ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ವ್ಹೀಲಿಂಗ್ ಮಾಡುವುದು ಅಪಾಯಕಾರಿ ಎಂದು ಪೊಲೀಸರು ಎಷ್ಟೇ ಹೇಳಿದರೂ ಈ ಯುವಕರ ಹುಚ್ಚಾಟಕ್ಕೆ ಬ್ರೇಕ್ ಬಿದ್ದಿಲ್ಲ. ಇದೀಗ, ನಗರದ ಹೊಸೂರು ಹೆದ್ದಾರಿಯ ಚಂದಾಪುರ ಜಂಕ್ಷನ್ ಬಳಿ ಯುವಕನೊಬ್ಬ ಅಪಾಯಕಾರಿ ದ್ವಿಚಕ್ರ ವಾಹನದ ವ್ಹೀಲಿಂಗ್ ಮಾಡುತ್ತಿದ್ದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಾರ್ಚ್ 13ರಂದು ಬೆಳಿಗ್ಗೆ 9:50ರ ಸುಮಾರಿಗೆ ನಗರದ ಹೊಸೂರು ರಾಷ್ಟ್ರೀಯ ಹೆದ್ದಾರಿ ಚಂದಾಪುರ ಜಂಕ್ಷನ್ ಬಳಿ ಯುವಕನೊಬ್ಬ ಈ ಅಪಾಯಕಾರಿ ವ್ಹೀಲಿಂಗ್ ಮಾಡಿದ್ದಾನೆ. ಈ ಯುವಕ ವ್ಹೀಲಿಂಗ್ ಮಾಡೋದಕ್ಕೆ ನಂಬರ್ ಫ್ಲೇಟ್ ಇಲ್ಲದ ದ್ವಿಚಕ್ರ ವಾಹನ ಬಳಕೆ ಮಾಡಿದ್ದಾನೆ. ಈತ ಪ್ರಮುಖ ರಸ್ತೆಯಲ್ಲಿ ಮುಂದೆ ವೀಲ್ಹಿಂಗ್ ಮಾಡುತ್ತಿದ್ದರೇ, ಆತನ ಇತರ ಮೂರು ಜನ ಸ್ನೇಹಿತರು ಹೆಲ್ಮೆಟ್ ಹಾಕದೇ ಒಂದೇ ಬೈಕ್‌ನಲ್ಲಿ ಕುಳಿತು ಆತನನ್ನು ಹಿಂಬಾಲಿಸಿ, ವಿಡಿಯೋ ಮಾಡಿದ್ದಾರೆ. ಈ ಯುವಕನ ಹುಚ್ಚಾಟವನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಷ್ಟ್ರೀಯ ಉದ್ಯಾನವನ ಬನ್ನೇರುಘಟ್ಟ ಕಾಡಂಚಿನಲ್ಲಿ ಮಹಿಳೆಯ ಅಂಗಾಂಗ ಪತ್ತೆ
ಎಕ್ಸ್‌ನ ‘ಥರ್ಡ್ ಐ’ ಎಂಬ ಹೆಸರಿನ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ಈ ಅಪಾಯಕಾರಿ ಸಾಹಸವನ್ನು ಮಾರ್ಚ್ 13ರಂದು ಬೆಳಿಗ್ಗೆ 9:50ರ ಸುಮಾರಿಗೆ ಹೊಸೂರು ರಾಷ್ಟ್ರೀಯ ಹೆದ್ದಾರಿಯ ಚಂದಾಪುರ ಜಂಕ್ಷನ್ ಬಳಿ ನಡೆಸಲಾಯಿತು. ಸ್ಟಂಟ್ ಮಾಡಿದ ಸವಾರ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದು, ಬೈಕ್ ಹಿಂಬಾಲಿಸಿಕೊಂಡು ಬಂದ ಆತನ ಸ್ನೇಹಿತರು ವಿಡಿಯೋ ಶೂಟ್ ಮಾಡಿದ್ದಾರೆ. ಅವರ ವಾಹನ ಸಂಖ್ಯೆ AP39 EC1411” ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಈ ವಿಡಿಯೋವನ್ನು ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪೊಲೀಸರು, ಈ ಪ್ರಕರಣ ಗಮನಿಸುವಂತೆ ಬೆಂಗಳೂರು ಗ್ರಾಮಾಂತರದ ಎಸ್ಪಿಗೆ ಟ್ಯಾಗ್ ಮಾಡಿದ್ದಾರೆ.