ಸ್ವತಂತ್ರ ಭಾರತದ ಅತೀ ದೊಡ್ಡ ಹಗರಣ ಬಿಜೆಪಿಯ ದಂಧೆ ಈಗಾಗಲೇ ಬಯಲಾಗಿದೆ. ಪ್ರಧಾನಿ ಮೋದಿ ಚಂದಾ ಪಡೆದು ಉದ್ಯಮಿಗಳಿಗೆ ದಂಧೆ ನೀಡಿರುವುದು, ಅಂದ್ರೆ ದೇಣಿಗೆ ಪಡೆದು ಸರ್ಕಾರಿ ಕಾಂಟ್ರಾಕ್ಟ್‌ಗಳನ್ನು ನೀಡಿರುವ ಬಿಜೆಪಿಯ ದಂಧೆ ಸಾಬೀತಾಗಿದೆ. ತನಿಖಾ ಏಜೆನ್ಸಿಗಳ ದಾಳಿ ಮೂಲಕ ಉದ್ಯಮಿಗಳನ್ನು, ಕಾರ್ಪೋರೇಟ್ ಸಂಸ್ಥೆಗಳನ್ನು ಬೆದರಿಸಿ ಬಿಜೆಪಿ ಪಕ್ಷವು ಚಂದಾ ವಸೂಲಿ ಮಾಡಿದೆ. ಒಟ್ಟಿನಲ್ಲಿ ಮೋದಿಯ ಈ ದಂಧೆಯಿಂದಾಗಿ ಇಡೀ ದೇಶವೇ ನಾಚುವಂತಾಗಿದೆ. ಸ್ವತಂತ್ರ ಭಾರತದ ಅತೀ ದೊಡ್ಡ ಹಗರಣ ಬಯಲಾಗಿರುವಾಗ ಇಡೀ ದೇಶವೇ ತಲೆತಗ್ಗಿಸುವ ಹಾಗಾಗಿದೆ. ಅದುವೇ ಚುನಾವಣಾ ಬಾಂಡ್ ಹಗರಣ.
ಚುನಾವಣಾ ಬಾಂಡ್ ಬಿಜೆಪಿಯ ಭ್ರಷ್ಟ, ಕಳಂಕಿತ, ‘ಲೂಟಿ ಮಾಡಿ-ಲೂಟಿ ಮಾಡಲು ಬಿಡಿ’ (ಲೂಟ್‌ಲೋ ಲೂಟ್ನೇ ದೋ) ಎಂಬ ನೀತಿಯು ಬಯಲಾಗಿದೆ. ಚುನಾವಣಾ ಬಾಂಡ್ ಮಾಹಿತಿ ಬಹಿರಂಗವಾದ ಬಳಿಕ ಬಿಜೆಪಿಯ ನಿಜವಾದ ಬಣ್ಣ ಜಗತ್ಜಾಹೀರಾಗಿದೆ. ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿದ ಅದೆಷ್ಟೋ ಕಂಪನಿಗಳು ದೇಣಿಗೆ ನೀಡಿದ ಬಳಿಕ ಬಿಜೆಪಿ ಸರ್ಕಾರದಿಂದ ಕೋಟ್ಯಾಂತರ ರೂಪಾಯಿಯ ಕಾಂಟ್ರಾಕ್ಟ್ ಪಡೆದಿರುವುದು ಈಗ ತಿಳಿದುಬಂದಿದೆ.
ದೇಣಿಗೆ ನೀಡಿ ಕಾಂಟ್ರಾಕ್ಟ್ ಪಡೆದ ಸಂಸ್ಥೆಗಳಿವು
ಮೇಘಾ ಇಂಜಿನಿಯರಿಂಗ್ ಕಂಪನಿ 2023ನಲ್ಲಿ 140 ಕೋಟಿ ರೂಪಾಯಿಯ ಚುನಾವಣಾ ಬಾಂಡ್ ಅನ್ನು ಖರೀದಿಸಿದೆ. ಅದಾದ ಒಂದು ತಿಂಗಳ ಬಳಿಕ ಮೆಘಾ ಇಂಜಿನಿಯರಿಂಗ್ ಸಂಸ್ಥೆಗೆ 14,400 ಕೋಟಿ ರೂಪಾಯಿಯ ಥಾಣೆ ಬೋರಿವಳಿ ಅವಳಿ ಸುರಂಗದ ಯೋಜನೆ ಲಭಿಸಿದೆ. ಜಿಂದಾಲ್ ಸ್ಟೀಲ್ ಆಂಡ್ ಪವರ್ ಅಕ್ಟೋಬರ್ 7, 2022ರಲ್ಲಿ ಚುನಾವಣಾ ಬಾಂಡ್ ಮೂಲಕ 25 ಕೋಟಿ ರೂಪಾಯಿ ನೀಡಿದೆ. ಅದಾದ ಮೂರು ದಿನದಲ್ಲೇ ಜಿಂದಾಲ್ ಸರ್ಕಾರಿ ಯೋಜನೆಯನ್ನು ಪಡೆಯುವಲ್ಲಿ ಸಫಲವಾಗಿದೆ. ಎಪಿಸಿಒ ಇನ್ಫ್ರಾ ಜನವರಿ 10, 2022ರಲ್ಲಿ ಚುನಾವಣಾ ಬಾಂಡ್ ಖರೀದಿಸಿದೆ. ಜನವರಿ 24ರಂದು ಈ ಸಂಸ್ಥೆಗೆ 9000 ಕೋಟಿ ರೂಪಾಯಿಯ ವರ್ಸೋವಾ ಸೀಲಿಂಗ್ ಟೆಂಡರ್ ಲಭಿಸಿದೆ.
ತನಿಖಾ ಸಂಸ್ಥೆಗಳ ದಾಳಿ ಬಳಿಕ ದೇಣಿಗೆ!
ಮೋದಿ ಸರ್ಕಾರದ ಭ್ರಷ್ಟಾಚಾರ ಇಲ್ಲಿಗೆ ನಿಲ್ಲುವುದಿಲ್ಲ. ಚುನಾವಣಾ ಬಾಂಡ್ ಖರೀದಿಸಿದ 30 ಕಂಪನಿಗಳಲ್ಲಿ 14 ಕಂಪನಿಗಳ ಮೇಲೆ ಇಡಿ, ಸಿಬಿಐ, ಐಟಿ ದಾಳಿ ನಡೆದಿದೆ. ಇದರಲ್ಲಿ ಅತೀ ಅಧಿಕ ದೇಣಿಗೆಯನ್ನು ನೀಡಿರುವುದು ಫ್ಯೂಚರ್ ಗೇಮಿಂಗ್ ಆಂಡ್ ಹೊಟೇಲ್ ಸರ್ವಿಸಸ್ ಸಂಸ್ಥೆ. ಈ ಸಂಸ್ಥೆ 1368 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಒಂದು ಸಂಸ್ಥೆ ಈ ಭಾರೀ ಮೊತ್ತವನ್ನು ದೇಣಿಗೆಯಾಗಿ ಹೇಗಪ್ಪ ನೀಡಲು ಸಾಧ್ಯ ಎಂಬ ಪ್ರಶ್ನೆ ಬರುತ್ತದೆ.
ಲಾಟರಿ ಕಿಂಗ್ ಎಂದೇ ಹೆಸರುವಾಸಿಯಾದ ಸ್ಯಾಂಟಿಯಾಗೊ ಮಾರ್ಟಿನ್‌ಗೆ ಸೇರಿದ ಈ ಸಂಸ್ಥೆ ಮೇಲೆ 2022ರ ಏಪ್ರಿಲ್ 2ರಂದು ಇಡಿ ದಾಳಿ ಮಾಡಿದೆ. ಇದಾದ ಐದು ದಿನದ ಬಳಿಕ ಅಂದರೆ ಏಪ್ರಿಲ್ 7ರಂದು ಫ್ಯೂಚರ್ ಗೇಮಿಂಗ್ ಸಂಸ್ಥೆ ಚುನಾವಣಾ ಬಾಂಡ್ ಮೂಲಕ 100 ಕೋಟಿ ರೂಪಾಯಿಯನ್ನು ದೇಣಿಗೆ ನೀಡಿದೆ. ನಂತರ 2023ರ ಅಕ್ಟೋಬರ್‌ನಲ್ಲಿ ಐಟಿ ದಾಳಿ ನಡೆದಿದೆ. ಇದೇ ತಿಂಗಳಲ್ಲಿ ಈ ಸಂಸ್ಥೆ 65 ಕೋಟಿ ರೂಪಾಯಿಯ ದೇಣಿಗೆಯನ್ನು ಚುನಾವಣಾ ಬಾಂಡ್ ಮೂಲಕ ನೀಡಿದೆ. ಇಷ್ಟು ಮಾತ್ರವಲ್ಲ ಈ ಕಂಪನಿಯ ಮಾಲೀಕ ಲಾಟರಿ ಕಿಂಗ್‌ನ ಮಗ ಚಾರ್ಲ್ಸ್ ಜೋಸ್ ಮಾರ್ಟಿನ್ ಬಿಜೆಪಿ ಸೇರಿದ್ದರು.
ತನಿಖಾ ಸಂಸ್ಥೆಗಳ ದಾಳಿಯ ಪಟ್ಟಿಯಲ್ಲಿ ಬರುವ ಮುಂದಿನ ಹೆಸರು ಶಿರಡಿ ಸಾಯಿ ಎಲೆಕ್ಟ್ರಿಕಲ್ಸ್. ಆದಾಯ ತೆರಿಗೆ ಇಲಾಖೆಯು ಡಿಸೆಂಬರ್ 2023ರಲ್ಲಿ ಈ ಕಂಪನಿ ಮೇಲೆ ದಾಳಿ ನಡೆಸಿದೆ. ಇದಾದ ಒಂದು ತಿಂಗಳಲ್ಲೆ 2024ರ ಜನವರಿಯಲ್ಲಿ ಈ ಸಂಸ್ಥೆ 40 ಕೋಟಿ ರೂಪಾಯಿಯ ಚುನಾವಣಾ ಬಾಂಡ್ ಅನ್ನ ಖರೀದಿಸಿದೆ. ಇದೇ ರೀತಿ ಹೆಟೆರೊ ಫಾರ್ಮಾ ಮತ್ತು ಯಶೋಧಾ ಹಾಸ್ಪಿಟಲ್ ಹೆಸರು ಕೂಡಾ ಬರುತ್ತದೆ. ಈ ಸಂಸ್ಥೆಗಳ ಮೇಲೆಯೂ ಮೊದಲು ತನಿಖಾ ಸಂಸ್ಥೆಗಳ ದಾಳಿ ನಡೆದಿದೆ, ಅದಾದ ನಂತರ ಈ ಸಂಸ್ಥೆಗಳು ಚುನಾವಣಾ ಬಾಂಡ್ ದೇಣಿಗೆ ನೀಡಿದೆ. ಒಟ್ಟಿನಲ್ಲಿ “ಒಂದು ಕೈಯಲ್ಲಿ ಕೊಡು ಇನ್ನೊಂದು ಕೈಯಲ್ಲಿ ತೆಗೆದುಕೊಳ್ಳು” ಎಂಬಂತಾಗಿದೆ.
ಈ ವರದಿ ಓದಿದ್ದೀರಾ?: ಚುನಾವಣಾ ಬಾಂಡ್ | ತನಿಖಾ ಸಂಸ್ಥೆಗಳ ದಾಳಿಗೂ 14 ಸಂಸ್ಥೆಗಳ ದೇಣಿಗೆಗೂ ನಂಟು?
2021ರ ಮಾರ್ಚ್ 3ರಂದು ಗುಜರಾತ್‌ನ ಸೆಮಿಕಂಡಕ್ಟರ್ ಪ್ಲ್ಯಾಂಟ್ ಕಾಂಟ್ರಾಕ್ಟ್ ಅನ್ನು ವೇದಾಂತ ಸಂಸ್ಥೆಗೆ ನೀಡಲಾಗಿದೆ. ಇದಾದ ಬಳಿಕ ವೇದಾಂತ ಸಂಸ್ಥೆ 2021ರ ಏಪ್ರಿಲ್ ತಿಂಗಳಲ್ಲಿ 25 ಕೋಟಿ ರೂಪಾಯಿಯ ಚುನಾವಣಾ ಬಾಂಡ್ ಖರೀದಿ ಮಾಡಿದೆ.
ಆದಾಯಕ್ಕಿಂತ ಅಧಿಕ ದೇಣಿಗೆ!
ಇನ್ನು ಅದೆಷ್ಟೋ ಕಂಪನಿಗಳು ನಿವ್ವಳ ಆದಾಯಕ್ಕಿಂತ ಅಧಿಕ ಬಿಜೆಪಿ ಪಕ್ಷಕ್ಕೆ ದೇಣಿಗೆಯನ್ನು ನೀಡಿದೆ. ಒಂದು ಸಂಸ್ಥೆಗೆ ಇರುವ ಆದಾಯಕ್ಕಿಂತ ಹೆಚ್ಚು ಹಣವನ್ನು ದೇಣಿಗೆಯಾಗಿ ನೀಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಇಲ್ಲಿ ಬರುತ್ತದೆ. ಎಂಒಸಿಎಲ್ ಪ್ರಕಾರ ಕ್ವಿಕ್ ಸಪ್ಲೈ ಚೇನ್ ಲಿಮಿಟೆಡ್‌ನ ನಿವ್ವಳ ಆದಾಯ 130 ಕೋಟಿ ರೂಪಾಯಿ ಆಗಿದೆ. ಆದರೆ ಈ ಸಂಸ್ಥೆ 410 ಕೋಟಿ ರೂಪಾಯಿಯನ್ನು ಚುನಾವಣಾ ಬಾಂಡ್ ದೇಣಿಗೆಯಾಗಿ ನೀಡಿದೆ.
ಈ ವರದಿ ಓದಿದ್ದೀರಾ?: ಚುನಾವಣಾ ಬಾಂಡ್ | 2019ರ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಣ ಕೊಟ್ಟ ಕಂಪನಿಗಳಿವು!
ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಗಳ ದಾಳಿ ಬಳಿಕ ಸಂಸ್ಥೆಗಳು ಚುನಾವಣಾ ಬಾಂಡ್ ಖರೀದಿಸಿರುವುದು, ಬಾಂಡ್ ಖರೀದಿಸಿದ ಸಂಸ್ಥೆಗಳಿಗೆ ಸಾವಿರಾರು ಕೋಟಿ ರೂಪಾಯಿಯ ಸರ್ಕಾರಿ ಯೋಜನೆಯ ಕಾಂಟ್ರಾಕ್ಟ್ ಲಭಿಸಿರುವುದು, ಒಂದು ಸಂಸ್ಥೆಯ ಆದಾಯಕ್ಕಿಂತ ಅಧಿಕ ಚಂದಾ ನೀಡಿರುವುದು ಮೋದಿ ಸರ್ಕಾರದ ಭ್ರಷ್ಟಾಚಾರವನ್ನು ಬಹಿರಂಗ ಮಾಡಿದೆ. ಭ್ರಷ್ಟಾಚಾರವನ್ನೇ ಕಾನೂನು ಮಾಡಿದ ಈ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಜನರು ಉತ್ತರಿಸಬೇಕಾದ ಅಗತ್ಯವಿದೆ.