ಚುನಾವಣಾ ಬಾಂಡ್ | ತನಿಖಾ ಸಂಸ್ಥೆಗಳ ದಾಳಿಗೂ 14 ಸಂಸ್ಥೆಗಳ ದೇಣಿಗೆಗೂ ನಂಟು?

Date:

ಚುನಾವಣಾ ಬಾಂಡ್‌ ಮೂಲಕ ಯಾವೆಲ್ಲ ಸಂಸ್ಥೆಗಳು ದೇಣಿಗೆಯನ್ನು ನೀಡಿದೆ ಎಂಬ ಮಾಹಿತಿಯನ್ನು ಎಸ್‌ಬಿಐ ಚುನಾವಣಾ ಆಯೋಗಕ್ಕೆ ನೀಡಿದ್ದರೂ ಸಂಪೂರ್ಣ ಮಾಹಿತಿಯನ್ನು ನೀಡಿಲ್ಲ. ಯಾರು ಹಣ ನೀಡಿದ್ದಾರೆ, ಎಷ್ಟು ನೀಡಿದ್ದಾರೆ ಎಂಬ ಮಾಹಿತಿ ಇದ್ದರೂ ಕೂಡಾ ಯಾರು, ಯಾವ ಪಕ್ಷಕ್ಕೆ ಹಣ ನೀಡಿದ್ದಾರೆ ಎಂಬ ಸ್ಪಷ್ಟ ಮಾಹಿತಿಯನ್ನ ಎಸ್‌ಬಿಐ ಮರೆಮಾಚಿದೆ.

ಈ ನಡುವೆ ಚುನಾವಣಾ ಬಾಂಡ್‌ನಲ್ಲಿ ದೇಣಿಗೆ ನೀಡಿದವರ ಒಂದು ಕುತೂಹಲಕಾರಿ ವಿಷಯವನ್ನು ನಾವು ತಿಳಿಯಲೇಬೇಕು. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿರುವ 30 ದಾನಿಗಳ ಪೈಕಿ 14 ಸಂಸ್ಥೆ ಅಥವಾ ವ್ಯಕ್ತಿಗಳ ಮೇಲೆ ಕೇಂದ್ರದ ತನಿಖಾ ಸಂಸ್ಥೆಗಳಿಂದ ದಾಳಿ ನಡೆಸಲಾಗಿದೆ.

‘ಲಾಟರಿ ಕಿಂಗ್‌’

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಜಕೀಯ ಪಕ್ಷಗಳಿಗೆ ಅತೀ ಹೆಚ್ಚು ದೇಣಿಗೆ ನೀಡಿದವರು ಟಾಟಾ, ಬಿರ್ಲಾ, ಅಂಬಾನಿ, ಅದಾನಿ ಆಗಿರಬಹುದು ಎಂದು ನಾವೆಲ್ಲರೂ ಊಹಿಸಿದರೆ ಅದು ತಪ್ಪು. ‘ಲಾಟರಿ ಕಿಂಗ್’ ಎಂದೇ ಕರೆಯಲ್ಪಡುವ ಸ್ಯಾಂಟಿಯಾಗೊ ಮಾರ್ಟಿನ್‌ರ ಫ್ಯೂಚರ್ ಗೇಮಿಂಗ್ ಆಂಡ್ ಹೊಟೇಲ್ ಸರ್ವಿಸಸ್ ಕಂಪನಿಯು ರಾಜಕೀಯ ಪಕ್ಷಗಳಿಗೆ ಬರೋಬ್ಬರಿ 1368 ಕೋಟಿ ರೂಪಾಯಿ ದೇಣಿಗೆ ನೀಡಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ.

ಲಾಟರಿ ಕಿಂಗ್‌ ಮಾರ್ಟಿನ್‌ರ ಈ ಸಂಸ್ಥೆಯ ಮೇಲೆ 2022ರಲ್ಲಿ ಮನಿಲಾಂಡರಿಂಗ್ ಪ್ರಕರಣದಲ್ಲಿ ಕೇಂದ್ರದ ತನಿಖಾ ಸಂಸ್ಥೆಯಾದ ಇಡಿ ದಾಳಿ ಮಾಡಿ 409 ಕೋಟಿ ರೂಪಾಯಿ ಆಸ್ತಿ ಜಪ್ತಿ ಮಾಡಿದೆ. ಈಗ ಈ ಸಂಸ್ಥೆಯೇ ಯಾವುದೋ ಒಂದು ಪಕ್ಷಕ್ಕೆ 1368 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಕೇಂದ್ರದ ತನಿಖಾ ಸಂಸ್ಥೆಗಳ ದಾಳಿ ನಡುವೆ 1368 ಕೋಟಿ ರೂಪಾಯಿ ದೇಣಿಗೆ ನೀಡಿರುವುದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದೆಡೆ ಬೊಟ್ಟು ಮಾಡುವಂತೆ ಮಾಡಿದೆ.

ಮೆಘಾ ಇಂಜಿನಿಯರಿಂಗ್ ಆಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್

ಮೆಘಾ ಇಂಜಿನಿಯರಿಂಗ್ ಆಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಅತೀ ಹೆಚ್ಚು ದೇಣಿಗೆ ನೀಡಿದ ಸಂಸ್ಥೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 2019ರ ಅಕ್ಟೋಬರ್‌ನಲ್ಲಿ ಕೃಷ್ಣ ರೆಡ್ಡಿಗೆ ಸೇರಿದ ಈ ಸಂಸ್ಥೆಯ ಹೈದಾರಾಬಾದ್‌ನ ಕಚೇರಿ ಮತ್ತು ಇತರೆಡೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ. ಅದಾದ ಬಳಿಕ ಈವರೆಗೆ ಈ ಸಂಸ್ಥೆ ಚುನಾವಣಾ ಬಾಂಡ್‌ ಮೂಲಕ 966 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಅಷ್ಟು ಮಾತ್ರವಲ್ಲ ಈ ಸಂಸ್ಥೆಗೆ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಗುತ್ತಿಗೆಯೂ ಲಭಿಸಿದೆ.

ಇತರೆ ಸಂಸ್ಥೆಗಳ ಮೇಲೆ ದಾಳಿ

2020ರಲ್ಲಿ ಸಿಬಿಐ ತನಿಖೆಗೆ ಒಳಗಾಗಿರುವ ಹಲ್ದಿಯಾ ಇಂಜಿನಿಯರಿಂಗ್ ಕಂಪನಿ 377 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಇನ್ನು ವೇದಾಂತ ಗ್ರೂಪ್‌ನ ಟಿಎಸ್‌ಪಿಎಲ್ ಸಂಸ್ಥೆ ಮೇಲೆ ಮನಿಲಾಂಡರಿಂಗ್ ಆರೋಪದಲ್ಲಿ 2022ರಲ್ಲಿ ಇಡಿ ದಾಳಿ ಮಾಡಲಾಗಿದ್ದು ಈ ವೇದಾಂತ ಗ್ರೂಪ್‌ ಚುನಾವಣಾ ಬಾಂಡ್‌ ಮೂಲಕ 400 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಹೈದಾರಾಬಾದ್ ಮೂಲದ ಕಾರ್ಪೋರೇಟ್ ಹಾಸ್ಪಿಟಲ್ ಆದ ಯಶೋಧಾ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಮೇಲೆ 2020ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. 2021ರಲ್ಲಿ ಈ ಸಂಸ್ಥೆ ಚುನಾವಣಾ ಬಾಂಡ್ ಮೂಲಕ 162 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಇನ್ನು ಡಿಎಲ್‌ಎಫ್‌ ಕಮರ್ಷಿಯಲ್ ಡೆವಲಪರ್ಸ್ ಕಂಪನಿ 130 ಕೋಟಿ ರೂಪಾಯಿಯನ್ನು ರಾಜಕೀಯ ಪಕ್ಷ ಒಂದಕ್ಕೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿದೆ. ಈ ಸಂಸ್ಥೆ ಮೇಲೆ 2019ರಲ್ಲಿ ಭೂಮಿ ಹಂಚಿಕೆಯಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಆರೋಪದಲ್ಲಿ ಸಿಬಿಐ ದಾಳಿ ನಡೆಸಿತ್ತು. ನವೆಂಬರ್ 2023ರಲ್ಲಿ ಮತ್ತೆ ಈ ಸಂಸ್ಥೆಯ ಗುರುಗ್ರಾಮದ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಜಿಂದಾಲ್ ಸ್ಟೀಲ್ ಮೇಲೆ ವಿದೇಶಿ ವಿನಿಮಯ ನಿಯಮವನ್ನು ಉಲ್ಲಂಘಿಸಿದ ಆರೋಪದಲ್ಲಿ ಏಪ್ರಿಲ್ 2022ರಲ್ಲಿ ಇಡಿ ದಾಳಿ ಮಾಡಲಾಗಿದೆ. ಈ ಕಂಪನಿ 123 ಕೋಟಿ ರೂಪಾಯಿಯನ್ನು ಚುನಾವಣಾ ಬಾಂಡ್ ಮೂಲಕ ದೇಣಿಗೆಯಾಗಿ ನೀಡಿದೆ. ಚೆನ್ನೈ ಗ್ರೀನ್‌ವುಡ್ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆ ಮೇಲೆ 2021ರ ಜುಲೈನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ಸಂಸ್ಥೆ 2022ರ ಜನವರಿಯಲ್ಲಿ ಚುನಾವಣಾ ಬಾಂಡ್‌ ಖರೀದಿಸಿ 105 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಡಾ ರೆಡ್ಡೀಸ್ ಲ್ಯಾಬೋರೆಟರೀಸ್‌ನ ಡಾ ಕೆ ನಾಗೇಂದ್ರ ರೆಡ್ಡಿ ಮೇಲೆ 2023ರ ನವೆಂಬರ್‌ನಲ್ಲಿ ಐಟಿ ದಾಳಿ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ತೆಲಂಗಾಣದ ಶಿಕ್ಷಣ ಸಚಿವರು ಸಬಿತಾ ಇಂದ್ರಾ ರೆಡ್ಡಿಗೆ ಸೇರಿದ ಕಚೇರಿಗಳ ಮೇಲೆಯೂ ದಾಳಿ ಮಾಡಲಾಗಿದೆ. ಅದಾದ ಬಳಿಕ ಈವರೆಗೆ ಡಾ ರೆಡ್ಡೀಸ್ ಲ್ಯಾಬೋರೆಟರೀಸ್‌ ರಾಜಕೀಯ ಪಕ್ಷವೊಂದಕ್ಕೆ 80 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಇನ್ನು ಐಎಫ್‌ಬಿ ಅಗ್ರೋ ಲಿಮಿಟೆಡ್ ಮೇಲೆ 2020ರ ಜೂನ್‌ನಲ್ಲಿ ಡಿಜಿಜಿಎಸ್‌ಟಿ ದಾಳಿ ನಡೆಸಿದೆ. ಈ ಸಂಸ್ಥೆ ಚುನಾವಣಾ ಬಾಂಡ್ ಮೂಲಕ 92 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಎನ್‌ಸಿಸಿ ಲಿಮಿಟೆಡ್ ಸಂಸ್ಥೆಯು 60 ಕೋಟಿ ರೂಪಾಯಿ ಚುನಾವಣಾ ಬಾಂಡ್ ದೇಣಿಗೆ ನೀಡಿದ್ದು, ಈ ಸಂಸ್ಥೆ ಮೇಲೆ 2022ರಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಡಿವೀಸ್ ಲ್ಯಾಬೋರೇಟರಿಸ್‌ 2019ರಲ್ಲಿ ಐಟಿ ದಾಳಿಗೆ ಒಳಗಾಗಿತ್ತು. ಈ ಸಂಸ್ಥೆ ಚುನಾವಣಾ ಬಾಂಡ್ ಮೂಲಕ 55 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಯುಪಿಎಲ್‌ ಸಂಸ್ಥೆ ಮೇಲೆ 2020ರ ಜನವರಿಯಲ್ಲಿ ದಾಳಿ ಆಗಿದೆ. ಈ ಸಂಸ್ಥೆ 50 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಅರಬಿಂದೋ ಫಾರ್ಮಾದ ಡೈರೆಕ್ಟರ್‌ ಶರತ್ ರೆಡ್ಡಿಯನ್ನು ಮನಿಲಾಂಡರಿಂಗ್ ಪ್ರಕರಣದಲ್ಲಿ 2022ರ ನವೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದೆ. ಈ ಸಂಸ್ಥೆ 1.6 ಕೋಟಿ ರೂಪಾಯಿ ಬಾಂಡ್ ದೇಣಿಗೆ ನೀಡಿದೆ.

ಬಿಜೆಪಿ ಟಾಪ್‌ನಲ್ಲಿ

ನಾವು ಯಾವ ಪಕ್ಷಕ್ಕೆ ಅಧಿಕ ದೇಣಿಗೆ ಬಂದಿದೆ ಎಂದು ನೋಡಿದರೆ ಟಾಪ್‌ನಲ್ಲಿ ಇರುವುದು 6060.51 ಕೋಟಿ ರೂಪಾಯಿ ದೇಣಿಗೆ ಪಡೆದ ಬಿಜೆಪಿ. ಎರಡನೇ ಸ್ಥಾನದಲ್ಲಿ 1609.53 ಕೋಟಿ ಪಡೆದ ಟಿಎಂಸಿ ಇದ್ದರೆ ಮೂರನೇ ಸ್ಥಾನದಲ್ಲಿ 1421.85 ಕೋಟಿ ಪಡೆದ ಕಾಂಗ್ರೆಸ್ ಇದೆ. ಬಿಆರ್‌ಎಸ್ 1214.61 ಕೋಟಿ ರೂಪಾಯಿ, ಬಿಜೆಡಿ 775.50 ಕೋಟಿ ದೇಣಿಗೆ ಪಡೆದಿದೆ. ಇವು ಅಧಿಕ ದೇಣಿಗೆ ಪಡೆದ ಐದು ಪಕ್ಷಗಳಾಗಿದೆ.

ಇನ್ನು ಮೇಲೆ ತಿಳಿಸಲಾದ ಸಂಸ್ಥೆಗಳ ಮೇಲೆ ತನಿಖಾ ಸಂಸ್ಥೆಗಳ ದಾಳಿ ಬಳಿಕ ಈ ಸಂಸ್ಥೆಗಳು ದೇಣಿಗೆಯನ್ನು ನೀಡಿದೆ ಎಂದು ಹೇಳಲಾಗದು. ಆದರೆ ತನಿಖಾ ಸಂಸ್ಥೆಗಳು ದಾಳಿ ಮಾಡಿದ ಯಾವೆಲ್ಲ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ ಎಂದು ನಾವು ನೋಡಿದರೆ ಇವಿಷ್ಟು ಸಂಸ್ಥೆಗಳು ಬರುತ್ತದೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಾರ್ಪೋರೇಟ್ ಸಂಸ್ಥೆಗಳಿಂದ ದೇಣಿಗೆ ಲೂಟಿ ಮಾಡಿದೆ ಎಂಬ ಆರೋಪಗಳನ್ನು ಅಲ್ಲಗಳೆಯಲಾಗದು.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, ನಾಲ್ಕು ವರ್ಷಗಳ ಅನುಭವ. ರಾಜಕೀಯ, ಬ್ಯುಜಿನೆಸ್‌ ಸುದ್ದಿಯಲ್ಲಿ ಆಸಕ್ತಿ, ಹಿಡಿತ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶೇ. 0.001 ನಿರ್ಲಕ್ಷ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು: ನೀಟ್‌ ಪರೀಕ್ಷೆ ಬಗ್ಗೆ ಸುಪ್ರೀಂ ಆಕ್ರೋಶ

ನೀಟ್ – ಯುಜಿ 2024ರ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮವೆಸಗಿರುವ...

ಸ್ಪೀಕರ್ ಸ್ಥಾನಕ್ಕೆ ಹಗ್ಗಜಗ್ಗಾಟ; ಬಿಜೆಪಿ ಸಭಾಧ್ಯಕ್ಷ – ಟಿಡಿಪಿಗೆ ಉಪಸಭಾಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ

3ನೇ ಅವಧಿಯ ಎನ್‌ಡಿಎ ಸರ್ಕಾರದಲ್ಲಿ ಬಿಜೆಪಿ ಲೋಕಸಭಾ ಸ್ಪೀಕರ್ ಹುದ್ದೆಯನ್ನು ಉಳಿಸಿಕೊಳ್ಳುವ...

ಇಸಿ ‘ಸಂಪೂರ್ಣ ರಾಜಿ’ ಆಯೋಗ: ಕೋರ್ಟ್‌ ಮೊರೆ ಹೋಗಲಿರುವ ಆದಿತ್ಯ ಠಾಕ್ರೆ

ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದ ಫಲಿತಾಂಶವನ್ನು ನಮ್ಮ ಪಕ್ಷವು ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ...

ತೆಲಂಗಾಣ | 12 ಬಿಆರ್‌ಎಸ್ ಶಾಸಕರು ಕಾಂಗ್ರೆಸ್ ಸೇರುವ ಸಾಧ್ಯತೆ

ಜುಲೈ ಎರಡನೇ ವಾರದಲ್ಲಿ ತೆಲಂಗಾಣ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು...