ವಿಜಯಪುರ ಜಿಲ್ಲೆಯಲ್ಲಿ ಪ್ರೇಮಿಗಳಿಬ್ಬರು ಮನೆಯವರು ಒಪ್ಪದ ಕಾರಣ, ಊರು ತೊರೆದು ಹೋಗಿ ಮದುವೆಯಾಗಿದ್ದರು. ಆದರೆ, ಇದೀಗ ಯುವತಿಯ ತಾಯಿ ತನಗೆ 50 ಲಕ್ಷ ಕೊಡಬೇಕು, ಇಲ್ಲವಾದಲ್ಲಿ ಯುವಕನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯುವ ದಂಪತಿಗಳು ರಕ್ಷಣೆಗಾಗಿ ಪೊಲೀಸರ ಮೊರೆಹೋಗಿದ್ದಾರೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಂಡಿ ತಾಲೂಕಿನ ಹಂಜಗಿ ಗ್ರಾಮದ ಯುವಕ ಯಾಸೀನ್ ಜಮಾದಾರ್ ಹಾಗೂ ಎಸ್‌ಸಿ ಸಮುದಾಯದ ಅಶ್ವಿನಿ ಭಂಡಾರಿ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗೋ ಕನಸು ಕಂಡಿದ್ದರು. ಇವರ ಪ್ರೀತಿಯ ವಿಚಾರ ಎರಡೂ ಮನೆಯವರಿಗೆ ಗೊತ್ತಾಗಿತ್ತು. ಮನೆಯವರು ಮದುವೆಗೆ ಒಪ್ಪದಿದ್ದಾಗ ಇಬ್ಬರೂ ಊರು ತೊರೆದು ಹೋಗಿ ಮದುವೆಯಾಗಿದ್ದರು.
ಈಗ ಯುವತಿಯ ಮನೆಯವರು ಯಾಸೀನ್‌ಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಇಷ್ಟರ ಮದ್ಯೆ ಅದೇ ಗ್ರಾಮದ ರೌಡಿ ಶೀಟರ್ ಹುಚ್ಚಪ್ಪ ಕಾಲೇಬಾಗ ಎಂಬಾತ, ನಮ್ಮ ಸಮಾಜದ ಯುವತಿಯನ್ನು ಮದುವೆಯಾಗಿದ್ದೀಯಾ. ಒಂದು ಲಕ್ಷ ಹಣ ಕೊಟ್ಟುಬಿಡು ನಿನ್ನ ಕೊಲೆ ಮಾಡಲ್ಲಾ ಎಂದು ನಂಬಿಸಿದ್ದಾನೆ. ಜೀವ ಭಯದಲ್ಲಿ ಯಾಸೀನ್ ಒಂದು ಲಕ್ಷ ರೂಪಾಯಿಯನ್ನು ಹುಚ್ಚಪ್ಪನಿಗೆ ನೀಡಿದ್ದಾನೆ. ಈ ಹಣವನ್ನು ಹುಚ್ಚಪ್ಪ ಕಾಲೇಬಾಗ್, ಮುತ್ತಪ್ಪ ಹಾಗೂ ಅಶ್ವಿನಿಯ ತಾಯಿ ಹಂಚಿಕೊಂಡಿದ್ದಾರೆ ಎಂದು ಯುವತಿ ಅಶ್ವಿನಿ ಆರೋಪ ಮಾಡಿದ್ದಾಳೆ.
ಈ ಮಧ್ಯೆ, ಯಾಸೀನ್ ನನ್ನು ಬಿಟ್ಟು ಬಾ ಬೇರೆ ಮದುವೆ ಮಾಡುತ್ತೇವೆಂದು ಒತ್ತಾಯ ಮುಂದುವರೆಸಿದ್ದು, 50 ಲಕ್ಷ ಹಣ ಬೇಕೆಂಬ ಬೇಡಿಕೆ ಇಟ್ಟಿದ್ದಾಳೆಂದು ಜೋಡಿ ಆರೋಪಿಸಿದೆ. ಯುವಕ ಯಾಸೀನ್ ಹಣವಿಲ್ಲ ಎಂದು ಹೇಳಿದಾಗ ಆತನ ತಂದೆ ತಾಯಿಯ ಮೇಲೆ ಹೊರ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಯ ಸುಳ್ಳು ಪ್ರಕರಣ ದಾಖಲು ಮಾಡಿ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ ಪ್ರೇಮಿಗಳು.
ಇದರಿಂದ ಭಯಗೊಂಡ ಯಾಸೀನ್ ಹಾಗೂ ಅಶ್ವಿನಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ನವ ವಿವಾಹಿತ ಜೋಡಿಗೆ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನು ನೆರವು ಹಾಗೂ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ.