ವಿದೇಶಿ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜರೀನಾ ಮೃತ ಮಹಿಳೆ. ಈಕೆ ಮೂಲತಃ ಉಜ್ಬೇಕಿಸ್ತಾನದವರು. ಬಿಡಿಎ ಸೇತುವೆ ಬಳಿಯ ಖಾಸಗಿ ಸ್ಟಾರ್ ಹೋಟೆಲ್ನ ಕೊಠಡಿಯಲ್ಲಿ ಅವರು ಮೃತಪಟ್ಟಿದ್ದಾರೆ.
ಜರೀನಾ ಕಳೆದ ನಾಲ್ಕು ದಿನದ ಹಿಂದೆ ಉಜ್ಬೇಕಿಸ್ತಾನದಿಂದ ಪ್ರವಾಸಿ ವೀಸಾದಡಿ ಬೆಂಗಳೂರಿಗೆ ಬಂದಿದ್ದರು. ಹೋಟೆಲ್ವೊಂದರಲ್ಲಿ ತಂಗಿದ್ದರು. ಮಾರ್ಚ್ 13ರಂದು ಸಾಯಂಕಾಲ ಹೋಟೆಲ್ ಸಿಬ್ಬಂದಿ ಕೂಗಿದರೂ ಮಹಿಳೆ ಬಾಗಿಲು ತೆರೆದಿಲ್ಲ. ಹೀಗಾಗಿ, ಮಾರ್ಚ್ 13ರ ಮಧ್ಯರಾತ್ರಿ ಮಾಸ್ಟರ್ ಕೀ ಬಳಸಿ ಹೋಟೆಲ್ ಸಿಬ್ಬಂದಿ ಕೊಠಡಿಯ ಬಾಗಿಲು ತೆಗೆದಾಗ ಮಹಿಳೆಯ ಶವ ಪತ್ತೆಯಾಗಿದೆ.
ಕೊಲೆಯಾಗಿರುವ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಶೇಷಾದ್ರಿಪುರಂ ಪೊಲೀಸರು, ಎಫ್ಎಸ್ಎಲ್ ತಂಡ ಹಾಗೂ ಡಾಗ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೇಂದ್ರ ವಿಭಾಗ ಡಿಸಿಪಿ ಶೇಖರ್ ಟೆಕ್ಕಣ್ಣನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಯಾವುದೇ ಅಡಚಣೆ ಆಗುವುದಿಲ್ಲ : ಸ್ಪಷ್ಟನೆ ನೀಡಿದ ಸಂಸ್ಥೆ
ಇನ್ನು ಆರೋಪಿ ಉಸಿರುಗಟ್ಟಿಸಿ ಮಹಿಳೆಯ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೋಟೆಲ್ ಸಿಸಿಟಿವಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಸದ್ಯ ಸ್ಥಳದಲ್ಲಿ ಎಫ್ಎಸ್ಎಲ್ ಪರಿಶೀಲನೆ ಮುಕ್ತಾಯವಾಗಿದೆ. ಮರಣೋತ್ತರ ಪರೀಕ್ಷೆಗೆ ಮಹಿಳೆಯ ಮೃತದೇಹವನ್ನು ಬೋರಿಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ.