ಮೈಸೂರು ಹುಣಸೂರು ತಾಲೂಕು ಕಚೇರಿಯ ಮೇಲ್ಛಾವಣಿ ಕುಸಿದು ವೃದ್ಧೆಯೊಬ್ಬರ ಕಾಲಿನ ಬೆರಳು ತುಂಡಾಗಿದ್ದು, ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಹುಣಸೂರಿನ ತಾಲೂಕು ಕಚೇರಿಯಲ್ಲಿ ಮಾ.18ರಂದು ಸಂಜೆ 3.30ರ ಆಸುಪಾಸಿನಲ್ಲಿ ಆಸ್ತಿ ನೊಂದಣಿಗಾಗಿ ತಾಲೂಕು ಕಚೇರಿಗೆ ಬಂದಿದ್ದ ವೃದ್ದೆ ಮೇಲೆ ಮೇಲ್ಛಾವಣಿ ಕುಸಿದು ಬಿದ್ದಿತ್ತು. ಪರಿಣಾಮ ಕಾಲಿನ ಬೆರಳು ತುಂಡಾಗಿದೆ. ಹುಣಸೂರು ತಾಲೂಕು ಕಳ್ಳಿಕೊಪ್ಪಲು ಗ್ರಾಮದ ನಾಗಮ್ಮ(67) ಗಾಯಗೊಂಡು ವೃದ್ದೆಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮಧ್ಯಾಹ್ನ ಸಮಯದಲ್ಲಿ ಆಸ್ತಿ ನೊಂದಣಿಗಾಗಿ ತಾಲೂಕು ಕಚೇರಿ ಬಂದಿದ್ದ ನಾಗಮ್ಮ ಕಚೇರಿ ಪ್ರವೇಶಿಸುವ ದ್ವಾರದ ಜಗುಲಿಯ ಮೇಲೆ ಕುಳಿತಿದ್ದರು. ಈ ವೇಳೆ ಶಿಥಿಲಗೊಂಡಿದ್ದ ಮೇಲ್ಛಾವಣಿ ಕುಸಿದು ಬಿದ್ದಿದೆ. ಛಾವಣಿ ಬಿದ್ದ ರಭಸಕ್ಕೆ ವೃದ್ಧೆಯ ಕಾಲ್ಬೇರೆಳು ತುಂಡಾಗಿದೆ. ತಕ್ಷಣವೇ ಸ್ಥಳೀಯರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿ ತಾಲೂಕು ಕಛೇರಿ ನಡೆಯುತ್ತಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಮತ್ತು ದಸಂಸ ಮುಖಂಡರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಂತರ ಕಟ್ಟಡದ ದುರಸ್ಥಿಗಾಗಿ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.
ಈ ವೇಳೆ ದಸಂಸ ತಾಲೂಕು ಸಂಚಾಲಕ ಆತ್ತಿಕುಪ್ಪೆ ರಾಮಕೃಷ್ಣ, ರಾಜು ಚಿಕ್ಕ ಹುಣಸೂರು, ಶಿವರಾಜ್ ಮುತ್ತುರಾಯನ ಹೊಸಳ್ಳಿ, ಅತ್ತಿಕುಪ್ಪೆ ಸಿದ್ದೇಶ್, ಭುವನ್, ಕೃಷ್ಣ, ಚೆಲುವರಾಜು ಮುಂತಾದವರು ಉಪಸ್ಥಿತರಿದ್ದರು.
