ಸದೃಢ ಹಾಗೂ ಕಠಿಣ ಕ್ರಮಗಳ ಮೂಲಕ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಜಾರಿ ನಿರ್ದೇಶನಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದಾರೆ.
ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ತನಿಖಾ ಸಂಸ್ಥೆಯ ಗಮನಾರ್ಹ ಕ್ರಮಗಳಿಂದ ವಿಪಕ್ಷಗಳು ಆತಂಕಕ್ಕೆ ಒಳಗಾಗಿವೆ. ತಮ್ಮ ಸರ್ಕಾರದ ಪ್ರಮುಖ ಉದ್ದೇಶ ಭ್ರಷ್ಟಾಚಾರವನ್ನು ಮುಕ್ತಾಯಗೊಳಿಸುವುದು.ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ತನಿಖಾ ಸಂಸ್ಥೆಯು ಸಂಪೂರ್ಣ ಮುಕ್ತವಾಗಿದೆ ಎಂದು ದೃಢಪಡಿಸಿದರು.
2014ರ ಮೊದಲು ಕೆಲಸ ಮಾಡುವುದಕ್ಕೆ ತನಿಖಾ ಸಂಸ್ಥೆಯನ್ನು ಅನುಮತಿಸುತ್ತಿರಲಿಲ್ಲ.ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕೆಲವು ಸಂಖ್ಯೆಗಳ ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದು ಪ್ರಧಾನಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಚ್ಚಿಟ್ಟ ಮಾಧ್ಯಮಗಳು ಬಿಚ್ಚಿಟ್ಟ ಸಾಮಾಜಿಕ ಮಾಧ್ಯಮಗಳು
“ಜಾರಿ ನಿರ್ದೇಶನಾಲಯ ಕ್ರಮ ಕೈಗೊಳ್ಳಲಿದೆ. 2014ಕ್ಕೂ ಮುನ್ನ ಪಿಎಂಎಲ್‌ಎ ಅಡಿ 1800 ಪ್ರಕರಣಗಳು ದಾಖಲಾಗಿತ್ತು. ಕಳೆದ 10 ವರ್ಷಗಳಲ್ಲಿ 4700 ಪ್ರಕರಣಗಳು ದಾಖಲಾಗಿವೆ. 2014ಕ್ಕೂ ಮುನ್ನ 5 ಸಾವಿರ ಕೋಟಿ ಮೊತ್ತದ ಅಸ್ತಿಯನ್ನು ಜಫ್ತಿ ಮಾಡಲಾಗಿತ್ತು. ಆದರೆ 10 ವರ್ಷಗಳಲ್ಲಿ 1 ಲಕ್ಷ ಕೋಟಿ ಮೊತ್ತದ ಆಸ್ತಿಯನ್ನು ಜಫ್ತಿ ಮಾಡಲಾಗಿದೆ. ದೂರುಗಳ ತನಿಖೆ 10 ಪಟ್ಟು ಹೆಚ್ಚಾಗಿದೆ” ಎಂದು ಮೋದಿ ಹೇಳಿದರು.
“ಇ.ಡಿ ಭಯೋತ್ಪಾದನೆಗೆ ಆರ್ಥಿಕ ನೆರವು, ಸೈಬರ್ ಅಪರಾಧ ಹಾಗೂ ನಾರ್ಕೋಟಿಕ್ಸ್‌ನಲ್ಲಿ ಭಾಗಿಯಾದ ಹಲವು ಅಪರಾಧಿಗಳನ್ನು ಬಂಧಿಸಿ ದೊಡ್ಡ ಮೊತ್ತದ ಅಪರಾಧಗಳನ್ನು ಬಯಲಿಗೆಳದು ಒಟ್ಟು 1 ಸಾವಿರ ಕೋಟಿ ರೂ. ಮೊತ್ತದ ಆಸ್ತಿಯನ್ನು ಜಫ್ತಿ ಮಾಡಲಾಗಿದೆ” ಪ್ರಧಾನಿ ಹೇಳಿದರು.
ಈ ರೀತಿಯ ಅನುಸರಣೀಯ ಕೆಲಸಗಳು ನಡೆದಾಗ ಕೆಲವು ವ್ಯಕ್ತಿಗಳಿಗೆ ತೊಂದರೆ ಉಂಟಾಗುವುದು ಸಹಜ. ಈ ಕಾರಣಕ್ಕಾಗಿ ಅವರು ಮೋದಿಯನ್ನು ದಿನವಿಡಿ ನಿಂದಿಸುವುದಕ್ಕೆ ಶುರು ಮಾಡಿದ್ದಾರೆ.ಆದರೆ ದೇಶವು ಕ್ಷಮಿಸಿ ಎಂದು ಸ್ಪಷ್ಟವಾಗಿ ಹೇಳಿದೆ ಮೋದಿ ಎಂದರು.
“ತಾವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ಕೆಲಸ ಮಾಡುತ್ತಿದ್ದರೆ, ವಿಪಕ್ಷದವರು ಅಧಿಕಾರದ ಕನಸು ಕಾಣುತ್ತಿದ್ದಾರೆ” ಎಂದು ಪ್ರತಿಪಕ್ಷದ ವಿರುದ್ಧ ಹರಿಹಾಯ್ದರು.
