ರಾಜ್ಯದಲ್ಲಿ ಬಿರು ಬೇಸಿಗೆಯಿಂದ ಜನ ಕಂಗಾಲಾಗಿದ್ದು, ಸುಡುವ ಬಿಸಿಲು, ಬತ್ತಿದ ನದಿ, ಕೆರೆ, ಕೊಳವೆಬಾವಿಗಳಲ್ಲಿಯೂ ನೀರಿಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ತಂದೊಡ್ಡಿದೆ. ಇದೆಲ್ಲದರ ನಡುವೆ ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ಅದಕ್ಕೆ ತಕ್ಕಂತೆ ಕೊಡಗು ಜಿಲ್ಲೆಯಲ್ಲಿ ಬುಧವಾರ ಮಳೆಯಾಗಿರುವುದು ಅಚ್ಚರಿ ಮೂಡಿಸಿದ್ದರೂ ಸಂತಸಕ್ಕೆ ಕಾರಣವಾಗಿದೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಕಿಗ್ಗಾಲು, ಕಾಕೋಟಪರಂಬುವಿನಲ್ಲಿ ಬುಧವಾರ ಕೆಲ ಸಮಯ ಮಳೆಯಾಗಿದ್ದು, ಕಾದಿದ್ದ ಭೂಮಿಗೆ ತಂಪೆರದಿದೆ.
ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಬಗ್ಗೆ ಮುನ್ಸೂಚನೆ ಇದ್ದು, ಮಾರ್ಚ್ 20ರ ಬಳಿಕ ಕೊಡಗು, ಪಶ್ಚಿಮ ಘಟ್ಟಗಳ ಭಾಗದಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿತ್ತು. ಆದರೆ ಅಂದುಕೊಂಡಿದ್ದ ಸಮಯಕ್ಕೂ ಮುನ್ನವೇ ಕೊಡಗು ಜಿಲ್ಲೆಯ ಕಿಗ್ಗಾಲುವಿನಲ್ಲಿ ಮಳೆಯಾಗಿದೆ.
“ಎಲ್ ನಿನೋ ಪ್ರಭಾವ ಕಡಿಮೆಯಾಗುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಜಾಗತಿಕವಾಗಿ ತಾಪಮಾನ ಸಹಜ ಸ್ಥಿತಿಗೆ ಮರಳಲಿದೆ. ಈ ಬಾರಿ ರಾಜ್ಯದಲ್ಲಿ ಕೂಡ ಉತ್ತಮ ಮುಂಗಾರು ಮಳೆಯ ನಿರೀಕ್ಷೆ ಇದೆ” ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮೇ-ಜೂನ್ ವೇಳೆಗೆ ರಾಜ್ಯದಲ್ಲಿ ಉತ್ತಮ ಮುಂಗಾರು ಆರಂಭವಾಗುವ ಸಾಧ್ಯತೆ ಇದ್ದು, ಜೂನ್ ವೇಳೆಗೆ ರಾಜ್ಯದಲ್ಲಿ ನೀರಿನ ಸಮಸ್ಯೆ ನಿವಾರಣೆಯಾಗಲಿದೆ” ಎಂದು ನಿರೀಕ್ಷಿಸಿದೆ.

ಈ ಸುದ್ದಿ ಓದಿದ್ದೀರಾ? ಕಲಬುರಗಿ | 5, 8, 9ನೇ ತರಗತಿಯ ಪಬ್ಲಿಕ್ ಪರೀಕ್ಷೆ ಈ ವರ್ಷ ಬೇಡ; ಎಐಡಿಎಸ್‌ಒ ಮನವಿ
ಈ ಬಾರಿ ರಾಜ್ಯದಲ್ಲಿ ಮುಂಗಾರು ಕೈಕೊಟ್ಟರೆ ಭೀಕರ ಬರಗಾಲ ಎದುರಾಗಲಿದೆ. ಆದರೆ ಹವಾಮಾನ ತಜ್ಞರು ಉತ್ತಮ ಮಳೆಯಾಗುವ ಮುನ್ಸೂಚನೆ ಕೊಟ್ಟಿರುವುದು ಸದ್ಯ ಸಮಾಧಾನ ತರಿಸಿದೆ. ಆದರೆ ಮಳೆಗಾಲ ಆರಂಭಕ್ಕೆ ಇನ್ನು ಮೂರು ತಿಂಗಳು ಸಮಯ ಇದ್ದು ಅದುವರೆಗೂ ಸುಡು ಬಿಸಿಲಿನ ನಡುವೆ, ನೀರಿನ ಕೊರತೆ ನಡುವೆ ದಿನ ಕಳೆಯುವುದು ಸವಾಲಾಗಿದೆ.
ಎಲ್ ನಿನೋ ಕಾರಣದಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಕಳೆದ ವರ್ಷ ಮಳೆ ಸಂಪೂರ್ಣವಾಗಿ ಕೈಕೊಟ್ಟಿತ್ತು. ಪ್ರಮುಖ ಜಲಾಶಯಗಳು ಅರ್ಧ ಕೂಡ ತುಂಬದೇ ಇರುವುದು ಕೃಷಿ ಚಟುವಟಿಕೆ ಮೇಲೆಯೂ ಪರಿಣಾಮ ಬೀರಿದೆ.
