ರಾಜಕೀಯವನ್ನೇ ಹೊದ್ದು ಮಲಗುವ ಅವಿಭಜಿತ ವಿಜಯಪುರದ ಈಗಿನ ಬಾಗಲಕೋಟೆ ಜಿಲ್ಲೆ ರಾಜಕೀಯ ಕ್ಷೇತ್ರದಲ್ಲಿ ಹಲವು ತಾರೆಗಳನ್ನು ಉದಯಿಸುವಂತೆ ಮಾಡಿದೆ. ಘಟಾನುಘಟಿ ರಾಜಕಾರಣಿಗಳಿಗೆ ರಾಜಕೀಯ ನೆಲೆಯನ್ನೂ ಕಲ್ಪಿಸಿದೆ. ಇಂಥ ರಾಜಕೀಯ ಅಖಾಡದಂತಿರುವ ಇಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ನಡುವೆ ಜನತಾದಳ, ಬಿಜೆಪಿ ಎರಡು ದಶಕದಲ್ಲಿ ಅರಳಿದರೂ ಹೊಸ ಗಟ್ಟಿ ನಾಯಕರ ಹುಟ್ಟಿಗೆ ಅವಕಾಶ ನೀಡಿಲ್ಲ ಎಂಬುದು ವಿಪರ್ಯಾಸ…
2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಕಾವು ದೇಶದಲ್ಲಿ ಹೆಚ್ಚುತ್ತಿದ್ದು, ಬಾಗಲಕೋಟೆ ಲೋಕಸಭಾ ಕ್ಷೇತ್ರ ಕೂಡ ಇದಕ್ಕೆ ಹೊರತಾಗಿಲ್ಲ. ಈ ಜಿಲ್ಲೆಯ ರಾಜಕೀಯ ಇತಿಹಾಸದ ಕೆಲವು ಮಹತ್ವದ ಸಂಗತಿಗಳು ರಾಜ್ಯ ಮತ್ತು ರಾಷ್ಟ್ರ ರಾಜಕಾರಣಕ್ಕೆ ಸಾಕ್ಷಿಯಾಗಿದ್ದನ್ನು ಕಾಣಬಹುದು. ಲೋಕಸಭಾ ಚುನಾವಣೆಯ ಹೊತ್ತಲ್ಲಿ ಬಾಗಲಕೋಟೆ ಕ್ಷೇತ್ರದ ರಾಜಕೀಯ ಇತಿಹಾಸದ ಸುತ್ತ ಒಂದು ಹೊರಳುನೋಟ.
ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಮತ್ತು ನಾಲ್ವರು ಸಿಎಂಗಳಿಗೆ ರಾಜಕೀಯ ನೆಲೆ ಕಲ್ಪಿಸಿದ ಹೆಗ್ಗಳಿಕೆ ಬಾಗಲಕೋಟೆ ಜಿಲ್ಲೆಗಿದೆ. ನಾಲ್ಕು ದಶಕದ ಹಿಂದೆಯೇ ಇಬ್ಬರು ಮುಖ್ಯಮಂತ್ರಿಗಳನ್ನು ಅವಿಭಜಿತ ವಿಜಯಪುರ ಜಿಲ್ಲೆ ಕಂಡಿತ್ತು. ಜಮಖಂಡಿಯ ಬಿ ಡಿ ಜತ್ತಿ ಹಾಗೂ ಹುನಗುಂದದ ಎಸ್ ಆರ್ ಕಂಠಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ನಾಯಕರು. ನಂತರ ಬಿ ಡಿ ಜತ್ತಿ ಅವರು ಉಪರಾಷ್ಟ್ರಪತಿಯಾಗಿ, ಹಂಗಾಮಿ ರಾಷ್ಟ್ರಪತಿಯಾಗಿಯೂ ಕಾರ್ಯನಿರ್ವಹಿಸಿದ್ದು ಇತಿಹಾಸ.
ರಾಜ್ಯದ ನಾಲ್ವರು ಮುಖ್ಯಮಂತ್ರಿಗಳಾಗಿದ್ದವರು ಬಾಗಲಕೋಟೆಯ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಓರೆಗೆ ಹಚ್ಚಿದವರು. ಅದರಲ್ಲಿ ಮೊದಲಿಗರು ಎಸ್ ನಿಜಲಿಂಗಪ್ಪ. ಅವರು ಇಲ್ಲಿಂದ ವಿಧಾನಸಭೆಗೆ ಕಣಕ್ಕಿಳಿದು ಗೆದ್ದಿದ್ದರು. ಆನಂತರ ವೀರೇಂದ್ರ ಪಾಟೀಲ್ ಅವರು 1980ರಲ್ಲಿ ಸ್ವಕ್ಷೇತ್ರ ಕಲಬುರಗಿ ಬಿಟ್ಟು ಬಾಗಲಕೋಟದಲ್ಲಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. ಇದಾದ ನಂತರ ಕಣಕ್ಕೆ ಇಳಿದವರು ರಾಮಕೃಷ್ಣ ಹೆಗಡೆ. ಇಲ್ಲಿನ ಕೆಲ ಆತ್ಮೀಯರ ಮಾತಿಗೆ ಕಟ್ಟು ಬಿದ್ದು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಸಿದ್ದು ನ್ಯಾಮಗೌಡ ವಿರುದ್ಧ ಸೋತಿದ್ದರು. ಇವರಾದ ಬಳಿಕ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಕ್ಷೇತ್ರವಾಗಿ ಬಾದಾಮಿಯಿಂದ ಸ್ಪರ್ಧಿಸಿ, ರಾಜಕೀಯವಾಗಿ ಮರುಜನ್ಮ ಪಡೆದರು.
ಕ್ಷೇತ್ರದ ಇತಿಹಾಸ
ದೇಶದಲ್ಲಿ 1951ರಲ್ಲಿ ಮೊದಲನೇ ಸಾರ್ವತ್ರಿಕ ಚುನಾವಣೆ ನಡೆಯಿತು. 1951ರಿಂದ 1962ರವರೆಗೂ ವಿಜಯಪುರ ಉತ್ತರ ಮತ್ತು ವಿಜಯಪುರ ದಕ್ಷಿಣ ಎಂದು ದ್ವಿಸದಸ್ಯ ಕ್ಷೇತ್ರಗಳಿದ್ದವು. ಈಗಿನ ಬಾಗಲಕೋಟೆ ಆ ಮೂರು ಚುನಾವಣೆಗಳಲ್ಲಿಯೂ ವಿಜಯಪುರ ದಕ್ಷಿಣ ಲೋಕಸಭೆ ಕ್ಷೇತ್ರ ಎಂಬ ಹೆಸರಿನಲ್ಲಿತ್ತು.
1951ರಲ್ಲಿ ವಿಜಯಪುರ ಉತ್ತರ ಲೋಕಸಭೆ ಕ್ಷೇತ್ರದಲ್ಲಿ ರಾಜಾರಾಮ ದುಬೆ, ವಿಜಯಪುರ ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಆರ್ ಬಿ ಬಿದರಿ ಸಂಸದರಾಗಿ ಆಯ್ಕೆಯಾಗಿದ್ದರು. 1957ರಲ್ಲಿ ವಿಜಯಪುರ ಉತ್ತರ ಲೋಕಸಭೆ ಕ್ಷೇತ್ರದಿಂದ ಸುಗಂಧಿ ಮುರಿಗೆಪ್ಪ ಮತ್ತು ವಿಜಯಪುರ ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಆರ್ ಬಿ ಬಿದರಿ ಸಂಸದರಾಗಿ ಆಯ್ಕೆಯಾದರು. 1962ರಲ್ಲಿ ರಾಜಾರಾಮ ದುಬೆ ವಿಜಯಪುರ ಉತ್ತರ ಕ್ಷೇತ್ರದಿಂದ ಮತ್ತು ಎಸ್ ಬಿ ಪಾಟೀಲ ವಿಜಯಪುರ ದಕ್ಷಿಣ ಕ್ಷೇತ್ರದಿಂದ ಸಂಸದರಾದರು. ಈವರೆಲ್ಲರೂ ಕಾಂಗ್ರೆಸ್ ಪಕ್ಷದಿಂದಲೇ ಆಯ್ಕೆಯಾಗಿದ್ದರು.
1967ರಲ್ಲಿ ಪ್ರತ್ಯೇಕ ಲೋಕಸಭಾ ಕ್ಷೇತ್ರ
1967ರ ನಾಲ್ಕನೇ ಸಾರ್ವತ್ರಿಕ ಚುನಾವಣೆ ವೇಳೆಗೆ ದೇಶದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾದವು. ಉತ್ತರ ಮತ್ತು ದಕ್ಷಿಣ ಎಂದು ದ್ವಿಸದಸ್ಯ ಕ್ಷೇತ್ರಗಳಾಗಿದ್ದ ವಿಜಯಪುರದಿಂದ ಬಾಗಲಕೋಟೆಯನ್ನು ಪ್ರತ್ಯೇಕ ಲೋಕಸಭಾ ಕ್ಷೇತ್ರವಾಗಿ 1967ರಲ್ಲಿ ರಚಿಸಲಾಯಿತು.
1967ರ ಲೋಕಸಭೆ ಚುನಾವಣೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಎದುರಿಸಿದ ಮೊದಲ ಚುನಾವಣೆಯಾಗಿತ್ತು. ಅಲ್ಲಿವರೆಗೆ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ (ಐಎನ್ಸಿ) ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತಿತ್ತು.
1967ರ ಚುನಾವಣೆಯಲ್ಲಿ ಬಾಗಲಕೋಟೆ ಲೋಕಸಭೆ ಕ್ಷೇತ್ರ ಸೇರಿದಂತೆ ದೇಶದ 283 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಆಗ ಅಸ್ತಿತ್ವಕ್ಕೆ ಬಂದ ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ನ ಎಸ್ ಬಿ ಪಾಟೀಲ ಸಂಸದರಾಗಿ ಆಯ್ಕೆಯಾದರು. ಅವರು ತಮ್ಮ ಎದುರಾಳಿ ಪಕ್ಷೇತರ ಅಭ್ಯರ್ಥಿ ಎ ಡಿ ತೊಂಡಿಹಾಳ ಅವರನ್ನು 1.25ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಜನಸಂಘದ ಎನ್ ಕೆ ಛಾಟಿ 57,315 ಮತಗಳನ್ನು ಪಡೆದಿದ್ದರು.
ಎಸ್ ಬಿ ಪಾಟೀಲ 1962ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿ ವಿಜಾಪುರ ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಬಾಗಲಕೋಟ ಲೋಕಸಭೆ ಕ್ಷೇತ್ರ ಆಗ ವಿಜಯಪುರ ಜಿಲ್ಲೆಯ ಬಾಗಲಕೋಟ, ಜಮಖಂಡಿ, ಮುಧೋಳ, ಬೀಳಗಿ, ಹುನಗುಂದ, ಬದಾಮಿ, ಗುಳೇದಗುಡ್ಡ ಹಾಗೂ ಧಾರವಾಡ ಜಿಲ್ಲೆಯ ರೋಣ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿತ್ತು. ಈಗ ಈ ಕ್ಷೇತ್ರ ಮುಧೋಳ, ತೇರದಾಳ, ಜಮಖಂಡಿ, ಬೀಳಗಿ, ಬಾದಾಮಿ, ಬಾಗಲಕೋಟೆ, ಹುನಗುಂದ ಹಾಗೂ ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
ರಾಜಕೀಯವನ್ನೇ ಹೊದ್ದು ಮಲಗುವ ಅವಿಭಜಿತ ವಿಜಯಪುರದ ಈಗಿನ ಬಾಗಲಕೋಟೆ ಜಿಲ್ಲೆ ರಾಜಕೀಯ ಕ್ಷೇತ್ರ ಹಲವು ತಾರೆಗಳನ್ನು ಉದಯಿಸುವಂತೆ ಮಾಡಿದೆ. ಘಟಾನುಘಟಿ ರಾಜಕಾರಣಿಗಳಿಗೆ ರಾಜಕೀಯ ನೆಲೆಯನ್ನೂ ಕಲ್ಪಿಸಿದೆ. ಇಂಥ ರಾಜಕೀಯ ಅಖಾಡದಂತಿರುವ ಇಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ನಡುವೆ ಜನತಾದಳ, ಬಿಜೆಪಿ ಎರಡು ದಶಕದಲ್ಲಿ ಅರಳಿದರೂ ಹೊಸ ಗಟ್ಟಿ ನಾಯಕರ ಹುಟ್ಟಿಗೆ ಅವಕಾಶ ನೀಡಿಲ್ಲ ಎಂಬುದು ವಿಪರ್ಯಾಸ.
ನಾಲ್ಕು ದಶಕದ ರಾಜಕಾರಣದ ಹಾದಿ ಒಮ್ಮೆ ತಿರುವು ಹಾಕಿದರೆ ಮೊದಲ ಎರಡು ದಶಕದಲ್ಲಿ ಬರೋಬ್ಬರಿ ಆರು ಮುಖ್ಯಮಂತ್ರಿಗಳ ರಾಜಕೀಯ ಏಳು ಬೀಳುಗಳ ದೊಡ್ಡ ಸಮರವೇ ಇಲ್ಲಿ ನಡೆದಿದೆ. ಇಬ್ಬರು ಜಿಲ್ಲೆಯವರಾದರೆ ಇನ್ನು ನಾಲ್ವರು ಹೊರಗಿನವರು. ಹೊಸ ಜಿಲ್ಲೆ ರಚನೆಯಾದ ನಂತರ ಆರು ಸರಕಾರಗಳು ರಚನೆಯಾದರೂ ಹಳೆಯ ತಲೆಗಳ ಜತೆಗೆ ಹೊಸ ಮುಖಗಳಿಗೂ ಜನ ಮಣೆ ಹಾಕಿದ್ದಾರೆ. ರಾಜಕೀಯವಾಗಿ ಸಾಕಷ್ಟು ನೀರು ಹರಿದು ಹೋದರೂ ನಿರೀಕ್ಷೆಯಂಥ ಸಮೃದ್ಧಿಯ ಫಸಲನ್ನು ಮಾತ್ರ ತೆಗೆಯಲು ಆಗಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ವಿಚಾರ ಬಂದಾಗ ಕಾಂಗ್ರೆಸ್ ಅವಕಾಶ ಸಿಕ್ಕಿದ್ದು ಡಾ.ಎಸ್.ಬಿ.ನಾಗರಾಳ ಅವರಿಗೆ ಮಾತ್ರ.
ಜೆ ಎಚ್ ಪಟೇಲ್ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಬಾಗಲಕೋಟೆಯನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಿದರು. ಜಿಲ್ಲೆಗಳ ಪುನರ್ ವಿಂಗಡಣೆ ವೇಳೆ ಬಾಗಲಕೋಟ ಅಖಂಡ ವಿಜಯಪುರದಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾಗುತ್ತಿದ್ದಂತೆ ರಾಜಕೀಯ ಮುಖಂಡರಿಗೆ ಹೊಸ ಅವಕಾಶಗಳು ತೆರೆದುಕೊಂಡವು. ಹೊಸ ಜಿಲ್ಲಾ ಕೇಂದ್ರ ಘೋಷಣೆ ಆಗುತ್ತಿದ್ದಂತೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಇನ್ನಿಲ್ಲದ ಮಹತ್ವ ಬಂದಿತು. ರಾಜ್ಯ ಸಚಿವ ಸಂಪುಟದಲ್ಲಿ ಬಾಗಲಕೋಟ ಜಿಲ್ಲೆಗೂ ಪ್ರತ್ಯೇಕ ಮಾನ್ಯತೆ ಭಾಗ್ಯ ಲಭಿಸಲಾರಂಭಿಸಿತು. ಪರಿಣಾಮವಾಗಿ ಅಂದಿನಿಂದ ಇಂದಿನವರೆಗೂ ರಾಜ್ಯ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಕಾಯಂ ಅವಕಾಶ ಸಿಗುತ್ತಲೇ ಬಂದಿದೆ.
ಬಿಜೆಪಿ ಭದ್ರಕೋಟೆಯಾಗಿ ಬದಲಾದ ಬಾಗಲಕೋಟೆ
1967ರಿಂದ 1996ವರೆಗಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಭದ್ರಕೋಟೆ ಎನ್ನಿಸಿದ್ದ ಬಾಗಲಕೋಟ ಕ್ಷೇತ್ರ ಕಳೆದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿ ಭದ್ರಕೋಟೆಯಾಗಿ ಬದಲಾಗಿದೆ. ಪಿ ಸಿ ಗದ್ದಿಗೌಡರ್ ಅವರು ಸತತ ನಾಲ್ಕು ಅವಧಿಗೆ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಳೆದ ಎರಡು ದಶಕಗಳ ಅವಧಿಯಲ್ಲಿ ಜಾತಿ ರಾಜಕಾರಣ ಕೂಡ ಸಾಕಷ್ಟು ಮುನ್ನೆಲೆಗೆ ಬಂದಿದೆ. ಹಿಂದೆಲ್ಲ ಒಂದೇ ಸಮುದಾಯದವರಿಗೆ ಸೀಮಿತವಾಗಿರುತ್ತಿದ್ದ ಪಕ್ಷ ರಾಜಕಾರಣಕ್ಕಿಂತ ಜಾತಿ ರಾಜಕಾರಣವೇ ಅನೇಕ ಸಲ ಮೇಲುಗೈ ಸಾಧಿಸುತ್ತಲೇ ಬಂದಿದೆ. ಪಕ್ಷ ನಿಷ್ಠೆಗಿಂತ ಜಾತಿ ನಿಷ್ಠೆಗೆ ಜನಪ್ರತಿನಿಧಿಗಳು ಆದ್ಯತೆ ನೀಡಿದ ಸಮಯದಲ್ಲಿ ಅಧಿಕಾರ ಎನ್ನುವುದು ಪ್ರಾಬಲ್ಯರ ಕೈಗೆ ಸಿಕ್ಕಿದೆ.
ಜನತಾದಳ, ಲೋಕಶಕ್ತಿಗೂ ಈ ಕ್ಷೇತ್ರ ಒಂದೊಂದು ಸಲ ಒಲಿದಿದೆ. ಇನ್ನುಳಿದ ಚುನಾವಣೆಗಳಲ್ಲಿ ಈ ಕ್ಷೇತ್ರ ಕಾಂಗ್ರೆಸ್ಗೆ ಜೈ ಎಂದಿದೆ. 50 ವರುಷಗಳ ಅವಧಿಯಲ್ಲಿ ಬಾಗಲಕೋಟ ಲೋಕಸಭೆ ಕ್ಷೇತ್ರದ ಸಂಸದರಿಗೆ ಕೇಂದ್ರದಲ್ಲಿ ಸಚಿವರಾಗುವ ಅವಕಾಶ ಎರಡು ಸಲ ಒದಗಿ ಬಂದಿದೆ.
ಗಮನ ಸೆಳೆದ ಸಿದ್ದು ನ್ಯಾಮಗೌಡ
1991ರ ಲೋಕಸಭೆ ಚುನಾವಣೆ ಇಬ್ಬರು ಸಿದ್ದುಗಳಿಗೆ ಪ್ರಮುಖವಾಯಿತು. ಹಾಲಿ ಸಿಎಂ ಸಿದ್ದರಾಮಯ್ಯ ನೆರೆಯ ಕೊಪ್ಪಳ ಲೋಕಸಭೆ ಕ್ಷೇತ್ರದಿಂದ ಸೋತರೆ, ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಕಣಕ್ಕೆ ಇಳಿದಿದ್ದ ಸಿದ್ದು ನ್ಯಾಮಗೌಡ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರನ್ನು ಮಣಿಸಿ ಬಾಗಲಕೋಟ ಕ್ಷೇತ್ರ ದೇಶದಲ್ಲೇ ಗಮನ ಸೆಳೆಯುವಂತೆ ಮಾಡಿದರು.
ಕಳೆದ ಮೂರು ವರ್ಷದ ಚಿತ್ರಣ
ಕಳೆದ ಮೂರು ವರ್ಷಗಳ ರಾಜಕೀಯ ಬಲಾಬಲ ನೋಡಿದರೆ ಬಿಜೆಪಿಯಿಂದ ಸತತವಾಗಿ ಪಿ ಸಿ ಗದ್ದಿಗೌಡರ್ ಅವರು ಗೆಲುವಿನ ನಗೆ ಬಿರುತ್ತಲೇ ಬಂದಿದ್ದಾರೆ. ಕಾಂಗ್ರೆಸ್ ಈ ಮೂರು ಅವಧಿಯಲ್ಲೂ ಅಭ್ಯರ್ಥಿಗಳನ್ನು ಬದಲಾಯಿಸಿದ್ದು, ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.
2009ರ ಲೋಕಸಭೆ ಚುನಾವಣೆ
ಒಟ್ಟು ಮತದಾರರು: 13,63,359
ಚಲಾವಣೆಯಾದ ಮತಗಳು: 8,59,928
ಪಿ ಸಿ ಗದ್ದಿಗೌಡರ್- 4,13,272 (ಬಿಜೆಪಿ)
ಜಿ ಟಿ ಪಾಟೀಲ್-3,77,826 (ಕಾಂಗ್ರೆಸ್)
2014ರ ಲೋಕಸಭೆ ಚುನಾವಣೆ
ಒಟ್ಟು ಮತದಾರರು: 15,68,633
ಚಲಾವಣೆಯಾದ ಮತಗಳು: 10,79,310
ಪಿ ಸಿ ಗದ್ದಿಗೌಡರ್- 5,71,548 (ಬಿಜೆಪಿ)
ಅಜಯಕುಮಾರ್ ಸರನಾಯಕ್: 4,54,988 (ಕಾಂಗ್ರೆಸ್)
2019ರ ಲೋಕಸಭೆ ಚುನಾವಣೆ
ಒಟ್ಟು ಮತದಾರರು: 17,04,010
ಚಲಾವಣೆಯಾದ ಮತಗಳು: 12,04,613
ಪಿ ಸಿ ಗದ್ದಿಗೌಡರ್- 6,64,638 (ಬಿಜೆಪಿ)
ವೀಣಾ ಕಾಶಪ್ಪನವರ್ : 4,96,451 (ಕಾಂಗ್ರೆಸ್)
ಸಂಸತ್ತಿನ ಸದಸ್ಯರು
ಬಾಂಬೆ ರಾಜ್ಯ (ವಿಜಾಪುರ ದಕ್ಷಿಣ ಲೋಕಸಭಾ ಕ್ಷೇತ್ರ)
1951 – ರಾಮಪ್ಪ ಬಾಳಪ್ಪ ಬಿದರಿ (ಕಾಂಗ್ರೆಸ್)
ಮೈಸೂರು ರಾಜ್ಯ
1957 – ರಾಮಪ್ಪ ಬಾಳಪ್ಪ ಬಿದರಿ (ಕಾಂಗ್ರೆಸ್) (ವಿಜಾಪುರ ದಕ್ಷಿಣ ಲೋಕಸಭಾ ಕ್ಷೇತ್ರ)
1967- ಎಸ್.ಬಿ.ಪಾಟೀಲ (ಕಾಂಗ್ರೆಸ್)
1972- ಎಸ್.ಬಿ.ಪಾಟೀಲ (ಕಾಂಗ್ರೆಸ್)
ಕರ್ನಾಟಕ ರಾಜ್ಯ
1977 – ಎಸ್ ಬಿ ಪಾಟೀಲ (ಕಾಂಗ್ರೆಸ್)
1980 – ವೀರೇಂದ್ರ ಪಾಟೀಲ (ಕಾಂಗ್ರೆಸ್)
1984 – ಎಚ್.ಬಿ.ಪಾಟೀಲ (ಕಾಂಗ್ರೆಸ್)
1989 – ಎಸ್.ಟಿ.ಪಾಟೀಲ (ಕಾಂಗ್ರೆಸ್)
1991 – ಸಿದ್ದು ನ್ಯಾಮಗೌಡ (ಕಾಂಗ್ರೆಸ್)
1996 – ಎಚ್ ವೈ ಮೇಟಿ (ಜನತಾ ದಳ)
1998 – ಅಜಯಕುಮಾರ ಸರನಾಯಕ (ಲೋಕಶಕ್ತಿ)
1999 – ಆರ್.ಎಸ್.ಪಾಟೀಲ (ಕಾಂಗ್ರೆಸ್)
2004 – ಪಿ ಸಿ ಗದ್ದಿಗೌಡರ್ (ಬಿಜೆಪಿ)
2009 – ಪಿ ಸಿ ಗದ್ದಿಗೌಡರ್ (ಬಿಜೆಪಿ)
2014 – ಪಿ ಸಿ ಗದ್ದಿಗೌಡರ್ (ಬಿಜೆಪಿ)
2019 – ಪಿ ಸಿ ಗದ್ದಿಗೌಡರ್ (ಬಿಜೆಪಿ)

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.