ಬೆಂಗಳೂರು | ಲೌಡ್ ಸ್ಪೀಕರ್ ಜಗಳಕ್ಕೆ ಕೋಮು ಬಣ್ಣ ಬಳಿಯಲೆತ್ನಿಸಿದ ಬಿಜೆಪಿ; ಎಫ್‌ಐಆರ್‌ನಲ್ಲಿ ಇರೋದೇನು?

Date:

ಬೆಂಗಳೂರು ನಗರದ ಮೊಬೈಲ್ ಅಂಗಡಿಯೊಂದರಲ್ಲಿ ಹಾಕಲಾಗಿದ್ದ ಸ್ಪೀಕ‌ರ್‌ನ ಶಬ್ದ ಜಾಸ್ತಿಯಾಯಿತು ಎಂಬ ಕಾರಣಕ್ಕೆ ಜಗಳವಾಡಿ, ಅಂಗಡಿ ಮಾಲೀಕನ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಈ ಸಂಬಂಧ ಪ್ರಕರಣ ಕೂಡ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆದರೆ ರಾಜ್ಯದ ವಿರೋಧ ಪಕ್ಷವಾಗಿರುವ ಬಿಜೆಪಿಯು ಈ ಪ್ರಕರಣಕ್ಕೆ ಕೋಮು ಬಣ್ಣ ನೀಡಲು ಪ್ರಯತ್ನ ಪಟ್ಟಿರುವುದು ಈಗ ಬೆಳಕಿಗೆ ಬಂದಿದೆ.

ಬೆಂಗಳೂರಿನ ಸಿದ್ದಣ್ಣ ಗಲ್ಲಿಯಲ್ಲಿ ರವಿವಾರ (ಮಾ.17ರ ಭಾನುವಾರ) ಸಂಜೆ ಕೃಷ್ಣ ಟೆಲಿಕಾಂ ಅಂಗಡಿ ಮಾಲೀಕ ಮುಕೇಶ್ ಎಂಬಾತನ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಘಟನೆಗೆ ಸಂಬಂಧಿಸಿದಂತೆ ಮುಖೇಶ್ ದೂರು ನೀಡಿದ್ದು, ಆ ದೂರಿನಲ್ಲಿ ಸುಲೇಮಾನ್, ಶಾನವಾಝ್, ರೋಹಿತ್, ದಾನಿಶ್, ತರುಣಾ ಅಲಿಯಾಸ್ ದಡಿಯ ಹಾಗೂ ಇತರರ ವಿರುದ್ದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ.

ಆರೋಪಿಗಳ ವಿರುದ್ಧ ಐಪಿಸಿ 1860ರ ಅಡಿಯಲ್ಲಿ ಬರುವ ಕಲಂ 506, 504, 149, 307, 323 8 324 ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ, ಹಲ್ಲೆ ನಡೆಸುತ್ತಿರುವ ದೃಶ್ಯವು ಮೊಬೈಲ್ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಕೂಡ ದಾಖಲಾಗಿದೆ.

ಆದರೆ ಈ ನಡುವೆ ಈ ಘಟನೆಗೆ ಬಿಜೆಪಿಯು ಕೋಮು ಬಣ್ಣ ನೀಡಲು ಯತ್ನಿಸಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಹಂಚಿಕೊಂಡಿರುವ ಬಿಜೆಪಿ, ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

ಬಿಜೆಪಿ ತನ್ನ ಟ್ವೀಟ್‌ನಲ್ಲಿ, “ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ, ಕಾಂಗ್ರೆಸ್ ಸರ್ಕಾರದ ಕೈಗೆ ಸಿಕ್ಕು ತಾಲಿಬಾನ್ ಆಗಿ ಬದಲಾಗುತ್ತಿದೆ. ಬೆಂಗಳೂರಿನ ಸಿದ್ದಣ್ಣ ಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಗೆ ನುಗ್ಗಿದ ಮತಾಂಧ ಕಿಡಿಗೇಡಿಗಳು ಮುಖೇಶ್ ಎಂಬ ಹಿಂದೂ ಯುವಕನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿ ಓಡಿ ಹೋಗಿದ್ದಾರೆ. ಅಂಗಡಿ ಮಾಲೀಕ ಮುಖೇಶ್ ಸಂಜೆ ಪೂಜೆ ಸಮಯದಲ್ಲಿ ಭಕ್ತಿ ಗೀತೆಗಳನ್ನು ಹಾಕಿದ್ದೇ ಮತಾಂಧ ದುರುಳರು ಹಲ್ಲೆ ಮಾಡಲು ಕಾರಣ‌. ಹಲ್ಲೆಗೊಳಗಾದ ಮುಖೇಶ್ ಹಲಸೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದರೂ, ಪೊಲೀಸರು ದೂರು ದಾಖಲಿಸಿಕೊಳ್ಳದೆ ಹಿಂದೇಟು ಹಾಕುತ್ತಿದ್ದಾರೆ ಎಂದರೆ, ಇದರ ಹಿಂದೆ ಮಜಾವಾದಿ ಸಿದ್ದರಾಮಯ್ಯ ಸರ್ಕಾರದ ಕಳಂಕಿತ ಕೈಗಳ ಕೈವಾಡ ಇರುವುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಕೂಡಲೇ ಪಾ’ಕೈ’ಸ್ತಾನ್ ಸರ್ಕಾರ ಮತಾಂಧ ಗೂಂಡಾ ಬ್ರದರ್ಸ್‌ಗಳನ್ನು ಬಂಧಿಸಿ ಕ್ರಮಕೈಗೊಳ್ಳದೆ ಹೋದರೆ, ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಚ್ಚರ” ಎಂದು ತಿಳಿಸಿದೆ. ಅಲ್ಲದೇ, #AntiHinduCongress ಎಂಬ ಟ್ಯಾಗ್ ಕೂಡ ಬಳಸಿಕೊಂಡಿದೆ.

ವಿಪಕ್ಷ ನಾಯಕ ಆರ್ ಅಶೋಕ್ ಕೂಡ ಟ್ವೀಟ್ ಮಾಡಿದ್ದು, ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಹಲ್ಲೆ ಎಂದು ಆರೋಪಿಸಿದ್ದಾರೆ.

ಆದರೆ ಎಫ್‌ಐಆರ್‌ನಲ್ಲಿ ಇರೋದೇನು?

ಘಟನೆ ಮಾ. 17ರ ಸಂಜೆ 6:30 ರ ಸುಮಾರಿಗೆ ನಡೆದಿದೆ. ಅದೇ ದಿನ ರಾತ್ರಿ 10:30ಕ್ಕೆ ಹಲಸೂರು ಪೊಲೀಸ್ ಠಾಣೆಯ ಪೊಲೀಸರು ದೂರು ಸ್ವೀಕರಿಸಿದ್ದಾರೆ. ಅಲ್ಲದೇ, ಮರು ದಿನ ಬೆಳಗ್ಗೆ ಅಂದರೆ ಮಾ. 18ರಂದು(ಸೋಮವಾರ) ಬೆಳಗ್ಗೆ 10:30ಕ್ಕೆ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ ಎಂದು ಎಫ್‌ಐಆ‌ರ್‌ನಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಮಾ. 18ರ ಬೆಳಗ್ಗೆ 11:20ಕ್ಕೆ ಬಿಜೆಪಿಯು, ‘ಎಫ್‌ಐಆ‌ರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಟ್ವೀಟ್ ಮಾಡಿ, ಪೊಲೀಸರ ಮೇಲೆ ಸುಳ್ಳು ಆರೋಪ ಹೊರಿಸಿದೆ. ಆದರೆ ವಾಸ್ತವ ಏನೆಂದರೆ, ಬಿಜೆಪಿ ಟ್ವೀಟ್ ಮಾಡುವ ಹೊತ್ತಿಗಾಗಲೇ ಎಫ್‌ಐಆ‌ರ್ ದಾಖಲಿಸಿ, ನ್ಯಾಯಾಲಯಕ್ಕೂ ರವಾನಿಸಲಾಗಿತ್ತು. ಪೊಲೀಸ್ ಸಿಬ್ಬಂದಿ ಕಾಂತರಾಜು ಎಂಬವರು ತೆಗೆದುಕೊಂಡು ಹೋಗಿರುವುದಾಗಿಯೂ ಉಲ್ಲೇಖಿಸಲಾಗಿದೆ.

ಎಫ್‌ಐಆರ್ ಪ್ರತಿ

ಅಲ್ಲದೇ, ಘಟನೆಗೆ ಸಂಬಂಧಿಸಿ ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. 6 ಆರೋಪಿಗಳಲ್ಲಿ ಸುಲೇಮಾನ್, ಶಾನವಾಝ್ ಮತ್ತು ರೋಹಿತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಡಿಸಿಪಿ ಖಚಿತಪಡಿಸಿದ್ದಾರೆ.

ದೂರುದಾರ ಮುಕೇಶ್ ಪೊಲೀಸರಿಗೆ ಕೈಬರಹದಲ್ಲಿ ಬರೆದಿರುವ ಪ್ರತಿ ಲಭ್ಯವಾಗಿದ್ದು, ಆ ದೂರಿನಲ್ಲಿ ಕೇವಲ ‘ಲೌಡ್ ಸ್ಪೀಕರ್ ಜೋರು ಇಟ್ಟಿದ್ದಕ್ಕೆ ಹಲ್ಲೆ’ ಎಂದು ಉಲ್ಲೇಖಿಸಿದ್ದಾರೆ.

ಕೈ ಬರಹದ ಪ್ರತಿಯಲ್ಲಾಗಲೀ, ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಾಗಲೀ ಆಝಾನ್ ವಿಚಾರವೋ ಅಥವಾ ಬಿಜೆಪಿ ಉಲ್ಲೇಖಿಸಿರುವ ಭಕ್ತಿ ಗೀತೆಯಾಗಲೀ, ಆರ್ ಅಶೋಕ್ ಹೇಳಿರುವ ಹನುಮಾನ್ ಚಾಲಿಸಾದ ಬಗ್ಗೆಯಾಗಲೀ ಯಾವುದೇ ಉಲ್ಲೇಖ ಇಲ್ಲ ಎಂಬುದು ಸ್ಪಷ್ಟ.

ಅಲ್ಲದೇ, ಒಟ್ಟು ಆರು ಮಂದಿಯ ವಿರುದ್ದ ಮುಖೇಶ್ ದೂರು ನೀಡಿದ್ದು, ಅದರಲ್ಲಿ ರೋಹಿತ್ ಹಾಗೂ ತರುಣ ಎಂಬವರ ಹೆಸರು ಕೂಡ ಇದೆ. ಆದರೆ, ಲೋಕಸಭಾ ಚುನಾವಣಾ ಹೊತ್ತಿನಲ್ಲೇ ಅಶಾಂತಿ ಹಬ್ಬಿಸಲು ಬಿಜೆಪಿ ಘಟನೆಗೆ ಕೋಮು ಬಣ್ಣ ನೀಡಲು ಯತ್ನಿಸಿದೆ.

ವಿಡಿಯೋದಲ್ಲಿ ಇರುವುದೇನು?

ಮುಕೇಶ್ ಮೇಲೆ ಗುಂಪು ಹಲ್ಲೆ ನಡೆಸುವ ಸಿಸಿಟಿವಿ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮುಖೇಶ್ ಅಂಗಡಿಗೆ ಬಂದ ಯುವಕರ ಗುಂಪೊಂದು ವಾಗ್ವಾದದಲ್ಲಿ ತೊಡಗುತ್ತಾನೆ. ಮಾತಿಗೆ ಮಾತು ಬೆಳೆದ ನಂತರ ಹಲ್ಲೆ ನಡೆಸುತ್ತಾನೆ. ನಂತರ ಹಲ್ಲೆಕೋರನಿಗೆ ಮತ್ತೋರ್ವ ಯುವಕನೂ ಸೇರಿ ಮುಕೇಶ್ ಮೇಲೆ ಹಲ್ಲೆ ನಡೆನು ಕಂಡು ಬರುತ್ತದೆ. ಈ ವೇಳೆ ಅಂಗಡಿಯಿಂದ ಹೊರ ಬರುವ ಮುಕೇಶ್ ಯುವಕರ ಮೇಲೆ ಪ್ರತಿ ಹಲ್ಲೆ ನಡೆಸುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ಬಿದ್ದು ಹೊರಳಾಡುವುದು ಕೂಡ ಕಂಡುಬಂದಿದೆ.

ಮುಖೇಶ್ ಕೈಬರಹದಲ್ಲಿ ನೀಡಿದ ದೂರಿನಲ್ಲಿ ಹೇಳಿದ್ದೇನು?
ಬೆಂಗಳೂರು ನಗರ ಜುಮ್ಮಾ ಮಸೀದಿ ರಸ್ತೆ ಸಿದ್ದಣ್ಣ ಗಲ್ಲಿಯಲ್ಲಿ ಕೃಷ್ಣ ಟೆಲಿಕಾಂ ಅಂಗಡಿಯನ್ನು ಇಟ್ಟುಕೊಂಡು ನಾನು ಜೀವನ ಮಾಡುತ್ತಿದ್ದೇನೆ. ಮಾ.17, 2024ರ ಸಂಜೆ 6.25 ಕ್ಕೆ ನಾನು ಅಂಗಡಿಯಲ್ಲಿರುವಾಗ ಸುಲೇಮಾನ್, ಶಾನವಾಝ್, ರೋಹಿತ್, ಡ್ಯಾನಿಶ್, ತರುಣ್ ಹಾಗೂ ಮತ್ತೊಬ್ಬರು ನನ್ನ ಅಂಗಡಿಗೆ ಬಂದು ಏಕೆ ಲೌಡ್ ಸ್ಪೀಕರ್ ಜೋರಾಗಿ ಹಾಕಿರುವೆ? ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ನನ್ನ ಮುಖಕ್ಕೆ ಗುದ್ದಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೇ, ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಹಲ್ಲೆಗೊಳಗಾದ ಮುಖೇಶ್ ಅವರು ತನ್ನ ದೂರಿನಲ್ಲಿ ಉಲೇಖಿಸಿದ್ದಾರೆ.

ಮಾಧ್ಯಮಗಳೊಂದಿಗೆ ಉಲ್ಟಾ ಹೇಳಿಕೆ ನೀಡಿದ ಮುಖೇಶ್!

ಘಟನೆಯ ಬಗ್ಗೆ ಮಾಹಿತಿ ಪಡೆಯಲು ಹೋಗಿದ್ದ ಮಾಧ್ಯಮಗಳೊಂದಿಗೆ ಮಾತನಾಡುವಾಗ ದೂರುದಾರ ಮುಖೇಶ್, ವ್ಯತಿರಿಕ್ತ ಹೇಳಿಕೆ ನೀಡಿದ್ದಾನೆ.

ಇದನ್ನು ಓದಿದ್ದೀರಾ? ಪ್ರಚಾರಕ್ಕಾಗಿ ಪತ್ರ ಬರೆಯಬೇಡಿ: ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷನ ವಿರುದ್ಧ ಸಿಜೆಐ ಗರಂ

ಮಾಧ್ಯಮದ ಜೊತೆಗೆ ಮಾತನಾಡುವಾಗ, ‘ನನ್ನ ಅಂಗಡಿಗೆ ನುಗ್ಗಿದವರು, ಈಗ ಆಝಾನ್ ಸಮಯ. ಯಾಕೆ ಜೋರಾಗಿ ಲೌಡ್ ಸ್ಪೀಕರ್ ಇಟ್ಟಿದ್ದೀಯಾ ಎಂದು ಪ್ರಶ್ನಿಸಿ ಹಲ್ಲೆ ಮಾಡಿದ್ದಾರೆ” ಎಂದು ಹೇಳಿದ್ದಾನೆ. ಆ ಬಳಿಕ ಮೊದಲು ಹಾಡು ಎಂದು ಹೇಳಿ, ಆ ಬಳಿಕ ‘ನಾನು ಹನುಮಾನ್ ಚಾಲೀಸಾ ಇಟ್ಟಿದ್ದೆ’ ಎಂದು ತಿಳಿಸಿದ್ದಾನೆ.

ಆದರೆ, ದೂರುದಾರ ಮುಖೇಶ್, ಈ ವಿಚಾರವನ್ನು ಎಫ್‌ಐಆರ್‌ ದಾಖಲಿಸುವಾಗ ಎಲ್ಲೂ ಉಲ್ಲೇಖಿಸಿಲ್ಲ. ಈ ಬಗ್ಗೆ ಮಾಹಿತಿ ಪಡೆಯಲು ಈ ದಿನ.ಕಾಮ್ ಮುಖೇಶ್ ಅವರನ್ನು ಸಂಪರ್ಕಿಸಿದಾಗ, “ನಾನು ರೆಸ್ಟ್ ಮಾಡುತ್ತಿದ್ದೇನೆ. ಆಮೇಲೆ ಕರೆ ಮಾಡಿ” ಎಂದು ತಿಳಿಸಿ, ಕರೆ ಕಟ್ ಮಾಡಿದ್ದಾನೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ವಿಶ್ವವಿದ್ಯಾಲಯ | ವಾಹನ ಸಂಚಾರ ಹೆಚ್ಚಳ; ಸರ್ಕಾರಕ್ಕೆ ಪತ್ರ ಬರೆದ ಬಸವರಾಜ ಹೊರಟ್ಟಿ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ದಿನದಿಂದ ದಿನಕ್ಕೆ ಸಾರ್ವಜನಿಕ ವಾಹನಗಳ ಸಂಚಾರ...

ಜೂನ್ 19ರಂದು ಅಂಗನವಾಡಿ ನೌಕರರ ಸಂಘ ಅನಿರ್ದಿಷ್ಟಾವಧಿ ಹೋರಾಟ

ಅಂಗನವಾಡಿ ಕೇಂದ್ರಗಳಲ್ಲಿ ಇಸಿಸಿಇ (ECCE) ಜಾರಿಗಾಗಿ ಒತ್ತಾಯಿಸಿ, ಕೂಸಿನ ಮನೆ ರದ್ದು...

ಬೆಂಗಳೂರು | ಕುಡಿಯುವ ನೀರಿನ ದರ ಏರಿಕೆ ಅನಿವಾರ್ಯ: ಡಿ.ಕೆ ಶಿವಕುಮಾರ್

ರಾಜ್ಯದಲ್ಲಿ ಸದ್ಯ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ....

ಭ್ರಷ್ಟಾಚಾರ, ಕಮಿಷನ್‌ ದಂಧೆ ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಮಿಕ್ಕಿ ಹಣ ಉಳಿಯುತ್ತದೆ: ಎಎಪಿ

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರವು ಒಂದು ಕೈಯಲ್ಲಿ ಕೊಟ್ಟಂತೆ ನಟಿಸಿ...