ಬೇಸಿಗೆ ಆರಂಭವಾಗಿದ್ದು, ಎಲ್ಲಕಡೆ ನಿಂಬೆ ಹಣ್ಣಿಗೆ ಭಾರಿ ಬೇಡಿಕೆ ಉಂಟಾಗಿದೆ. ವಿಜಯಪುರ ಜಿಲ್ಲೆಯಿಂದ ಬೆಳಗಾವಿ ಮಾರುಕಟ್ಟೆಗೆ ಬೇಡಿಕೆಗೆ ತಕ್ಕಷ್ಟು ನಿಂಬೆ ಬರದೇ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ತುಟ್ಟಿಯಾಗಿದೆ.
ಮಧ್ಯಮ ಗಾತ್ರದ ಒಂದು ನಿಂಬೆಹಣ್ಣು 5 ರೂ.ದಿಂದ 6 ರೂ.ಗೆ ಮಾರಾಟವಾದರೆ, ದೊಡ್ಡ ಗಾತ್ರದ ನಿಂಬೆಹಣ್ಣಿನ ಬೆಲೆ 7 ರೂ.ದಿಂದ 10 ರೂ.ಇದೆ.
ಈ ಬಾರಿ ಉಂಟಾದ ಮಳೆ ಕೊರತೆಯಿಂದ ಈ ಬಾರಿ ನಿರೀಕ್ಷಿತ ನಿಂಬೆಹಣ್ಣಿನ ಇಳುವರಿ ಬಂದಿಲ್ಲ. ಮಾರುಕಟ್ಟೆಯ ಬೇಡಿಕೆಗೆ ಅನುಸಾರ ಬೆಳೆಗಾರರಿಂದ ನಿಂಬೆ ಸಿಗುತ್ತಿಲ್ಲ. ಕಳೆದ ವರ್ಷ ಇದ್ದ ದುಬಾರಿ ದರ ಈ ವರ್ಷವೂ ಮುಂದುವರಿದಿದೆ. ಬೇಸಿಗೆ ಆರಂಭದಲ್ಲೇ ಪರಿಸ್ಥಿತಿ ಹೀಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಹೆಚ್ಚಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು.
ಒಂದೂವರೆ ತಿಂಗಳ ಹಿಂದೆ ಸಗಟು ರೂಪದಲ್ಲಿ 1 ಸಾವಿರ ನಿಂಬೆಗೆ 2 ಸಾವಿರ ರೂ. ದರ ಇತ್ತು. ಈಗ 1 ಸಾವಿರ ನಿಂಬೆಗೆ 6 ಸಾವಿರ ರೂ. ಇದೆ. ಇತರೆ ಖರ್ಚು ತೆಗೆದು, ಒಂದು ನಿಂಬೆಯನ್ನು 7 ರೂ.ದಿಂದ 10 ರೂ. ದರದಲ್ಲಿ ಮಾರುತ್ತೇವೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಬಿಸಿಲಿನಿಂದ ದೇಹವನ್ನು ತಂಪಾಗಿರಿಸಲು ಮತ್ತು ಊಟಕ್ಕೆ ನಿಂಬೆ ಹಣ್ಣು ಬಳಸುವುದರಿಂದ, ಬೆಲೆ ಏರಿಕೆ ಯಾದರೂ ಖರೀದಿಸುವುದು ಅನಿವಾರ್ಯವಾಗಿದೆ ಎನ್ನುತ್ತಿದ್ದಾರೆ ಸ್ಥಳಿಯ ಗ್ರಾಹಕರು.