ಮಾನವೀಯತೆ ಹಾಗೂ ಮಾನವೀಯ ಮೌಲ್ಯಗಳು ಆಧುನಿಕತೆಯ ಜಗತ್ತಿನಲ್ಲಿ ಜಾತಿಯ ಮುಂದೆ ಮನುಷ್ಯನಲ್ಲಿ ಮನುಷ್ಯತ್ವ ಕಾಣದಾಗಿದೆ. ಇಂದಿಗೂ ಕೂಡಾ ದಲಿತರನ್ನು ಮನುಷ್ಯರಂತೆ ಕಾಣದೆ ಪ್ರಾಣಿಗಳಿಗಿಂತಲೂ ಕಡೆಯಾಗಿ ಕಾಣುವ ಜನ ಈ ಸಮಾಜದಲ್ಲಿದ್ದಾರೆ ಎನ್ನುವುದು ಬಹಳಷ್ಟು ದುಃಖದ ಸಂಗತಿ.
ಇಂತಹದೇ ಅಮಾನವೀಯ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ನಡೆದಿದೆ. ದಲಿತ ವ್ಯಕ್ತಿಯನ್ನು ಜೀವಂತವಾಗಿ ಬೆಂಕಿಯಲ್ಲಿ ಹಾಕಿ ಕೊಲ್ಲಲು ಯತ್ನಿಸಿದ್ದಾರೆ.
ಕಾರಜೋಳ ಗ್ರಾಮದ ದಲಿತ ವ್ಯಕ್ತಿ ದುಂಡಪ್ಪ(70) ಎಂಬುವವರು ಸರ್ವೆ ನಂ 53ರಲ್ಲಿ ಕಬ್ಬಿಗೆ ಬೆಂಕಿ ಹಚ್ಚುವ ವಿಷಯವಾಗಿ ಇಬ್ಬರ ನಡುವೆ ಜಗಳವಾಯಿತು. ದಲಿತ ವ್ಯಕ್ತಿಯನ್ನು ಜೀವಂತವಾಗಿ ಬಣವಿಗೆ ಹತ್ತಿದ ಬೆಂಕಿಯಲ್ಲಿ ಹಾಕಿ ಕೊಲ್ಲಲು ಯತ್ನಿಸಿದ್ದು, ದುಂಡಪ್ಪ ಜೀವ ಭಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕೂಡ ಎರಡನೇ ಬಾರಿ ಆತನನ್ನು ಬೆಂಕಿಯಲ್ಲಿ ಹಾಕಿ ಕೊಲ್ಲಲು ಯತ್ನಿಸಿದ್ದಾರೆ.
ಸಂತ್ರಸ್ತ ದುಂಡಪ್ಪ ಎಂಬುವವರಿಗೆ ಬೆನ್ನು, ಬಲಗೈ, ಎದೆ ಭಾಗ ಹಾಗೂ ಕತ್ತಿನ ಹಿಂಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು, ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಉಳಿದವರಿಗಾಗಿ ಶೋಧ ಕಾರ್ಯ ಮಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಸಂವಿಧಾನ ಬದಲಿಸುವ ವ್ಯವಸ್ಥೆಯ ವಿರುದ್ದ ಜನಕ್ರಾಂತಿ ಆಗಬೇಕಿದೆ: ಚಿಂತಕ ಬಸವರಾಜ ಸೂಳಿಬಾವಿ
“ದಲಿತ ವ್ಯಕ್ತಿಯನ್ನು ಜೀವಂತ ಬೆಂಕಿಯಲ್ಲಿ ಹಾಕಿ ಕೊಲ್ಲಲು ಯತ್ನಿಸಿರುವ ಪ್ರಕರಣವನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಬಹಳ ಗಂಭೀರವಾಗಿ ಪರಿಗಣಿಸಿ ದೌರ್ಜನ್ಯಕ್ಕೆ ಒಳಗಾದ ದಲಿತ ಕುಟುಂಬಗಳಿಗೆ ರಕ್ಷಣೆ ಒದಗಿಸಿ ನ್ಯಾಯ ಕೊಡಿಸಬೇಕು” ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಜಿಲ್ಲೆಯ ಎಲ್ಲ ದಲಿತ ಸಂಘಟನೆಗಳು ಆಗ್ರಹಿಸಿವೆ. ಈ ಮೂಲಕ ತಮ್ಮಲ್ಲಿ ಆಗ್ರಹಿಸುತ್ತವೆ.