ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ನಕಲಿ ಟಿಕೆಟ್ ಬಳಸಿ ಪ್ರವೇಶಿಸಿದ್ದ ಯುವಕನನ್ನು ನಗರದ ಏರ್‌ಪೋರ್ಟ್ ಸಿಬ್ಬಂದಿ ಬಂಧಿಸಿದ್ದಾರೆ.
ಪ್ರಖರ್ ಶ್ರೀವಾಸ್ತವ (24 ವರ್ಷ) ಬಂಧಿತ ಆರೋಪಿ. ಈತ ಮೂಲತಃ ಜಾರ್ಖಂಡ್‌ದವನು. ಬಂಧಿತನ ಸ್ನೇಹಿತೆ ಸಂಸ್ಕ್ರತಿ ಬೆಂಗಳೂರಿನಿಂದ ದೆಹಲಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಸ್ನೇಹಿತೆ ಸಂಸ್ಕ್ರತಿಯನ್ನು ಕಳುಹಿಸಿ ಕೊಡಲು ಪ್ರಖರ್ ಪ್ರಯಾಣದ ನಕಲಿ ಟಿಕೆಟ್ ತಯಾರಿಸಿ ವಿಮಾನ ನಿಲ್ದಾಣಕ್ಕೆ ಬಂದಿದ್ದನು.
ಅಲ್ಲದೇ, ನಕಲಿ ಟಿಕೆಟ್ ತೋರಿಸಿ ವಿಮಾನ ನಿಲ್ದಾಣದ ಒಳಗೆ ಬಂದಿದ್ದಾನೆ. ವಿಮಾನದಲ್ಲಿ ಪ್ರಯಾಣಿಸದೆ, ಸ್ನೇಹಿತೆಯನ್ನು ಕಳುಹಿಸಿ ವಾಪಸ್ ಆಗಿದ್ದಾನೆ.
ಸ್ನೇಹಿತೆಯನ್ನು ಕಳುಹಿಸಿ ವಾಪಾಸ್ ಬರುವಾಗ ಗೇಟ್ ನಂ. 9ರ ಭದ್ರತಾ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ. ಆಗ, ನನಗೆ ತುರ್ತು ಕರೆ ಬಂದ ಕಾರಣ ನಾನು ವಾಪಾಸಾಗುತ್ತಿದ್ದೇನೆ ಎಂದು ಹೇಳಿದ್ದಾನೆ.
ಈತನ ಹೇಳಿಕೆಯಿಂದ ಅನುಮಾನಗೊಂಡ ಭದ್ರತಾ ಸಿಬ್ಬಂದಿ ಪ್ರಖರ್ನ ಪ್ರಯಾಣದ ಟಿಕೆಟ್ ಅನ್ನು ಮತ್ತೊಮ್ಮೆ ಪರಿಶೀಲಿಸಿದ್ದಾರೆ. ಆಗ ಅದು ನಕಲಿ ಟಿಕೆಟ್ ಎಂಬುವುದು ತಿಳಿದುಬಂದಿದೆ. ಕೂಡಲೇ, ಪ್ರಖರ್‌ನನ್ನು ವಿಮಾನ ನಿಲ್ದಾಣದ ಸಿಬ್ಬಂದಿ ವಶಕ್ಕೆ ಪಡೆದು ವಿಮಾನ ನಿಲ್ದಾಣದ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ | ಪ್ರಕರಣದ ಶಂಕಿತ ಆರೋಪಿ ಶಬ್ಬೀರ್ ಎನ್ಐಎ ವಶಕ್ಕೆ
ಪ್ರಖರನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಸ್ನೇಹಿತೆಯನ್ನು ನಿಲ್ದಾಣದ ಒಳಗಿನಿಂದ ಕಳುಹಿಸಲು ಈ ರೀತಿ ನಕಲು ವಿಮಾನ ಟಿಕೆಟ್ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ವಿಮಾನ ನಿಲ್ದಾಣದ ಒಳಗೆ ಅತಿಕ್ರಮಣ, ನಕಲಿ ಟಿಕೆಟ್ ಮತ್ತು ವಂಚನೆಯ ಅಡಿಯಲ್ಲಿ ಆರೋಪಿ ವಿರುದ್ಧ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಕರಣ ದಾಖಲಾಗಿದೆ.