ಕೇಂದ್ರ ಸರ್ಕಾರವು ಮಾರ್ಚ್ 11ರಂದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) 2019 ಜಾರಿ ಮಾಡಿದ್ದು, ಈ ಕಾನೂನಿಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಿಎಎ ವಿರುದ್ಧವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಸಲಾಗಿದ್ದು, ಕಾನೂನು ಸಮರ ಏರ್ಪಡಲಿದೆ.
ಸಿಎಎ ಯಾವುದೇ ದಾಖಲೆಯಿಲ್ಲದೆಯೇ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2014ರ ಡಿಸೆಂಬರ್ 31ಕ್ಕೂ ಮುನ್ನ ಭಾರತಕ್ಕೆ ಬಂದ ಮುಸ್ಲಿಮೇತರರಿಗೆ ಭಾರತದ ಪೌರತ್ವವನ್ನು ಈ ಕಾಯ್ದೆಯು ನೀಡುತ್ತದೆ. ಈ ಕಾನೂನು ತಾರತಮ್ಯದಿಂದ ಕೂಡಿದೆ ಎಂದು ತೀವ್ರ ವಿರೋಧ ವ್ಯಕ್ತವಾಗಿದೆ.
ಸುಪ್ರೀಂ ಕೋರ್ಟ್‌ನಲ್ಲಿ 2019ರ ಡಿಸೆಂಬರ್‌ನಿಂದ ಸಿಎಎ ವಿರುದ್ಧ ಸಲ್ಲಿಸಲಾದ ಇನ್ನೂರಕ್ಕೂ ಅಧಿಕ ಪ್ರಕರಣಗಳು ಬಾಕಿ ಉಳಿದಿದೆ. ಈಗ ಕೇಂದ್ರ ಸಿಎಎ ಜಾರಿ ಮಾಡಿದ ಬಳಿಕ ಮತ್ತೆ ಹಲವಾರು ಅರ್ಜಿಗಳು ಸಲ್ಲಿಸಲಾಗಿದ್ದು, ಈಗ ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆಗೆ ಸಜ್ಜಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಸಿಎಎ ಅನುಷ್ಠಾನ ತಡೆಗಾಗಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಸಮ್ಮತಿ
ಸಿಎಎ ಕಾಯ್ದೆಯು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಣಾಳಿಕೆಯ ಭಾಗವಾಗಿದ್ದು ಈಗ 2023ರ ಚುನಾವಣೆ ಬರುತ್ತಿದ್ದಂತೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಈ ಕಾಯ್ದೆಯನ್ನು ಜಾರಿ ಮಾಡಿದೆ. ಕಾಯ್ದೆಗೆ 2019ರಲ್ಲಿ ಅನುಮೋದನೆ ಲಭಿಸಿದ್ದರೂ ಕೂಡಾ ಕೇಂದ್ರ ಸರ್ಕಾರವು ಚುನಾವಣೆ ಸಮೀಪಿಸುತ್ತಿದ್ದಂತೆ ಕಾಯ್ದೆ ಜಾರಿಗೊಳಿಸಿ ಟೀಕೆಗೆ ಒಳಗಾಗಿದೆ. ಹಾಗೆಯೇ ಕೇಂದ್ರದ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ಕೂಡ ನಡೆಯುತ್ತಿದೆ.
ಈ ಕಾಯ್ದೆಯ ಜಾರಿಗೆ ತಡೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ನೂರಾರು ಅರ್ಜಿಗಳು ಸಲ್ಲಿಕೆಯಾಗಿದ್ದು, ಅರ್ಜಿದಾರರಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಮತ್ತು ಅಸ್ಸಾಂನ ಕಾಂಗ್ರೆಸ್ ನಾಯಕ ದೇಬಬ್ರತಾ ಸೈಕಿಯ ಸೇರಿದ್ದಾರೆ. ಮಾರ್ಚ್ 16ರಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಸಿಎಎ ವಿರುದ್ಧ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
ಇನ್ನು ಸಿಎಎ ವಿರುದ್ಧದ ಅರ್ಜಿಗಳ ವಿಚಾರಣೆಯನ್ನು ಮಾರ್ಚ್ 19ರಂದು ನಡೆಸಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ನೇತೃತ್ವದ ಪೀಠವು 190 ಅರ್ಜಿಗಳ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದೆ. ಐಯುಎಂಎಲ್ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಕೋರ್ಟ್ ಮೆಟ್ಟಿಲೇರಿದ ಬಳಿಕ ಸುಪ್ರೀಂ ವಿಚಾರಣೆಯ ಘೋಷಣೆ ಮಾಡಿದೆ.
ಸಿಎಎ ವಿರುದ್ಧ ರಾಜ್ಯ ಸರ್ಕಾರಗಳು
ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳು ಈಗಾಗಲೇ ಸಿಎಎ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ನಡುವೆ ಸಿಎಎ (ತಿದ್ದುಪಡಿ) ಕಾಯ್ದೆ 2024 ಅನ್ನು ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಮೊದಲ ರಾಜ್ಯ ಕೇರಳವಾಗಿದೆ.
ಮಾರ್ಚ್ 12ರಂದು ದ್ರಾವಿಡ ಮುನ್ನೇತ್ರ ಕಳಗಂ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ “ನಮ್ಮ ರಾಜ್ಯದಲ್ಲಿ ಸಿಎಎ ಜಾರಿ ಮಾಡುವುದಿಲ್ಲ” ಎಂದು ಘೋಷಿಸಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಎಎ ಜಾರಿಯಿಂದಾಗುವ ಅಪಾಯಗಳ ಬಗ್ಗೆ ಜನರಿಗೆ ತಿಳಿಸಲು ಆರಂಭಿಸಿದ್ದಾರೆ. ಕೇರಳ ಸರ್ಕಾರವು 2020ರಲ್ಲೇ ಸಿಎಎ ವಿರುದ್ಧ ಅರ್ಜಿ ಸಲ್ಲಿಸಿದ್ದು, ಮಾರ್ಚ್ 14ರಂದು ಮರು ಅರ್ಜಿ ಸಲ್ಲಿಸಿದೆ.
ಸಿಎಎ ವಿರುದ್ಧವಾಗಿ ಡಿವೈಎಫ್‌ಐ ಪರ ವಕೀಲರಾದ ಬಿಜು ಪಿ ರಮಣ್ ಮತ್ತು ಸುಭಾಷ್ ಚಂದ್ರಣ್ ಕೆ ಆರ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಐಯುಎಂಎಲ್ ಅರ್ಜಿಯ ಬಳಿಕ 200ಕ್ಕೂ ಅಧಿಕ ಅರ್ಜಿ ಸಲ್ಲಿಸಲಾಗಿದೆ. ಐಯುಎಂಎಲ್ ಮೊದಲ ಬಾರಿಗೆ 2019ರಲ್ಲಿ ಅರ್ಜಿ ಸಲ್ಲಿಸಿತ್ತು.