ಈ ದಿನ ಸಂಪಾದಕೀಯ | ಹೇಳುವುದು ಹಬ್ಬ, ಮಾಡುವುದು ಯುದ್ಧ, ಸಾಯುವುದು ಸೈನಿಕರು

Date:

ಹಬ್ಬಗಳು ಎಲ್ಲ ಕಾಲಕ್ಕೂ ಉಳ್ಳವರ ಸಂಭ್ರಮ-ಸಂತೋಷವನ್ನು ಹೆಚ್ಚು ಮಾಡುತ್ತವೆ. ಬಡವರನ್ನು ನೋಯಿಸಿ ನಲುಗುವಂತೆ ಮಾಡುತ್ತವೆ. ಹಾಗೆಯೇ ಪ್ರಜಾಪ್ರಭುತ್ವ ವ್ಯವಸ್ಥೆಯ ಹಬ್ಬವಾದ ಚುನಾವಣೆ ಕೂಡ ಹಣ, ಅಧಿಕಾರವಿರುವವರ ಆರ್ಭಟಕ್ಕೆ, ಅಟ್ಟಹಾಸಕ್ಕೆ ಕುಮ್ಮಕ್ಕು ಕೊಡುತ್ತದೆ. ಪ್ರಜೆಗಳನ್ನು ಪಲ್ಟಿ ಹೊಡೆಸುತ್ತದೆ. ಹಾಗಾಗಿ ಭಾರತದ ಪ್ರಜಾಪ್ರಭುತ್ವದ ಹಬ್ಬಕ್ಕೆ ಚಿಕಿತ್ಸೆಯ ಅಗತ್ಯವಿದೆ.

ಇದು ಚುನಾವಣಾ ಕಾಲ. ಆಯೋಗಕ್ಕೆ, ಆಡಳಿತಾಂಗಕ್ಕೆ ಜವಾಬ್ದಾರಿಯ ಜಟಿಲ ಕಾಲ. ರಾಜಕೀಯ ಪಕ್ಷಗಳಿಗೆ ಬಿರುಸಿನ ಚಟುವಟಿಕೆಗಳ ಜಂಜಾಟದ ಕಾಲ. ಅಭ್ಯರ್ಥಿಗಳು ಮತದಾರರನ್ನು ಮುಖಾಮುಖಿಯಾಗುವ ಕಾಲ. ಇಡೀ ದೇಶವೇ ಚರ್ಚೆಗೆ ಒಡ್ಡಿಕೊಳ್ಳುವ, ಜನಜೀವನದ ಮೇಲೆ ಪರಿಣಾಮ ಬೀರುವ ಕಾಲ.

ಸಂವಿಧಾನದ 324 ವಿಧಿಯಡಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ ಚುನಾವಣಾ ಆಯೋಗದ ಮಹತ್ವವನ್ನು ಸಾರಿದ್ದಾರೆ. ಇದರ ಮೂಲಕ ಚುನಾವಣಾ ಆಯೋಗಕ್ಕೆ ನೀಡಿರುವ ವಿಶೇಷವಾದ ಅಧಿಕಾರದಿಂದಾಗಿ ದೇಶದಲ್ಲಿ ಶಾಂತಿ ಮತ್ತು ಶಿಸ್ತುಬದ್ಧ ರೀತಿಯಲ್ಲಿ, ನಿಷ್ಪಕ್ಷಪಾತ ವಿಧಾನದಲ್ಲಿ ಚುನಾವಣೆ ನಡೆಸಲು ಸಾಧ್ಯವಾಗಿಸಿದ್ದಾರೆ. ಸರ್ವಕಾಲಕ್ಕೂ ಸಲ್ಲುವ ಮಾದರಿ ಸಂವಿಧಾನವನ್ನು ರೂಪಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಶ್ರಮಿಸಿದ್ದಾರೆ. ಕಟ್ಟ ಕಡೆಯ ವ್ಯಕ್ತಿಗೂ ಬೆಲೆ ಬರುವಂತಹ ಮತದಾನದ ಹಕ್ಕನ್ನು ಕಲ್ಪಿಸಿಕೊಟ್ಟಿದ್ದಾರೆ. ಕಲ್ಪಿಸಿಕೊಟ್ಟಿದ್ದಷ್ಟೇ ಅಲ್ಲ, ಚುನಾವಣೆ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಗೊಳ್ಳಬೇಕು ಎಂದು ಕನಸು ಕಂಡಿದ್ದರು.

ಆದರೆ ಅಂಬೇಡ್ಕರ್ ಕಂಡ ಕನಸು ನನಸಾಯಿತೇ ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ. ಅಲ್ಲಿಂದ ಇಲ್ಲಿಯವರೆಗೆ ಬಂದ ರಾಜಕೀಯ ಪಕ್ಷಗಳು, ನಾಯಕರು ಹಾಗೂ ಕಾಲಕಾಲಕ್ಕೆ ನಡೆದ ಚುನಾವಣೆಗಳು ಪ್ರಜಾಪ್ರಭುತ್ವವನ್ನು ಸಡಿಲಗೊಳಿಸುತ್ತಲೇ ಸಾಗಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಮ್ಮದು ಹಬ್ಬಗಳ ದೇಶ. ಹಬ್ಬಗಳು ಸದಾಚಾರ, ಸಂಪ್ರದಾಯಗಳಿಗಾಗಿ ಆಚರಿಸಲ್ಪಟ್ಟರೂ; ಸಂಭ್ರಮ, ಮೋಜು ಮತ್ತು ದುಂದುವೆಚ್ಚಗಳ ಮಗ್ಗುಲನ್ನೂ ಪರಿಚಯಿಸುತ್ತವೆ. ಜನರಿಗೆ ಸಮಸ್ಯೆಗಳನ್ನು ಸೃಷ್ಟಿಸಿ, ಜೀವನದ ಮೇಲೆ ಪರಿಣಾಮವನ್ನೂ ಬೀರುತ್ತವೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯನ್ನು ಕೂಡ ಹಬ್ಬ ಎಂದೇ ವ್ಯಾಖ್ಯಾನಿಸಲಾಗುತ್ತದೆ. ದೇಶದ ಚುನಾವಣೆಗಳು ಕೂಡ ಹಬ್ಬಗಳಂತೆಯೇ ವರ್ಷಪೂರ್ತಿ ನಡೆಯುತ್ತವೆ. ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳಿಗೆ ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳು ವರ್ಷಪೂರ್ತಿ ನಡೆಯುವ ಹಬ್ಬಗಳೇ ಆಗಿವೆ. ಹಣವಂತರಿಗೆ ಹಬ್ಬಗಳು ಸಮಸ್ಯೆಯಲ್ಲ. ಹಾಗೆಯೇ ಅಧಿಕಾರ ಮತ್ತು ಹಣ ಬಲವಿರುವ ರಾಜಕೀಯ ಪಕ್ಷಗಳಿಗೆ ಚುನಾವಣೆ ಎದುರಿಸುವುದು ಕಷ್ಟವಲ್ಲ.

ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ, ವಿವಿಧ ಮೂಲಗಳಿಂದ ಅಪಾರ ಸಂಪತ್ತನ್ನು ಸಂಗ್ರಹಿಸಿದೆ. ಬೆಂಬಲಕ್ಕೆ ಆರೆಸ್ಸೆಸ್ ಎಂಬ ಅಕ್ಷೋಹಿಣಿ ಸೈನ್ಯವಿದೆ. ಗೆಲುವಿಗೆ ಶ್ರಮಿಸುವ ಗೋದಿ ಮೀಡಿಯಾ ಇದೆ. ಅದರಲ್ಲೂ, ಕಳೆದ ಐದು ವರ್ಷಗಳಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಜಾರಿಗೆ ತಂದ ಬಿಜೆಪಿ, ಆ ಮೂಲವೊಂದರಿಂದಲೇ 6,987 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ತನ್ನ ಖಜಾನೆಗೆ ತುಂಬಿಕೊಂಡಿದೆ.

ಅತಿ ಹೆಚ್ಚು ಸಂಪನ್ಮೂಲ ಕ್ರೋಡೀಕರಿಸಿರುವ ಬಿಜೆಪಿಗೆ ಚುನಾವಣಾ ಪ್ರಚಾರಕಾರ್ಯಕ್ಕೆ ಒಡ್ಡಿಕೊಳ್ಳುವುದು, ಅಭ್ಯರ್ಥಿಗಳಿಗೆ ಹಣದ ಕೊರತೆಯಾಗದಂತೆ ನೋಡಿಕೊಳ್ಳುವುದು, ಚುನಾವಣಾ ಪ್ರಕ್ರಿಯೆ ಎಷ್ಟೇ ದೀರ್ಘಾವಧಿಯಾದರೂ ನಿಭಾಯಿಸುವುದು ಸಮಸ್ಯೆಯೇ ಅಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕೆಂಬ ವಾದವಿದೆ. ಆದರೆ ಈ ಅವಕಾಶ ಮತ್ತು ಅನುಕೂಲಗಳಿಂದ ಪ್ರತಿಪಕ್ಷಗಳು ವಂಚಿತವಾಗಿವೆ. ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ 6,987 ಕೋಟಿ ಸಿಕ್ಕರೆ, 75 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್‌ಗೆ ಕೇವಲ 1,334 ಕೋಟಿ ಸಿಕ್ಕಿದೆ. ಇನ್ನು ಸಣ್ಣ ಪುಟ್ಟ ಪಕ್ಷಗಳ ಆರ್ಥಿಕ ಸ್ಥಿತಿಯಂತೂ ಹೇಳತೀರದಾಗಿದೆ.

ಈ ಬಾರಿ 7 ಹಂತಗಳಲ್ಲಿ 46 ದಿನಗಳ ಕಾಲ ಮತದಾನ ನಡೆಯಲಿದ್ದು, ಒಟ್ಟಾರೆ ಎಂಬತ್ತು ದಿನಗಳ ಕಾಲ ಚುನಾವಣಾ ಪ್ರಕ್ರಿಯೆ ವಿಸ್ತರಿಸಿಕೊಂಡಿದೆ. ಈ ಎಂಬತ್ತು ದಿನಗಳ ಕಾಲ ಚುನಾವಣಾ ಪ್ರಕ್ರಿಯೆಯನ್ನು ನಿಭಾಯಿಸುವುದು ವಿರೋಧಪಕ್ಷಗಳಿಗೆ ಕಡು ಕಷ್ಟದ ಕೆಲಸವಾಗಿದೆ. ಇದು ಫಲಿತಾಂಶದ ಮೇಲೆ ಭಾರೀ ಪರಿಣಾಮ ಬೀರಲಿದೆ.

ಸದ್ಯದ ಸಂದರ್ಭದಲ್ಲಿ, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಚುನಾವಣಾ ವ್ಯವಸ್ಥೆ ಮತ್ತು ಪ್ರಕ್ರಿಯೆ ಹೆಚ್ಚು ಶಾಂತಿ ಮತ್ತು ಶಿಸ್ತಿನಿಂದ ಕೂಡಿದೆ, ನಿಜ. ಆದರೆ ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ಈ ಶಾಂತಿ ಮತ್ತು ಶಿಸ್ತಿಗೆ ಧಕ್ಕೆ ಬಂದಿದೆ. ಚುನಾವಣೆ ಎಂದರೆ ಯುದ್ಧವಾಗಿದೆ. ಮತದಾರರನ್ನು ಸೆಳೆಯಲು ಆಸೆ-ಆಮಿಷಗಳನ್ನು ಒಡ್ಡಲಾಗುತ್ತಿದೆ. ಇದಕ್ಕಿಂತಲೂ ಹೆಚ್ಚಾಗಿ, ಭಾವನಾತ್ಮಕ ನೆಲೆಯಲ್ಲಿ, ದೇವರು, ಧರ್ಮ, ದೇಶಭಕ್ತಿಗಳ ಮರೆಯಲ್ಲಿ ಮತದಾರರ ಮೆದುಳನ್ನು ಅಪಹರಿಸುತ್ತಿರುವುದು ಅಪಾಯಕಾರಿಯಾಗಿದೆ.

ರಾಜಕೀಯ ನಾಯಕರು ತತ್ವ-ಸಿದ್ಧಾಂತಗಳ ಮರೆಯಲ್ಲಿ, ಪ್ರಜಾಪ್ರಭುತ್ವದ ರೀತಿ-ನೀತಿಗಳಡಿಯಲ್ಲಿ ಮತ ಬೇಡುವುದು ಹಿನ್ನೆಲೆಗೆ ಸರಿದಿದೆ. ಭಾವನಾತ್ಮಕವಾಗಿ ಮತದಾರರನ್ನು ಸೆಳೆಯುವುದು, ಪ್ರಚೋದಿಸುವುದು, ಪ್ರೇರೇಪಿಸುವುದು ಹೆಚ್ಚಾಗುತ್ತಿದೆ. ಪಕ್ಷ-ನಾಯಕರ ಪರವಾಗಿ ಹೊಡೆದಾಡಿ-ಬಡಿದಾಡಿ ಸೈನಿಕರು ಸಾಯುವುದು ಸಾಮಾನ್ಯವಾಗಿದೆ.

ಹಬ್ಬಗಳು ಎಲ್ಲ ಕಾಲಕ್ಕೂ ಉಳ್ಳವರ ಸಂಭ್ರಮ-ಸಂತೋಷವನ್ನು ಹೆಚ್ಚು ಮಾಡುತ್ತವೆ. ಬಡವರನ್ನು ನೋಯಿಸಿ ನಲುಗುವಂತೆ ಮಾಡುತ್ತವೆ. ಹಾಗೆಯೇ ಪ್ರಜಾಪ್ರಭುತ್ವ ವ್ಯವಸ್ಥೆಯ ಹಬ್ಬವಾದ ಚುನಾವಣೆ ಕೂಡ ಹಣ, ಅಧಿಕಾರವಿರುವವರ ಆರ್ಭಟಕ್ಕೆ, ಅಟ್ಟಹಾಸಕ್ಕೆ ಕುಮ್ಮಕ್ಕು ಕೊಡುತ್ತದೆ. ಪ್ರಜೆಗಳನ್ನು ಪಲ್ಟಿ ಹೊಡೆಸುತ್ತದೆ. ಹಾಗಾಗಿ ಭಾರತದ ಪ್ರಜಾಪ್ರಭುತ್ವದ ಹಬ್ಬಕ್ಕೆ ಚಿಕಿತ್ಸೆಯ ಅಗತ್ಯವಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ

ಈಗ ಮತ್ತೊಮ್ಮೆ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸದೃಢ ಸ್ಥಿತಿಯಲ್ಲಿರುವ; ಬಹುಸಂಖ್ಯಾತರು ಮತ್ತು ಬಲಾಢ್ಯರು...

ಈ ದಿನ ಸಂಪಾದಕೀಯ | ಮೂರನೇ ಬಾರಿಗೆ ಪ್ರಧಾನಿಯಾದ ಮೋದಿ, ಹೊಸ ಮನುಷ್ಯರಾಗುವರೇ?

ಯಾರಿಗೂ ಸಿಗದ ಅಪೂರ್ವ ಅವಕಾಶ ಮೋದಿಯವರಿಗೆ ಮತ್ತೊಮ್ಮೆ ಸಿಕ್ಕಿದೆ. ಮತ್ತೊಮ್ಮೆ ಬಾಬಾ...

ಈ ದಿನ ಸಂಪಾದಕೀಯ | ದುಬಾರಿ ಚುನಾವಣೆಗಳು, ಸಾಮಾನ್ಯರ ಸ್ಪರ್ಧೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ

ದುಬಾರಿ ಚುನಾವಣೆಗಳು ಒಟ್ಟು ವ್ಯವಸ್ಥೆಯನ್ನು ಭ್ರಷ್ಟಗೊಳಿಸುತ್ತಲೇ ಸಾಗಿವೆ. ಇಂತಹ ವ್ಯವಸ್ಥೆಯಲ್ಲಿ ಸರಳರು,...