ರೈತ ವಲಯಕ್ಕೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ನೀತಿಗಳ ವಿರುದ್ಧ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ರೈತ ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಮೂರು ರೈತ ಕಾನೂನುಗಳನ್ನು ರದ್ದುಪಡಿಸಲು ಆಗ್ರಹಿಸಿ 2020-21ರಲ್ಲಿ ದೆಹಲಿಯಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ರೈತ ಸಂಘಟನೆಗಳನ್ನು ಮುನ್ನಡೆಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆ ನೀಡಿದ್ದು, ಕೇಂದ್ರದ ನೀತಿಗಳ ವಿರುದ್ಧ ಹೋರಾಟ ತೀವ್ರಗೊಳಿಸುವುದಾಗಿ ಕೇಂದ್ರ ‘ಕಿಸಾನ್ ಮಜ್ದೂರ್ ಮಹಾಪಂಚಾಯತ್’ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಪ್ರತಿಭಟನಾನಿರತಾ ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
“ಕೇಂದ್ರದಿಂದ ರೈತ ಪರವಾದ ನೀತಿಗಳನ್ನು ಜಾರಿಗೊಳಿಸಬೇಕಿದೆ. ನಾವು ಬೆಳೆಗಳನ್ನು ಪರಿಪೂರ್ಣಗೊಳಿಸಲು ಕನಿಷ್ಠ ಬೆಂಬಲ ಬೆಲೆಗಾಗಿ ಕೂಡ ಬೇಡಿಕೆಯಿಡುತ್ತಿದ್ದೇವೆ. 2021ರ ಅಕ್ಟೋಬರ್‌ನಲ್ಲಿ ಲಕೀಂಪುರ ಕೇರಿಯಲ್ಲಿ ರೈತರ ಮೇಲೆ ಕಾರು ಹರಿಸಿದ್ದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ ಸರ್ಕಾರಿ ನೌಕರಿ ನೀಡಬೇಕು” ಎಂದು ಪಂಜಾಬ್‌ನ ಪಾಟಿಯಾಲದ ಹರ್ಮಾನ್ ಸಿಂಗ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾರ್ಚ್ ನಲ್ಲೇ ನೀರಿಗಾಗಿ ಹಾಹಾಕಾರ, ಮಿತ ಬಳಕೆಯ ಪಾಠ ಕಲಿಯಲು ಇದು ಸಕಾಲ
“ನಾವು ಬುಧವಾರ ರಾತ್ರಿ ದೆಹಲಿಗೆ ಆಗಮಿಸಿದ್ದೇವೆ. ನಾವು ಇಲ್ಲಿನ ಗುರುದ್ವಾರದಲ್ಲಿ ಇಂದು ಬೆಳಿಗ್ಗೆ ಪ್ರಾರ್ಥನೆ ನೆರವೇರಿಸಿದೆವು. ಇಂದಿನ ಪ್ರತಿಭಟನೆ ಮುಗಿದ ತರುವಾಯು ಗುರುದ್ವಾರಕ್ಕೆ ತೆರಳುತ್ತೇವೆ”ಎಂದು ಪಾಟಿಯಾಲದ ಬಲಜಿತ್ ಸಿಂಗ್ ಹೇಳಿದರು.
ರೈತರು ಪ್ರತಿಭಟನೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ದೆಹಲಿಯಲ್ಲಿ ಸಾರ್ವಜನಿಕರು ಸಂಚಾರಿ ದಟ್ಟಣೆ ತಪ್ಪಿಸಲು ಸಂಚಾರಿ ಸೂಚನೆಗಳನ್ನು ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ರೈತರು ದೆಹಲಿಗೆ ಆಗಮಿಸಿರುವ ಕಾರಣ ದೆಹಲಿಯ ಗಡಿಗಳಲ್ಲಿ ಅರೆಸೇನಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 5 ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಭೆ ಸೇರಬಾರದು ಎಂದು ದೆಹಲಿ ಪೊಲೀಸರು ರೈತರಿಗೆ ತಿಳಿಸಿದ್ದಾರೆ.
ಅದೇ ರೀತಿ ರಾಮಲೀಲ ಮೈದಾನದಲ್ಲಿ ನಡೆಯುವ ಪ್ರತಿಭಟನೆಗೆ ಟ್ರಾಕ್ಟರ್ – ಟ್ರಾಲಿಗಳನ್ನು ತರಬಾರದು ಎಂದು ಪೊಲೀಸರು ರೈತರಿಗೆ ತಿಳಿಸಿದ್ದಾರೆ.
