ಚುನಾವಣಾ ಆಯೋಗವು ಈ ಹಿಂದೆ ಎಸ್‌ಬಿಐ ಒದಗಿಸಿದ್ದ 2019ರ ಏಪ್ರಿಲ್ 12ರಿಂದ 2024ರ ಜನವರಿವರೆಗೆ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದವರ ಮಾಹಿತಿಯನ್ನು ಪ್ರಕಟಿಸಿತ್ತು. ಇದೀಗ, ರಾಜಕೀಯ ಪಕ್ಷಗಳು ತಾವು 2018ರ ಮಾರ್ಚ್‌ನಿಂದ ಈವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ದೇಣಿಗೆಯ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿವೆ. ಆ ಮಾಹಿತಿಗಳನ್ನು ಚುನಾವಣಾ ಆಯೋಗವು ಮಾರ್ಚ್ 17ರಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಡಿಎಂಕೆ, ಎಐಎಡಿಎಂಕೆ ಮತ್ತು ಜೆಡಿಎಸ್‌ನಂತಹ ಬೆರಳೆಣಿಕೆಯ ಪಕ್ಷಗಳು ಮಾತ್ರ ತಮಗಾಗಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಕಂಪನಿಗಳ ವಿವರಗಳನ್ನು ಬಹಿರಂಗಪಡಿಸಿವೆ. ಆದರೆ, ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ತಮ್ಮ ದೇಣಿಗೆದಾತರ ವಿವರವನ್ನು ನೀಡಿಲ್ಲ. ಆದಾಗ್ಯೂ, ಬಿಜೆಪಿ ಬರೋಬ್ಬರಿ 8,700 ಕೋಟಿ ಮೌಲ್ಯದ ಬಾಂಡ್‌ಗಳನ್ನು ಪಡೆದಿದೆ.
ಮಾತ್ರವಲ್ಲದೆ, ಅತೀ ಹೆಚ್ಚು ಹಣ ಪಡೆಯದಿದ್ದರೂ, ದೇಣಿಗೆ ಪಡೆದವರ ಪಟ್ಟಿಯಲ್ಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ಕಾಂಗ್ರೆಸ್ ಮತ್ತು ಟಿಎಂಸಿ ಕೂಡ ತಮ್ಮ ದೇಣಿಗೆದಾತರ ಮಾಹಿತಿ ಬಹಿರಂಗಪಡಿಸಿಲ್ಲ. ಮಾಹಿತಿ ಒದಗಿಸದ ಎಲ್ಲ ಪಕ್ಷಗಳು ತಮ್ಮ ಬಳಿ ಮಾಹಿತಿ ಇಲ್ಲ ಎಂದು ಹೇಳಿಕೊಂಡಿವೆ.
ತಾವು ತಮ್ಮ ದೇಣಿಗೆದಾತರ ಮಾಹಿತಿ ಉಳಿಸಿಕೊಂಡಿಲ್ಲ. ಉಳಿಸಿಕೊಳ್ಳುವ ಅಗತ್ಯವೂ ಇಲ್ಲವೆಂದು ಬಿಜೆಪಿ ಹೇಳಿದೆ.
ದೇಣಿಗೆ ನೀಡಿದ ಕಂಪನಿಗಳ ಹೆಸರನ್ನು ಹೇಳದೆಯೇ, ಬಿಜೆಪಿ ಒದಗಿಸಿದ ವಿವರಗಳ ಆಧಾರದ ಮೇಲೆ, ಅದಕ್ಕೆ ದೇಣಿಗೆ ನೀಡಿದ ಉನ್ನತ ಕಂಪನಿಗಳು ಯಾವುದು ಎಂದು ಕೆಲವು ಸುದ್ದಿ ಸಂಸ್ಥೆಗಳು ಗುರುತಿಸಿವೆ.
ಮೊದಲಿಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಒದಗಿಸಿದ ಮತ್ತು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಚುನಾವಣಾ ಬಾಂಡ್‌ಗಳ ಖರೀದಿದಾರರ ಮಾಹಿತಿಯ ಪೈಕಿ, ಕಳೆದ ಲೋಕಸಭಾ ಚುನಾವಣೆಗಳು ನಡೆದ ಸಮಯದ 2019ರ ಏಪ್ರಿಲ್ 12 ರಿಂದ ಮೇ 10 ರವರೆಗಿನ ವಹಿವಾಟುಗಳನ್ನು ನಾವು ನೋಡಬಹುದು. (ಮೇ 10ರಂದು ಅಂದಿನ ಚುನಾವಣೆ ಕೊನೆಗೊಂಡಿತ್ತು.)
ಬಿಜೆಪಿ ಒದಗಿಸಿದ ವಿವರಗಳು ಮತ್ತು ಚುನಾವಣಾ ಆಯೋಗ ಪ್ರಕಟಿಸಿದ ಮಾಹಿತಿಯನ್ನು ‘ದಿ ಕ್ವಿಂಟ್’ ತಾಳೆ ಹಾಕಿದೆ. ಈ ಕೆಳಗಿನ ಕಂಪನಿಗಳು ಬಿಜೆಪಿಯ ಅತಿದೊಡ್ಡ ದೇಣಿಗೆದಾತರಾಗಿದ್ದಾರೆ ಎಂಬುದನ್ನು ‘ದಿ ಕ್ವಂಟ್’ ಕಂಡುಕೊಂಡಿದೆ.
ಎಂಕೆಜೆ ಗ್ರೂಪ್ – ಈ ಕಂಪನಿಯು ಮೂರು ಬಾರಿ ಹಣ ನೀಡಿದೆ.
8 ಮೇ: 150 ಕೋಟಿ ರೂ.
ಎಂಕೆಜೆ ಗ್ರೂಪ್ ಕಂಪನಿಯು ಮೇ 8 ರಂದು ಕೋಲ್ಕತ್ತಾದಲ್ಲಿ ಬಿಜೆಪಿಗಾಗಿ 1 ಕೋಟಿ ರೂ.ಗಳ 150 ಬಾಂಡ್‌ಗಳನ್ನು ಖರೀದಿಸಿದೆ. ಅವುಗಳನ್ನು ಮೇ 10 ರಂದು ನಗದೀಕರಿಸಲಾಗಿದೆ.
ಎಸ್‌ಬಿಐ ಒದಗಿಸಿದ ಬಾಂಡ್ ಖರೀದಿದಾರರ ಪಟ್ಟಿ ಪ್ರಕಾರ, ಮೇ 8 ರಂದು ಆ ಪ್ರಮಾಣದಲ್ಲಿ ಬಾಂಡ್‌ಗಳನ್ನು ಖರೀದಿಸಿದ ಒಂದೇ ಒಂದು ಕಂಪನಿ ಎಂಕೆಜಿ ಗ್ರೂಪ್ ಮಾತ್ರ.
ಮೇ 8 ರಂದು, ಎಂಕೆಜೆ ಗ್ರೂಪ್‌ನ ಭಾಗವಾಗಿರುವ ಮದನ್ ಲಾಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು 110 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. ಅದೇ ಗುಂಪಿನ ಮತ್ತೊಂದು ಕಂಪನಿ – ಕೆವೆಂಟರ್ ಫುಡ್ ಪಾರ್ಕ್ ಇನ್ಫ್ರಾ ಲಿಮಿಟೆಡ್ – ಒಂದೇ ದಿನದಲ್ಲಿ 65 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. ಈ ಎರಡೂ ಕಂಪನಿಗಳು ರಾಧೇಶ್ಯಾಮ್ ಖೇತನ್ ಅವರ ಹೆಸರಿನಲ್ಲಿ ಗುರುತಿಸಿಕೊಂಡಿವೆ. ಈ ಹಣ ಬಿಜೆಪಿಗೆ ಹೋಗಿದೆ ಎಂಬುದು ಅಂಕಿಅಂಶಗಳು ಸೂಚಿಸುತ್ತವೆ.
ಇನ್ನು, 8 ಮೇ (ಖರೀದಿಯ ದಿನಾಂಕ) ರಿಂದ ಮೇ 10 ರವರೆಗೆ (ಠೇವಣಿ ದಿನಾಂಕ) ಚುನಾವಣಾ ಬಾಂಡ್ ವಹಿವಾಟುಗಳನ್ನು ಪರಿಶೀಲಿಸಿದರೆ, ಬಿಜೆಪಿಯೇತರ ಎಲ್ಲ ಪಕ್ಷಗಳು ಪಡೆದ ದೇಣಿಗೆಯ ಮೊತ್ತ 150 ಕೋಟಿ ರೂ.ಅನ್ನು ಸಮೀಪಿಸುವುದಿಲ್ಲ.
ಜೊತೆಗೆ, ಮೇ 9 ಮತ್ತು 10 ರಂದು ಕಂಪನಿಗಳು ಖರೀದಿಸಿದ ಬಾಂಡ್‌ಗಳನ್ನು ಪರಿಶೀಲಿಸಲಾಗಿದೆ. ಎಂಕೆಜೆ ಕಂಪನಿ ಹೊರತುಪಡಿಸಿ, ಬೇರಾವುದೇ ಸಂಸ್ಥೆ ಅಥವಾ ಸಮೂಹ 150 ಕೋಟಿ ರೂ.ಗಳ ಬಾಂಡ್ ಖರೀದಿಸಿಲ್ಲ. ಹೀಗಾಗಿ, ಈ 150 ಕೋಟಿ ರೂ. ಹಣವು ಬಿಜೆಪಿಗೆ ದೇಣಿಗೆ ಮೂಲಕ ಹರಿದುಹೋಗಿದೆ ಎಂಬುದು ಸ್ಪಷ್ಟವಾಗುತ್ತದೆ.
10 ಮೇ: 74 ಕೋಟಿ ರೂ.
ಬಿಜೆಪಿ ಮಾಹಿತಿ ನೀಡಿರುವ ಪ್ರಕಾರ, ಪಕ್ಷಕ್ಕಾಗಿ ಕೋಲ್ಕತ್ತಾದಲ್ಲಿ ತಲಾ 1 ಕೋಟಿ ರೂ. ಮೌಲ್ಯದ 74 ಬಾಂಡ್‌ಗಳನ್ನು ಖರೀದಿಸಲಾಗಿದೆ. ಬಾಂಡ್-ಖರೀದಿದಾರರ ಮಾಹಿತಿಯಲ್ಲಿರುವಂತೆ, ಅದೇ ಮೇ 10 ರಂದು ಮದನ್ ಲಾಲ್ ಪ್ರೈವೇಟ್ ಲಿಮಿಟೆಡ್ ತಲಾ 1 ಕೋಟಿ ರೂ. ಮೌಲ್ಯದ 75 ಬಾಂಡ್‌ಗಳನ್ನು ಖರೀದಿಸಿದೆ. ಜೊತೆಗೆ 10 ಲಕ್ಷ ರೂ. ಮೌಲ್ಯದ ಬಾಂಡ್‌ಗಳನ್ನು ಸಹ ಖರೀದಿಸಿದೆ. ಉಳಿದಂತೆ, ಮೇ 10 ರಂದು ಯಾವುದೇ ಕಂಪನಿ ಅಥವಾ ಕಂಪನಿಗಳ ಸಮೂಹವು 70 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿಲ್ಲ.
16 ಏಪ್ರಿಲ್: 50 ಕೋಟಿ ರೂ.
ಏಪ್ರಿಲ್ 16 ರಂದು ಕೋಲ್ಕತ್ತಾದಲ್ಲಿ ಬಿಜೆಪಿಗಾಗಿ 1 ಕೋಟಿ ರೂ. ಮೌಲ್ಯದ 50 ಬಾಂಡ್‌ಗಳನ್ನು ಖರೀದಿಸಲಾಗಿದೆ. ಬಾಂಡ್-ಖರೀದಿದಾರರ ಡೇಟಾ ಪ್ರಕಾರ, ಏಪ್ರಿಲ್ 16ರಂದು ಕೆವೆಂಟರ್ ಫುಡ್‌ಪಾರ್ಕ್ ಇನ್ಫ್ರಾ ಲಿಮಿಟೆಡ್ ತಲಾ 1 ಕೋಟಿ ರೂ. ಮೌಲ್ಯದ 55 ಬಾಂಡ್‌ಗಳನ್ನು ಖರೀದಿಸಿದೆ. ಆ ದಿನ ಬೇರೆ ಯಾವುದೇ ಕಂಪನಿ ಅಥವಾ ಕಂಪನಿಗಳ ಗುಂಪು ತಲಾ 1 ಕೋಟಿ ರೂ. ಮೌಲ್ಯದ 50 ಅಥವಾ ಅದಕ್ಕಿಂತ ಹೆಚ್ಚಿನ ಬಾಂಡ್‌ಗಳನ್ನು ಖರೀದಿಸಿಲ್ಲ.
ಈಗ, ತೃಣಮೂಲ ಕಾಂಗ್ರೆಸ್ ಕೂಡ ಕೋಲ್ಕತ್ತಾ ಮೂಲದ ಕಂಪನಿಗಳಿಂದ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಗಳನ್ನು ಸ್ವೀಕರಿಸುವ ಸಾಧ್ಯತೆಯಿದೆ. ಆದಾಗ್ಯೂ, ಏಪ್ರಿಲ್ 12 ರಿಂದ ಮೇ 22ರ ನಡುವೆ ಟಿಎಂಸಿ ಪಡೆದ ಒಟ್ಟು ದೇಣಿಗೆಗಳ ಮೊತ್ತ ಸುಮಾರು 51 ಕೋಟಿ ರೂ. ಮಾತ್ರ.
ಆದ್ದರಿಂದ, ಎಂಕೆಜೆ ಗುಂಪು ಖರೀದಿಸಿದ ಬೃಹತ್ ಪ್ರಮಾಣದ ಚುನಾವಣಾ ಬಾಂಡ್‌ಗಳು ಬಿಜೆಪಿಗೆ ದೇಣಿಗೆಯಾಗಿ ಹೋಗದೆ, ಬೇರೆಲ್ಲಿಗೋ ಹೋಗಿದೆ ಎನ್ನಲು ಸಾಧ್ಯವೇ ಇಲ್ಲ.
ಇನ್ಫೋಟೆಲ್ ಗ್ರೂಪ್
ಬಿಜೆಪಿ ಬಹಿರಂಗಪಡಿಸಿದ ಚುನಾವಣಾ ಬಾಂಡ್‌ಗಳ ಅಂಕಿಅಂಶಗಳ ಪ್ರಕಾರ – ಮೇ 9 ರಂದು, ನವದೆಹಲಿಯಲ್ಲಿ ತಲಾ 1 ಕೋಟಿ ರೂ. ಮೌಲ್ಯದ 50 ಬಾಂಡ್‌ಗಳನ್ನು ಪಕ್ಷಕ್ಕಾಗಿ ಖರೀದಿಸಲಾಗಿದೆ. ಮರುದಿನ (ಮೇ 10) ಅದನ್ನು ನಗದೀಕರಿಸಲಾಗಿದೆ.
ಮೇ 9-10 ರವರೆಗೆ ಬಾಂಡ್-ಖರೀದಿದಾರರ ಡೇಟಾವನ್ನು ಪರಿಶೀಲಿಸಿದರೆ, 1 ಕೋಟಿ ರೂ. ಮೌಲ್ಯದ 50 ಬಾಂಡ್‌ಗಳನ್ನು ಖರೀದಿಸಿದ ಯಾವುದೇ ಒಂದು ಕಂಪನಿ ಕಂಡುಬಂದಿಲ್ಲ. ಆದರೆ, ಮೇ 9 ರಂದು 50 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದ ಪರಸ್ಪರ ಸಂಬಂಧ ಹೊಂದಿರುವ ನಾಲ್ಕು ಸಂಸ್ಥೆಗಳು ಕಂಡುಬಂದಿವೆ. ಅವುಗಳೆಂದರೆ,
- NexG ಡಿವೈಸಸ್: ತಲಾ 1 ಕೋಟಿ ರೂ.ಗಳ 20 ಬಾಂಡ್‌ಗಳು
- ಇನ್ಫೋಟೆಲ್ ಬಿಸಿನೆಸ್ ಸೊಲ್ಯೂಷನ್ಸ್: ತಲಾ 1 ಕೋಟಿ ರೂ.ಗಳ 15 ಬಾಂಡ್‌ಗಳು
- ಇನ್ಫೋಟೆಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್: ತಲಾ 1 ಕೋಟಿ ರೂ.ಗಳ 10 ಬಾಂಡ್‌ಗಳು
- ಇನ್ಫೋಟೆಲ್ ಆಕ್ಸೆಸ್ ಎಂಟರ್‌ಪ್ರೈಸಸ್: ತಲಾ 1 ಕೋಟಿ ರೂ.ಗಳ 5 ಬಾಂಡ್‌ಗಳು
ಈ ನಾಲ್ಕು ಕಂಪನಿಗಳು ಒಂದೇ ವಿಳಾಸವನ್ನು ಹೊಂದಿವೆ – D-7 ಧವನ್‌ದೀಪ್ ಅಪಾರ್ಟ್‌ಮೆಂಟ್, 6, ಜಂತರ್ ಮಂತರ್ ರಸ್ತೆ, ನವದೆಹಲಿ – 110001.
ಅಲ್ಲದೆ, ಈ ಕಂಪನಿಗಳು ಸಾಮಾನ್ಯ ನಿರ್ದೇಶಕರನ್ನೂ ಹೊಂದಿದ್ದಾರೆ. ಉದಾಹರಣೆಗೆ, ಸುರೇಂದ್ರ ಲೂನಿಯಾ ಅವರನ್ನು NexG ಡಿವೈಸಸ್ ಮತ್ತು ಇನ್ಫೋಟೆಲ್ ಬಿಸಿನೆಸ್ ಸೊಲ್ಯೂಷನ್ಸ್ ನಿರ್ದೇಶಕರೆಂದು ಪಟ್ಟಿಮಾಡಲಾಗಿದೆ. ಕಮಲ್ ಕುಮಾರ್ ಶರ್ಮಾ ಅವರನ್ನು ಇನ್ಫೋಟೆಲ್ ಬಿಸಿನೆಸ್ ಸೊಲ್ಯೂಷನ್ಸ್ ಇನ್ಫೋಟೆಲ್ ಟೆಕ್ನಾಲಜೀಸ್ ಮತ್ತು ಇನ್ಫೋಟೆಲ್ ಆಕ್ಸೆಸ್ ಎಂಟರ್‌ಪ್ರೈಸಸ್‌ಗಳಲ್ಲಿ ನಿರ್ದೇಶಕರೆಂದು ನೇಮಕ ಮಾಡಲಾಗಿದೆ. ಶರ್ಮಾ ಅವರು NexG ಡಿವೈಸಸ್ ಜೊತೆಗೆ ಸಂಬಂಧ ಹೊಂದಿರುವ NexG ವೆಂಚರ್ಸ್ ಕಂಪನಿಗೂ ನಿರ್ದೇಶಕರಾಗಿದ್ದಾರೆ.
‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ನ ವರದಿಯ ಪ್ರಕಾರ, ಮುಖೇಶ್ ಅಂಬಾನಿ ಒಡೆತನದ ನೆಟ್‌ವರ್ಕ್ 18 ಗ್ರೂಪ್‌ನ ಇ-ಕಾಮರ್ಸ್ ಉದ್ಯಮವಾದ ‘ಹೋಮ್‌ಶಾಪ್18’ ಖರೀದಿಸಿದ ಸಣ್ಣ ಘಟಕಕ್ಕೆ ಲೂನಿಯಾ ನಿರ್ದೇಶಕರಾಗಿದ್ದರು.
5 ಇಂಟರ್‌ಲಿಂಕ್ಡ್ ಸಂಸ್ಥೆಗಳಿಂದ 58 ಕೋಟಿ ರೂ ಮೌಲ್ಯದ ಬಾಂಡ್ ಖರೀದಿ
ಬಿಜೆಪಿ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಮೇ 6 ರಂದು ಮುಂಬೈನಲ್ಲಿ ಬಿಜೆಪಿಗಾಗಿ ತಲಾ 1 ಕೋಟಿ ರೂ. ಮೌಲ್ಯದ 58 ಬಾಂಡ್‌ಗಳನ್ನು ಖರೀದಿಸಲಾಗಿದೆ.
ಈ ಮಾಹಿತಿ ಮತ್ತು ಚುನಾವಣಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಬಾಂಡ್ ಖರೀದಿದಾರರ ಮಾಹಿತಿಯನ್ನು ತಾಳೆ ಹಾಕಲಾಗಿದೆ. ಮೇ 6ರಂದು ಬಿಜೆಪಿ ಹೇಳಿರುವ ಮೊತ್ತದ ಬಾಂಡ್‌ಗಳನ್ನು ಖರೀದಿಸಿದ ಯಾವುದೇ ಒಂದು ಕಂಪನಿಯಿಲ್ಲ. ಆದರೆ, ಇಂಟರ್‌ಲಿಂಕ್ ಹೊಂದಿರುವ ಐದು ಕಂಪನಿಗಳು ತಲಾ 1 ಕೋಟಿ ರೂ. ಮೌಲ್ಯದ 58 ಬಾಂಡ್‌ಗಳನ್ನು ಖರೀದಿಸಿರುವುದು ಕಂಡುಬಂದಿದೆ. ಆ ಕಂಪನಿಗಳೆಂದರೆ,
- ಇಶಾನ್ ಟೆಕ್ನಿಕಲ್ ಪ್ಲಾಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ – ತಲಾ 1 ಕೋಟಿ ರೂ.ಗಳ 16 ಬಾಂಡ್‌ಗಳು
- ಟ್ಯಾಲೆಂಟೊ ಟೆಕ್ನಿಕಲ್ ಪ್ಲಾಂಟ್ ಪ್ರೈವೇಟ್ ಲಿಮಿಟೆಡ್ – ತಲಾ 1 ಕೋಟಿ ರೂ.ಗಳ 12 ಬಾಂಡ್‌ಗಳು
- ರಿಯಲ್ ಟೆಕ್ನಿಕಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ – ತಲಾ 1 ಕೋಟಿ ರೂ.ಗಳ 11 ಬಾಂಡ್‌ಗಳು
- ಜೈ ಭಾರತ್ ಟೆಕ್ನಿಕಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ – ತಲಾ 1 ಕೋಟಿ ರೂ.ಗಳ 10 ಬಾಂಡ್‌ಗಳು
- ಇಂಡಸ್ಟ್ರಿಯಲ್ ಟೆಕ್ನೋ ಮ್ಯಾನ್‌ಪವರ್ ಸಪ್ಲೈ ಅಂಡ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ – ತಲಾ 1 ಕೋಟಿ ರೂ.ಗಳ 9 ಬಾಂಡ್‌ಗಳು.
ಈ ಸಂಸ್ಥೆಗಳು ಕೂಡ ಒಂದೇ ವಿಳಾಸವನ್ನು ಹೊಂದಿವೆ – ನೆಲ ಮಹಡಿ, ಪ್ರಿಯಂವದಾ ಕಟ್ಟಡ, ಜಿಂದಾಲ್ ಕಾಲೋನಿ, VPO ವಸಿಂದ್, ತಾಲ್ ಶಹಾಪುರ ವಸಿಂದ್ ಥಾಣೆ, ಮಹಾರಾಷ್ಟ್ರ 421604.
ಅಲ್ಲದೆ, ಎರಡು ಸಂಸ್ಥೆಗಳ ಕೊಠಡಿ ಸಂಖ್ಯೆ 77 ಆಗಿದ್ದರೆ, ಉಳಿದ ಮೂರು ಸಂಸ್ಥೆಗಳ ಕೊಠಡಿಗಳ ಸಂಖ್ಯೆ 74 ಆಗಿದೆ. ಅಂದರೆ, ಈ ಐದು ಸಂಸ್ಥೆಗಳು ಎರಡೇ ಕೊಠಡಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಸುನಿಲ್ ನಾಯಕ್ ಶಂಕರ್ ಎಂಬವರು ಇಶಾನ್, ಟ್ಯಾಲೆಂಟೊ, ಜೈ ಭಾರತ್ ಮತ್ತು ಇಂಡಸ್ಟ್ರಿಯಲ್ ಟೆಕ್ನೋ ಮ್ಯಾನ್‌ಪವರ್ ಸಪ್ಲೈ ಸಂಸ್ಥೆಗಳಲ್ಲಿ ನಿರ್ದೇಶಕರಾಗಿದ್ದಾರೆ. ಶ್ರೀಕಾಂತ್ ನಾರಾಯಣ ಶೆಟ್ಟಿ ಎಂಬವರು ರಿಯಲ್ ಟೆಕ್ನಿಕಲ್ ಸೊಲ್ಯೂಷನ್ಸ್ ಮತ್ತು ಟ್ಯಾಲೆಂಟೊದಲ್ಲಿ ನಿರ್ದೇಶಕರಾಗಿದ್ದಾರೆ. ಅಜಯ್ ಕಾಂತ್ ಝಾ ಅವರು ರಿಯಲ್ ಟೆಕ್ನಿಕಲ್ ಸೊಲ್ಯೂಷನ್ಸ್ ಮತ್ತು ಇಶಾನ್ ಟೆಕ್ನಿಕಲ್‌ನ ನಿರ್ದೇಶಕರೆಂದು ಹೆಸರಿಸಲಾಗಿದೆ. ರಾಜೇಶ್ ಕುಮಾರ್ ಶರ್ಮಾ ಇಂಡಸ್ಟ್ರಿಯಲ್ ಟೆಕ್ನೋ ಮತ್ತು ಜೈ ಭಾರತ್‌ನಲ್ಲಿ ನಿರ್ದೇಶಕರೆಂದು ಗುರುತಿಸಲಾಗಿದೆ.
2013ರ ಜನವರಿಯಲ್ಲಿ ಪ್ರಕಟವಾಗಿದ್ದ ಬಿಸಿನೆಸ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ, ಈ ಐದು ಸಂಸ್ಥೆಗಳ ಪೈಕಿ ಮೂರು ಸಂಸ್ಥೆಗಳನ್ನು ಸಿಬಿಐ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಹೆಸರಿಸಲಾಗಿದೆ. 2013ರಲ್ಲಿ ಈ ಭ್ರಷ್ಟಾಚಾರ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರರ ಹೆಸರನ್ನೂ ಕೂಡ ದಾಖಲಿಸಲಾಗಿತ್ತು. ಆದರೆ, ಈ ಪ್ರಕರಣ ಇನ್ನೂ ತನಿಖೆಯಲ್ಲಿಯೇ ಇದೆ.
ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್
ಬಿಜೆಪಿ ನೀಡಿರುವ ತನ್ನ ದೇಣಿಗೆದಾತರ ಪಟ್ಟಿಯಲ್ಲಿ – ಏಪ್ರಿಲ್ 12 ರಂದು ಹೈದರಾಬಾದ್‌ನಲ್ಲಿ ತಲಾ 1 ಕೋಟಿ ರೂ.ಗಳ 45 ಬಾಂಡ್‌ಗಳ ಖರೀದಿಸಲಾಗಿದೆ ಮತ್ತು ಅದನ್ನು ಏಪ್ರಿಲ್ 15 ಮತ್ತು 16ರಂದು ನಗದೀಕರಿಸಲಾಗಿದೆ ಎಂದು ಹೇಳಿದೆ.
ಬಿಜೆಪಿ ನೀಡಿದ ಪಟ್ಟಿ ಮತ್ತು ಎಸ್‌ಬಿಐ ಒದಗಿಸಿದ್ದ ಮಾಹಿತಿಯಲ್ಲಿ ಏಪ್ರಿಲ್ 12, 15 ಮತ್ತು 16ರಂದು ನಡೆದಿರುವ ವಹಿವಾಟನ್ನು ತಾಳೆ ಹಾಕಲಾಗಿದೆ. ಈ ಅವಧಿಯಲ್ಲಿ ಅಷ್ಟು ಮೊತ್ತದ ಬಾಂಡ್‌ಗಳನ್ನು ಖರೀದಿಸಿದ ಹೈದರಾಬಾದ್‌ನ ಏಕೈಕ ಸಂಸ್ಥೆ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮಾತ್ರ. ಇದು ಏಪ್ರಿಲ್ 12 ರಂದು ತಲಾ 1 ಕೋಟಿ ರೂ.ಗಳ 50 ಬಾಂಡ್‌ಗಳನ್ನು ಖರೀದಿಸಿದೆ. ಈ ಬಾಂಡ್‌ಗಳಲ್ಲಿ ಬಹುಪಾಲು ಬಿಜೆಪಿ ಪಾಲಾಗುವ ಸಾಧ್ಯತೆ ಇದೆ.
ಇದಲ್ಲದೆ, ಮೇ 9 ರಂದು ಹೈದರಾಬಾದ್‌ನಲ್ಲಿ 1 ಕೋಟಿ ಮೌಲ್ಯದ 35 ಬಾಂಡ್‌ಗಳನ್ನು ತನಗಾಗಿ ಖರೀದಿಸಲಾಗಿದೆ. ಅದನ್ನು ಮೇ 9 ಮತ್ತು 10ರಂದು ನಗದೀಕರಿಸಲಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ.
ಆ ಮಾಹಿತಿಯನ್ನು ಎಸ್‌ಬಿಐ ಮಾಹಿತಿಯೊಂದಿಗೆ ತಾಳೆ ಹಾಕಿದಾಗ, ಮೇ 9ರಂದು ಮೇಘಾ ಇಂಜಿನಿಯರಿಂಗ್ ಕಂಪನಿಯು ತಲಾ 1 ಕೋಟಿ ರೂ.ಗಳ 35 ಬಾಂಡ್‌ಗಳನ್ನು ಖರೀದಿಸಿದೆ. ಅಲ್ಲದೆ, ಎಸ್‌ಬಿಐ ಒದಗಿಸಿರುವ ಬಾಂಡ್ ಖರೀದಿದಾರರ ಪಟ್ಟಿಯಲ್ಲಿ ಹೈದರಾಬಾದ್ ಮೂಲದ ಏಕೈಕ ಕಂಪನಿ ಕೂಡ ಇದೇ ಆಗಿದೆ.
ಒಟ್ಟಾರೆಯಾಗಿ, ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯು ಏಪ್ರಿಲ್ 12 ರಿಂದ ಮೇ 22 ರವರೆಗೆ 125 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ.
ಇನ್ನು, ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕೂಡ ಹೈದರಾಬಾದ್ ಮೂಲದ ಕಂಪನಿಗಳಿಂದ ಸ್ವಲ್ಪ ದೇಣಿಗೆ ಪಡೆದಿದೆ. ಆದಾಗ್ಯೂ, 2019ರ ಏಪ್ರಿಲ್ 12ರಿಂದ 2019ರ ಮೇ 22ರವರೆಗೆ ಬಿಆರ್‌ಎಸ್ ಪಡೆದಿರುವ ಚುನಾವಣಾ ಬಾಂಡ್‌ಗಳ ಒಟ್ಟು ಮೊತ್ತ 37.5 ಕೋಟಿ ರೂ. ಮಾತ್ರ. ಇದು ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯು ಏಪ್ರಿಲ್ 12 ರಂದು ಒಂದೇ ದಿನ ನೀಡಿದ ದೇಣಿಗೆಯೇ 50 ಕೋಟಿ ರೂ. ಆಗಿದ್ದು, ಬಿಆರ್‌ಎಸ್ ಪಡೆದ ಮೊತ್ತ ಈ ಮೊತ್ತಕ್ಕಿಂತ ಅತೀ ಕಡಿಮೆಯಾಗಿದೆ.
ಆದ್ದರಿಂದ, ಮೇಘಾ ಕಂಪನಿಯು ಬಿಆರ್‌ಎಸ್‌ಗೆ ಉದಾರವಾಗಿ ದೇಣಿಗೆ ನೀಡಿದ್ದರೂ, ಕಂಪನಿಯ ಸಿಂಹಪಾಲು ದೇಣಿಗೆಯು ಬೇರೆ ಪಕ್ಷಕ್ಕೆ ಹೋಗಿದೆ.
ಇನ್ನೆರಡು ಆಸಕ್ತಿ ದಾಯದ ಖರೀದಿಗಳಿವೆ
ಬಿಜೆಪಿ ಹೇಳಿಕೊಂಡಿರುವಂತೆ, ಏಪ್ರಿಲ್ 12 ರಂದು ಮುಂಬೈನಲ್ಲಿ 50 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಎರಡು ಬಾಂಡ್‌ಗಳನ್ನು ಪಕ್ಷಕ್ಕಾಗಿ ಖರೀದಿಸಲಾಗಿದೆ. ಒಂದು ಮೊತ್ತ, 50 ಕೋಟಿ ರೂ. ಮತ್ತು ಇನ್ನೊಂದರ ಮೊತ್ತ, 79 ಕೋಟಿ ರೂ. ಆಗಿದೆ.
ಆ ದಿನದಂದು ತಲಾ 1 ಕೋಟಿ ರೂ.ಗಳ 50 ಅಥವಾ ಅದಕ್ಕಿಂತ ಹೆಚ್ಚು ಬಾಂಡ್‌ಗಳನ್ನು ಖರೀದಿಸಿದ ಎರಡು ಗುಂಪುಗಳಿವೆ. ಅವುಗಳೆಂದರೆ,
- ಆದಿತ್ಯ ಬಿರ್ಲಾ ಗ್ರೂಪ್
ಈ ಗುಂಪಿನ ಭಾಗವಾಗಿರುವ, ಎಸ್ಸೆಲ್ ಮೈನಿಂಗ್ ಕಂಪನಿಯು ತಲಾ 1 ಕೋಟಿ ರೂ.ಗಳ 49 ಬಾಂಡ್‌ಗಳನ್ನು ಖರೀದಿಸಿದೆ.
ಗ್ರಾಸಿಮ್ ಇಂಡಸ್ಟ್ರೀಸ್ ಕಂಪನಿಯು ತಲಾ 1 ಕೋಟಿ ರೂ.ಗಳ 20 ಬಾಂಡ್‌ಗಳನ್ನು ಖರೀದಿ ಮಾಡಿದೆ.
- ಪಿರಮಲ್ ಗ್ರೂಪ್
ಈ ಗ್ರೂಪ್‌ನ ಭಾಗವಾಗಿರುವ PHL ಫಿನ್‌ವೆಸ್ಟ್ ಕಂಪನಿ 40 ಬಾಂಡ್‌ಗಳು, ಪಿರಮಲ್ ಕ್ಯಾಪಿಟಲ್ ಮತ್ತು ಹೌಸಿಂಗ್ ಕಂಪನಿ 10 ಬಾಂಡ್‌ಗಳು ಮತ್ತು ಪಿರಮಲ್ ಎಂಟರ್‌ಪ್ರೈಸಸ್‌ನ 10 ಬಾಂಡ್‌ಗಳನ್ನು ಖರೀದಿಸಿದೆ.
ಈ ಎರಡೂ ಗ್ರೂಪ್‌ಗಳಲ್ಲಿ ಪಿರಮಲ್ ಗ್ರೂಪ್ ಕಂಪನಿ ಮಾತ್ರ ಮುಂಬೈನಲ್ಲಿ ತನ್ನ ಕಚೇರಿ ಇದೆಯೆಂದು ಗುರುತಿಸಿದೆ. ಆದಾಗ್ಯೂ, ಈ ಎಲ್ಲ ಸಂಸ್ಥೆಗಳು 129 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿವೆ. ಅಷ್ಟೇ ಮೊತ್ತದ ಬಾಂಡ್‌ಗಳನ್ನು ಬಿಜೆಪಿ ಪಡೆದಿದೆ.
ಆದರೂ, ಬಿಜೆಪಿಗಾಗಿ ಮುಂಬೈನಲ್ಲಿ ಏಪ್ರಿಲ್ 12ರಂದು ತಲಾ 1 ಕೋಟಿ ರೂ.ಗಳ 50 ಬಾಂಡ್‌ಗಳನ್ನು ಖರೀದಿಸಿದ ಸಂಸ್ಥೆ ಯಾವುದು ಹಾಗೂ 79 ಬಾಂಡ್‌ಗಳನ್ನು ಖರೀದಿಸಿದ ಮತ್ತೊಂದಷ್ಟು ಸಂಸ್ಥೆಗಳು ಯಾವುವು ಎಂದು ನಿರ್ಣಾಯಕವಾಗಿ ಗುರುತಿಸಲು ಸಾಧ್ಯವಾಗಿಲ್ಲ.
ಮೇಲಿನ ಎಲ್ಲ ಕಂಪನಿಗಳಿಂದ ಪ್ರತಿಕ್ರಿಯೆ ಕೇಳಿ ‘ದಿ ಕ್ವಿಂಟ್’ ಪತ್ರ ಬರೆದಿದೆ. ಆದರೆ, ಯಾವುದೇ ಕಂಪನಿಯು ಇನ್ನೂ ಪ್ರತಿಕ್ರಿಯಿಸಿಲ್ಲ.
ಬಿಜೆಪಿ ಪ್ರತಿಕ್ರಿಯೆ
ಮೇಲಿನ ಡೇಟಾವು ಬಿಜೆಪಿ ಬಹಿರಂಗಪಡಿಸಿದ ದಿನಾಂಕಗಳು ಮತ್ತು ಅಂಕಿಅಂಶಗಳು ಹಾಗೂ ಎಸ್‌ಬಿಐ ಒದಗಿಸಿ, ಚುನಾವಣಾ ಆಯೋಗ ಪ್ರಕಟಿಸಿದ ಚುನಾವಣಾ ಬಾಂಡ್ ಖರೀದಿದಾರರ ಪಟ್ಟಿಯು ನಿಖರವಾಗಿದೆ ಎಂಬ ಪ್ರಮೇಯವನ್ನು ಆಧರಿಸಿದೆ.
ಮುಚ್ಚಿದ ಲಕೋಟೆಯಲ್ಲಿ ನೀಡಿರುವ ದಾಖಲೆಯಲ್ಲಿ ಬಿಜೆಪಿಯ ನಿಲುವು ಹೀಗಿದೆ.
“ಅನ್ವಯವಾಗುವ ಕಾನೂನುಗಳ ಪ್ರಕಾರ, ಚುನಾವಣಾ ಬಾಂಡ್‌ಗಳ ದಾನಿಗಳ ಹೆಸರುಗಳು ಮತ್ತು ವಿವರಗಳನ್ನು ಪಕ್ಷವು ನಿರ್ವಹಿಸುವ ಅಗತ್ಯವಿಲ್ಲ. ಪಕ್ಷವು ಈ ವಿವರಗಳನ್ನು ನಿರ್ವಹಿಸಿಲ್ಲ” ಎಂದು ಹೇಳಿದೆ.
ಆದಾಯ ತೆರಿಗೆ ಕಾಯಿದೆ-1961ರಲ್ಲಿ ಚುನಾವಣಾ ಬಾಂಡ್‌ಗಳ ಹೊರತಾಗಿಯೂ ಸ್ವೀಕರಿಸಿದ ದೇಣಿಗೆಗಳ ವಿವರಗಳ ಬಗ್ಗೆ ಯಾವುದೇ ವಿವರಗಳನ್ನು ನಿರ್ವಹಿಸುವ ಅಗತ್ಯವಿಲ್ಲ ಎಂಬುದನ್ನು ಬಿಜೆಪಿ ಬಳಸಿಕೊಂಡಿದೆ.
ಮೂಲ: ದಿ ಕ್ವಿಂಟ್