ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶವನ್ನು ತ್ವರಿತವಾಗಿ ಪ್ರಕಟಿಸುವ ಸಲುವಾಗಿ ಕರ್ನಾಟಕ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ(ಕೆಎಸ್ಇಎಬಿ) ಈ ವರ್ಷ ಮೌಲ್ಯಮಾಪನ ಕೇಂದ್ರಗಳ ಸಂಖ್ಯೆಯನ್ನು 65 ರಿಂದ 75ಕ್ಕೆ ಹೆಚ್ಚಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೆಎಸ್ಇಎಬಿಯ ಸುತ್ತೋಲೆ ಪ್ರಕಾರ “ಬೆಂಗಳೂರಿನಲ್ಲಿ ಒಟ್ಟು 10 ಮೌಲ್ಯಮಾಪನ ಕೇಂದ್ರಗಳನ್ನು ಹೆಚ್ಚಿಸಲಾಗಿದೆ. ಕೇಂದ್ರಗಳ ಹೆಚ್ಚಳವು ಮೌಲ್ಯಮಾಪನವನ್ನು ಬೇಗನೆ ಪೂರ್ಣಗೊಳಿಸಲು ಮತ್ತು ಫಲಿತಾಂಶಗಳನ್ನು ಘೋಷಿಸಲು ಸಹಾಯ ಮಾಡುತ್ತದೆ” ಎಂದು ತಿಳಿದುಬಂದಿದೆ.
“ಫಲಿತಾಂಶಗಳನ್ನು ಮುಂಚಿತವಾಗಿ ಘೋಷಿಸುವುದರಿಂದ ಅನುತ್ತೀರ್ಣರಾದ ಅಭ್ಯರ್ಥಿಗಳು ಪೂರಕ ಪರೀಕ್ಷೆಗಳಿಗೆ ಮತ್ತೆ ಹಾಜರಾಗಲು ಸಹಾಯ ಮಾಡುತ್ತದೆ. ಕಳೆದ ವರ್ಷದಿಂದ, ಮಂಡಳಿಯು ಅನುತ್ತೀರ್ಣರಾದ ಪಿಯು ವಿದ್ಯಾರ್ಥಿಗಳಿಗೆ ಒಂದರ ಬದಲು ಎರಡು ಪೂರಕ ಪರೀಕ್ಷೆಗಳನ್ನು ನಡೆಸುತ್ತಿದೆ. ಇದರಿಂದ ಅನೇಕರಿಗೆ ಅನುಕೂಲವಾಗಿದ್ದು, ಅದೇ ವರ್ಷವೇ ಮುಂದಿನ ತರಗತಿಗೆ ತೆರಳಲು ಅನುಕೂಲವಾಗುತ್ತದೆ” ಎಂದು ಕೆಎಸ್ಇಎಬಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿ ನಿಷ್ಠಾವಂತ ಕಾರ್ಯಕರ್ತರು ಕಣ್ಮರೆ: ಕೆಪಿಸಿಸಿ ಎಚ್ ದುಗ್ಗಪ್ಪ
“ದ್ವಿತೀಯ ಪಿಯು ಪರೀಕ್ಷೆಗಳು ಮಾರ್ಚ್ 22ಕ್ಕೆ ಕೊನೆಗೊಳ್ಳಲಿವೆ. ಮೌಲ್ಯಮಾಪನ ಪ್ರಕ್ರಿಯೆಯು ಆದಷ್ಟು ಬೇಗ ಪ್ರಾರಂಭವಾಗಲಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಕಳೆದ ವರ್ಷ, ಪರೀಕ್ಷೆಯು ಮಾರ್ಚ್ 29ರಂದು ಕೊನೆಗೊಂಡಿದ್ದು, ಏಪ್ರಿಲ್ 21ರಂದು ಫಲಿತಾಂಶವನ್ನು ಘೋಷಿಸಲಾಗಿತ್ತು. 2023 ರಲ್ಲಿ 7.3 ಲಕ್ಷ ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೆ, ಈ ವರ್ಷ ಸುಮಾರು 6.9 ಲಕ್ಷ ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಅಭ್ಯರ್ಥಿಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಹೆಚ್ಚಿನ ಮೌಲ್ಯಮಾಪನ ಕೇಂದ್ರಗಳ ಸಹಾಯದಿಂದ ಹಿಂದಿನ ವರ್ಷಕ್ಕಿಂತ ವೇಗವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.