ಮಂಡ್ಯದ ಜನ ಸಕ್ಕರೆ ಹಂಚುವವರು ಸಕ್ಕರೆಯನ್ನೇ ಹಂಚಬೇಕೇ ಹೊರತು ದ್ವೇಷವನ್ನಲ್ಲ ಎಂದು ಮಂಗಳೂರಿನ ಎಂ ಜಿ ಹೆಗಡೆ ಅಭಿಪ್ರಾಯಪಟ್ಟರು.
ಜಾಗೃತ ಕರ್ನಾಟಕ ಸಂಘಟನೆಯಿಂದ ಮಂಡ್ಯದ ರೈತ ಸಂಭಾಂಗಣದಲ್ಲಿ ಆಯೋಜಿಸಿದ್ದ ‘ಕುವೆಂಪು ಕ್ರಾಂತಿ ಕಹಳೆ 50′ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನನಗೆ ಮತೀಯವಾದದ ಅಮಲು ಹೆಚ್ಚಾದಾಗ ನನ್ನ ಗುರುಗಳು ನನಗೆ ಹುಳಿ ಮಜ್ಜಿಗೆ ಕುಡಿಸಿ ಬುದ್ದಿವಾದ ಹೇಳಿ ಹೊರತಂದರು. ಹಾಗಾಗಿ ಮನುಷ್ಯನಾಗಿದ್ದೇನೆ. ನನ್ನ ರೀತಿ ಯಾರೂ ಕೂಡಾ ಮತೀಯವಾದಕ್ಕೆ ಬಲಿಯಾಗುವುದು ಬೇಡ” ಎಂದರು.
“ಮಂಡ್ಯದಲ್ಲಿ ತಿಂಗಳ ಹಿಂದೆ ಉದ್ವಿಗ್ನತೆ ಆರಂಭವಾದಾಗ ಸಕ್ಕರೆಯ ನಾಡಿನ ಬಂಧುಗಳಿಗೊಂದು ಪತ್ರ ಅಂತ ಬರೆದಿದ್ದೆ. ಏಕೆಂದರೆ ನಾವು ಕರಾವಳಿಯಲ್ಲಿ ಮಾಡಿದ ಗಲಬೆಗಳು ನೆನಪಿಗೆ ಬಂದವು. ಸಂತರ ನಾಡಿನ ಈ ದೇಶದಲ್ಲಿ ಧರ್ಮದ ಅರ್ಥ ಗೊತ್ತಿಲ್ಲದವರು ಹಬ್ಬಿಸುತ್ತಿರುವ ಗಲಬೆ ತಡೆಯಲು ಮನಸ್ಸು ತುಡಿಯುತ್ತಿತ್ತು” ಎಂದರು.
“ಕರಾವಳಿಯಲ್ಲಿ 2008ರಿಂದ ನಡೆದ ಕೋಮುಗಲಬೆಗಳಲ್ಲಿ ಕೇಸು ಹಾಕಿಸಿಕೊಂಡ 460 ಜನರ ಪಟ್ಟಿ ಗಮನಿಸಿದೆ. ಅದರಲ್ಲಿ 435 ಜನ ಹಿಂದುಳಿದ ವರ್ಗದವರಿದ್ದರೆ 15 ಜನ ದಲಿತ ಮಕ್ಕಳು ಇದ್ದಾರೆ. ಅದು ಬಿಟ್ಟರೆ ಮೇಲ್ಜಾತಿಯ ಒಬ್ಬರೂ ಇಲ್ಲದಿರುವುದೇಕೆ” ಎಂದು ಪ್ರಶ್ನಿಸಿದರು.
“ಹಿಂದುತ್ವದ ರಾಜಕಾರಣ ಆರಂಭವಾದ ನಂತರ ಈ ರಾಜಕೀಯ ದುರುದ್ದೇಶ ಹೆಚ್ಚುತ್ತಾ ಇದೆ. ನಮ್ಮ ಮಕ್ಕಳಿಗೆ ಪೆನ್ನು ಪುಸ್ತಕ ಕೊಡುವ ಬದಲು ತಲವಾರ್ ಕೊಡಬೇಡಿ. ಬಡವರ ಮನೆ ಮಕ್ಕಳು ಬೀದಿಗೆ ಬರಬೇಡಿ” ಎಂದು ಮನವಿ ಮಾಡಿದರು.
“ಕೋಮು ಗಲಭೆ ಶುರುವಾದರೆ ಕೃಷಿ ಭೂಮಿಯಲ್ಲಿ ಯುವಕರು ಇರುವುದಿಲ್ಲ. ಯಾವುದೇ ಕಾರಣಕ್ಕೂ ಮತೀಯವಾದಿಗಳಿಗೆ ಅವಕಾಶ ಕೊಡಬೇಡಿ” ಎಂದರು.
ಸಾಹಿತಿ ಬಂಜಗೆರೆ ಜಯಪ್ರಕಾಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, “ಕುವೆಂಪು ಕೇವಲ ಮಂಡ್ಯ, ಶಿವಮೊಗ್ಗಕ್ಕೆ ಸೀಮಿತರಲ್ಲ. ಇಡೀ ಭಾರತದಲ್ಲಿ ಶೂದ್ರ ಪ್ರಜ್ಞೆಯನ್ನು ಸಾರಿದ ದಾರ್ಶನಿಕ, ಯುಗಕವಿಯಾಗಿದ್ದಾರೆ. ಪಂಪ ʼಮನುಷ್ಯ ಕುಲಂ ತಾನೊಂದೆ ವಲಂʼ ಎಂದರು. ಕುವೆಂಪು ʼವಿಶ್ವಪಥ ಮನುಜಮತʼ ಎಂದರು. ಕುವೆಂಪುರವರ ದೃಷ್ಟಿಯಲ್ಲಿ ಮನುಷ್ಯರಾಗಿರುವುದು ಎಂದರೆ ವಿಚಾರವುಳ್ಳವರಾಗಿರುವುದು ಎಂದರ್ಥ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಯುವಜನರಿಗೆ ನಿರಂಕುಶಮತಿಗಳಾಗಿ ಕುವೆಂಪು ಅವರು ಕರೆ ನೀಡಿದರು. ಯಂತ್ರ ನಾಗರಿಕತೆ ಹೇರಿದ, ಇಂಗ್ಲೀಷ್ ತಂದ ನಾವು ಅದಕ್ಕೆ ಬೇಕಾದ ವೈಚಾರಿಕತೆ ಕಟ್ಟಿಕೊಂಡಿದ್ದೇವೆಯೇ” ಎಂದು ಪ್ರಶ್ನಿಸಿದರು.
“ಇದೆಲ್ಲದರ ಪರಿಣಾಮವೇ ಅಂತರಿಕ್ಷಕ್ಕೆ ಗಗನನೌಕೆ ಹಾರಿಸುವ ಮೊದಲು ಪೂಜೆ ಮಾಡುವುದಾಗಿದೆ. ವೈಚಾರಿಕತೆ ಇಲ್ಲದ ಸಮಾಜ ಮುಂದೆ ಹೋಗಲು ಸಾಧ್ಯವಿಲ್ಲ. ಆಧ್ಯಾತ್ಮಿಕತೆ ಎಂದರೆ ಮತ ಅಲ್ಲ. ಮೌಢ್ಯ ಕಂದಾಚಾರವಂತೂ ಅಲ್ಲವೇ ಅಲ್ಲ. ವಿಶ್ವನಿಯಮಗಳನ್ನು ಅರಿಯುವುದು ಎಂದರೆ ಪ್ರಕೃತಿ ಶಕ್ತಿಯನ್ನು ಅರಿತು ಗೌರವಿಸುವುದು. ಯಾವುದು ಮಾಡಿದರೆ ಎಲ್ಲರಿಗೂ ಒಳಿತಾಗುತ್ತದೆ ಎಂಬುದನ್ನು ಅರಿಯಲು ಮತಿಯನ್ನು ಬಳಸಿ ಎಂದು ಕುವೆಂಪು ಹೇಳಿದ್ದಾರೆ” ಎಂದರು.
“ನೀರಿನಲ್ಲಿ ಮುಳುಗುತ್ತಿರುವವರನ್ನು ಬದುಕಿಸಲು, ಹಸಿದವನಿಗೆ ಅನ್ನ ಬಡಿಸುವುದಕ್ಕೆ ಜಾತಿ, ಧರ್ಮ ಅಡ್ಡ ಬರಬಾರದು. ಅದೊಂದು ವಿವೇಕ. ಹಾಗಾಗಿಯೇ ಕುವೆಂಪು ಅವರು, ʼಯಾವ ಕಾಲದ ಶಾಸ್ತ್ರ ಏನು ಹೇಳಿದರೇನು, ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನುʼ ಎಂದರು. ನಮ್ಮ ಆತ್ಮಸಾಕ್ಷಿಗೆ ಅನುಸಾರವಾಗಿ ಬದುಕಬೇಕೆ ಹೊರತು, ಮತ ಮೌಢ್ಯಗಳಿಗೆ ಜೋತು ಬೀಳಬಾರದು ಎಂಬುದನ್ನು ಮರೆಯದಿರೋಣ” ಎಂದರು.
“ಯೋಗಿಗಳು ಮಾಡುವ ತಪಸ್ಸು ಕೇವಲ ತನ್ನ ಒಳಿತಿಗೆ, ತನ್ನ ಮೋಕ್ಷಕ್ಕಾಗಿ ಮಾಡುತ್ತಾರೆ. ಆದರೆ ನೇಗಿಲಯೋಗಿ ಮಾಡುವುದು ಎಲ್ಲರ ಅನ್ನಮೋಕ್ಷಕ್ಕಾಗಿ. ಯಾರು ಮೇಲು ಎಂದು ನೀವೆ ನಿರ್ಧರಿಸಬೇಕು. ವೈಚಾರಿಕ ಮನೋಭಾವ, ವೈಜ್ಞಾನಿಕ ದೃಷ್ಟಿಯೇ ಸರ್ವೋದಯ ತತ್ವ. ವಿಶ್ವದಲ್ಲಿ ಏನು ನಡೆಯುತ್ತಿದೆ ಎಂಬುದು ನಮ್ಮ ಅರಿವಿನಲ್ಲಿರಬೇಕು. ಪುರೋಹಿತಶಾಹಿಯ ಅಪಾಯಗಳನ್ನು ಅರಿತಿರಬೇಕು. ಅದು ದೇವರ ನಿಜಸಾಕ್ಷಾತ್ಕಾರಕ್ಕೆ ಇರುವ ಅಡ್ಡಿಯಾಗಿದೆ. ಹಾಗಾಗಿ ನಾವು ಮನುಜಮತ ವಿಶ್ವಪಥ ಅನುಸರಿಸಬೇಕು” ಎಂದು ಹೇಳಿದರು.
“ನವಕರ್ನಾಟಕತ್ವ ಎಂದರೆ ಜಾತಿ ಮತಗಳ ಗಡಿಗಳಾಚೆ ಮನುಷ್ಯ ಸಂಸ್ಕೃತಿಯನ್ನು ಸೃಷ್ಟಿಸುವುದಾಗಿದೆ. ಬಡವನ ಬೆವರಿನ ದುಡಿವಿಲ್ಲದೇ ನಿನ್ನ ಸಂಪತ್ತು ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಕುವೆಂಪುರವರ ಆಶಯಗಳನ್ನು ಮುನ್ನಡೆಸೋಣ” ಎಂದು ಬಂಜಗೆರೆ ಜಯಪ್ರಕಾಶ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ; ಸಚಿವ ಎಚ್ ಕೆ ಪಾಟೀಲ ಚಾಲನೆ
ವೇದಿಕೆಯಲ್ಲಿ ಎಂ ಜಿ ಹೆಗಡೆ, ಸುಧೀರ್ ಕುಮಾರ್ ಮುರೋಳಿ, ಲೇಖಕಿ ಸೌಮ್ಯ ಕೋಡೂರು, ಕವಿ ರಾಜೇಂದ್ರ ಪ್ರಸಾದ್, ಹೋರಾಟಗಾರ್ತಿಯರಾದ ಸಿ ಕುಮಾರಿ, ಪೂರ್ಣಿಮಾ, ತೇಜ ಯಾಲಕ್ಕಯ್ಯ ಮಾತನಾಡಿದರು. ದಸಸಂ ಸಂಚಾಲಕ ಗುರುಪ್ರಸಾದ್ ಕೆರಗೋಡುರವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಕುವೆಂಪು ಹಾಗೂ ಕೆ ವಿ ಶಂಕರಗೌಡ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮಂಡ್ಯ ನಗರದ ಸಂಜಯ್ ವೃತ್ತದಲ್ಲಿ ತ್ರಿವರ್ಣ ಧ್ವಜ ಹಾಗೂ ಕನ್ನಡ ಧ್ವಜಗಳನ್ನು ಹಿಡಿದು ನೂರಾರು ಜನರು ಮಾನವ ಸರಪಳಿ ನಿರ್ಮಿಸಿ ಸೌಹಾರ್ದತೆಯ ಸಂದೇಶ ಸಾರಿದರು.
