ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡದೆ ಕಾರು ಹತ್ತಿ ಹೊರಟ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ
ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅಶ್ವತ್ಥನಗರ ಹೆಣ್ಣುಮಕ್ಕಳ ವಸತಿ ಮದರಸಾಕ್ಕೆ ಭೇಟಿ ನೀಡಿದ ‘ಮಕ್ಕಳ ಹಕ್ಕುಗಳ ರಾಷ್ಟ್ರೀಯ ರಕ್ಷಣಾ ಆಯೋಗ’(ಎನ್‌ಸಿಪಿಸಿಆರ್)ದ ತಂಡವು ಹೆಣ್ಣುಮಗಳೊಬ್ಬಳಿಗೆ ಹೊಡೆದಿರುವ ಗಂಭೀರ ಆರೋಪ ಬಂದಿದೆ.
ಸ್ವತಃ ಬಾಲಕಿಯೇ ತನಗಾದ ಹಲ್ಲೆಯ ಕುರಿತು ಹೇಳಿಕೆ ನೀಡಿದ್ದು, ಆಯೋಗದ ವರ್ತನೆಗಳು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ.
“ನೀನು ಮದುವೆಯಾಗಿ ಕುವೈತ್, ದುಬೈಗೆ ಹೋಗ್ತೀಯಾ? ಮದುವೆಯಾಗುವೆಯಾ? ಎಂದೆಲ್ಲ ಕೇಳಿದರು. ನಮಗೆ ಅದೆಲ್ಲ ಗೊತ್ತಿಲ್ಲ ಅಂದೆ” ಎಂದು ಬಾಲಕಿ ತಿಳಿಸಿದ್ದಾಳೆ.
“ನಿಮ್ಮ ಅಪ್ಪ- ಅಮ್ಮನ ಹೆಸರೇನು? ನಿನ್ನ ವಯಸ್ಸೆಷ್ಟು? ನಿಮ್ಮ ಫ್ಯಾಮಿಲಿಯಲ್ಲಿ ಎಷ್ಟು ಜನರಿದ್ದಾರೆ? ಎಂದು ಪ್ರಶ್ನಿಸಿದರು. ಅವರು ಎಲ್ಲವನ್ನೂ ಬರೆದುಕೊಳ್ಳುತ್ತಿದ್ದರು. ನಾನು ಮಾಹಿತಿ ನೀಡಲಿಲ್ಲ. ಕನ್ನಡಕ ಹಾಕಿಕೊಂಡಿದ್ದ ಮೇಡಂ ಒಬ್ಬರು ಆ ಸಂದರ್ಭದಲ್ಲಿ ನನ್ನ ಕೆನ್ನೆಗೆ ಹೊಡೆದರು” ಎಂದು ಹೇಳಿದ್ದಾಳೆ.

“ನಾವು ನಮಾಜ್ ಮಾಡುತ್ತಿದ್ದೆವು. ಆ ಸಂದರ್ಭದಲ್ಲಿ ಇವರು ಬಂದರು. ನಾವಿದ್ದ ಜಾಗವನ್ನು ಚೆಕ್ ಮಾಡಲು ಶುರು ಮಾಡಿದರು” ಎಂದು ಬಾಲಕಿ ವಿವರಿಸಿದ್ದಾಳೆ.
ಮಕ್ಕಳು ನಮಾಜ್ ಮಾಡುತ್ತಿದ್ದ ಸಂದರ್ಭದಲ್ಲಿ ದಿಢೀರನೇ ತಂಡವೊಂದು ಭೇಟಿ ನೀಡಿದಾಗ ಮಕ್ಕಳು ಆತಂಕಿತರಾಗಿದ್ದರು ಎಂದು ಮದರಸಾದಲ್ಲಿನ ಮಹಿಳಾ ಶಿಕ್ಷಕಿಯೊಬ್ಬರು ’ಈದಿನ.ಕಾಂ’ಗೆ ತಿಳಿಸಿದ್ದಾರೆ.
ಬಳಿಕ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿದ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಪೊಲೀಸರೊಂದಿಗೆ ಚರ್ಚಿಸಿದರು. ಠಾಣೆಯಿಂದ ಹೊರಗೆ ಬಂದ ಕೂಡಲೇ ಇಂಗ್ಲಿಷ್‌ನಲ್ಲಿ ಪ್ರತಿಕ್ರಿಯಿಸುತ್ತಾ, “ಈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಟೋರಿಯಸ್ ಚಟುವಟಿಕೆಗಳು ನಡೆಯುತ್ತಿವೆ. ಅನಧಿಕೃತ ಅನಾಥಾಶ್ರಮಕ್ಕೆ ನಾವು ಹೋಗಿದ್ದೆವು. ಹೆಣ್ಣುಮಕ್ಕಳನ್ನು ನೋಡಿದೆವು. ಈ ಮಕ್ಕಳನ್ನು ಗಲ್ಫ್ ರಾಷ್ಟ್ರಗಳ ಗಂಡಸರಿಗೆ ಮದುವೆ ಮಾಡಲಾಗುತ್ತದೆ. ಪ್ರಕರಣ ದಾಖಲಿಸಲಾಗುವುದು” ಎಂದರು.
ಆ ವೇಳೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದ ವ್ಯಕ್ತಿಯತ್ತ ಬೆರಳು ತೋರಿಸಿ ತಾಳ್ಮೆ ಕಳೆದುಕೊಂಡು ಮಾತನಾಡಿದ ಪ್ರಿಯಾಂಕ್ ಕಾನೂಂಗೊ, “ಕೆಲವು ಗೂಂಡಾಗಳು ನಮಗೆ ತೊಂದರೆ ಕೊಟ್ಟರು. ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿರುವ ವ್ಯಕ್ತಿಯೂ ಒಬ್ಬ ಗೂಂಡಾ” ಎಂದು ಆರೋಪಿಸಿದರು. ಜೊತೆಗೆ, “ಇಂತಹ ಗೂಂಡಾಗಳಿಂದಾಗಿ ಪ್ರಕರಣ ದಾಖಲಾಗಿಲ್ಲ. ನಾಳೆ ಸುಪ್ರಿಂಕೋರ್ಟ್ ಗಮನಕ್ಕೆ ತರುತ್ತೇವೆ. ಕರ್ನಾಟಕ ಸರ್ಕಾರವು ತುಷ್ಟೀಕರಣದ ಕಾರ್ಯಕ್ರಮಗಳ ಮೂಲಕ ಈ ರೀತಿಯ ಗೂಂಡಾಗಳಿಗೆ ತನ್ನನ್ನು ಮಾರಿಕೊಂಡಿದೆ” ಎಂದು ರಾಜಕೀಯ ಹೇಳಿಕೆ ನೀಡಿದರು.

ಕರ್ನಾಟಕ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಮೊದಲಿನಿಂದಲೂ ಟೀಕಿಸುತ್ತಾ ಬಂದಿರುವ ಬಿಜೆಪಿಯ ವರ್ತನೆಯಂತೆಯೇ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರ ನಿಂದನೆಯೂ ಇತ್ತು.
“ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಏನಾದರೂ ಪ್ರತಿಕ್ರಿಯೆ ನೀಡುತ್ತೀರಾ?” ಎಂದು ಮಾಧ್ಯಮ ಪ್ರತಿನಿಧಿಗಳು ಕೇಳುತ್ತಿದ್ದರೂ ಕಿವಿಗೆ ಕೇಳಿಸದವರಂತೆ ಕಾರು ಹತ್ತಿ ಕೂತು ಪ್ರಿಯಾಂಕ್ ಹೊರಟುಹೋದರು.

ಯಾವುದೇ ಆಧಾರವಿಲ್ಲದೆ ಒಬ್ಬ ವ್ಯಕ್ತಿಯನ್ನು ಗೂಂಡಾ ಎಂದು ಕರೆದದ್ದನ್ನು ಖಂಡಿಸಿ ಅಲ್ಲಿದ್ದ ಜನರು ಧಿಕ್ಕಾರ ಕೂಗಿದರು. ಅಷ್ಟರಲ್ಲಿ ಪೊಲೀಸರು ಅವರನ್ನು ತಡೆದರು.
ಮದರಸಾಗಳನ್ನು ಗುರಿಯಾಗಿಸಿಕೊಂಡು ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಮೊದಲಿನಿಂದಲೂ ದಾಳಿ ಮಾಡುತ್ತಿದ್ದಾರೆ. ಮಕ್ಕಳ ಮೇಲಿನ ಕಾಳಜಿಗಿಂತ ಮುಸ್ಲಿಮರನ್ನು ಕೆಟ್ಟದ್ದಾಗಿ ಚಿತ್ರಿಸುವುದೇ ಅವರ ಉದ್ದೇಶವಾಗಿದೆ ಎಂಬ ಆರೋಪಗಳು ಮೊದಲಿನಿಂದಲೂ ಇವೆ.
ಬೆಂಗಳೂರಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಅವರು ಪತ್ರಿಕಾಗೋಷ್ಠಿಯನ್ನೂ ಹಮ್ಮಿಕೊಂಡಿದ್ದರು. ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೇಲೆ ಪೋಕ್ಸೋ ಕೇಸ್ ದಾಖಲಾದ ಬೆನ್ನಲ್ಲೇ ಪತ್ರಿಕಾಗೋಷ್ಠಿಯನ್ನು ರದ್ದು ಮಾಡಿಕೊಂಡಿದ್ದು ಅನುಮಾನಗಳಿಗೆ ಕಾರಣವಾಗಿವೆ. ಮಕ್ಕಳ ಹಕ್ಕುಗಳ ಆಯೋಗ ಪಕ್ಷಪಾತಿಯಾಗಿ ವರ್ತಿಸುತ್ತಿದೆ ಎಂಬ ಆರೋಪಗಳಿಗೆ ಶುಕ್ರವಾರ ನಡೆದ ಬೆಳವಣಿಗೆಗಳು ಸಾಕ್ಷಿಯಾದಂತೆ ಕಾಣುತ್ತಿವೆ.
