ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ | ಬಿಜೆಪಿಯ ಹೊಸ ಮುಖ ಬೃಜೇಶ್ ಚೌಟ ಯಾರು? ಹಿನ್ನೆಲೆ ಏನು?

Date:

Advertisements

ತೀವ್ರ ಕುತೂಹಲ ಕೆರಳಿಸಿದ್ದ ಬಿಜೆಪಿಯ ಎರಡನೇ ಪಟ್ಟಿ ಬುಧವಾರ ಬಿಡುಗಡೆಯಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ತಳಮಳ, ಬಂಡಾಯದ ಬಿಸಿ ಏರುತ್ತಿದೆ. ಟಿಕೆಟ್ ತಪ್ಪಿದವರ ಪೈಕಿ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೂಡ ಒಬ್ಬರು.

ಕಳೆದ 15 ವರ್ಷಗಳಿಂದ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿದ್ದಲ್ಲದೇ, ಹೊಸ ಮುಖಕ್ಕೆ ಮಣೆ ಹಾಕಿದೆ. ಈ ಬಾರಿ ಲೋಕಸಭೆ ಅಭ್ಯರ್ಥಿ ಬದಲಾವಣೆ ಆಗಲೇಬೇಕೆಂದು ಪಕ್ಷದ ಕಾರ್ಯಕರ್ತರು ಅಭಿಯಾನ ಕೈಗೊಂಡಿದ್ದರು. ಕಾರ್ಯಕರ್ತರ ಮಾತಿಗೆ ಓಗೊಟ್ಟ ಬಿಜೆಪಿ ಹೈಕಮಾಂಡ್ ಯುವ ಮುಖಂಡ, 42 ವರ್ಷದ ಬೃಜೇಶ್ ಚೌಟ ಅವರನ್ನು ಅಭ್ಯರ್ಥಿಯಾಗಿಸಿದೆ.

ಹೊಸ ಮುಖಕ್ಕೆ ಮಣೆ ಹಾಕುತ್ತಿದ್ದಂತೆಯೇ ಹೇಳಿಕೆ ನೀಡಿರುವ ನಳಿನ್ ಕುಮಾರ್ ಕಟೀಲ್, “ಅಭ್ಯರ್ಥಿ ಬ್ರಿಜೇಶ್ ಚೌಟಾಗೆ ಅಭಿನಂದಿಸುವೆ. ಕಳೆದ 15 ವರ್ಷಗಳಿಂದ ಪಕ್ಷ ನನಗೆ ಅವಕಾಶ ಕೊಟ್ಟಿದೆ. ಮತದಾರರು 15 ವರ್ಷಗಳಿಂದ ಆಶೀರ್ವಾದ ಮಾಡಿದ್ದಾರೆ. ರಾಜಕಾರಣಕ್ಕೆ ಯುವಕರು ಬರಬೇಕು. ಪಕ್ಷ ತೆಗೆದುಕೊಂಡಿರುವ ತೀರ್ಮಾನವನ್ನು ಸ್ವಾಗತಿಸುತ್ತೇನೆ” ಎಂದಿದ್ದಾರೆ.

Advertisements

“ಪಕ್ಷದ ರಾಜ್ಯಾಧ್ಯಕ್ಷನಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಪಕ್ಷ ಏನು ಹೇಳುತ್ತೋ ಅದನ್ನ ಮಾಡುವವನು ನಾನು. ನನಗೆ ಕೊಟ್ಟ ಸಹಕಾರವನ್ನೇ ಕ್ಯಾ.ಬ್ರಿಜೇಶ್​ ಚೌಟಾಗೆ ಕೊಡಬೇಕು” ಎಂದು ಪಕ್ಷದ ಕಾರ್ಯಕರ್ತರಿಗೆ ಕಟೀಲು ಇದೇ ವೇಳೆ ಮನವಿ ಮಾಡಿದ್ದಾರೆ.

ಕ್ಯಾಪ್ಟನ್ ಬೃಜೇಶ್ ಚೌಟ ಯಾರು? ಹಿನ್ನೆಲೆ ಏನು?

ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿರುವ ಕ್ಯಾಪ್ಟನ್ ಬೃಜೇಶ್ ಚೌಟ, ನಿವೃತ್ತ ಸೇನಾಧಿಕಾರಿ. ಭಾರತೀಯ ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ ಸ್ವಯಂ ನಿವೃತ್ತಿ ಪಡೆದಿದ್ದರು.

chowta pic
ಫೋಟೋ ಕೃಪೆ: Captain Brijesh Chowta ಫೇಸ್‌ಬುಕ್

ಮಂಗಳೂರಿನ ರಥಬೀದಿ(ಕಾರ್‌ಸ್ಟ್ರೀಟ್)ನಲ್ಲಿ ನೆಲೆಸಿರುವ ಕ್ಯಾಪ್ಟನ್ ಬೃಜೇಶ್ ಚೌಟ ಕಾಲೇಜು ದಿನಗಳಲ್ಲಿಯೇ ಎನ್‌ಸಿಸಿಯಲ್ಲಿ ತೊಡಗಿಕೊಂಡಿದ್ದರು. ಅಲ್ಲದೇ, ಮಂಗಳೂರು ವಿವಿಯಲ್ಲಿ ‘ಅತ್ಯುತ್ತಮ ಕೆಡೆಟ್’ ಕೂಡ ಆಗಿದ್ದರು.

ಮಂಗಳೂರಿನ ಮಿಲಾಗ್ರಿಸ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯು ಮತ್ತು ಬಿಎಸ್‌ಸಿ ಪದವಿ ಪೂರೈಸಿದ್ದ ಚೌಟ, ಆ ಬಳಿಕ ಮಧ್ಯಪ್ರದೇಶದ ಇಂದೋರ್‌ನ ಐಐಎಂನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು.

ಯುಪಿಎಸ್‌ಸಿ ಮೂಲಕ ಡಿಫೆನ್ಸ್ ಪರೀಕ್ಷೆ ಬರೆದು ತೇರ್ಗಡೆಗೊಂಡಿದ್ದರು. ಆ ಬಳಿಕ ಚೆನ್ನೈನಲ್ಲಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಭಾರತೀಯ ಭೂಸೇನೆಗೆ ಸೇರಿದ್ದರು. ಪ್ರತಿಷ್ಠಿತ ಎಂಟನೇ ಗೋರ್ಖಾ ರೈಫಲ್ಸ್ 7ನೇ ಬೆಟಾಲಿಯನ್‌ನಲ್ಲಿ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್ ಹುದ್ದೆಗೂ ಕೂಡ ಏರಿದ್ದರು. ಕೆಲ ವರ್ಷಗಳ ಸೇವೆಯ ಬಳಿಕ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು.

ಆರ್‌ಎಸ್‌ಎಸ್‌ನ ಕಾರ್ಯಕರ್ತನಾಗಿರುವ ಬೃಜೇಶ್ ಚೌಟ, ಬಂಟ ಸಮುದಾಯಕ್ಕೆ ಸೇರಿದವರು. ಸೇನಾ ನಿವೃತ್ತಿಯ ಬಳಿಕ ಮಂಗಳೂರಿಗೆ ಆಗಮಿಸಿದ್ದ ಇವರು, ಬಳಿಕ ಬಿಜೆಪಿಯಲ್ಲಿ ತೊಡಗಿಸಿಕೊಂಡಿದ್ದಾರೆ.

2013ರಲ್ಲಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯ ರಾಜಕೀಯಕ್ಕಿಳಿದು, 2016-19ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡು ಸಂಸದ ನಳಿನ್ ಕುಮಾರ್ ಜತೆಗೂಡಿ ಪಕ್ಷದ ಕೆಲಸ ಮಾಡಿದ್ದರು.

2019ರಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಚೌಟ, 2023ರ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಪ್ರಭಾರಿಯಾಗಿದ್ದರು. ಇದಲ್ಲದೆ, 2015ರಿಂದ ಕೇರಳ, ಕರ್ನಾಟಕ, ದೆಹಲಿ, ಮಹಾರಾಷ್ಟ್ರದ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪರವಾಗಿ ಕರ್ತವ್ಯ ನಿರ್ವಹಿಸಿದ್ದರು. ರಾಜ್ಯ ಬಿಜೆಪಿಯ ಚುನಾವಣಾ ಸಮಿತಿ ಭಾಗವಾಗಿರುವ ಯುವ ಸಂವಾದ ಘಟಕದಲ್ಲಿ ರಾಜ್ಯ ಸಹ ಸಂಚಾಲಕರಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ ಜೊತೆ ರಾಜ್ಯಾದ್ಯಂತ ಪ್ರವಾಸ ಮಾಡಿದ್ದರು.

Brijesh Chowta bio
ಫೋಟೋ ಕೃಪೆ: X/ @CaptBrijesh

ಬಿಜೆಪಿಯ ಚಟುವಟಿಕೆಯ ಜೊತೆಗೆ ಸಮರ್ಥನ್ ಫೌಂಡೇಶನ್ ಮೂಲಕ ಮಂಗಳೂರಿನಲ್ಲಿ ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಫೌಂಡೇಶನ್ ಮೂಲಕ ಸೇವಾ ಚಟುವಟಿಕೆ ಕೂಡ ನಡೆಸುವ ಮೂಲಕ ತಮ್ಮದೇ ಬಳಗವನ್ನು ಕಟ್ಟಿಕೊಂಡಿದ್ದರು. ಲಿಟ್ ಫೆಸ್ಟ್ ಸಾಹಿತ್ಯ ಕೂಟವನ್ನು ಮಂಗಳೂರಿನಲ್ಲಿ ಸಂಘಟಿಸಿದ್ದವರಲ್ಲಿ ಇವರೂ ಕೂಡ ಒಬ್ಬರಾಗಿದ್ದರು.

2015ರಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳ ನಿಷೇಧಕ್ಕೊಳಗಾದ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಟ ಸಂಘಟಿಸಿದವರಲ್ಲಿ ಇವರೂ ಒಬ್ಬರಾಗಿ ಗುರುತಿಸಿಕೊಂಡಿದ್ದಲ್ಲದೇ, ಸತತ ಏಳು ವರ್ಷಗಳಿಂದ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಕಂಬಳ ಆಯೋಜಿಸುತ್ತಿದ್ದಾರೆ.

ಇದನ್ನು ಓದಿದ್ದೀರಾ? ಬೆಂಗಳೂರು ಉತ್ತರಕ್ಕೆ ಶೋಭಕ್ಕ ಬೇಡ: ಟಿಕೆಟ್ ಘೋಷಣೆ ಬೆನ್ನಲ್ಲೇ ಮತ್ತೆ ‘ಗೋ ಬ್ಯಾಕ್’ ಅಭಿಯಾನ

ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿರುವ ಬೃಜೇಶ್ ಚೌಟ ಬಂಟ ಸಮುದಾಯದ ಪ್ರಮುಖ ಗುತ್ತಿನ ಮನೆಗೆ ಸೇರಿದ್ದರೂ ಅವಿವಾಹಿತರಾಗಿಯೇ ಉಳಿದುಕೊಂಡಿದ್ದಾರೆ. ಇವರ ಕುಟುಂಬಕ್ಕೆ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ, ಆರ್‌ಎಸ್‌ಎಸ್‌ನ ಸಂಪರ್ಕದಿಂದ ಈ ಬಾರಿಯ ಬಿಜೆಪಿ ಟಿಕೆಟ್ ಇವರಿಗೆ ಲಭಿಸಿದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X