(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಒಂದಿನ ದೊಡ್ಡಬಳ್ಳಾಪುರದ ಒಂದು ಹಳ್ಳಿಯಲ್ಲಿ ಮಧ್ಯಾಹ್ನ ಊಟ ಮುಗಿಸಿ ಎಲ್ಲರೂ ರೆಸ್ಟ್ ಮಾಡುತ್ತಿದ್ದೆವು. ನಮ್ಮ ಲೀಡರ್ ಬಿಳಿ ಚೂಡಿದಾರ್ ಹಾಕಿಕೊಂಡು, ಕೂದಲು ಕೆದರಿಕೊಂಡು ಆ ಹಳ್ಳಿಯ ಕೆರೆ ಏರಿ ಮೇಲೆ ವಾಯ್ಸ್ ಪ್ರಾಕ್ಟೀಸ್ ಮಾಡುತ್ತಿದ್ದರು. ಮುಂದೇನಾಗಿರಬಹುದೆಂದು ವಿವರಿಸುವ ಅಗತ್ಯವಿಲ್ಲ…
ಕಳೆದ ಸಂಚಿಕೆಯಲ್ಲಿ ಬರೆದ ‘ಜನಾಧಿಕಾರ ಜನಾಂದೋಲನ’ ಜಾಥಾ ನನ್ನ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು ಎಂದು ಹೇಳಿದೆ. ಆ ಜಾಥಾಗಾಗಿ ಆರು ನಾಟಕಗಳನ್ನು, ಹತ್ತಾರು ಹಾಡುಗಳನ್ನು ಕಲಿತೆವು. ಆ ಕಲಿಕಾ ಶಿಬಿರದಲ್ಲಿ ಸಿ ಬಸವಲಿಂಗಯ್ಯನವರು, “ಇದು ಮೇಲ್ನೋಟಕ್ಕೆ ಸರ್ಕಾರಿ ಜಾಥಾ ಆದರೂ, ಜನರಿಗೆ ತಮ್ಮ ಅಧಿಕಾರವನ್ನು ನೆನಪಿಸುವ ಮತ್ತು ಪಂಚಾಯತ್ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಮಹತ್ತರವಾದ ಕಾರ್ಯಕ್ರಮ; ಇದರಿಂದ ಸಾಂವಿಧಾನಿಕ ಹಕ್ಕುಗಳನ್ನು, ಮೀಸಲಾತಿಯ ಮಹತ್ವವನ್ನು ತಳಸಮುದಾಯಗಳಿಗೆ ತಿಳಿಸಬಹುದು,” ಎಂದು ಹೇಳಿದ್ದರು. ಅದು ನಮಗೆ ಜಾಥಾದಲ್ಲಿ ಪ್ರತಿದಿನವೂ ಸಾಕ್ಷಾತ್ಕಾರವಾಗುತ್ತಿತ್ತು. ನಮ್ಮ ತಂಡದ ಲೀಡರ್ ಕಾರಣದಿಂದ ಸಣ್ಣ-ಪುಟ್ಟ ತೊಂದರೆಗಳಾಗುತ್ತಿದ್ದರೂ ಅವರು ಅದ್ಭುತ ಹಾಡುಗಾರರಾಗಿದ್ದರು. ಆಗಾಗ ನಮ್ಮಿಂದ ಅವರಿಗೆ ಊಟದ ವಿಷಯಕ್ಕೆ ಕಿರಿಕಿರಿಯಾಗುತ್ತಿತ್ತು. ಒಂದು ದಿನ ದೊಡ್ಡಬಳ್ಳಾಪುರದ ಒಂದು ಹಳ್ಳಿಯಲ್ಲಿ ಮದ್ಯಾಹ್ನ ಊಟ ಮುಗಿಸಿ ನಾವೆಲ್ಲರೂ ರೆಸ್ಟ್ ಮಾಡುತ್ತಿದ್ದೆವು. ನಮ್ಮ ಲೀಡರ್ ಬಿಳಿ ಚೂಡಿದಾರ್ ಹಾಕಿಕೊಂಡು ಆಗತಾನೇ ಸ್ನಾನ ಮಾಡಿದ್ದರಿಂದ ಕೂದಲು ಕೆದರಿಕೊಂಡು ಆ ಹಳ್ಳಿಯ ಕೆರೆಯ ಏರಿ ಮೇಲೆ ವಾಯ್ಸ್ ಪ್ರಾಕ್ಟೀಸ್ ಮಾಡುತ್ತಿದ್ದರು. ಮುಂದೇನಾಗಿರಬಹುದೆಂದು ವಿವರಿಸುವ ಅಗತ್ಯವಿಲ್ಲ. ಈ ಘಟನೆ ನಮ್ಮ ಜಾಥಾವಿದ್ದ ದಿನವಷ್ಟೂ ನಮಗೆ ತಮಾಷೆಯ ನೆನಪಾಗಿ ಉಳಿದುಬಿಟ್ಟಿತ್ತು.
ಇನ್ನೊಂದು ಹಳ್ಳಿಯಲ್ಲಿ ನಮ್ಮ ಲೀಡರ್ ತಕರಾರಿನ ಆಚೆಗೂ ಊರಿನ ಒಬ್ಬ ವ್ಯಕ್ತಿ ಕೋಳಿಮಾಂಸದ ಅಡುಗೆ ಮಾಡಿಸಿ, ಮುಂದೆ ನಿಂತು ಬಡಿಸಿ ಉಪಚಾರ ಮಾಡಿದರು. ನಾಟಕ ಮುಗಿದ ಮೇಲೆ ವಿಚಿತ್ರವಾಗಿ ವರ್ತಿಸುತ್ತಿದ್ದರು. ಅವರ ಆ ಅಸಹನೆಗೆ ಕಾರಣ ನಮಗೆ ಆನಂತರ ತಿಳಿಯಿತು. ಆ ವ್ಯಕ್ತಿ ನಾವಂದುಕೊಂಡಿದ್ದಂತೆ ಪಂಚಾಯತಿ ಅಧ್ಯಕ್ಷನಾಗಿರಲಿಲ್ಲ; ಅಧ್ಯಕ್ಷಿಣಿಯ ಗಂಡ. ರಾಜಪ್ಪ ದಳವಾಯಿ ಸಾರ್ ಬರೆದಿದ್ದ ‘ಪುಗ್ಸಟ್ಟೆ ಪ್ರಸಂಗ’ ನಾಟಕ ನೋಡಿದ ಮೇಲೆ ನಮ್ಮ ಮೇಲೆ ತೋರಿಸಿದ ಪ್ರೀತಿಗೆ ಪಶ್ಚಾತ್ತಾಪವಾಗಿರಬೇಕು. ಆ ನಾಟಕದಲ್ಲಿ ಹೆಂಡತಿಯ ಅಧಿಕಾರವನ್ನು ಗಂಡಂದಿರು ಉಪಯೋಗಿಸಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಬಗ್ಗೆ ಎಚ್ಚರಿಕೆಯ ದೃಶ್ಯಗಳಿದ್ದವು. ನಾವು ಈ ಜಾಥಾ ಮಾಡುವ ಸಂದರ್ಭದಲ್ಲಿ ಮಹಿಳಾ ಮೀಸಲಾತಿಯನ್ನು ಬಳಸಿಕೊಂಡು ಪಂಚಾಯ್ತಿ ಅಧ್ಯಕ್ಷರಾದ ಹೆಂಗಸರು ನೆಪಮಾತ್ರಕ್ಕೆ ಮಾತ್ರ ಇರುತ್ತಿದ್ದರು. ಹಳ್ಳಿಗಳಲ್ಲಿ ಅವರ ಗಂಡಂದಿರನ್ನೇ ‘ಅಧ್ಯಕ್ಷರು’ ಎಂದು ಕರೆಯಲಾಗುತ್ತಿತ್ತು. ನಮ್ಮನ್ನು ನಾಟಕ ಮಾಡಲು ಜಿಲ್ಲಾ ಪಂಚಾಯತಿಯೇ ಕಳಿಸಿದ್ದರಿಂದ ‘ಪುಕ್ಸಟ್ಟೆ ಪ್ರಸಂಗ’ ಎಚ್ಚರಿಕೆಯಾಗಿ ಕಾಣುತ್ತಿತ್ತು.
ಈ ನಾಟಕ ನಡೆಯುವಾಗ ಚಿತ್ರವಿಚಿತ್ರ ವಿದ್ಯಮಾನಗಳು ನಡೆಯುತ್ತಿದ್ದವು. ನಾಟಕದ ನಡುವೆ ಕೆಲವರು ಇದ್ದಕ್ಕಿದ್ದಂತೆ ಜೋರು ದನಿಯಲ್ಲಿ ಬೈಯಲು ಶುರು ಮಾಡುತ್ತಿದ್ದರು. ಕಲ್ಲು ಹೊಡೆದದ್ದೂ ಇದೆ. ಪಂಚಾಯ್ತಿಯ ಭ್ರಷ್ಟಾಚಾರಕ್ಕೆ ಒಳಗಾದ ಕೆಲವರಂತೂ ನಾಟಕದ ಪಾತ್ರವೇ ಆಗಿ, “ಅಯ್ಯೋ… ಕುರಿ ಲೋನ್‌ಗೆ ಅಂತ ನಾನೂ ಮುನ್ನೂರು ರುಪಾಯಿ ಕೊಟ್ಟಿದಿನಿ,” ಅನ್ನುತ್ತಾ, ಅವರದ್ದೇ ಡೈಲಾಗ್ ಸೇರಿಸುತ್ತಿದ್ದರು.
ಕೆ ವೈ ನಾರಾಯಣಸ್ವಾಮಿಯವರು ಬರೆದಿದ್ದ ‘ಬಾರಮ್ಮ ಬಾಗೀರತಿ’ ನಾಟಕ ಮಾಡುವ ದಿನವೆಲ್ಲ ಮಳೆ ಬರುತ್ತಿದ್ದ ಕಾರಣ ಅದನ್ನು ನಾವು ‘ಮಳೆ ನಾಟಕ’ ಎನ್ನುತ್ತಿದ್ದೆವು. ಅದರಲ್ಲಿ ನಂದಾ ಭಾಗೀರತಿ ಪಾತ್ರ ಮಾಡಿದರೆ, ನಾನು ಗಂಗಜ್ಜನ ಪಾತ್ರ ಮಾಡುತ್ತಿದ್ದೆ. ಈ ನಾಟಕದ ಡೈಲಾಗುಗಳನ್ನು ನಾವೆಲ್ಲ ಬೆಳಗಿನ ಸಂದರ್ಭದಲ್ಲಿಯೂ ಹೇಳಿಕೊಳ್ಳುತ್ತಿದ್ದೆವು. ತಿಪ್ಪೂರು ಮಂಜ, ಕಾಟಪ್ಪನ ಪಾತ್ರಗಳು ಬದಲಾಗುತ್ತಿದ್ದುದರಿಂದ ಒಮ್ಮೊಮ್ಮೆ ಇಬ್ಬರ ಡೈಲಾಗುಗಳೂ ಅದಲುಬದಲಾಗಿ ಗಾಬರಿಯಾಗುತ್ತಿತ್ತು. ಕೋಟಿಗಾನಹಳ್ಳಿ ರಾಮಯ್ಯನವರು ಬರೆದಿದ್ದ ಅಣ್ಣಾ ಹಜಾರೆ ಜೀವನ ಕುರಿತ ರೂಪಕವಂತೂ ಹಲವು ಸ್ತರಗಳ ಸಂಗೀತ ಮಾಂತ್ರಿಕತೆಯಂತಿತ್ತು. ಇಸ್ಮಾಯಿಲ್ ಗೋನಾಳ್ ಅವರು ಟ್ಯೂನ್ ಮಾಡಿದ್ದ ಇಡೀ ರೂಪಕವನ್ನು ಲೈವಾಗಿ ಹಾಡುತ್ತಿದ್ದೆವು. ‘ಜಾತಿ ಮಾಡಬ್ಯಾಡಿರಿ,’ ‘ಕದ್ದವರಾರಣ್ಣ ಬೀಜಗಳ’ ಎನ್ನುವ ನಾಟಕಗಳನ್ನು ವಾರಕ್ಕೆರಡು ಬಾರಿ ಮಾತ್ರ ಮಾಡುತ್ತಿದ್ದೆವು.
ನಮ್ಮ ಊರಿನಲ್ಲಿ ನಾಟಕ ಮಾಡಬೇಕಾಗಿ ಬಂದಾಗ ನನಗೆ ವಿಚಿತ್ರ ಭಾವನೆಗಳು ಮೂಡಿದ್ದವು. ನಮ್ಮ ಮನೆಗೆ ನಾಟಕದ ತಂಡವನ್ನು ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆ ನನ್ನನ್ನು ಹೆಚ್ಚು ಆತಂಕಕ್ಕೆ ತಳ್ಳಿತ್ತು. ಅದೆಲ್ಲ ಹೇಗೋ ನಿಭಾಯಿಸಿ ನಾಟಕ ಪ್ರಾರಂಭವಾದ ಮೇಲೆ, ಎಚ್ ಎಲ್ ಪುಷ್ಪಾ ಮೇಡಂ ಅವರ ‘ಸಾಲುಮರದಾ ನೆರಳಿಂದ’ ಹಾಡಿಗೆ ರೂಪಕ ಮಾಡುತ್ತಿದ್ದೆವು. ನಾನು ಹಾಡುತ್ತಿದ್ದೆ. ನನ್ನನ್ನು ಕಂಡರಾಗದ ಮೇಲ್ಜಾತಿಯ ಹುಡುಗರು ಸೇರಿ ನನಗೆ ಅಪಮಾನ ಮಾಡಲು ಕಾಯುತ್ತಿದ್ದರು. ಅದರಲ್ಲಿ ಒಬ್ಬನು ನಾನು ಹಾಡುತ್ತಿದ್ದಾಗ ಮುಂದೆ ಬಂದು ಹತ್ತು ರೂಪಾಯಿ ನೋಟಿಗೆ ಬಟ್ಟೆ ಪಿನ್ನು ಹಾಕಿ ನನ್ನ ಕುರ್ತಾ ಜೇಬಿನ ಮೇಲೆ ಸಿಕ್ಕಿಸಿ, ‘ನೀನಿದಕ್ಕೆ ಮಾತ್ರ ಲಾಯಕ್ಕು’ ಎನ್ನುವಂತೆ ನಕ್ಕ. ನನಗೆ ಒಂಥರಾ ಹೇಳಿಕೊಳ್ಳಲಾಗದ ಹಿಂಸೆಯಾದರೂ ತೋರಿಸಿಕೊಳ್ಳಲಿಲ್ಲ.
ಈ ಜಾಥಾದಲ್ಲಿ ನಮಗೆ ನಾಟಕ ಮಾಡುವುದರ ಜೊತೆಗೆ ಆಯಾ ಹಳ್ಳಿಯ ಕಲಾವಿದರ ಸೆನ್ಸಸ್ ಮಾಡುವ ಕೆಲಸವನ್ನೂ ಕೊಟ್ಟಿದ್ದರು. ಊರಿನ ಕೇರಿಗಳನ್ನು ಇಬ್ಬಿಬ್ಬರು ಹಂಚಿಕೊಂಡು ಸೆನ್ಸಸ್ ಮಾಡಬೇಕಿತ್ತು. ನಾನು ಮಮತ್ತು ಗೆಳೆಯ ಕಾಟಪ್ಪ ಭಾನುವಾರದಂದು ಮಾತ್ರ ದಲಿತರ ಕೇರಿಗಳನ್ನು ಎಲ್ಲರಿಗಿಂತ ಮೊದಲು ಆಯ್ಕೆ ಮಾಡಿಕೊಂಡುಬಿಡುತ್ತಿದ್ದೆವು. ದಲಿತರ ಬಹುತೇಕ ಮನೆಗಳಲ್ಲಿ ಭಾನುವಾರ ಮಾಂಸದ ಅಡುಗೆ ಮಾಡುತ್ತಿದ್ದರು. ನಾವು ಹೋಗಿ ಅವರನ್ನು ಮಾತಿಗೆಳೆದು ಅಡುಗೆ ವಿಷಯಕ್ಕೆ ಬರುತ್ತಿದ್ದೆವು. ಕೆಲವೊಬ್ಬರು, “ಏನೋ ಮಾಡಿದಿವಿ ಬಿಡಪ್ಪ ನಮ್ದೆಲ್ಲಾ ಯಾವೂಟ!” ಅನ್ನೋರು. ಇನ್ನೂ ಕೆಲವರು, “ನೀವು ಅದೆಲ್ಲಾ ತಿನ್ನಲ್ಲ ಬಿಡಿ…” ಅನ್ನೋರು. ನಾವು ನೋಡಿದ ಹೆಚ್ಚಿನ ದಲಿತ ಮನೆಗಳಲ್ಲಿ ದನದ ಮಾಂಸದ ಅಡುಗೆ ಮಾಡುತ್ತಿದ್ದರು. ಅದರಲ್ಲೂ ದನದ ಮತ್ತು ಹಂದಿಯ ಬೋಟಿ ಸಾರಿನ ಅಡುಗೆಯೇ ಹೆಚ್ಚು. ಕಮ್ಮಿ ಬೆಲೆಗೆ ಈ ಎರಡೂ ಪ್ರಾಣಿಗಳ ಬೋಟಿ ಸಿಗುತ್ತಿದ್ದುದರಿಂದ ಭಾನುವಾರದ ಊಟಕ್ಕೆ ಅದೇ ಹೆಚ್ಚಿರುತ್ತಿತ್ತು. ನಾವು ತಿನ್ನುವುದನ್ನು ಖಾತ್ರಿ ಮಾಡಿಕೊಂಡ ಮೇಲೆ ನಿಧಾನಕ್ಕೆ ತಟ್ಟೆಯಲ್ಲಿ ಹಾಕಿಕೊಂಡು ಬಂದು ನಮ್ಮ ಮುಂದೆ ಇಡುತ್ತಿದ್ದರು. ಅವರಿಗೆ ಕಮ್ಮಿಯಾಗಬಹುದೆಂಬ ಎಚ್ಚರವಿದ್ದರೂ ತಿನ್ನದೆ ಬಿಡಲಾಗುತ್ತಿರಲಿಲ್ಲ. ನಾವು ತಿಂದ ಮೇಲೆ ಅದೆಷ್ಟು ಖುಷಿಪಡುತ್ತಿದ್ದರೆಂದರೆ, ನಮಗೂ ಅವ್ಯಕ್ತ ಖುಷಿ ಸಿಗುತ್ತಿತ್ತು. ಈ ಕಾರಣಕ್ಕಾಗಿ ಭಾನುವಾರ ಬಂತೆಂದರೆ ದಲಿತರ ಕೇರಿಯಲ್ಲಿ ನಾವೇ ಹಾಜರಿರುತ್ತಿದ್ದೆವು.
ಈ ಸೆನ್ಸಸ್ ಅಲ್ಲಿ ಕೆಲವು ಪ್ರಶ್ನೆಗಳನ್ನು ನಾವು ಆ ಜಾನಪದ ಕಲಾವಿದರಿಗೆ ಕೇಳಬೇಕಿತ್ತು. ಅವುಗಳಲ್ಲಿ, “ನಿಮ್ಮ ದೇಶ ಯಾವುದು?” “ನಿಮ್ಮ ಧರ್ಮ ಯಾವುದು?” “ನಮ್ಮನ್ನು ಈಗ ಆಳುತ್ತಿರುವವರು ಯಾರು?” ಎಂಬ ಮುಖ್ಯ ಪ್ರಶ್ನೆಗಳಿದ್ದವು. ನಾವು ಭೇಟಿಯಾದವರಲ್ಲಿ ಬಹುತೇಕ ಜನ ನಿಮ್ಮ ದೇಶ ಯಾವುದೆಂದರೆ ಅವರ ಊರಿನ ಹೆಸರು, ಧರ್ಮ ಯಾವುದೆಂದರೆ ತಮ್ಮ ಜಾತಿಯ ಹೆಸರು ಹೇಳುತ್ತಿದ್ದರು. ನಮ್ಮನ್ನು ಆಳುತ್ತಿರುವವರು ಯಾರು ಎಂಬ ಪ್ರಶ್ನೆಗೆ ತೊಂಬತ್ತೈದು ಪರ್ಸೆಂಟ್ ಜನ ‘ಇಂದಿರಾ ಗಾಂಧಿ’ ಎಂಬ ಉತ್ತರ ಕೊಡುತ್ತಿದ್ದರು. ಕೆಲವು ದಲಿತ ಕೇರಿಗಳ ಹೆಂಗಸರಲ್ಲಿ ಕೆಲವರು, “ನಮ್ಮನ್ನ ಆಳ್ತಿರೋರು ಇನ್ಯಾರು… ಅಂಬೇಡ್ಕರ್ರೇ,” ಅನ್ನುತ್ತಿದ್ದರು. ಈ ಸಮಯದಲ್ಲಿ ನಮಗೆ ಜನಪದವೇ ಆಗಿಹೋಗಿರುವ ದಸಂಸದ ಹಾಡುಗಳು ಸಿಕ್ಕವು. ಎಲ್ಲಿ ಕಲಿತಿರಿ ಎಂದರೆ, ‘ಸಂಗದ ಹಾಡು’ ಅನ್ನುತ್ತಾ, ‘ಅಂಬೇಡಿಕರ’ ಅನ್ನುವ ಹೆಸರನ್ನು ಎದೆಯೊಳಗಿನಿಂದ ಉಚ್ಚರಿಸುತ್ತಿದ್ದರು.
ಒಟ್ಟಿನಲ್ಲಿ ಈ ಜಾಥಾದಿಂದ ಖರ್ಚಿಗೆ ಹಣ, ಹಾಡು ಹಾಗೂ ಹಳ್ಳಿಗಳ ಪರಿಚಯ ಸಿಕ್ಕವು.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ