ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಹಾಸನ ಜಿಲ್ಲೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಭವಾನಿ ರೇವಣ್ಣಗೆ ಜೆಡಿಎಸ್ ಟಿಕೆಟ್ ನೀಡುವ ವಿಚಾರ ರಾಜ್ಯದ ಚಿತ್ತವನ್ನು ಸೆಳೆದಿತ್ತು. ಇದೀಗ, ಆ ಚರ್ಚೆ ತೆರೆಮರೆಗೆ ಸರಿದಿದೆ. ಇದೇ ಸಮಯದಲ್ಲಿ ಹೊಳೆನರಸೀಪುರ ಕ್ಷೇತ್ರ ಚುನಾವಣಾ ರಂಗ ಮುನ್ನೆಲೆಗೆ ಬಂದಿದೆ. ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಪೈಪೋಟಿ ನೀಡಲು ಕಾಂಗ್ರೆಸ್ ಮುಂದಾಗಿದೆ.
ಜೆಡಿಎಸ್ ಭದ್ರಕೋಟೆಯಲ್ಲಿ ರೇವಣ್ಣರನ್ನು ಕಟ್ಟಿಹಾಕಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಎಂಎಲ್‌ಸಿ ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ, ನಡೆದ ರ್‍ಯಾಲಿಯಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.

ನಾಮಪತ್ರ ಸಲ್ಲಿಸಿದ ಬಳಿಕ ಮಾತಾಡಿದ ಶೇಯಸ್ ಪಟೇಲ್, “ಹೊಳೆನರಸೀಪುರ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣವಿದೆ. ಆದರೆ, ಸ್ಥಳೀಯ ಶಾಸಕರ ದುರ್ನಡತೆ, ದುರಾಢಳಿತದಿಂದಾಗಿ ಜನರು ಬದಲಾವಣೆ ಬಯಸಿದ್ದಾರೆ. ಕ್ಷೇತ್ರದ ಜನರು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದಾರೆ. 1999ರಲ್ಲಿ ದೊಡ್ಡೇಗೌಡ ಹಾಗೂ ನನ್ನ ತಾತ ಪುಟ್ಟಸ್ವಾಮಿಗೌಡರ ನೇತೃತ್ವದಲ್ಲಾದ ಬದಲಾವಣೆ 2023ರಲ್ಲಿ ಮತ್ತೆ ಮರುಕಳಿಸಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ಜಗದೀಶ್ ಶೆಟ್ಟರ್‌ಗೆ ಐಟಿ ದಾಳಿ ಬೆದರಿಕೆ ಹಾಕಿರುವ ಜೋಶಿ: ರಮೇಶ್ ಬಾಬು ಆರೋಪ
“ಹೊಳೆನರಸೀಪುರ ಜಿಲ್ಲಾ ಕೇಂದ್ರದ ರೀತಿಯಲ್ಲಿ ಅಭಿವೃದ್ಧಿಯಾಗಿದೆ ಎನ್ನಲಾಗುತ್ತಿದೆ. ಕ್ಷೇತ್ರದಲ್ಲಿ ಅಂತಹ ಅಭಿವೃದ್ಧಿ ಆಗಿದೆ ಎಂದು ನನಗೆ ಅನ್ನಿಸುತ್ತಿಲ್ಲ. ಚುನಾವಣೆ ಮುಗಿದ ನಂತರ ಈ ಕ್ಷೇತ್ರದ ಅಭಿವೃದ್ಧಿ ಹೇಗೆ ಆಗಿದೆ ಎಂಬುದನ್ನು ತೋರಿಸುತ್ತೇನೆ. ಐದು ಹೋಬಳಿಯ ಅಭಿವೃದ್ಧಿ ಪರಿಸ್ಥಿತಿಯನ್ನು ತೋರಿಸುತ್ತೇನೆ. ಬಡವರಿಗೆ ಮಧ್ಯಮ ವರ್ಗದವರಿಗೆ ಯಾವುದೇ ರೀತಿಯ ಅನುಕೂಲಕರ ಕೆಲಸಗಳು ಕ್ಷೇತ್ರದಲ್ಲಾಗಿಲ್ಲ” ಎಂದರು.