14 ವರ್ಷಗಳ ಹಿಂದೆ ಜೈಲಿನಲ್ಲಿ ನಡೆದಿದ್ದ ಘಟನೆಯಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಜೈಲಿನ ಅಂದಿನ ಜೈಲರ್ ಮತ್ತು ಆರು ಮಂದಿ ಕಾನ್ಸ್‌ಸ್ಟೆಬಲ್‌ಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
2010ರ ಮಾರ್ಚ್‌ನಲ್ಲಿ, ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಒರೈ ಜೈಲಿನಲ್ಲಿ ಘರ್ಷಣೆ ನಡೆದಿತ್ತು. ಘರ್ಷಣೆಯಲ್ಲಿ ದರೋಡೆಕೋರ-ರಾಜಕಾರಣಿ ಮುಖ್ತಾರ್ ಅನ್ಸಾರಿಯ ಸಹಚರರು ಎನ್ನಲಾಗಿದ್ದ, ವಿಚಾರಣಾ ಕೈದಿಗಳಾದ ಪ್ರಿನ್ಸ್ ಅಹ್ಮದ್ ಮತ್ತು ನಜೀರ್ ಖಾನ್ ಕೊಲೆಯಾಗಿದ್ದರು. ಅಲ್ಲದೆ, 13 ಇತರರು ಗಾಯಗೊಂಡಿದ್ದರು. ಅವರನ್ನು ಒರೈ ಜೈಲಿನ ಆಗಿನ ಜೈಲರ್, ಆರು ಕಾನ್‌ಸ್ಟೆಬಲ್‌ಗಳು ಮತ್ತು ಏಳು ಜೈಲು ಕೈದಿಗಳನ್ನು ಕೊಲೆಗೈದಿದ್ದಾರೆ ಎಂದು ಆರೋಪಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿರುವ ಜಲೌನ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಲಲ್ಲು ಸಿಂಗ್ ಅವರು ಎಲ್ಲ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ (14 ವರ್ಷ ಜೈಲು) ಮತ್ತು ತಲಾ 1 ಲಕ್ಷ ರೂ. ದಂಡ ವಿಧಿಸಿದ್ದಾರೆ.
“ಒರೈ ಜೈಲಿನಲ್ಲಿ ಜೈಲು ಅಧಿಕಾರಿಗಳು ಕೈದಿಗಳಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ಅವರಿಗೆ ಹಣ ನೀಡಲು ಸಾಧ್ಯವಾಗದಿದ್ದ ಕಾರಣಕ್ಕೆ ನನ್ನ ಮಗನನ್ನು ಜೈಲರ್ ಮತ್ತು ಇತರ ಜೈಲು ಅಧಿಕಾರಿಗಳು ಕೊಂದಿದ್ದಾರೆ ಎಂದು ಆರೋಪಿಸಿ ನಜೀರ್ ಅವರ ತಂದೆ ಅಯೂಬ್ ಖಾನ್ ದೂರು ದಾಖಲಿಸಿದ್ದರು” ಎಂದು ಪ್ರಾಸಿಕ್ಯೂಷನ್ ಇಲಾಖೆಯ ಅಧಿಕಾರಿ ತಳಿಸಿದ್ದಾರೆ.
ಜೈಲಿನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳ ವಿರುದ್ಧ ಪ್ರತಿಭಟಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಗಾಯಗೊಂಡಿದ್ದ ಕೈದಿಗಳು ಆರೋಪಿಸಿದ್ದಾರೆ.
ಅಯೂಬ್ ಖಾನ್ ಅವರ ದೂರಿನ ಆಧಾರದ ಮೇಲೆ, ಜೈಲು ಅಧಿಕಾರಿಗಳು ಮತ್ತು ಕೆಲವು ಕೈದಿಗಳ ವಿರುದ್ಧ 302 (ಕೊಲೆ) ಮತ್ತು 384 (ಸುಲಿಗೆ) ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾದ ಒರೈ ಜೈಲಿನ ಅಂದಿನ ಜೈಲು ಸೂಪರಿಂಟೆಂಡೆಂಟ್ ಅವಿನಾಶ್ ಗೌತಮ್ ಮತ್ತು ಉಪ ಜೈಲರ್ ಜಿ ಮಿಶ್ರಾ ಅವರು ಅಲಹಾಬಾದ್ ಹೈಕೋರ್ಟ್‌ನಿಂದ ತಮ್ಮ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ತಂದಿದ್ದರು.
ಶಿಕ್ಷೆಗೊಳಗಾಗಿರುವರನ್ನು ಆಗಿನ ಜೈಲರ್ ನಾಥು ಸಿಂಗ್; ಕಾನ್‌ಸ್ಟೆಬಲ್‌ಗಳಾದ ರಾಮಮನೋರತ್, ರಾಮ್ ಶರಣ್, ರಾಜ್‌ಕುಮಾರ್, ನಿಪೇಂದ್ರ, ಅನಿಲ್ ಶರ್ಮಾ ಮತ್ತು ಶಶಿಕಾಂತ್ ತಿವಾರಿ. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಗಳನ್ನು ಸುಧಾರ್ ಸಿಂಗ್, ಸತ್ಯಭಾನ್, ರಾಜಾ ಭಯ್ಯಾ, ರಾಜು ತೀತ್ರಾ, ರಾಮನಾರಾಯಣ್, ಅಖಿಲೇಶ್ ಮತ್ತು ಮುನ್ನಾ ಕೇವತ್ ಎಂದು ಗುರುತಿಸಲಾಗಿದೆ.