ಪೊಲೀಸರಿಂದ ಹಲ್ಲೆಗೆ ತುತ್ತಾಗಿದ್ದ ಇಬ್ಬರು ಮಹಿಳಾ ಲೈಂಗಿಕ ಕಾರ್ಯಕರ್ತೆಯರಿಗೆ ಪರಿಹಾರವಾಗಿ ರಾಜ್ಯ ಸರ್ಕಾರವು ತಲಾ ₹20 ಸಾವಿರ ಪರಿಹಾರ ನೀಡಿದೆ. ಸರ್ಕಾರದ ಈ ಕ್ರಮವನ್ನು ಪೀಪಲ್ಸ್ ಯೂನಿಯನ್ ಫಾರ್ ಸಿಲ್ ಲೈಬರ್ಟೀಸ್ (ಪಿಯುಸಿಎಲ್) ಸ್ವಾಗತಿಸಿದೆ.
ಗೌರಮ್ಮ (ಹೆಸರು ಬದಲಾಯಿಸಲಾಗಿದೆ) ಮತ್ತು ಸುಮಾ (ಹೆಸರು ಬದಲಾಯಿಸಲಾಗಿದೆ) ವಿರುದ್ಧ ಪೊಲೀಸರು ನಡೆಸಿದ ಹಿಂಸಾಚಾರಕ್ಕಾಗಿ ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗ ₹20,000 ಹಣವನ್ನು ಪರಿಹಾರ ನೀಡುವಂತೆ ಆದೇಶಿಸಿತ್ತು. ಅದರಂಗೆ, ಸರ್ಕಾರವು ಇಬ್ಬರಿಗೂ ಚೆಕ್ ನೀಡಿದೆ.
ಪೊಲೀಸ್ ಠಾಣೆಯಲ್ಲಿ ತಮಗೆ ಕ್ರೂರ ದೈಹಿಕ ಹಿಂಸೆ ನೀಡಿದ್ದಾರೆ ಹಾಗೂ ತಮ್ಮ ಘನತೆ ಮತ್ತು ಸ್ವಾಭಿಮಾನದ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ಅಧಿಕಾರಿಗಳು ಮತ್ತು ಗೃಹ ರಕ್ಷಕರ ವಿರುದ್ಧ ಸಂತ್ರಸ್ತರು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದರು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿಯು ಸಾರ್ವಜನಿಕ ವಿಚಾರಣೆಯ ಆಧಾರದ ಮೇಲೆ ಓಬವ್ವ ಪಡೆಯನ್ನು ವಿಸರ್ಜಿಸಲು ಶಿಫಾರಸನ್ನು ಮಾಡಿದೆ.
ಲೈಂಗಿಕ ಕೆಲಸದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಹಿಂಸೆಯಿಂದ ಮುಕ್ತವಾಗಿರುವ ಹಕ್ಕನ್ನು ಗುರುತಿಸುವ ಪರಿಹಾರದ ಹೊರತಾಗಿಯೂ ಕೂಡಾ, ಅಂತಹ ಹಿಂಸಾಚಾರ ಮರುಕಳಿಸದಂತೆ ನೋಡಿಕೊಳ್ಳಲು ರಾಜ್ಯ ಮಾನವ ಹಕ್ಕು ಆಯೋಗ ಆದೇಶ ನೀಡಿದೆ.
ಲೈಂಗಿಕ ಕೆಲಸದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಬ್ಬರ ಮೇಲಿನ ದೌರ್ಜನ್ಯದ ಭಯವನ್ನು ಕೊನೆಗೊಳಿಸುವ ಐತಿಹಾಸಿಕ ಮೊದಲ ಹೆಜ್ಜೆಯಾಗಿ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮವನ್ನು ಸ್ವಾಗತಿಸುತ್ತೇವೆ ಎಂದುಪಿಯುಸಿಎಲ್ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಲೌಡ್ ಸ್ಪೀಕರ್ ಜಗಳ; ಐವರ ಬಂಧನ
ಪೊಲೀಸ್ ಸಂವೇದನಾ ತರಬೇತಿಗಳನ್ನು ನಡೆಸುವ ಮೂಲಕ ಲೈಂಗಿಕ ಕೆಲಸದಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು, ರಾಜ್ಯವು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬ ನ್ಯಾಯಸಮ್ಮತವಾದ ನಿರೀಕ್ಷೆಯನ್ನು ಹೊಂದಿರುವುದಾಗಿ ಪಿಯುಸಿಎಲ್ ತಿಳಿಸಿದೆ.
“ಪೋಲೀಸ್ ಹಿಂಸಾಚಾರ ಮತ್ತು ಲೈಂಗಿಕ ಕಾರ್ಯಕರ್ತರ ಸಾಮಾಜಿಕ ತಿರಸ್ಕಾರದ ಸಮಸ್ಯೆಗೆ ದೀರ್ಘಾವಧಿಯ ಪರಿಹಾರವೆಂದರೆ ವಯಸ್ಕ ಲೈಂಗಿಕ ಕೆಲಸವನ್ನು ಅಪರಾಧೀಕರಣಗೊಳಿಸುವುದು” ಎಂದು ಪಿಯುಸಿಎಲ್ ಕರ್ನಾಟಕದ ಅಧ್ಯಕ್ಷ ಅರವಿಂದ್ ನೆರೈನ್ ಹೇಳಿದ್ದಾರೆ.