ಭ್ರಷ್ಟರನ್ನು ಬಿಡುವುದಿಲ್ಲ. ಯಾವುದೇ ಭ್ರಷ್ಟರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತೆಲಂಗಾಣದ ನಾಗರ್‌ಕರ್ನೂಲ್‌ನಲ್ಲಿ ಹೇಳಿದ್ದಾರೆ.
ಶನಿವಾರ, ಬಿಜೆಪಿ ಆಯೋಜಿಸಿದ್ದ ರ್‍ಯಾಲಿಯಲ್ಲಿ ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮತ್ತು ಬಿಆರ್‌ಎಸ್ ಒಟ್ಟಾಗಿ ತೆಲಂಗಾಣದ ಅಭಿವೃದ್ಧಿಯ ಪ್ರತಿಯೊಂದು ಕನಸನ್ನು ಭಗ್ನಗೊಳಿಸಿವೆ ಎಂದು ಆರೋಪಿಸಿದರು.
“ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಬಿಜೆಪಿ ಎರಡಂಕಿಯ ಸ್ಥಾನಗಳನ್ನು ಗೆಲ್ಲಲಿದೆ. ತೆಲಂಗಾಣ ಜನರು ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿ ಕರೆತರಲು ನಿರ್ಧರಿಸಿದ್ದಾರೆ ಎಂಬುದನ್ನು ನಾನು ಇಂದು ನೋಡುತ್ತಿದ್ದೇನೆ” ಎಂದರು.
“ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಕೇಂದ್ರ ಸರ್ಕಾರದ ಯೋಜನೆಗಳ ಹೆಚ್ಚಿನ ಫಲಾನುಭವಿಗಳಾಗಿದ್ದಾರೆ. ಈ ಯೋಜನೆಗಳನ್ನು ಕಾಂಗ್ರೆಸ್ ಮತ್ತು ಬಿಆರ್‌ಎಸ್‌ನಂತಹ ‘ಭ್ರಷ್ಟ ಮತ್ತು ವಂಶಾಡಳಿತ’ ಪಕ್ಷಗಳು ಯಾವಾಗಲೂ ವಿರೋಧಿಸುತ್ತವೆ” ಎಂದು ಆರೋಪಿಸಿದರು.
“ಕಳೆದ ಏಳು ದಶಕಗಳಿಂದ ಸುಳ್ಳು ಹೇಳಿ ಲೂಟಿ ಮಾಡುತ್ತಿರುವ ಕಾಂಗ್ರೆಸ್‌ನಿಂದ ತೆಲಂಗಾಣವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಕೇಸರಿ ಪಕ್ಷಕ್ಕೆ ರಾಜ್ಯದ ಅಭಿವೃದ್ಧಿಯೇ ಆದ್ಯತೆಯಾಗಿದೆ. ರಾಜ್ಯದ ಎಲ್ಲ ಅಗತ್ಯಗಳನ್ನು ಪೂರೈಸಲು ಮತ್ತು ಅದನ್ನು ಖಾತ್ರಿ ಪಡಿಸಲು ಪ್ರತಿ ಸ್ಥಾನದಲ್ಲೂ ಬಿಜೆಪಿಗೆ ಮತ ಹಾಕಬೇಕು” ಎಂದರು.