ದಾವಣಗೆರೆ-ಚಿಗಟೇರಿ ಜಿಲ್ಲಾಸತ್ರೆಯಲ್ಲಿ ಅಕ್ರಮವಾಗಿ ಕೆಲವೇ ಕೆಲವು ವ್ಯಕ್ತಿಗಳ ಹೆಸರಿಗೆ ಕ್ಯಾಂಟಿನ್‌ಗಳ ಟೆಂಡರ್ ನೀಡಿ, ಸರ್ಕಾರಿ ಅಧಿಕಾರಿಗಳು ಕೆಲವರ ಹಣದ ಆಮಿಷಕ್ಕೆ ಬಲಿಯಾಗಿ ಭ್ರಷ್ಟತೆಯಲ್ಲಿ ತೊಡಗಿದ್ದಾರೆ. ಈ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಭೀಮ್ ಸೇನೆಯ ದಾವಣಗೆರೆ ಜಿಲ್ಲಾಧ್ಯಕ್ಷ ಆರ್ ಸೂರ್ಯಪ್ರಕಾಶ್ ಒತ್ತಾಯಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಜಿಲ್ಲೆಯಲ್ಲಿ ಒಳರೋಗಿಗಳಿಗೆ, ಹೊರ ರೋಗಿಗಳಿಗೆ, ಆಸ್ಪತ್ರೆಯ ಸಿಬ್ಬಂದಿಗಳಿಗೆ ಅನುಕೂಲವಾಗುವ ಉದ್ದೇಶಕ್ಕಾಗಿ ಕ್ಯಾಂಟಿನ್‌ಗಳನ್ನು ತೆರೆಯಬೇಕೆಂಬ ನಿಯಮಾವಳಿಗಳಿದ್ದು, ಅದಕ್ಕೆ ಸರ್ಕಾರಿ ಆದೇಶದಂತೆ ಕೆಲವೊಂದು ಮಾನದಂಡಗಳಿವೆ. ಅಂಗವಿಕಲರಿಗೆ, ವಿಧವೆಯವರಿಗೆ, ಪರಿಶಿಷ್ಟ ಜಾತಿ/ಪಂಗಡದವರಿಗೆ ಮತ್ತು ಸಹಕಾರಿ ಸಂಘಗಳ ಮಾಲೀಕರಿಗೆ ವರ್ಷಕ್ಕೊಮ್ಮೆ ಟೆಂಡರ್ ಪ್ರಕಟಣೆ ಹೊರಡಿಸಿ ಸರ್ಕಾರದ ಸುತ್ತೋಲೆಯಂತೆ ಪ್ರತಿ ತಿಂಗಳು ಬಾಡಿಗೆ, ವಿದ್ಯುತ್ ದರ ಪಾವತಿಸಿಕೊಂಡು ಸರ್ಕಾರದ ಖಜಾನೆಗೆ ಹಣ ಜಮೆ ಮಾಡಿಸಬೇಕೆಂಬ ನಿಯಮ ಇದೆ” ಎಂದರು.
“ದಾವಣಗೆರೆ-ಚಿಗಟೇರಿ ಜಿಲ್ಲಾಸತ್ರೆಯ ಆಡಳಿತ ವಿಭಾಗದ ಸಿಬ್ಬಂದಿಗಳು ಸೇರಿದಂತೆ ತ್ರಿಮೂರ್ತಿಗಳು ತಮಗೆ ಬೇಕಾದ ಏಜೆನ್ಸಿಗಳಿಗೆ ಟೆಂಡರ್ ನೀಡುತ್ತಾರೆ. ಈ ಕುರಿತು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಮಾಹಿತಿ ಕೇಳಿದರೆ ಜಿಲ್ಲಾಸತ್ರೆಯ ಅಧಿಕಾರಿಗಳು ʼಟೆಂಡರ್‌ದಾರರು ನ್ಯಾಯಾಲಯದ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ನಾವು ಏನೂ ಮಾಡಲು ಆಗುವುದಿಲ್ಲʼವೆಂದು ಹಾರಿಕೆ ಉತ್ತರ ನೀಡುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು
“ಟೆಂಡರ್‌ದಾರರು ಉತ್ತಮ ಜೀವನ ನಡೆಸುತ್ತಿದ್ದು, ಇವರಿಗೆ ಕ್ಯಾಂಟಿನ್‌ಗಳನ್ನು ತೆರೆಯುವುದು ಒಂದು ಉದ್ಯೋಗವಾಗಿದೆ. ಬೇರೆ ನಿರುದ್ಯೋಗಿಗಳಿಗೆ ಅವಕಾಶವಿಲ್ಲದಂತಾಗಿದೆ. ಈ ಕುರಿತು ಹಿಂದೆ ಇದ್ದಂತಹ ಟೆಂಡರ್‌ದಾರರು ಸಹಾಯಕ ಆಡಳಿತಾಧಿಕಾರಿಗಳ ಸಲಹೆಯ ಮೇರೆಗೆ ಸುಖಾ-ಸುಮ್ಮನೆ ಜಿಲ್ಲಾಸ್ಪತ್ರೆ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ದಾವೆಯ ಯಾವುದೇ ವಿವರಗಳಾಗಲಿ, ಕಾರಣಗಳನ್ನಾಗಲಿ ನೀಡದೆ ಕ್ಯಾಂಟಿನ್ ಆಡಳಿತಾಧಿಕಾರಿಗಳು ಇವರಿಗೆ ನಡೆಸಲು ಅನುಕೂಲ ಮಾಡಿಕೊಟ್ಟಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇವರು ಪ್ರತಿ ತಿಂಗಳು ಮಾಮೂಲಿನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪವಿದ್ದು, ಟೆಂಡರಿನ ಕಾರ್ಯಾದೇಶವು ಮುಗಿದಿದ್ದರೂ ಯಾವುದೇ ಹೊಸದಾಗಿ ಟೆಂಡರ್ ನಡೆಸುವ ಪ್ರಕಟಣೆಯಿಲ್ಲದಂತೆ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಇವರ ವಿರುದ್ಧ ಶಿಸ್ತುಕ್ರಮ ಜರುಗಿಸಿ, ಭ್ರಷ್ಟತೆಯಲ್ಲಿ ಪಾಲ್ಗೊಂಡಿರುವ ಆರೋಗ್ಯ ಆಡಳಿತಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜಿಲ್ಲಾಸ್ಪತ್ರೆಯ ಮೇಲ್ಛಾವಣಿ ಪದರ ಕುಸಿತ; ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯದ ಆರೋಪ
“ಒಂದು ವೇಳೆ ಈ ಒಂದು ದೂರನ್ನು ಪರಿಗಣಿಸದೆ ಇದ್ದಲ್ಲಿ ಕರ್ನಾಟಕ ಲೋಕಾಯುಕ್ತ ಇಲಾಖೆಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ದೂರು ನೀಡಿ ತನಿಖೆಗೆ ಒಳಪಡಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಕೆ ರಾಘವೇಂದ್ರ, ಎನ್ ಸಂತೋಷ, ಪ್ರಕಾಶ್, ಶ್ರೀನಿವಾಸ್, ಚಂದನ್ ಬಳ್ಳಾರಿ, ಚೇತನ್ ಸೇರಿದಂತೆ ಇತರರು ಇದ್ದರು.