ಬೆಂಗಳೂರು ನಗರದ ಮೊಬೈಲ್ ಅಂಗಡಿಯೊಂದರಲ್ಲಿ ಹಾಕಲಾಗಿದ್ದ ಸ್ಪೀಕರ್ನ ಶಬ್ದ ಜಾಸ್ತಿಯಾಯಿತು ಎಂಬ ಕಾರಣಕ್ಕೆ ಜಗಳವಾಡಿ, ಅಂಗಡಿ ಮಾಲೀಕನ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಸಂಬಂಧ ಪ್ರಕರಣ ಕೂಡ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆದರೆ ರಾಜ್ಯದ ವಿರೋಧ ಪಕ್ಷವಾಗಿರುವ ಬಿಜೆಪಿಯು ಈ ಪ್ರಕರಣಕ್ಕೆ ಕೋಮು ಬಣ್ಣ ನೀಡಲು ಪ್ರಯತ್ನ ಪಟ್ಟಿರುವುದು ಈಗ ಬೆಳಕಿಗೆ ಬಂದಿದೆ.
ಬೆಂಗಳೂರಿನ ಸಿದ್ದಣ್ಣ ಗಲ್ಲಿಯಲ್ಲಿ ರವಿವಾರ (ಮಾ.17ರ ಭಾನುವಾರ) ಸಂಜೆ ಕೃಷ್ಣ ಟೆಲಿಕಾಂ ಅಂಗಡಿ ಮಾಲೀಕ ಮುಕೇಶ್ ಎಂಬಾತನ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ಮುಖೇಶ್ ದೂರು ನೀಡಿದ್ದು, ಆ ದೂರಿನಲ್ಲಿ ಸುಲೇಮಾನ್, ಶಾನವಾಝ್, ರೋಹಿತ್, ದಾನಿಶ್, ತರುಣಾ ಅಲಿಯಾಸ್ ದಡಿಯ ಹಾಗೂ ಇತರರ ವಿರುದ್ದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಆರೋಪಿಗಳ ವಿರುದ್ಧ ಐಪಿಸಿ 1860ರ ಅಡಿಯಲ್ಲಿ ಬರುವ ಕಲಂ 506, 504, 149, 307, 323 8 324 ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ, ಹಲ್ಲೆ ನಡೆಸುತ್ತಿರುವ ದೃಶ್ಯವು ಮೊಬೈಲ್ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಕೂಡ ದಾಖಲಾಗಿದೆ.
ಆದರೆ ಈ ನಡುವೆ ಈ ಘಟನೆಗೆ ಬಿಜೆಪಿಯು ಕೋಮು ಬಣ್ಣ ನೀಡಲು ಯತ್ನಿಸಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಹಂಚಿಕೊಂಡಿರುವ ಬಿಜೆಪಿ, ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದೆ.
ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ @INCKarnataka ದ ಕೈಗೆ ಸಿಕ್ಕು ತಾಲಿಬಾನ್ ಆಗಿ ಬದಲಾಗುತ್ತಿದೆ.
ಬೆಂಗಳೂರಿನ ಸಿದ್ದಣ್ಣ ಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಗೆ ನುಗ್ಗಿದ ಮತಾಂಧ ಕಿಡಿಗೇಡಿಗಳು ಮುಖೇಶ್ ಎಂಬ ಹಿಂದೂ ಯುವಕನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿ ಓಡಿ ಹೋಗಿದ್ದಾರೆ.
ಅಂಗಡಿ ಮಾಲೀಕ ಮುಖೇಶ್ ಸಂಜೆ ಪೂಜೆ… pic.twitter.com/XYSDTZN0GT
— BJP Karnataka (@BJP4Karnataka) March 18, 2024
ಬಿಜೆಪಿ ತನ್ನ ಟ್ವೀಟ್ನಲ್ಲಿ, “ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ, ಕಾಂಗ್ರೆಸ್ ಸರ್ಕಾರದ ಕೈಗೆ ಸಿಕ್ಕು ತಾಲಿಬಾನ್ ಆಗಿ ಬದಲಾಗುತ್ತಿದೆ. ಬೆಂಗಳೂರಿನ ಸಿದ್ದಣ್ಣ ಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಗೆ ನುಗ್ಗಿದ ಮತಾಂಧ ಕಿಡಿಗೇಡಿಗಳು ಮುಖೇಶ್ ಎಂಬ ಹಿಂದೂ ಯುವಕನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿ ಓಡಿ ಹೋಗಿದ್ದಾರೆ. ಅಂಗಡಿ ಮಾಲೀಕ ಮುಖೇಶ್ ಸಂಜೆ ಪೂಜೆ ಸಮಯದಲ್ಲಿ ಭಕ್ತಿ ಗೀತೆಗಳನ್ನು ಹಾಕಿದ್ದೇ ಮತಾಂಧ ದುರುಳರು ಹಲ್ಲೆ ಮಾಡಲು ಕಾರಣ. ಹಲ್ಲೆಗೊಳಗಾದ ಮುಖೇಶ್ ಹಲಸೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದರೂ, ಪೊಲೀಸರು ದೂರು ದಾಖಲಿಸಿಕೊಳ್ಳದೆ ಹಿಂದೇಟು ಹಾಕುತ್ತಿದ್ದಾರೆ ಎಂದರೆ, ಇದರ ಹಿಂದೆ ಮಜಾವಾದಿ ಸಿದ್ದರಾಮಯ್ಯ ಸರ್ಕಾರದ ಕಳಂಕಿತ ಕೈಗಳ ಕೈವಾಡ ಇರುವುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಕೂಡಲೇ ಪಾ’ಕೈ’ಸ್ತಾನ್ ಸರ್ಕಾರ ಮತಾಂಧ ಗೂಂಡಾ ಬ್ರದರ್ಸ್ಗಳನ್ನು ಬಂಧಿಸಿ ಕ್ರಮಕೈಗೊಳ್ಳದೆ ಹೋದರೆ, ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಚ್ಚರ” ಎಂದು ತಿಳಿಸಿದೆ. ಅಲ್ಲದೇ, #AntiHinduCongress ಎಂಬ ಟ್ಯಾಗ್ ಕೂಡ ಬಳಸಿಕೊಂಡಿದೆ.
ಕರ್ನಾಟಕದಲ್ಲಿ ಹನುಮಾನ್ ಚಲೀಸಾ ನಿಷೇಧ ಮಾಡಲಾಗಿದೆಯೇ ಸಿಎಂ @siddaramaiah ನವರೇ?@INCKarnataka ಸರ್ಕಾರದ ತುಷ್ಟೀಕರಣ ರಾಜಕಾರಣ, ಮಿತಿಮೀರಿದ ಓಲೈಕೆಯಿಂದ ಮೂಲಭೂತವಾದಿ ಮುಸ್ಲಿಮರಿಗೆ ನಾವು ಏನು ಮಾಡಿದರೂ ನಡೆಯುತ್ತೆ ಎನ್ನುವ ಮೊಂಡು ಧೈರ್ಯ ಬಂದಿದ್ದು, ಬೆಂಗಳೂರಿನ ಶಿವಾಜಿನಗರದ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಮುಸ್ಲಿಂ… pic.twitter.com/urSqerGC7c
— R. Ashoka (ಮೋದಿ ಅವರ ಕುಟುಂಬ) (@RAshokaBJP) March 18, 2024
ವಿಪಕ್ಷ ನಾಯಕ ಆರ್ ಅಶೋಕ್ ಕೂಡ ಟ್ವೀಟ್ ಮಾಡಿದ್ದು, ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಹಲ್ಲೆ ಎಂದು ಆರೋಪಿಸಿದ್ದಾರೆ.
ಆದರೆ ಎಫ್ಐಆರ್ನಲ್ಲಿ ಇರೋದೇನು?
ಘಟನೆ ಮಾ. 17ರ ಸಂಜೆ 6:30 ರ ಸುಮಾರಿಗೆ ನಡೆದಿದೆ. ಅದೇ ದಿನ ರಾತ್ರಿ 10:30ಕ್ಕೆ ಹಲಸೂರು ಪೊಲೀಸ್ ಠಾಣೆಯ ಪೊಲೀಸರು ದೂರು ಸ್ವೀಕರಿಸಿದ್ದಾರೆ. ಅಲ್ಲದೇ, ಮರು ದಿನ ಬೆಳಗ್ಗೆ ಅಂದರೆ ಮಾ. 18ರಂದು(ಸೋಮವಾರ) ಬೆಳಗ್ಗೆ 10:30ಕ್ಕೆ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಮಾ. 18ರ ಬೆಳಗ್ಗೆ 11:20ಕ್ಕೆ ಬಿಜೆಪಿಯು, ‘ಎಫ್ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಟ್ವೀಟ್ ಮಾಡಿ, ಪೊಲೀಸರ ಮೇಲೆ ಸುಳ್ಳು ಆರೋಪ ಹೊರಿಸಿದೆ. ಆದರೆ ವಾಸ್ತವ ಏನೆಂದರೆ, ಬಿಜೆಪಿ ಟ್ವೀಟ್ ಮಾಡುವ ಹೊತ್ತಿಗಾಗಲೇ ಎಫ್ಐಆರ್ ದಾಖಲಿಸಿ, ನ್ಯಾಯಾಲಯಕ್ಕೂ ರವಾನಿಸಲಾಗಿತ್ತು. ಪೊಲೀಸ್ ಸಿಬ್ಬಂದಿ ಕಾಂತರಾಜು ಎಂಬವರು ತೆಗೆದುಕೊಂಡು ಹೋಗಿರುವುದಾಗಿಯೂ ಉಲ್ಲೇಖಿಸಲಾಗಿದೆ.

ಅಲ್ಲದೇ, ಘಟನೆಗೆ ಸಂಬಂಧಿಸಿ ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. 6 ಆರೋಪಿಗಳಲ್ಲಿ ಸುಲೇಮಾನ್, ಶಾನವಾಝ್ ಮತ್ತು ರೋಹಿತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಡಿಸಿಪಿ ಖಚಿತಪಡಿಸಿದ್ದಾರೆ.
ದೂರುದಾರ ಮುಕೇಶ್ ಪೊಲೀಸರಿಗೆ ಕೈಬರಹದಲ್ಲಿ ಬರೆದಿರುವ ಪ್ರತಿ ಲಭ್ಯವಾಗಿದ್ದು, ಆ ದೂರಿನಲ್ಲಿ ಕೇವಲ ‘ಲೌಡ್ ಸ್ಪೀಕರ್ ಜೋರು ಇಟ್ಟಿದ್ದಕ್ಕೆ ಹಲ್ಲೆ’ ಎಂದು ಉಲ್ಲೇಖಿಸಿದ್ದಾರೆ.
A shopkeeper Mukesh in Bengaluru was assaulted by 6 goons (Suleman, Shahnawaz, Rohit, Danish, Tarun and unknown) over the sound of loudspeaker ( As mentioned in the written complaint copy filed by Mukesh). DCP confirmed that Police arrested Suleman, Shah Nawaz and Rohit of the 6… pic.twitter.com/0dBQEFPDLp
— Mohammed Zubair (@zoo_bear) March 18, 2024
ಕೈ ಬರಹದ ಪ್ರತಿಯಲ್ಲಾಗಲೀ, ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ನಲ್ಲಾಗಲೀ ಆಝಾನ್ ವಿಚಾರವೋ ಅಥವಾ ಬಿಜೆಪಿ ಉಲ್ಲೇಖಿಸಿರುವ ಭಕ್ತಿ ಗೀತೆಯಾಗಲೀ, ಆರ್ ಅಶೋಕ್ ಹೇಳಿರುವ ಹನುಮಾನ್ ಚಾಲಿಸಾದ ಬಗ್ಗೆಯಾಗಲೀ ಯಾವುದೇ ಉಲ್ಲೇಖ ಇಲ್ಲ ಎಂಬುದು ಸ್ಪಷ್ಟ.
ಅಲ್ಲದೇ, ಒಟ್ಟು ಆರು ಮಂದಿಯ ವಿರುದ್ದ ಮುಖೇಶ್ ದೂರು ನೀಡಿದ್ದು, ಅದರಲ್ಲಿ ರೋಹಿತ್ ಹಾಗೂ ತರುಣ ಎಂಬವರ ಹೆಸರು ಕೂಡ ಇದೆ. ಆದರೆ, ಲೋಕಸಭಾ ಚುನಾವಣಾ ಹೊತ್ತಿನಲ್ಲೇ ಅಶಾಂತಿ ಹಬ್ಬಿಸಲು ಬಿಜೆಪಿ ಘಟನೆಗೆ ಕೋಮು ಬಣ್ಣ ನೀಡಲು ಯತ್ನಿಸಿದೆ.
ವಿಡಿಯೋದಲ್ಲಿ ಇರುವುದೇನು?
ಮುಕೇಶ್ ಮೇಲೆ ಗುಂಪು ಹಲ್ಲೆ ನಡೆಸುವ ಸಿಸಿಟಿವಿ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮುಖೇಶ್ ಅಂಗಡಿಗೆ ಬಂದ ಯುವಕರ ಗುಂಪೊಂದು ವಾಗ್ವಾದದಲ್ಲಿ ತೊಡಗುತ್ತಾನೆ. ಮಾತಿಗೆ ಮಾತು ಬೆಳೆದ ನಂತರ ಹಲ್ಲೆ ನಡೆಸುತ್ತಾನೆ. ನಂತರ ಹಲ್ಲೆಕೋರನಿಗೆ ಮತ್ತೋರ್ವ ಯುವಕನೂ ಸೇರಿ ಮುಕೇಶ್ ಮೇಲೆ ಹಲ್ಲೆ ನಡೆನು ಕಂಡು ಬರುತ್ತದೆ. ಈ ವೇಳೆ ಅಂಗಡಿಯಿಂದ ಹೊರ ಬರುವ ಮುಕೇಶ್ ಯುವಕರ ಮೇಲೆ ಪ್ರತಿ ಹಲ್ಲೆ ನಡೆಸುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ಬಿದ್ದು ಹೊರಳಾಡುವುದು ಕೂಡ ಕಂಡುಬಂದಿದೆ.
ಮುಖೇಶ್ ಕೈಬರಹದಲ್ಲಿ ನೀಡಿದ ದೂರಿನಲ್ಲಿ ಹೇಳಿದ್ದೇನು?
ಬೆಂಗಳೂರು ನಗರ ಜುಮ್ಮಾ ಮಸೀದಿ ರಸ್ತೆ ಸಿದ್ದಣ್ಣ ಗಲ್ಲಿಯಲ್ಲಿ ಕೃಷ್ಣ ಟೆಲಿಕಾಂ ಅಂಗಡಿಯನ್ನು ಇಟ್ಟುಕೊಂಡು ನಾನು ಜೀವನ ಮಾಡುತ್ತಿದ್ದೇನೆ. ಮಾ.17, 2024ರ ಸಂಜೆ 6.25 ಕ್ಕೆ ನಾನು ಅಂಗಡಿಯಲ್ಲಿರುವಾಗ ಸುಲೇಮಾನ್, ಶಾನವಾಝ್, ರೋಹಿತ್, ಡ್ಯಾನಿಶ್, ತರುಣ್ ಹಾಗೂ ಮತ್ತೊಬ್ಬರು ನನ್ನ ಅಂಗಡಿಗೆ ಬಂದು ಏಕೆ ಲೌಡ್ ಸ್ಪೀಕರ್ ಜೋರಾಗಿ ಹಾಕಿರುವೆ? ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ನನ್ನ ಮುಖಕ್ಕೆ ಗುದ್ದಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೇ, ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಹಲ್ಲೆಗೊಳಗಾದ ಮುಖೇಶ್ ಅವರು ತನ್ನ ದೂರಿನಲ್ಲಿ ಉಲೇಖಿಸಿದ್ದಾರೆ.
ಮಾಧ್ಯಮಗಳೊಂದಿಗೆ ಉಲ್ಟಾ ಹೇಳಿಕೆ ನೀಡಿದ ಮುಖೇಶ್!
ಘಟನೆಯ ಬಗ್ಗೆ ಮಾಹಿತಿ ಪಡೆಯಲು ಹೋಗಿದ್ದ ಮಾಧ್ಯಮಗಳೊಂದಿಗೆ ಮಾತನಾಡುವಾಗ ದೂರುದಾರ ಮುಖೇಶ್, ವ್ಯತಿರಿಕ್ತ ಹೇಳಿಕೆ ನೀಡಿದ್ದಾನೆ.
ಇದನ್ನು ಓದಿದ್ದೀರಾ? ಪ್ರಚಾರಕ್ಕಾಗಿ ಪತ್ರ ಬರೆಯಬೇಡಿ: ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷನ ವಿರುದ್ಧ ಸಿಜೆಐ ಗರಂ
ಮಾಧ್ಯಮದ ಜೊತೆಗೆ ಮಾತನಾಡುವಾಗ, ‘ನನ್ನ ಅಂಗಡಿಗೆ ನುಗ್ಗಿದವರು, ಈಗ ಆಝಾನ್ ಸಮಯ. ಯಾಕೆ ಜೋರಾಗಿ ಲೌಡ್ ಸ್ಪೀಕರ್ ಇಟ್ಟಿದ್ದೀಯಾ ಎಂದು ಪ್ರಶ್ನಿಸಿ ಹಲ್ಲೆ ಮಾಡಿದ್ದಾರೆ” ಎಂದು ಹೇಳಿದ್ದಾನೆ. ಆ ಬಳಿಕ ಮೊದಲು ಹಾಡು ಎಂದು ಹೇಳಿ, ಆ ಬಳಿಕ ‘ನಾನು ಹನುಮಾನ್ ಚಾಲೀಸಾ ಇಟ್ಟಿದ್ದೆ’ ಎಂದು ತಿಳಿಸಿದ್ದಾನೆ.
#WATCH | Bengaluru, Karnataka: “I was playing Hanuman bhajan. 4-5 people came and said it is time for Azaan and if you play it we will beat you. They beat me and also threatened me that they would stab me with a knife,” says the shopkeeper who was attacked by a group of over five… https://t.co/0ONOXqm2Sw pic.twitter.com/QaS7joDqe8
— ANI (@ANI) March 18, 2024
ಆದರೆ, ದೂರುದಾರ ಮುಖೇಶ್, ಈ ವಿಚಾರವನ್ನು ಎಫ್ಐಆರ್ ದಾಖಲಿಸುವಾಗ ಎಲ್ಲೂ ಉಲ್ಲೇಖಿಸಿಲ್ಲ. ಈ ಬಗ್ಗೆ ಮಾಹಿತಿ ಪಡೆಯಲು ಈ ದಿನ.ಕಾಮ್ ಮುಖೇಶ್ ಅವರನ್ನು ಸಂಪರ್ಕಿಸಿದಾಗ, “ನಾನು ರೆಸ್ಟ್ ಮಾಡುತ್ತಿದ್ದೇನೆ. ಆಮೇಲೆ ಕರೆ ಮಾಡಿ” ಎಂದು ತಿಳಿಸಿ, ಕರೆ ಕಟ್ ಮಾಡಿದ್ದಾನೆ.
