ರಾಯಚೂರು ನಗರದ ವಾರ್ಡ್ ನಂ.29ರಲ್ಲಿ ಕುಡಿಯುವ ನೀರು ಮತ್ತು ಬಳಕೆಯ ನೀರಿನ ಸಮಸ್ಯೆ ಎದುರಾಗಿದ್ದು, ಚರಂಡಿಗಳಿಂದ ದುರ್ವಾಸನೆ ಹೆಚ್ಚಿದೆ. ಇವುಗಳನ್ನು ಸ್ವಚ್ಛಗೊಳಿಸಬೇಕು ಎಂದು ರಾಷ್ಟ್ರೀಯ ಸಮಾಜ ಪರಿವರ್ತನಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
“ನಗರದ ವಾರ್ಡ್ ನಂ.29ರಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಬಡಾವಣೆ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ವಾರ್ಡ್‌ನಲ್ಲಿರುವ ಬೋರ್‌ವೆಲ್ ದುರಸ್ತಿ ಹಾಗೂ ನೀರಿನ ಪೈಪ್‌ಲೈನ್ ದುರಸ್ತಿ ಮಾಡದೇ ನೀರಿನ ಸಮಸ್ಯೆ ಪರಿಹರಿಸಲು ವಿಫಲರಾಗಿದ್ದಾರೆ” ಎಂದು ಪ್ರತಿಭಟನಾಕಾರು ದೂರಿದರು.
“ನಿತ್ಯ ಕೈಗಾರಿಕಾ ಕಂಪನಿಗಳಿಗೆ ಅಕ್ರಮವಾಗಿ ಕೃಷ್ಣಾ ನದಿಯಿಂದ ಬರುವ ಮುಖ್ಯ ಪೈಪ್‌ಲೈನ್ ಮೂಲಕ ನೀರಿನ ಸಂಪರ್ಕ ಕಲ್ಪಿಸಿಕೊಟ್ಟಿದ್ದು, ಅತಿ ಹೆಚ್ಚು ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇದರಿಂದಾಗಿ ನಗರದ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. ನಿರ್ಲಕ್ಷ್ಯ ವಹಿಸಿದ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ಅಮಾನತು ಮಾಡಬೇಕು. ಕುಡಿಯುವ ನೀರು ಒದಗಿಸಬೇಕು” ಎಂದು ಮನವಿ ಮಾಡಿದರು.
“ವಾರ್ಡಿನಲ್ಲಿ ಚರಂಡಿ ಕಾಲುವೆಗಳು ಇರುವುದರಿಂದ ಸ್ವಚ್ಛತೆ ಮಾಡದ ಕಾರಣ ದುರ್ವಾಸನೆ ಹೆಚ್ಚಾಗಿ ಇದರಿಂದ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಸೊಳ್ಳೆಗಳು ಹೆಚ್ಚಾಗಿ ಇವುಗಳಿಂದ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಚರಂಡಿ ಹೂಳೆತ್ತಿ ಸ್ವಚ್ಛತೆ ಮಾಡಬೇಕು ಹಾಗೂ ಬೀದಿದೀಪಗಳ ದುರಸ್ತಿಗೆ ಮುಂದಾಗಬೇಕು” ಎಂದು ಒತ್ತಾಯಿಸಿದರು.
“ಮೂಲಸೌಕರ್ಯಕ್ಕಾಗಿ ನಗರಸಭೆಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬಂದರೂ ಕೂಡ ರಾಯಚೂರು ನಗರದಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸಿಲ್ಲ. ಜಿಲ್ಲೆಯಲ್ಲಿ ದಿನದ 24 ಗಂಟೆಯೂ ಕುಡಿಯುವ ನೀರಿನ ಯೋಜನೆ, ಮನೆ ಮನೆಗೆ ಶುದ್ಧ ನೀರು ತಲುಪಿಸುವ ಯೋಜನೆ ಕೇವಲ ಹೆಸರಿಗೆ ಮಾತ್ರವಾಗಿದೆ. ನೀರಿಗಾಗಿ ರಾತ್ರಿಯೆಲ್ಲಾ ನಿದ್ದೆಗೆಟ್ಟು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಎಚ್ಚೆತ್ತುಕೊಂಡು ಕ್ರಮ ವಹಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ರಸೀದಿಯಿಲ್ಲದೇ ಆಭರಣಗಳ ಸಾಗಾಟ-ಮಾರಾಟ ಮಾಡುವಂತಿಲ್ಲ: ಜಿಲ್ಲಾಧಿಕಾರಿ
ಈ ಸಂದರ್ಭದಲ್ಲಿ ವಿಭಾಗೀಯ ಅಧ್ಯಕ್ಷ ಶ್ರೀನಿವಾಸ ಕೊಪ್ಪರ, ಮುಖಂಡ ಶಂಶಾವಲಿ, ಮಲ್ಲಿಕಾರ್ಜುನ, ರಂಗನಾಥ, ಮೈಲಾರಿ, ಗಿರಿಜಮ್ಮ, ಲಕ್ಷ್ಮಿ, ಮಾಲಾ ಬೀ, ಡಿ ಕೆ ರಾಜು ಲಕ್ಕಂದಿನ್ನಿ ಸೇರಿದಂತೆ ಬಹುತೇಕರು ಇದ್ದರು.
ವರದಿ : ಹಫೀಜುಲ್ಲ
