಜ್ಯದ ರಾಜಧಾನಿ ಬೆಂಗಳೂರಿನ ಫ್ರೇಸರ್ ಟೌನ್‌ನಲ್ಲಿ ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಫುಡ್ ಫೆಸ್ಟಿವಲ್ ಕೂಡ ಸಾಕಷ್ಟು ಬಾರಿ ಸುದ್ದಿಯಾಗುತ್ತಿತ್ತು.
ಮಹತ್ವದ ಬೆಳವಣಿಗೆಯೊಂದರಲ್ಲಿ ಫ್ರೇಝರ್ ಟೌನ್‌ನ ಸ್ಥಳೀಯ ಮುಸ್ಲಿಮರೂ ಸೇರಿದಂತೆ, ಫ್ರೇಸರ್ ಟೌನ್ ನಿವಾಸಿಗಳ ಕಲ್ಯಾಣ ಸಂಘದ (FTRWA) ನೇತೃತ್ವದಲ್ಲಿ ಈ ಬಾರಿ ಈ ಫುಡ್ ಫೆಸ್ಟಿವಲ್‌ನ ವಿರುದ್ಧ ಗಟ್ಟಿ ಧ್ವನಿ ಎತ್ತಿದ್ದು, ಸಂಪೂರ್ಣ ನಿಷೇಧಕ್ಕೆ ಆಗ್ರಹಿಸಿದ್ದರಿಂದ, ‘ರಮಝಾನ್ ಫುಡ್ ಫೆಸ್ಟ್’ಗೆ ಬಿಬಿಎಂಪಿ ಬ್ರೇಕ್ ಹಾಕಿದೆ.
“ರಮಝಾನ್ ಎಂಬುದು ಪವಿತ್ರ ಆರಾಧನಾ ಕರ್ಮಗಳ ತಿಂಗಳು. ಆದರೆ ಸಂಜೆಯ ಬಳಿಕ ನಡೆಯುತ್ತಿರುವ ಈ ಫುಡ್ ಫೆಸ್ಟಿವಲ್‌ನಿಂದ ಸಾರ್ವಜನಿಕರಿಗೆ ನಿರಂತರ ತೊಂದರೆಯಾಗುತ್ತಿದೆ. ಟ್ರಾಫಿಕ್ ಸಮಸ್ಯೆಯ ಜೊತೆ ಜೊತೆಗೆ ಆಹಾರ ತ್ಯಾಜ್ಯದಿಂದಾಗಿ ಸುತ್ತಮುತ್ತಲಿನ ಪರಿಸರ ಕೂಡ ಕಲುಷಿತವಾಗುತ್ತಿದೆ. ಹಾಗಾಗಿ, ಇದನ್ನು ನಿಲ್ಲಿಸುವಂತೆ ಆಗ್ರಹಿಸಬೇಕು” ಎಂದು ಸಾರ್ವಜನಿಕರ ಬೆಂಬಲ ಕೋರಿದ್ದಲ್ಲದೇ, ಫ್ರೇಸರ್ ಟೌನ್‌ನ ಹಾಜಿ ಸರ್ ಇಸ್ಮಾಯೀಲ್ ಸೇಠ್‌ನ ಮಸೀದಿಯಲ್ಲಿ ಜಾಗೃತಿ ಮೂಡಿಸಿ, ಸಹಿ ಸಂಗ್ರಹ ಅಭಿಯಾನ ಕೂಡ ನಡೆಸಿದ್ದರು. ಅಲ್ಲದೇ, ಈ ಫುಡ್ ಫೆಸ್ಟಿವಲ್‌ಗೆ ನಿಷೇಧ ಹೇರುವಂತೆ ಬಿಬಿಎಂಪಿಯನ್ನು ಒತ್ತಾಯಿಸಿದ್ದರು.
ಈ ಬಗ್ಗೆ ಸಾರ್ವಜನಿಕರಲ್ಲೂ ಕೂಡ ಜಾಗೃತಿ ಮೂಡಿಸಿದ್ದರು. ಸ್ಥಳೀಯರ ಮನವಿಗೆ ಸ್ಪಂದಿಸಿರುವ ಬಿಬಿಎಂಪಿ ಅಧಿಕಾರಿಗಳು, ರಮಝಾನ್ ಹಬ್ಬದ ನೆಪದಲ್ಲಿ ನಡೆಯುತ್ತಿದ್ದ ವಾರ್ಷಿಕ ಫುಡ್ ಫೆಸ್ಟ್‌ಗೆ ಈ ವರ್ಷದಿಂದ ಬ್ರೇಕ್ ಹಾಕಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಬಿಬಿಎಂಪಿ ಪೂರ್ವ ವಲಯದ ಆರೋಗ್ಯಾಧಿಕಾರಿ ಡಾ. ಸವಿತಾ, “ರಮಝಾನ್‌ನ ಸಂದರ್ಭದಲ್ಲಿ ಸ್ಥಳೀಯ ಕೆಲವು ವ್ಯಾಪಾರಿಗಳೂ ಸೇರಿದಂತೆ ಹಲವು ಮಂದಿ ವ್ಯಾಪಾರಸ್ಥರು ಫುಡ್ ಫೆಸ್ಟ್‌ನ ಹೆಸರಿನಲ್ಲಿ ರಸ್ತೆಯ ಬದಿಯಲ್ಲೇ ತಿಂಡಿ-ತಿನಿಸುಗಳನ್ನು ತಯಾರಿಸುತ್ತಿದ್ದರು. ಇದರಿಂದ ಜನರು ಆಕರ್ಷಿತರಾಗಿ ಬರುತ್ತಿದ್ದರಿಂದ ಸ್ಥಳೀಯರಿಗೆ ತುಂಬಾ ತೊಂದರೆಯಾಗುತ್ತಿತ್ತು. ಹೀಗಾಗಿ ಫ್ರೇಸರ್ ಟೌನ್ ನಿವಾಸಿಗಳ ಕಲ್ಯಾಣ ಸಂಘದ (FTRWA) ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದರು. ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶದ ಮೇರೆಗೆ ಇನ್ನು ಮುಂದೆ ಫುಡ್ ಫೆಸ್ಟ್‌ಗೆ ನಿಷೇಧ ವಿಧಿಸಿ, ಆದೇಶ ಹೊರಡಿಸಿದ್ದೇವೆ” ಎಂದು ತಿಳಿಸಿದರು.
ಬಿಬಿಎಂಪಿಯು ಈಗ ಹೊರಡಿಸಿರುವ ಆದೇಶದಲ್ಲಿ, “ರಮಝಾನ್ ಹಬ್ಬದ ಪ್ರಯುಕ್ತ ಪುಲಿಕೇಶಿನಗರ ವಿಭಾಗ ವ್ಯಾಪ್ತಿಯಲ್ಲಿರುವ ಎಂ.ಎಂ. ರಸ್ತೆ, ಮಸೀದಿ ರಸ್ತೆ, ರಾಬರ್ಟ್ ಸನ್ಸ್ ರಸ್ತೆ, ಕೋಲ್ಸ್ ರಸ್ತೆ, ಹೇನ್ಸ್ ರಸ್ತೆ, ಸೈಂಟ್ ಜಾನ್ಸ್ ರಸ್ತೆ, ಮಿಲ್ಲರ್ಸ್ ರಸ್ತೆಗಳ ಬದಿಯಲ್ಲಿ ಆಹಾರ ವಸ್ತುಗಳ ವ್ಯಾಪಾರಿಗಳು ರಸ್ತೆ ಮತ್ತು ಪುಟ್‌ಪಾತ್‌ಗಳನ್ನು ವ್ಯಾಪಾರಕ್ಕಾಗಿ ಆಕ್ರಮಿಸಿಕೊಳ್ಳುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುತ್ತದೆ. ರಸ್ತೆ ಬದಿಯಲ್ಲಿ ಆಹಾರ ವಸ್ತುಗಳ ಮಾರಾಟ ತಾತ್ಕಾಲಿಕ ಮಳಿಗೆಗಳನ್ನು ತೆರೆಯಲು ಪಾಲಿಕೆಯಿಂದ ಯಾವುದೇ ಅನುಮತಿ ನೀಡಿರುವುದಿಲ್ಲ. ಅದರಂತೆ ಪಾಲಿಕೆಯ ಈ ಆದೇಶ ಮೀರಿ ರಸ್ತೆ ಬದಿಯಲ್ಲಿ ಆಹಾರ ವಸ್ತುಗಳ ಮಾರಾಟ ಅಥವಾ ತಾತ್ಕಾಲಿಕ ಮಳಿಗೆಗಳನ್ನು ತೆರೆದು ವ್ಯಾಪಾರ ನಡೆಸಿದ್ದಲ್ಲಿ, ಬಿಬಿಎಂಪಿಯ 2020ರ ಕಾಯ್ದೆಯ ಅನ್ವಯ ಪಾಲಿಕೆಯಿಂದ ಪಡೆದಿರುವ ಉದ್ದಿಮೆ ಪರವಾನಿಗೆಯನ್ನು ರದ್ದು ಪಡಿಸಲಾಗುವುದು ಹಾಗೂ ಅಂತವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಲಾಗಿದೆ.
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಫ್ರೇಸರ್ ಟೌನ್ ನಿವಾಸಿಗಳ ಕಲ್ಯಾಣ ಸಂಘದ ಜೊತೆ ಕಾರ್ಯದರ್ಶಿ ಫಾರೂಕ್, “ಸುಮಾರು 15 ವರ್ಷಗಳ ಹಿಂದೆ ಈ ಫುಡ್ ಫೆಸ್ಟ್ ಅನ್ನು ಆರಂಭಿಸಿರುವ ಉದ್ದೇಶವೇ ಬೇರೆ ಇತ್ತು. ಸ್ಥಳೀಯ ಉರ್ದು ಶಾಲೆಯೊಂದು ತೀವ್ರ ಅವ್ಯವಸ್ಥೆಯಿಂದ ಕೂಡಿತ್ತು. ಈ ಹಿನ್ನೆಲೆಯಲ್ಲಿ ಎಂಎಂ ರಸ್ತೆಯಲ್ಲಿ ಎಚ್‌ಎಸ್‌ಐಎಸ್(ಹಾಜಿ ಸರ್ ಇಸ್ಮಾಯೀಲ್ ಸೇಠ್) ಕಮ್ಯೂನಿಟಿ ಡೆವಲಪ್‌ಮೆಂಟ್ ಟ್ರಸ್ಟ್‌ನ ನೇತೃತ್ವದಲ್ಲಿ ಟ್ರಸ್ಟ್‌ನ ಅಧ್ಯಕ್ಷರಾಗಿದ್ದ ಅಸ್ಲಂ ಫಜಲ್ ಅವರು ಉರ್ದು ಶಾಲೆಗಾಗಿ ನಿಧಿ ಸಂಗ್ರಹಿಸಲು ಮಸೀದಿ ಆವರಣದಲ್ಲಿ ಮೇಳವನ್ನು ಪ್ರಾರಂಭಿಸಿದ್ದರು. ಎರಡು ವರ್ಷಗಳ ನಂತರ ಟ್ರಸ್ಟ್‌ನಿಂದ ಫುಡ್ ಫೆಸ್ಟಿವಲ್ ಅನ್ನು ನಿಲ್ಲಿಸಲಾಗಿತ್ತು. ಆದರೆ ಮೇಳಕ್ಕೆ ಬಂದಿದ್ದ ಜನಜಂಗುಳಿ ನೋಡಿದ ಕೆಲವರು, ಇದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು, ಫುಟ್‌ಪಾತ್‌ಗಳು ಮತ್ತು ರಸ್ತೆಗಳಲ್ಲಿ ಸ್ಟಾಲ್‌ಗಳನ್ನು ಹಾಕಲು ಪ್ರಾರಂಭಿಸಿದರು. ಅದು ಹೀಗೆಯೇ ಮುಂದುವರಿಯುತ್ತಾ ಬಂದು ಕಳೆದ ವರ್ಷ ಸುಮಾರು 250ರಷ್ಟು ಸ್ಟಾಲ್ ಬಂದಿದ್ದವು. ಇದರಿಂದಾಗಿ ಸಾರ್ವಜನಿಕರಿಗೆ ತುಂಬಾ ಕಿರಿಕಿರಿ ಉಂಟಾಗಿತ್ತು” ಎಂದು ತಿಳಿಸಿದರು.
A BOLD Decision..
From This Year (2024) No Food Mela(Ramadan) In Frazer Town, Bangalore….
Reasons is Here…
Saw this Board inside Haji Sir Ismai Sait Mosque Campus..#Ramadan #RamdanMubarak @zoo_bear @BlrCityPolice @blrcitytraffic @CPBlr @thenewsminute pic.twitter.com/zAbo8wO11x
— Irshad Venur (@muhammadirshad6) March 13, 2024
“ಸ್ಟಾಲ್‌ಗಳ ವ್ಯಾಪಾರಿಗಳು ಇದ್ದಿಲು(ಚಾರ್‌ಕೋಲ್) ಬಳಸುತ್ತಿದ್ದ ಕಾರಣ ವಿಪರೀತ ಹೊಗೆ ತುಂಬಿಕೊಳ್ಳುತ್ತಿತ್ತು. ಇದು ಸ್ಥಳೀಯ ವಾತಾವರಣವನ್ನೂ ಕೂಡ ಹಾಳು ಮಾಡಿದೆ. ರಮಝಾನ್ ಎಂಬುದು ಮುಸ್ಲಿಮರ ಪವಿತ್ರ ತಿಂಗಳು. ಆದರೆ ಈ ತಿಂಗಳಲ್ಲೇ ಜನರಿಗೆ ತುಂಬಾ ತೊಂದರೆಯಾಗುತ್ತಿರುವುದನ್ನು ಮನಗಂಡು ಈ ಬಾರಿ ಜನಜಾಗೃತಿ ನಡೆಸಿದೆವು. ಅಲ್ಲದೇ, FTRWA, HSIS ಸಮಿತಿ ಮತ್ತು ಸಂಬಂಧಪಟ್ಟ ನಿವಾಸಿಗಳ ನಿಯೋಗವು ಪುಲಿಕೇಶಿನಗರ ಶಾಸಕ ಎ ಸಿ ಶ್ರೀನಿವಾಸ್ ಅವರಿಗೂ ಮನವಿ ಸಲ್ಲಿಸಿದೆವು. ನಮ್ಮ ನಿರ್ಧಾರಕ್ಕೆ ಬೆಂಬಲ ನೀಡಿದ್ದರು. ಕೆಲವರಿಂದ ವಿರೋಧ ವ್ಯಕ್ತವಾಯಿತಾದರೂ ಸಾರ್ವಜನಿಕರಿಗೆ ರಮಝಾನ್ ತಿಂಗಳಲ್ಲಿ ಈ ರೀತಿ ಸಮಸ್ಯೆ ಆಗುತ್ತಿರುವುದು ನೋಡಿ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಹಾಗಾಗಿ, ಸೋಷಿಯಲ್ ಮೀಡಿಯಾಗಳಲ್ಲೂ ಕೂಡ ಜಾಗೃತಿ ಮೂಡಿಸಿದೆವು” ಎಂದು ತಿಳಿಸಿದ್ದಾರೆ ಫಾರೂಕ್.
“ಫ್ರೇಸರ್ ಟೌನ್‌ನಲ್ಲಿ ಇನ್ನು ಮುಂದೆ ಯಾವುದೇ ‘ಆಹಾರ ಮೇಳ’ ಇರುವುದಿಲ್ಲ. ಶಾಂತಿಯುತ ರಮಝಾನ್ ಆಚರಣೆ ಮಾಡಲು ನಮ್ಮ ಪ್ರಯತ್ನವಿದು. ಅನಾನುಕೂಲತೆ ಮತ್ತು ಅಡಚಣೆಗಳಿಂದ ಇನ್ನು ಮುಂದೆ ಸಾರ್ವಜನಿಕರು ಮುಕ್ತರಾಗಲಿದ್ದಾರೆ” ಎಂದು ತಿಳಿಸಿದ್ದಾರೆ.
ವರ್ಷ ಕಳೆದಂತೆ ಹೆಚ್ಚು ಪ್ರಚಾರ ಪಡೆಯುತ್ತಿದ್ದ ‘ಫುಡ್ ಫೆಸ್ಟ್’
ಫ್ರೇಸರ್ ಟೌನ್ ಫುಡ್ ಫೆಸ್ಟ್ ವರ್ಷಗಳಿಂದ ವರ್ಷಗಳಿಗೆ ಜನಪ್ರಿಯತೆ ಹೆಚ್ಚಾಗ ತೊಡಗಿತ್ತು. ಜನಪ್ರಿಯತೆ ಹೆಚ್ಚಾದಂತೆಲ್ಲ ಸೋಷಿಯಲ್ ಮೀಡಿಯಾ Influencersಗಳು ಕೂಡ ಇಲ್ಲಿಗೆ ಆಗಮಿಸಿ, ಇನ್ನೂ ಹೆಚ್ಚು ಪ್ರಚಾರ ನೀಡುತ್ತಿದ್ದರು. ಇದರಿಂದಾಗಿ ಜನಜಂಗುಳಿ ಜಾಸ್ತಿಯಾಗುತ್ತಿತ್ತು. ಅಲ್ಲದೇ, ಬೇರೆ ಬೇರೆ ರಾಜ್ಯದ ವ್ಯಾಪಾರಿಗಳು ಕೂಡ ಕೂಡ ಇಲ್ಲಿಗೆ ಆಗಮಿಸಿ, ವ್ಯಾಪಾರ ಮಾಡುತ್ತಿದ್ದರು.

ಇವುಗಳ ಪೈಕಿ ‘ಪತ್ತರ್ ಕಾ ಘೋಷ್'(ಬಿಸಿಯಾದ ಒಗೆಯುವ ಕಲ್ಲಿನ ಮೇಲೆ ಮಾಂಸ ಬೇಯಿಸುವ ಪ್ರಕ್ರಿಯೆ) ಹೆಚ್ಚು ಪ್ರಚಾರ ಪಡೆದಿತ್ತು. ಆದರೆ, ಈ ವ್ಯಾಪಾರಿಗಳಿಗೆ ಯಾರ ನೇತೃತ್ವವೇ ಇರಲಿಲ್ಲ. ಕೇವಲ ಸಂಪರ್ಕದಿಂದ ‘ಫುಡ್ ಫೆಸ್ಟ್’ಗೆ ಆಗಮಿಸುತ್ತಿದ್ದರು ಎಂಬ ವಿಚಾರ ತಿಳಿದುಬಂದಿದೆ. ಈಗ ಇವೆಲ್ಲದಕ್ಕೂ ‘ಬ್ರೇಕ್’ ಬಿದ್ದಿದೆ.
ಸದ್ಯ ನಿಷೇಧ ಹೇರಿರುವ ಬೆನ್ನಲ್ಲೇ, ತಮ್ಮ ಆಗ್ರಹ ವ್ಯಕ್ತಪಡಿಸುತ್ತಿರುವ ವ್ಯಾಪಾರಿಗಳು, ನಿಷೇಧ ಇದಕ್ಕೆ ಪರಿಹಾರ ಅಲ್ಲ, ಸೂಕ್ತ ಸೌಲಭ್ಯಗಳುಳ್ಳ ಮೈದಾನದಲ್ಲಿ ಫುಡ್ ಫೆಸ್ಟ್‌ಗೆ ಅವಕಾಶ ಕಲ್ಪಿಸಿ ಎಂದು ಆಗ್ರಹಿಸಿದ್ದಾರೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.