ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ವೈ.ಎ ನಾರಾಯಣಸ್ವಾಮಿ ಅವರು ಶಿಕ್ಷಕರು ಎದುರಿಸುತ್ತಿರುವ ಜಲ್ವಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಅವರು ಮತ್ತೊಮ್ಮೆ ಅವಕಾಶ ಕೇಳುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ ಎಂದು ರುಪ್ಸಾ ಅಧ್ಯಕ್ಷ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಹೇಳಿದರು.
ತುಮಕೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, “ಕಳೆದ 20 ವರ್ಷಗಳಿಂದ ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿರುವ ಇವರು, ಬಹಿರಂಗವಾಗಿ ಶಿಕ್ಷಕರಿಗೆ ಔತಣಕೂಟ ಏರ್ಪಡಿಸುವ ಮೂಲಕ ಒಂದು ಸುಶಿಕ್ಷಿತ ಸಮುದಾಯವನ್ನು ಸಮಾಜದ ದೃಷ್ಟಿಯಲ್ಲಿ ಕಳಂಕಿತರನ್ನಾಗಿ ಮಾಡಿದ್ದೇ ಇವರ ಸಾಧನೆಯಾಗಿದೆ” ಎಂದರು.
“ರಾಜ್ಯದಲ್ಲಿ ಸುಮಾರು 4.80 ಲಕ್ಷ ಮಂದಿ ಶಿಕ್ಷಕರಿದ್ದು, ಇವರಲ್ಲಿ ಸರ್ಕಾರಿ ಶಾಲೆಯ ಸುಮಾರು 1.20 ಲಕ್ಷ ಮಂದಿ ಶಿಕ್ಷಕರನ್ನು ಹೊರತು ಪಡಿಸಿದರೆ ಉಳಿದಂತೆ, ಸುಮಾರು 3.50 ಲಕ್ಷದಷ್ಟು ಶಿಕ್ಷಕರು ಉದ್ಯೋಗ ಭದ್ರತೆಯಿಲ್ಲದೆ, ಸರಿಯಾದ ವೇತನವಿಲ್ಲದ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಕಳೆದ 20 ವರ್ಷಗಳಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ವೈಎಎನ್ ಒಂದು ಬಾರಿಯೂ ಶಿಕ್ಷಕರ ಸಮಸ್ಯೆ ಕುರಿತು ವಿಧಾನಪರಿಷತ್ತಿನಲ್ಲಿ ದನಿ ಎತ್ತಿಲ್ಲ. ʼನನ್ನ ಸಾಧನೆ ಶೂನ್ಯʼವೆಂದು ಅವರೇ ಹೇಳಿಕೊಂಡಿದ್ದಾರೆ. ಹೀಗಿದ್ದು ಯಾವ ಮುಖ ಇಟ್ಟುಕೊಂಡು ಶಿಕ್ಷಕರ ಬಳಿ ಮತ ಯಾಚಿಸುತ್ತಾರೆ” ಎಂದು ವ್ಯಂಗವಾಡಿದರು.
“ಸರ್ಕಾರಿ ಶಿಕ್ಷಕರು ಟೈಮ್ ಬಾಂಡ್ ಪ್ರಮೋಷನ್, ಹಳೆಯ ಪಿಂಚಿಣಿ ವ್ಯವಸ್ಥೆ ಜಾರಿ, ವೇತನ ತಾರತಮ್ಯ ನಿವಾರಣೆ ಸೇರಿದಂತೆ ಹಲವು ಸಮಸ್ಯೆಗಳ ಜತೆಗೆ ಬಿಎಲ್‌ಒಗಳಾಗಿ ಅನ್ಯ ಕಾರ್ಯಗಳಿಗೆ ನೇಮಕಗೊಂಡು ಸಂಕಷ್ಟವನ್ನು ಎದುರಿಸುತ್ತಿದ್ದರೆ, ಅನುದಾನಿತ ಶಾಲೆಗಳ ಶಿಕ್ಷಕರು ಸರ್ಕಾರದಿಂದ ವೇತನ ಪಡೆಯುವುದನ್ನು ಬಿಟ್ಟರೆ ಪಿಂಚಿಣಿ ಇಲ್ಲದೆ ಬರಿಗೈಯಲ್ಲಿ ಮನೆಗೆ ಹೋಗುವಂತಹ ಪರಿಸ್ಥಿತಿ ಇದೆ.ಸರಕಾರದಿಂದ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ” ಎಂದು ಹೇಳಿದರು.
“ಅನುಧಾನರಹಿತ ಖಾಸಗಿ ಶಾಲೆಗಳ ಶಿಕ್ಷಕರು ಅತಿ ಕಡಿಮೆ ವೇತನಕ್ಕೆ ದುಡಿಯುತಿದ್ದು,ಅಧುನಿಕ ಜೀತದಾಳುಗಳಾಗಿದ್ದಾರೆ. ಬೇರೆ ರಾಜ್ಯಗಳಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಅರ್ಧದಷ್ಟು ವೇತನವನ್ನು ಸರ್ಕಾರವೇ ನೀಡುತ್ತದೆ. ಆದರೆ ಕರ್ನಾಟಕದಲ್ಲಿ ಇದು ಜಾರಿಯಲ್ಲಿಲ್ಲ. ಈ ವಿಚಾರಗಳ ಬಗ್ಗೆ ವೈ ಎ ನಾರಾಯಣಸ್ವಾಮಿ ಸದನದಲ್ಲಿ ದ್ವನಿ ಎತ್ತಿದ್ದರೆ, ದಾಖಲೆಗಳ ಸಹಿತ ಮಾಹಿತಿ ನೀಡಲಿ” ಎಂದು ಲೋಕೇಶ್ ತಾಳಿಕಟ್ಟೆ ಸವಾಲು ಹಾಕಿದರು.
“ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ನನ್ನ ವಯುಕ್ತಿಕ ಲಾಭಕ್ಕಾಗಿ ಅಲ್ಲ. ಶಿಕ್ಷಕರು ಎದುರಿಸುತ್ತಿರುವ ನೂರಾರು ಸಮಸ್ಯೆಗಳ ಪರಿಹಾರಕ್ಕೆ ಒಂದು ವೇದಿಕೆಯಾಗಿ ಕಣದಲ್ಲಿ ಉಳಿದಿದ್ದೇನೆ. ಯಾವ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯಲ್ಲ. ಯಾವ ಪಕ್ಷದ ಪರವೂ ಹೋಗಲ್ಲ. ಈ ಹಿಂದೆ ಕಾಂಗ್ರೆಸ್ ಪಕ್ಷದವರು ಆಹ್ವಾನಿಸಿದ್ದರು. ಆದರೆ ಒಂದು ಪಕ್ಷದ ಬೈಡಿಂಗ್‌ನಲ್ಲಿದ್ದು, ಶಿಕ್ಷಕರ ಸಮಸ್ಯೆ ಬಗೆಹರಿಸುವುದು ಅಸಾಧ್ಯ ಎಂಬುದು ನಮಗೆ ಮನವರಿಕೆಯಾಗಿದೆ. ಹಾಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಸುರೇಶಕುಮಾರ್ ಮತ್ತು ಬಿ ಸಿ ನಾಗೇಶ್ ಅವರುಗಳು ಶಿಕ್ಷಣ ಇಲಾಖೆಯಲ್ಲಿ ಅಕ್ರಮ ನಡೆಸಿದಾಗಲೂ ಅವರ ವಿರುದ್ದ ದ್ವನಿ ಎತ್ತಿದ್ದೇನೆ. ಯಾವ ರಾಜೀಗೂ ಒಳ್ಳಗಾಗಿಲ್ಲ. ಹಾಗಾಗಿಯೇ ಶಿಕ್ಷಕರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಮುಂದೆಯೂ ನಿಲ್ಲಲಿದ್ದಾರೆಂಬ ನಂಬಿಕೆ ನಮಗಿದೆ” ಎಂದರು.
ಸರ್ಕಾರ ಹಠಕ್ಕೆ ಬಿದ್ದು ಆರ್‌ಟಿಇ ನಿಯಮಗಳಿಗೆ ವಿರುದ್ದವಾಗಿ 5, 8 ಮತ್ತು 9ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಮುಂದಾದಾಗ ವಿಧಿಯಿಲ್ಲದೆ ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಯಿತು. ಇದು ಸರ್ಕಾರವೇ ಮಾಡಿಕೊಂಡ ಎಡವಟ್ಟು. ಆರ್‌ಟಿಇ ನಿಯಮ ಕಲಂ, 23 ಮತ್ತು 30ರ ಅನ್ವಯ ಸಿಸಿಇ ಇರಬೇಕು. ಆದರೆ ಪಬ್ಲಿಕ್ ಪರೀಕ್ಷೆ ಹೆಸರಿನಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಂದ ಖಾಸಗಿ ಶಾಲೆಗಳಿಗೆ ಕಳುಹಿಸುವ ಹುನ್ನಾರದ ವಿರುದ್ದ ಧ್ವನಿ ಎತ್ತಿದ ಪರಿಣಾಮ ಸುಪ್ರಿಂಕೋರ್ಟ್ ನಮಗೆ ನ್ಯಾಯ ಒದಗಿಸಿದೆ. ಇದು ರುಪ್ಸಾ ಕರ್ನಾಟಕ ಶಿಕ್ಷಣದ ಪರವಾಗಿದೆ ಎಂಬುದಕ್ಕೆ ಸಾಕ್ಷಿ” ಎಂದು ಲೋಕೇಶ್ ತಾಳಿಕಟ್ಟೆ ನುಡಿದರು.
ರುಪ್ಸಾ ಅಧ್ಯಕ್ಷ ಯಾರೆಂಬ ವಿಚಾರದಲ್ಲಿ ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲಿಯೂ ಇಲ್ಲದ ಗೊಂದಲ ತುಮಕೂರಿನಲ್ಲಿದೆ. ಈಗಾಗಲೇ ಹೈಕೋರ್ಟಿನಲ್ಲಿ, ತುಮಕೂರಿನ ಎನ್‌ಇಪಿಎಸ್ ಠಾಣೆಯಲ್ಲಿ ಅಗತ್ಯ ದಾಖಲೆ ನೀಡಿ, ರುಪ್ಸಾ ಅಧ್ಯಕ್ಷ ನಾನೇ ಎಂಬುದನ್ನು ಸಾಬೀತು ಮಾಡಿದ್ದೇವೆ. ಬೇರೆಯವರ ಪ್ರಶ್ನೆಗಳಿಗೆ ಉತ್ತರ ಹೇಳುವುದಿಲ್ಲ. ಬೇಕಾದವರು ನ್ಯಾಯಾಲಯದ ದಾಖಲೆ ಪರಿಶೀಲಿಸಿಕೊಳ್ಳಲಿ” ಎಂದು ಸ್ಪಷ್ಟಪಡಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮೆಣಸಿನಕಾಯಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಸರ್ಕಾರವೇ ಖರೀದಿಸಬೇಕು: ಎಐಕೆಕೆಎಂಎಸ್
ಖಾಸಗಿ ಅನುದಾನರಹಿತ ಶಾಲೆಗಳ ಸಂಘದ ಜಿಲ್ಲಾಧ್ಯಕ್ಷ ಭೂತರಾಜು ಮಾತನಾಡಿ, “ಈವರೆಗೂ ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿದವರು ನಮ್ಮನ್ನು ಕೇವಲ ಒಟ್ ಬ್ಯಾಂಕ್ ಮಾಡಿಕೊಂಡು, ಮೋಸ ಮಾಡಿದರು. ಹಾಗಾಗಿ ಈ ಬಾರಿ ನಮ್ಮ ಸಮಸ್ಯೆಗಳ ಸಂಪೂರ್ಣ ಅರಿವು ಇರುವ ಮತ್ತು ಅವುಗಳಿಗೆ ಪರಿಹಾರ ದೊರಕಿಸುವ ಶಕ್ತಿ ಇರುವ ಲೋಕೇಶ್ ತಾಳಿಕಟ್ಟೆ ಅವರನ್ನು ರುಪ್ಸಾ ಕಣಕ್ಕೆ ಇಳಿಸಿದೆ. ಎಲ್ಲರೂ ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ” ಎಂದರು.
ಅರಿವು ಇಂಟರ್ ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಜಗದೀಶ್ ಕುಮಾರ್, ಸುರ್ಯೋದಯ ಶಾಲೆಯ ಕಾರ್ಯದರ್ಶಿ ಚನ್ನಬಸವೇಶ್ವರ ಸ್ವಾಮಿ ಸೇರಿದಂತೆ ಇತರರು ಇದ್ದರು.