ಈ ದಿನ ಸಂಪಾದಕೀಯ | ಮುಚ್ಚಿಟ್ಟ ಮಾಧ್ಯಮಗಳು ಬಿಚ್ಚಿಟ್ಟ ಸಾಮಾಜಿಕ ಮಾಧ್ಯಮಗಳು

Date:

ಚುನಾವಣಾ ಆಯೋಗ ಬಿಡುಗಡೆ ಮಾಡಿದ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಸುದ್ದಿ ಮಾಧ್ಯಮಗಳು ಮುಚ್ಚಿಟ್ಟವು. ಆದರೆ ದೇಶದ ಪ್ರಜ್ಞಾವಂತ ಪ್ರಜೆಗಳು ಸುದ್ದಿ ಮಾಧ್ಯಮಗಳನ್ನು ತಿಪ್ಪೆಗೆ ಎಸೆದು, ಸೋಷಿಯಲ್ ಮೀಡಿಯಾಗಳ ಮೂಲಕ ಬಿಜೆಪಿಯ ಬೃಹತ್ ಭ್ರಷ್ಟಾಚಾರವನ್ನು ವಿಶ್ವದೆದುರು ಬಿಚ್ಚಿಟ್ಟರು…

ಸರ್ವೋಚ್ಚ ನ್ಯಾಯಾಲಯದ ಖಡಕ್ ಆದೇಶಕ್ಕೆ ಅದುರಿಹೋದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಾ. 14ರಂದೇ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿತು. ಆಯೋಗ ಆ ತಕ್ಷಣವೇ ತನ್ನ ವೆಬ್ ತಾಣದಲ್ಲಿ ಪ್ರಕಟಿಸಿತು. ಆದರೆ, ಸ್ಪಷ್ಟ ಮಾಹಿತಿ ಮರೆಗೆ ಸರಿಸಲ್ಪಟ್ಟಿತ್ತು.

ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠ, ‘ಮಾಹಿತಿ ಅಪೂರ್ಣವಾಗಿದೆ, ಸಂಖ್ಯೆಯನ್ನು ಸರಿಯಾಗಿ ವರ್ಗೀಕರಿಸಿಲ್ಲ, ಯಾವ ಸಂಸ್ಥೆ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಿದೆ ಎಂಬುದನ್ನು ನಿಖರವಾಗಿ ಬಹಿರಂಗಪಡಿಸಿಲ್ಲ. ಮಾ. 18ಕ್ಕೆ ಲೋಪ ಸರಿಪಡಿಸಿ ಸರಿಯಾದ ಮಾಹಿತಿ ನೀಡಿ’ ಎಂದು ಮತ್ತೆ ನೋಟಿಸ್ ನೀಡಿದೆ.

ಏತನ್ಮಧ್ಯೆ, ಮಾ. 14ರಂದು ಚುನಾವಣಾ ಆಯೋಗ ಬಿಡುಗಡೆ ಮಾಡಿದ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಪಡೆದ ದೇಶದ ಸುದ್ದಿ ಮಾಧ್ಯಮಗಳು ಹಗರಣವನ್ನು ಮುಚ್ಚಿಡಲು; ಬಿಜೆಪಿಯ ಮಾನ ಕಾಪಾಡಲು ಶಕ್ತಿಮೀರಿ ಶ್ರಮಿಸಿದವು. ನ್ಯಾಷನಲ್ ನ್ಯೂಸ್ ಚಾನಲ್‌ಗಳು, ಅದನ್ನು ಸುದ್ದಿಯಾಗಿಯೂ ನೋಡದೆ ನಿರ್ಲಕ್ಷಿಸಿದವು. ಇನ್ನು ಕೆಲವು ಹತ್ತರಲ್ಲಿ ಹನ್ನೊಂದು ಎಂಬಂತೆ ತೇಲಿಸಿದವು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅದರಲ್ಲೂ ಕನ್ನಡದ ನ್ಯೂಸ್ ಚಾನಲ್‌ಗಳು- ಬಾಂಡ್ ಹಗರಣವನ್ನು ಬಚ್ಚಿಟ್ಟು, ಯಡಿಯೂರಪ್ಪನವರ ಲೈಂಗಿಕ ಹಗರಣವನ್ನು ಬಿಚ್ಚಿಡತೊಡಗಿದವು. ನೀರಿಲ್ಲ ನೀರಿಲ್ಲ ಎಂದು ರಾಗವಾಗಿ ಹಾಡತೊಡಗಿದವು. ಒಂದು ಆರೆಸ್ಸೆಸ್‌ಗೆ ಆನಂದದ ಸುದ್ದಿಯಾಗಿತ್ತು; ಮತ್ತೊಂದು ಆಳುವ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ‘ಸಂಥಿಂಗ್’ ಬಯಸುತ್ತಿತ್ತು.

ಆದರೆ ದೇಶದ ಪ್ರಜ್ಞಾವಂತ ಪ್ರಜೆಗಳು ಸುದ್ದಿ ಮಾಧ್ಯಮಗಳನ್ನು ತಿಪ್ಪೆಗೆ ಎಸೆದು ತಾವೇ ಪತ್ರಕರ್ತರಾಗಿದ್ದರು. ಬರೀ ಪತ್ರಕರ್ತರಲ್ಲ ತನಿಖಾ ಪತ್ರಕರ್ತರಾಗಿದ್ದರು. ಸೋಷಿಯಲ್ ಮೀಡಿಯಾಗಳಾದ ಇನ್‌ಸ್ಟಗ್ರಾಮ್, ಎಕ್ಸ್(ಟ್ವಿಟರ್), ಫೇಸ್ ಬುಕ್, ವಾಟ್ಸ್ ಆಪ್, ಯೂ ಟ್ಯೂಬ್, ಟೆಲಿಗ್ರಾಂ ಬಳಸಿಕೊಂಡು ಬಿಜೆಪಿಯ ಬ್ರಹ್ಮಾಂಡ ಬಾಂಡ್ ಭ್ರಷ್ಟಾಚಾರವನ್ನು ದಾಖಲೆಗಳ ಸಮೇತ ವಿಶ್ವದ ಎದುರು ಬಿಚ್ಚಿಟ್ಟಿದ್ದರು. ಇವರ ಜೊತೆ ರವೀಶ್ ಕುಮಾರ್, ಧ್ರುವ್ ರಾತಿಗಳಂತಹ ಸ್ವತಂತ್ರ ಪತ್ರಕರ್ತರು ಕೈ ಜೋಡಿಸಿದ್ದರು.

ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಸ್ಲೋಗನ್ ಗಳಾದ ‘ಚೌಕಿದಾರ್, ನಾ ಕಾವುಂಗ ನಾ ಕಾನೆದೂಂಗ’ಗಳನ್ನು ಅವರಿಗೇ ತಿರುಗುಬಾಣವನ್ನಾಗಿಸಿದ್ದರು. ಬಿಜೆಪಿ ನಾಯಕರ ಟ್ವೀಟ್‌, ಟ್ವೀಟ್ ಕಂಟೆಂಟ್, ನಾಯಕರ ಫೋಟೋ, ದಿನಾಂಕ, ಟೈಮ್, ಇಡಿ-ಸಿಬಿಐ ದಾಳಿ, ದಾಳಿಗೊಳಗಾದ ಸಂಸ್ಥೆಗಳು ಕೊಟ್ಟ ದೇಣಿಗೆಯ ಮೊತ್ತ, ಬಿಜೆಪಿ ಸರ್ಕಾರದಿಂದ ಪಡೆದ ಸಹಾಯ-ಗುತ್ತಿಗೆ, ಅದನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಂಡ ಪತ್ರಿಕಾ ಹೇಳಿಕೆಗಳು, ವಿಡಿಯೋ ತುಣುಕುಗಳು… ಕರಾರುವಾಕ್ಕು ಕ್ರೊನಾಲಜಿಯನ್ನು ಮಂಡಿಸಿದ್ದರು. ಕಳೆದ 75 ವರ್ಷಗಳಲ್ಲಿ ದೇಶ ಕಂಡು ಕೇಳದ ಬೃಹತ್ ಹಗರಣವನ್ನು ಬಯಲಿಗೆಳೆದಿದ್ದರು.

ಅಸಲಿಗೆ, ಈ ಸೋಷಿಯಲ್ ಮೀಡಿಯಾವನ್ನು ಅತೀ ಎನ್ನಿಸುವಷ್ಟು ಬಳಸಿದ್ದೇ ಬಿಜೆಪಿ ಸರ್ಕಾರ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ, ಅರೆಗಳಿಗೆಯಲ್ಲಿ ಅದರ ಕಂಟೆಂಟ್ ತಿರುಚಿ, ಹಂಚಿ, ಅವರನ್ನು ‘ಪಪ್ಪು’ ಮಾಡಿದ್ದರು. ಅದಕ್ಕಾಗಿ ಅಪಾರ ಹಣ ವಿನಿಯೋಗಿಸಿದ್ದರು. ಸೋಷಿಯಲ್ ಮೀಡಿಯಾಗಳನ್ನು ಖರೀದಿಸಿದ್ದರು. ಅಧಿಕಾರವನ್ನು ಅಸ್ತ್ರದಂತೆ ಬಳಸಿ ಅವು ಸತ್ಯ ಹೊರಹಾಕದಂತೆ ನೋಡಿಕೊಂಡಿದ್ದರು.

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಐಟಿ ಸೆಲ್ ಎಚ್ಚೆತ್ತುಕೊಂಡು, ಅದು ಸುಳ್ಳು ಎಂದು ಮತ್ತೊಂದು ಟ್ವೀಟ್ ಮೂಲಕ ಸ್ಪಷ್ಟೀಕರಣ ಕೊಡುವುದರೊಳಗೆ, ಅದು ಬಿಜೆಪಿಯ ಬೃಹತ್ ಜಾಲ ಮತ್ತು ಸೋಷಿಯಲ್ ಮೀಡಿಯಾಗಳ ಸಹಕಾರದಿಂದ ಇಡೀ ವಿಶ್ವಕ್ಕೇ ಹಂಚಿಕೆಯಾಗಿರುತ್ತಿತ್ತು. ರಾಹುಲ್ ಎಂದಾಕ್ಷಣ ಜನ ಗೇಲಿ ಮಾಡಿ ನಗುವಂತೆ ಮಾಡುತ್ತಿತ್ತು.

ಇಂದು ಅದೇ ಸೋಷಿಯಲ್ ಮೀಡಿಯಾ, ಆರೆಸ್ಸೆಸ್ ಮತ್ತು ಬಿಜೆಪಿ ಸರ್ಕಾರವನ್ನು- ಬಾಂಡ್ ಸ್ಕ್ಯಾಮ್ ಬಾಂಡ್, ಫಾದರ್ ಆಫ್ ಡೊನೇಷನ್, ದಿ ಗುಜರಾತ್ ಸ್ಟೋರಿ, ಕರಿ ಮನಿ ಮಾಲೀಕ, ಚಂದಾ ದೋ, ದಂಧಾ ಲೋ ಎಂಬ ನೂರಾರು ಸ್ಲೋಗನ್‌ಗಳು, ರೀಲ್ಸ್‌ಗಳು, ಟ್ರೋಲ್‌ಗಳ ಮೂಲಕ ಪ್ರಪಂಚದ ಮುಂದೆ ಬೆತ್ತಲು ಮಾಡಿ ನಿಲ್ಲಿಸಿದೆ.

ದೇಶದ ಸಿಟಿಜನ್ ಜರ್ನಲಿಸ್ಟ್‌ಗಳ ಹೊಡೆತಕ್ಕೆ ಚಿಂದಿಯಾದ ಆರೆಸ್ಸೆಸ್ ಮತ್ತು ಬಿಜೆಪಿ, ಶುಕ್ರವಾರ ಸಂಜೆ 6 ಗಂಟೆಯತನಕ ಉಸಿರೆತ್ತಿರಲಿಲ್ಲ. ತೆಲಂಗಾಣ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಪುತ್ರಿ ಕವಿತಾರನ್ನು ಇಡಿ ಬಂಧಿಸಿದ ನಂತರ ಬಿಲದಿಂದ ಹೊರಬಂದ ನಿರ್ಮಲಾ ಸೀತಾರಾಮನ್, ‘ಇಡಿ ಸ್ವತಂತ್ರ ಸಂಸ್ಥೆ, ಬಿಜೆಪಿಯಿಂದ ಸರ್ಕಾರಿ ಏಜೆನ್ಸಿಗಳ ದುರ್ಬಳಕೆ ಆಗಿಲ್ಲ’ ಎಂದು ಸಮರ್ಥಿಸಿಕೊಳ್ಳಲು ಹೆಣಗಾಡಿದರು. ಆದರೆ ಅದೇ ಬಿಜೆಪಿ ಮತ್ತು ಕೆಸಿಆರ್, ಮೇಘಾ ಎಂಜಿನಿಯರಿಂಗ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂಬ ಸಂಸ್ಥೆಗೆ ಸಾವಿರಾರು ಕೋಟಿ ರೂಪಾಯಿಗಳ ಸುರಂಗ, ಸೇತುವೆ ಗುತ್ತಿಗೆ ನೀಡಿ, ದೇಣಿಗೆ ಪಡೆದಿದ್ದವು.

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೇತೃತ್ವದ ಬಿಜೆಪಿ ಸರ್ಕಾರ ದೇಶ ಕಂಡರಿಯದ ಬೃಹತ್ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದೆ. ಈ ಇಬ್ಬರು ನಾಯಕರ ಹಿಂದೆ ಆರೆಸ್ಸೆಸ್ ಇದೆ. ಈ ಆರೆಸ್ಸೆಸ್‌ ನಡೆಗಳೆಲ್ಲ ನಿಗೂಢವಾಗಿದೆ. ಹೇಳುವುದು ಒಂದು ಮಾಡುವುದು ಇನ್ನೊಂದು- ಅವರ ನಡೆನುಡಿಯಾಗಿದೆ. ಅದನ್ನೇ ಪಾಲಿಸುತ್ತಿರುವ ಬಿಜೆಪಿ ಸರ್ಕಾರ, ಯಾವುದನ್ನೂ ಜನರ ಮುಂದಿಡುವುದಿಲ್ಲ. 2018ರಲ್ಲಿ ಅರುಣ್ ಜೇಟ್ಲಿ ಈ ಚುನಾವಣಾ ಬಾಂಡ್ ಯೋಜನೆ ಪಾರದರ್ಶಕ ಎಂದು ಎದೆಯುಬ್ಬಿಸಿ ಹೇಳಿದ್ದರು. ಆನಂತರ, ಮಾಹಿತಿ ಬಹಿರಂಗಪಡಿಸುವ ಅಗತ್ಯವಿಲ್ಲವೆಂದು ಬಿಜೆಪಿಗರು ಭಂಡತನ ಮೆರೆದಿದ್ದರು. ಆದರೆ ಘನತೆವೆತ್ತ ಸುಪ್ರೀಂ ಕೋರ್ಟ್ ಮತ್ತು ಪ್ರಜ್ಞಾವಂತ ಪ್ರಜೆಗಳು ಬಿಜೆಪಿಯ ‘ಬಂಡವಾಳ’ವನ್ನು ಈಗ ಬಿಚ್ಚಿಟ್ಟಿದ್ದಾರೆ.

ಮಹಾತ್ಮಾ ಗಾಂಧಿ ಕೂಡ ಜನರಿಂದ ದೇಣಿಗೆ ಪಡೆಯುತ್ತಿದ್ದರು. ಆ ದೇಣಿಗೆಯನ್ನು ಜನರಿಗಾಗಿ ಬಳಸುತ್ತಿದ್ದರು. ಆದರೆ ಪೈಸೆ ಪೈಸೆಗೂ ಲೆಕ್ಕ ಇಟ್ಟಿದ್ದರು. ಆ ಮೂಲಕ ನೈತಿಕ ಪ್ರಜ್ಞೆಯ ಪಾಠ ಹೇಳಿಕೊಟ್ಟಿದ್ದರು. ದೇಶದ ಜನರೆದೆಗೆ ದಾಟಿಸಿದ್ದರು. ಆ ಪಾರದರ್ಶಕತೆಯ ಪ್ರಜ್ಞೆಯೇ ಇಂದು ಸಿಟಿಜನ್ ಜರ್ನಲಿಸ್ಟ್‌ಗಳಿಂದ ಹೊರಬಿದ್ದಿದೆ. ಅದನ್ನು ಇನ್ನಷ್ಟು ಹೆಚ್ಚು ಮಾಡೋಣ, ಗಾಂಧಿ ನಾಡನ್ನು ಉಳಿಸಿಕೊಳ್ಳೋಣ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ...

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...