- ಕೊಳಚೆ ಪ್ರದೇಶದ ಭಾಗಗಳಿಗೆ ಸಮರ್ಪಕ ನೀರು ಪೂರೈಸುವಂತೆ ಸೂಚನೆ
- ನೋಂದಣಿ ಆಗದ ಖಾಸಗಿ ನೀರಿನ ಟ್ಯಾಂಕರ್‌ಗಳ ಮೇಲೆ ಕಾನೂನು ಕ್ರಮ
“ಬೆಂಗಳೂರಿನಲ್ಲಿ ಖಾಸಗಿ ನೀರಿನ ಟ್ಯಾಂಕರ್‌ಗಳ ನೋಂದಣಿ ಕಾರ್ಯ ಮುಗಿದಿದ್ದು, ಶೇ.95 ರಷ್ಟು ಖಾಸಗಿ ನೀರಿನ ಟ್ಯಾಂಕರ್‌ಗಳನ್ನ ಈಗಾಗಲೇ ನೋಂದಾಯಿಸಲಾಗಿದೆ. ನೋಂದಣಿ ಆಗದೆ ಇರುವಂತಹ ಖಾಸಗಿ ನೀರಿನ ಟ್ಯಾಂಕರ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಮಾರ್ಚ್ 17ರಂದು ಬೆಂಗಳೂರಿನ ಕೊಳಚೆ ಪ್ರದೇಶಗಳಾದ ಭಾಶ್ಯಾಂ ಪಾರ್ಕ್, ದೀನ ಬಂಧು ನಗರ, ಶ್ರೀ ರಾಮ ನಗರಿ ಸೇರಿದಂತೆ ಜನಸಂದ್ರತೆಯ ಪ್ರದೇಶಗಳಿಗೆ ಭೇಟಿ ನೀಡಿ ನಾಗರಿಕರೊಂದಿಗೆ ನೀರಿನ ವಿತರಣೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಮುಂದುವರೆದು ಮಾತನಾಡಿದ ಅವರು, “ಕಾವೇರಿ ನೀರಿನ ಸಂಪರ್ಕ ಇರುವಂತಹ ಪ್ರದೇಶಗಳಲ್ಲಿ ಈಗಾಗಲೇ ಸಮರ್ಪಕವಾದ ವಿತರಣೆಯನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ” ಎಂದರು.
“ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನಗರದ ಎಲ್ಲ ಭಾಗದಲ್ಲಿ ಟ್ಯಾಂಕ್‌ಗಳನ್ನು ಅಳವಡಿಸುವ ಮೂಲಕ ಉಚಿತವಾಗಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರು ಪೂರೈಸುವ ಖಾಸಗಿ ಟ್ಯಾಂಕರ್‌ಗಳ ನೋಂದಣಿ ಪ್ರಕ್ರಿಯೆಯ ಗಡುವು ದಿನಾಂಕ ಮಾರ್ಚ್ 15ಕ್ಕೆ ಮುಗಿದಿದೆ. ಶೇ.95 ರಷ್ಟು ನೀರಿನ ಖಾಸಗಿ ಟ್ಯಾಂಕರ್‌ಗಳನ್ನ ನೋಂದಾಯಿಸಲಾಗಿದೆ. ಕೆಲವೆಡೆ ಟ್ರ್ಯಾಕ್ಟರ್ ಮಾರ್ಪಾಡಿಸಿ ನೀರಿನ ಟ್ಯಾಂಕರ್‌ಗಳಾಗಿ ಪರಿವರ್ತಿಸಲಾಗಿದೆ. ಇವುಗಳ ಮೇಲೆಯೂ ನಿಗಾ ಇಡಲಾಗುವುದು. ನೋಂದಣಿಗೆ ಗಡುವು ನೀಡಿದ ಸಮಯದಲ್ಲಿ ನೋಂದಣಿ ಮಾಡದೆ ಇರುವಂತಹ ಖಾಸಗಿ ನೀರಿನ ಟ್ಯಾಂಕರ್‌ಗಳ ಮಾಲೀಕರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ನೀರಿನ ಸಮಸ್ಯೆ | ಪರ್ಯಾಯ ಮಾರ್ಗ ಹುಡುಕದೆ ಕಾಲಹರಣ ಮಾಡುತ್ತಿರುವ ರಾಜ್ಯ ಸರ್ಕಾರ: ಆರ್ ಅಶೋಕ್ ಟೀಕೆ
“ನಗರದ ಹೊರಭಾಗದಲ್ಲಿ ಇರುವಂತಹ ಗ್ರಾಮಗಳಿಗೆ ಇನ್ನು ಕಾವೇರಿ ನೀರಿನ ಸಂಪರ್ಕ ನೀಡಲಾಗಿಲ್ಲ. ಈ ಭಾಗದಲ್ಲಿ ಅಂತರ್ಜಲದ ಮೇಲೆ ಹೆಚ್ಚಿನ ಅವಲಂಬನೆ ಇದೆ. ಈ ಪ್ರದೇಶದಲ್ಲಿ ಬಿಬಿಎಂಪಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ನಗರದ ಹೊರಭಾಗದ ಗ್ರಾಮಗಳಿಗೂ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ದಿನದ 24 ಗಂಟೆಗಳ ಕಾಲ ನಗರದ ಕುಡಿಯುವ ನೀರು ಸರಬರಾಜು ಸಮರ್ಪಕವಾಗಿ ನಡೆಯುವಂತೆ ಮಂಡಳಿ ವತಿಯಿಂದ ನಿಗಾ ವಹಿಸಲಾಗುತ್ತಿದೆ” ಎಂದು ತಿಳಿಸಿದರು.