ಲೋಕಸಭಾ ಚುನಾವಣೆ | ದಾವಣಗೆರೆ ಅಭ್ಯರ್ಥಿಯ ಘೋಷಣೆ, ಬಿಜೆಪಿಯಲ್ಲಿ ಭಿನ್ನಮತ ದಿನಕ್ಕೊಂದು ತಿರುವು

Date:

Advertisements

ಜಿಲ್ಲೆಯಲ್ಲಿ ಗೆಲುವಿಗೆ ತೊಡಕಾದ ಬಿಜೆಪಿ ಅಭ್ಯರ್ಥಿ ಆಯ್ಕೆ. ತಣ್ಣಗಾಗದ ವಿರೋಧಿಗಳ ಮುನಿಸು, ದಿನದಿನಕ್ಕೂ ಹೆಚ್ಚುತ್ತಿರುವ ವಿರೋಧವನ್ನು ಶಮನಗೊಳಿಸಲು ಜಿಲ್ಲಾ ಬಿಜೆಪಿ ಮತ್ತು ಲೋಕಸಭಾ ಉಸ್ತುವಾರಿಗಳು ಹೆಣಗುತ್ತಿದ್ದಾರೆ.

ದಾವಣಗೆರೆ ಕ್ಷೇತ್ರಕ್ಕೆ ಲೋಕಸಭಾ ಅಭ್ಯರ್ಥಿಯ ಘೋಷಣೆಯ ನಂತರ ಬಿಜೆಪಿಯಲ್ಲಿ ಭಿನ್ನಮತ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ವಿರೋಧಿಗಳ ಸಂಖ್ಯೆಯು ಕೂಡ ಹೆಚ್ಚಾಗುತ್ತಾ ಹೋಗುತ್ತಿದೆ.

ಈ ಮಧ್ಯೆ ಸುದ್ದಿಗೋಷ್ಠಿ ನಡೆಸಿರುವ ಮತ್ತು ಕೆಲ ಸಮಾರಂಭಗಳಲ್ಲಿ ಮಾತನಾಡಿರುವ ಸಂಸದ ಸಿದ್ದೇಶ್ವರ ಮತ್ತು ಪತ್ನಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಭಿನ್ನಮತೀಯರನ್ನು ಕರೆದು ಅವರ ಅಸಮಾಧಾನವನ್ನು ಶಮನಗೊಳಿಸುವುದಾಗಿ, ಅವರೊಂದಿಗೆ ಮಾತುಕತೆ ನಡೆಸುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ, ದಿನದಿಂದ ದಿನಕ್ಕೆ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ರಾಜ್ಯ ನಾಯಕರಿಗೆ ಮತ್ತು ಜಿಲ್ಲಾ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದೆ.

Advertisements

ಇತ್ತೀಚೆಗೆ ತಾನೇ ಎಸ್.ಎ. ರವೀಂದ್ರನಾಥ್ ಅವರ ಮನೆಯಲ್ಲಿ ಭಿನ್ನಮತೀಯರ ಸಂಪರ್ಕ ಸಭೆ ಏರ್ಪಾಡಾಗಿದ್ದು ಕೊನೆ ಕ್ಷಣದಲ್ಲಿ ರಹಸ್ಯವನ್ನು ಕಾಯ್ದುಕೊಳ್ಳಲು ವಿಧಾನಸಭಾ ಪರಾಜಿತ ಅಭ್ಯರ್ಥಿ ಅಜಯ್ ಕುಮಾರ್ ಅವರ ಮನೆಯಲ್ಲಿ ಸಭೆ ಸೇರಿದ್ದು ಮುಂದಿನ ಕಾರ್ಯತಂತ್ರಗಳ ಬಗ್ಗೆ ರವೀಂದ್ರನಾಥ್ ಮತ್ತು ರೇಣುಕಾಚಾರ್ಯ ಗುಂಪು ಮಾತುಕತೆ ನಡೆಸಿದೆ ಎಂದು ತಿಳಿದುಬಂದಿದೆ. ಆ ಸಭೆಯಲ್ಲಿ ಸಿದ್ದೇಶ್ವರ ಕುಟುಂಬದ ಬಗ್ಗೆ ತೀವ್ರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಗೆ ಸಿದ್ದೇಶ್ವರ ಅವರು ಸಂಘಟನೆಗೆ ನೀಡಿರುವ ಯಾವುದೇ ಕೊಡುಗೆ ಇಲ್ಲ. ಬೇರೆಯವರು ಮಾಡಿರುವ ಸಂಘಟನೆಯ ಲಾಭ ಪಡೆದಿದ್ದಾರೆ. ಅಭಿವೃದ್ಧಿಯೂ ಶೂನ್ಯ. ಎಲ್ಲವನ್ನೂ ಸ್ವಂತಕ್ಕೋಸ್ಕರ ಮಾಡಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಅವರೇ ಕಾರಣ. ಯಾವ ಅಭ್ಯರ್ಥಿಗಳ ಗೆಲುವಿಗೂ ಶ್ರಮಿಸಲಿಲ್ಲ. ಎಲ್ಲಿಯೂ ಅಭ್ಯರ್ಥಿಗಳ ಪರ ಪ್ರಚಾರ ಮಾಡಿಲ್ಲ. ಕೇವಲ ನಾಲ್ಕರಿಂದ ಐದು ತಾಸು ಅಷ್ಟೇ ಪ್ರಚಾರ ನಡೆಸಿದ್ದಾರೆ. ನಾವೆಲ್ಲರೂ ಸೋಲಲು ಸಿದ್ದೇಶ್ವರ ಅವರೇ ಕಾರಣ ಎಂದು ಸಭೆಯಲ್ಲಿ ಮಾಜಿ ಶಾಸಕರು ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳ ನೇರ ಆರೋಪಗಳಾಗಿವೆ.

ಸಿದ್ದೇಶ್ವರರ ಕುಟುಂಬ ಯಾವಾಗ ಬಿಜೆಪಿ ಬಂಟಿಂಗ್ಸ್ ಕಟ್ಟಿದೆ, ಯಾವಾಗ ಧ್ವಜ ಕಟ್ಟಿದೆ? ಬಿಜೆಪಿ ಪಕ್ಷಕ್ಕೆ ನೀಡಿರುವ ಕೊಡುಗೆ ಶೂನ್ಯ. ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿದ್ದು ಎಸ್.ಎ. ರವೀಂದ್ರನಾಥ್ ನೇತೃತ್ವದ ತಂಡ. ನಾವೆಲ್ಲರೂ ಸೇರಿ ಪಕ್ಷ ಬಲಿಷ್ಠಗೊಳಿಸಿದ್ದೇವೆ. ಸಿದ್ದೇಶ್ವರ ಏನು ಬಿಜೆಪಿ ಕಟ್ಟಿ ಬೆಳೆಸಿದ್ದೀರಾ, ಯಾವ ಹೋರಾಟಗಳಲ್ಲಿ ಭಾಗವಹಿಸಿ ಬಿಜೆಪಿ  ಸಂಘಟಿಸಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಂದು ಕಡೆ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸೇರುವ ವಿಜಯನಗರ ಜಿಲ್ಲೆ ವ್ಯಾಪ್ತಿಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ಮಂಡಲ ಪದಾಧಿಕಾರಿಗಳ ಅಧಿಕಾರವಹಿಸಿಕೊಳ್ಳುವ ಸಮಾರಂಭದಲ್ಲಿ ಮತ್ತೊಮ್ಮೆ ಗೋಬಾಕ್ಸ್ ಸಿದ್ದೇಶ್ವರ ಕೂಗು ಕೇಳಿ ಬಂದಿದ್ದು, ಮತ್ತೊಂದು ಹಂತದ ವಿರೋಧಕ್ಕೆ, ಭಿನ್ನಮತಕ್ಕೆ ಚಟುವಟಿಕೆ ಕಾರಣವಾಗಿದೆ ಇತ್ತೀಚಿಗೆ ತಾನೇ ಹರಿಹರ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಂಡಲ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪುನರ್ ಸಂಘಟನೆ ಕಾರ್ಯ ನಡೆದಿದ್ದು ತಮಗೆ ಬೇಕಾದವರಿಗೆ ಪದಾಧಿಕಾರಿಗಳನ್ನು ಅಧ್ಯಕ್ಷರನ್ನಾಗಿ ನಿಯೋಜಿಸಿದ್ದು ಇದು ಅಲ್ಲಿನ ಮತ್ತೊಂದು ರೆಡ್ಡಿ ಬಣದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿ, ಅವರು ತಿರುಗಿ ಬಿದ್ದಿದ್ದು ಮಂಡಲ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಬದಲಾಯಿಸಬೇಕು ಎಂದು ಇತ್ತೀಚೆಗೆ ಪ್ರತಿಭಟಿಸಿದ್ದರು.

ಅದರ ಮುಂದುವರಿದ ಭಾಗವಾಗಿ ಮಂಡಲ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಸಂಸದ ಸಿದ್ದೇಶ್ವರ, ಸ್ಥಳೀಯ ನಾಯಕ ಚನ್ನಬಸವ ಇನ್ನಿತರರನ್ನು ಸಮಾರಂಭದ ಸ್ಥಳದಲ್ಲಿ ವೇದಿಕೆಗೆ ಹೋಗಲು ಬಿಡದೆ ಅಡ್ಡ ಹಾಕಿ ಗೋ ಬ್ಯಾಕ್ ಸಿದ್ದೇಶ್ವರ ಎಂದು ಘೋಷಣೆ ಕೂಗಿದ್ದಾರೆ. ಇದರಿಂದ ತೀವ್ರ ಮುಜುಗರಕ್ಕೀಡಾದ ಸಿದ್ದೇಶ್ವರ ಕರುಣಾಕರ ರೆಡ್ಡಿ ಅವರಿಗೆ ಕರೆ ಮಾಡಿ ಸಂಪರ್ಕಿಸಲು ಯೋಚಿಸಿದರೂ, ಅವರ ಕರೆ ಸಂಪರ್ಕ ಸಾಧ್ಯವಾಗಿಲ್ಲ. ನಂತರ ಹಿಂಭಾಗದಲ್ಲಿನ ಮೂಲಕ ವೇದಿಕೆ ಪ್ರವೇಶಿಸಿ ಸಮಾರಂಭ ನಡೆಸಿದರೂ ವಿರೋಧಿಗಳು ವೇದಿಕೆ ಮುಂಭಾಗದಲ್ಲಿ ಕೂಡ ಗೋಬ್ಯಾಕ್ ಸಿದ್ದೇಶ್ವರ ಎಂದು ಕೂಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯ ಗೋ ಬ್ಯಾಕ್ ಸಿದ್ದೇಶ್ವರ ಕೂಗು ಈಗ ಹರಪನಹಳ್ಳಿ ತಾಲೂಕಿಗೆ ಕಾಲಿಟ್ಟಿರುವುದು ಬಿಜೆಪಿ ಮಟ್ಟಿಗೆ ಹಿನ್ನಡೆ ಎಂದೇ ಹೇಳಬಹುದು.

ಈ ಎಲ್ಲಾ ವಿರೋಧ ಭಿನ್ನಮತಗಳಿಂದ ಕಂಗೆಟ್ಟಿರುವ ಜಿಲ್ಲಾ ಬಿಜೆಪಿ ನಾಯಕರು ಸಂಸದ ಸಿದ್ದೇಶ್ವರ, ಲೋಕಸಭಾ ಉಸ್ತುವಾರಿಗಳು ರಾಜ್ಯದ ನಾಯಕರ ಜೊತೆ  ಚರ್ಚೆ ನಡೆಸಿ,  ಮಾತುಕತೆ ನಡೆಸುವಂತೆ ಕೋರಿದ್ದಾರೆ ಎನ್ನಲಾಗಿದೆ. ಇದು ಜಿಲ್ಲೆಯಲ್ಲಿ ಸತತ ಗೆಲುವಿಗೆ ಕಾರಣವಾಗಿದ್ದ ಬಿಜೆಪಿಯನ್ನು ಸೋಲಿನೆಡೆಗೆ ತಳ್ಳಲಿದೆ ಎಂಬ  ಆತಂಕ ಮತ್ತು ಅನುಮಾನಗಳನ್ನು ಕಾರ್ಯಕರ್ತರಲ್ಲಿ ಸೃಷ್ಟಿಸುತ್ತಿದೆ. ಜಿಲ್ಲಾ ನಾಯಕರೇ ಭಿನ್ನಮತ, ಕಚ್ಚಾಟದಲ್ಲಿ ತೊಡಗಿರುವಾಗ ಕಾರ್ಯಕರ್ತರಾದ ನಾವು ಹೇಗೆ ಕೆಲಸ ಮಾಡುವುದು ಎಂದು ತಳ ಹಂತದ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.

ಮತ್ತೊಂದು ಕಡೆ ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್ ಜಿಲ್ಲಾ ಮುಖಂಡರು ಈ ಎಲ್ಲಾ ಭಿನ್ನಾಭಿಪ್ರಾಯಗಳಿಂದ ಭಿನ್ನಮತಗಳಿಂದ ಹೊರಬರಲು ಪರ್ಯಾಯ ಮಾರ್ಗ ಒಂದನ್ನು ಸೂಚಿಸಿದ್ದು, ಜಿಲ್ಲೆಯಲ್ಲಿ ಕ್ಷೇತ್ರದಲ್ಲಿ ಬಹು ಸಂಖ್ಯಾತರಾಗಿರುವ ಲಿಂಗಾಯತ ಸಮುದಾಯದ ಪಂಚಮಸಾಲಿ ಒಳಪಂಗಡದ ಹಿರಿಯ ನಾಯಕ ಮಾಜಿ ಸಚಿವ ಹರಿಹರ ಶಿವಪ್ಪನವರ ಮಗ ಹರಿಹರದ ಮಾಜಿ ಶಾಸಕ ಶಿವಶಂಕರ್ ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಘೋಷಿಸಿ ಚುನಾವಣೆ ಎದುರಿಸಲು ಕರೆ ನೀಡಿದೆ.

ಇತ್ತ ಕಾಂಗ್ರೆಸ್‌ನಲ್ಲಿ ಟಿಕೆಟ್ ಬಗ್ಗೆ ಹೈಕಮಾಂಡ್ ಯಾವುದೇ ಘೋಷಣೆ ಮಾಡದಿರುವುದು ಮತ್ತು ಯಾವುದೇ ನಿರ್ಧಾರ ಕೈಗೊಳ್ಳದಿರುವುದು ಕೂಡ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಶಿವಕುಮಾರ್ ಒಡೆಯರ್ ಜಿ.ಬಿ ವಿನಯ್ ಕುಮಾರ್ ಮತ್ತು ದಾವಣಗೆರೆಯ ದೊಡ್ಡ ಮನೆಯ ಸೊಸೆ, ಸಚಿವ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಟಿಕೆಟ್ ಆಕಾಂಕ್ಷಿಗಳಾಗಿದ್ದು ಚುನಾವಣಾ ದಿನಾಂಕ ಘೋಷಿತವಾದರೂ ಕೂಡ ಟಿಕೆಟ್ ಘೋಷಣೆಯಾಗದಿರುವುದು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಅಭ್ಯರ್ಥಿಗಳ ಬೆಂಬಲಿಗರಿಗೆ ಗೊಂದಲಮಯವಾಗಿದೆ.

ಜಿಲ್ಲಾ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಪದಾಧಿಕಾರಿಗಳು ಕೂಡ ಇಂಥವರಿಗೆ ಟಿಕೆಟ್ ಸಿಗಲಿದೆ ಎನ್ನುವ ಖಚಿತತೆಯನ್ನು ಹೇಳಲು ಸಾಧ್ಯವಾಗಿಲ್ಲ. ತೀವ್ರ ಪೈಪೋಟಿಯಿಂದ ಕೂಡಿರುವ ಕಾಂಗ್ರೆಸ್ ಟಿಕೆಟ್ ಗಾಗಿ ಪ್ರಬಲ ಸ್ಪರ್ಧೆ ಏರ್ಪಟ್ಟಿದ್ದು ಹೈಕಮಾಂಡ್ ಮಟ್ಟದಲ್ಲಿ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನುವುದು ಯಾವುದೇ ಮೂಲಗಳಿಂದ ಖಚಿತವಾಗುತ್ತಿಲ್ಲ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತರು. ಇದು ಕಾರ್ಯಕರ್ತರಲ್ಲಿ ಯಾರ ಪರವಾಗಿ ಯಾರ ಕೆಲಸ ಮಾಡುವುದು ಯಾರು ಅಭ್ಯರ್ಥಿ ಎಂದು ಪೂರ್ವ ತಯಾರಿ ಮಾಡಿಕೊಳ್ಳುವುದು ಎನ್ನುವ ಗೊಂದಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಪದಾಧಿಕಾರಿಗಳೊಬ್ಬರು ಮಾತನಾಡುತ್ತಾ, ಬಹುತೇಕ ಪ್ರಭಾ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ಖಾತರಿಯಾಗಲಿದ್ದು ಶಾಮನೂರು ಕುಟುಂಬ ಬೇರೆಯವರಿಗೆ ಬಿಟ್ಟು ಕೊಡುವ  ಮನಸ್ಥಿತಿಯಲಿಲ್ಲ.  ಹೈಕಮಾಂಡ್ ಕೂಡ ಅವರನ್ನು ಬಿಟ್ಟು ಹೊರಗಿನವರಿಗೆ ಟಿಕೆಟ್ ಕೊಡುವ ಧೈರ್ಯವನ್ನು ಪ್ರದರ್ಶಿಸುತ್ತಿಲ್ಲ ಬಹುತೇಕ ದೆಹಲಿ ಮಟ್ಟದಲ್ಲಿ ಪ್ರಭಾ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ಖಾತರಿಯಾಗಿದ್ದು ಘೋಷಿಸುವುದು ತಡವಾಗಲಿದೆ ಎಂದು ತಿಳಿಸಿದ್ದಾರೆ.

ಹಾಗಾದರೆ ಜಿ.ಬಿ ವಿನಯ್ ಕುಮಾರ್ ಜಿಲ್ಲೆಯಲ್ಲಿ ಕ್ಷೇತ್ರದಲ್ಲಿ ಸಂಚಲ ಮೂಡಿಸಿದ್ದು ಅವರ ಕತೆಯೇನು ಎಂದು ಪ್ರಶ್ನಿಸಿದರೆ, ಅವರನ್ನು ಬೇರೆ ಹೊಣೆಗಾರಿಕೆಗಳಿಗೆ ತೊಡಗಿಸಿಕೊಳ್ಳಲಾಗುವುದು ಜೊತೆಗೆ ಕ್ಷೇತ್ರದಲ್ಲಿ ಶಾಮನೂರು ಕುಟುಂಬ ಬಿಗಿ ಹಿಡಿದಿದ್ದು ಅವರು ಹೇಳಿದವರಿಗೆ ಟಿಕೆಟ್ ನೀಡುವ ಪದ್ಧತಿಯಾಗಿದ್ದು ಈಗ ಕೂಡ ಅವರು ಟಿಕೆಟ್ ಬೇರೆಯವರಿಗೆ ಬಿಟ್ಟು ಕೊಡುವ ಮನಸು ಮಾಡುತ್ತಿಲ್ಲ.  ತಮ್ಮ ಕುಟುಂಬದವರಿಗೆ ಬೇಕು ಎಂದು ಒಳಗೆ ಕಸರತ್ತು ಮಾಡುತ್ತಿದ್ದು,  ಕಾಂಗ್ರೆಸ್ನ ಇತರ ಆಕಾಂಕ್ಷೆಗಳಿಗೆ ಮತ್ತು ಕಾರ್ಯಕರ್ತರಿಗೆ ಅವಕಾಶ ವಂಚಿತರಾಗಲು ಕಾರಣವಾಗಿದೆ ಎನ್ನುತ್ತಾರೆ.

ಆದರೆ, ಟಿಕೆಟ್ ಯಾರಿಗೆ ಘೋಷಣೆಯಾದರೂ ಕೂಡ ಕಾಂಗ್ರೆಸ್‌ನಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎನ್ನುವುದು ಕಂಡುಬಂದಿದ್ದು ಭಿನ್ನಮತದ ಸೂಚನೆ, ಪಕ್ಷದ ವಲಯದಲ್ಲಿ ಯಾವುದೇ ಆಕಾಂಕ್ಷಿಗಳಿಂದಲೂ ಕೂಡ ಕಂಡು ಬರದಿರುವುದು ಕಾಂಗ್ರೆಸ್‌ಗೆ ಸಮಾಧಾನಕರ ವಿಷಯವಾಗಿದೆ. ಇದು ಪಕ್ಷವನ್ನು ಗೆಲುವಿನತ್ತ ಮುನ್ನಡೆಸಲಿದೆಯೇ ಅಥವಾ ಎಲ್ಲಾ ಭಿನ್ನಮತಗಳಿಂದ ಹೊರಬಂದು ಬಿಜೆಪಿಯೇ ತನ್ನ ಸತತ ಗೆಲುವಿನತ್ತ ಮುನ್ನಡೆಯಲ್ಲಿದೆಯೇ? ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಸಂಪೂರ್ಣ ಘೋಷಣೆಯ ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ.‌

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X