ಒಂದೇ ಲಿಂಗದ ವಿವಾಹಕ್ಕೆ ಶಾಸನಾತ್ಮಕ ಸಮ್ಮತಿ ನೀಡಬೇಕೆಂಬ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್, ತಾನು ವೈಯಕ್ತಿಕ ಕಾನೂನುಗಳ ಕ್ಷೇತ್ರದಿಂದ ಹೊರ ಸರಿಯುತ್ತೇನೆ. ಆದರೆ, ಅಂಥ ಹಕ್ಕನ್ನು ವಿಶೇಷ ವಿಹಾಹ ಕಾಯಿದೆ 1954ರಡಿ ನೀಡಬಹುದೆ ಎಂಬುದನ್ನು ಮಾತ್ರ ಪರಿಶೀಲಿಸುವುದಾಗಿ ಮಂಗಳವಾರ ತಿಳಿಸಿತು.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ, ಇದು ವಿಶೇಷ ವಿವಾಹ ಕಾಯ್ದೆಗೆ ಮಾತ್ರ ಸೀಮಿತಗೊಳಿಸುತ್ತದೆ ಮತ್ತು ಸೂಕ್ಷ್ಮ ಪರಿಶೀಲನೆಗೆ ವಿಸ್ತರಿಸುವುದಿಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್, ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠ, ವಿಷಯವನ್ನು ಒಟ್ಟಾಗಿ ಪ್ರಯತ್ನಿಸುವುದಕ್ಕಿಂತ, ಎಲ್ಲಾ ಆಯಾಮಗಳಿಂದ ಮುಂದುವರಿಯುವುದು ಸೂಕ್ತ ಎಂದು ಹೇಳಿದೆ.
“ಮುಖ್ಯವಾಗಿ “ಶಾಸನಾತ್ಮಕ ಉದ್ದೇಶ ಎನ್ನುವುದು ‘ಜೈವಿಕ ಪುರುಷ ಮತ್ತು ಜೈವಿಕ ಸ್ತ್ರೀ ಎಂಬ ನಿರಪೇಕ್ಷ ಪರಿಕಲ್ಪನೆ” ಎಂದು ಪೀಠ ಹೇಳಿತು.
ಕೇಂದ್ರದ ಪರವಾಗಿ ಎಸ್ ಜಿ ತುಷಾರ್ ಮೆಹ್ತಾ, ಅರ್ಜಿದಾರರ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದರು.
‘ಈ ಅರ್ಜಿಗಳಲ್ಲಿ ಪ್ರಸ್ತಾಪಿಸಲಾಗಿರುವ ವಿಷಯಗಳು ಸಂಕೀರ್ಣವಾಗಿವೆ. ವಿಶೇಷ ವಿವಾಹ ಕಾಯ್ದೆಯಲ್ಲಿ ವಿವರಿಸಿರುವಂತೆ, ಈ ವಿಷಯದಲ್ಲಿ (ಸಲಿಂಗ ಮದುವೆ) ಪುರುಷ ಮತ್ತು ಮಹಿಳೆ ಎಂಬ ಕಲ್ಪನೆಗೆ ಜನನಾಂಗಗಳೆ ಆಧಾರವೆಂದು ಪರಿಗಣಿಸಲು ಆಗುವುದಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
‘ಇಲ್ಲಿರುವ ಪ್ರಶ್ನೆ, ಜನನೇಂದ್ರೀಯ ಎಂಥವು ಎಂಬುದಲ್ಲ. ಅದಕ್ಕಿಂತಲೂ ಸಂಕೀರ್ಣವಾದ ಅಂಶಗಳನ್ನು ಈ ವಿಷಯ ಒಳಗೊಂಡಿದೆ’ ಎಂದಿತು.
ಲಿಂಗ ಪರಿವರ್ತಿತರ ಕುರಿತು ಪ್ರಸ್ತಾಪಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಸಂಗಾತಿಗಳನ್ನು ಅಯ್ಕೆ ಮಾಡಿಕೊಳ್ಳುವ ಹಕ್ಕು, ಖಾಸಗಿತನ ಹಕ್ಕು, ಲೈಂಗಿಕತೆಯ ಆಯ್ಕೆ ಹಕ್ಕು ಸೇರಿದಂತೆ ಹಲವಾರು ಹಕ್ಕುಗಳಿವೆ. ಈ ವಿಷಯದಲ್ಲಿ ಮಾಡುವ ಯಾವುದೇ ತಾರತಮ್ಯದ ವಿರುದ್ಧ ಕಾನೂನುಕ್ರಮಕ್ಕೆ ಅವಕಾಶ ಇದೆ’ ಎಂದರು.
ಆದರೆ, ಮದುವೆಗಳಿಗೆ ಬೇಕಾದ ಸಾಮಾಜಿಕ–ಕಾನೂನಾತ್ಮಕ ಸ್ಥಾನಮಾನವನ್ನು ನ್ಯಾಯಿಕ ನಿರ್ಧಾರಗಳ ಮೂಲಕ ನೀಡಬಾರದು. ಶಾಸಕಾಂಗದಿಂದಲೂ ಇದು ಆಗಬಾರದು. ಇಂಥ ಮದುವೆಗಳನ್ನು ಸ್ವೀಕರಿಸುವ ಮನೋಧರ್ಮ ಸಮಾಜದ ಒಳಗಿನಿಂದಲೇ ಬರಬೇಕು’ ಎಂದು ಮೆಹ್ತಾ ಹೇಳಿದರು.
‘ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿ ಸಲಿಂಗ ಮದುವೆ ಹಕ್ಕು ಬೇಕು ಹಾಗೂ ಹಿಂದೂವಾಗಿಯೇ ಇರುತ್ತೇನೆ ಎಂದಾಗ ಸಮಸ್ಯೆ ಆರಂಭವಾಗುತ್ತದೆ. ಹಿಂದೂಗಳು, ಮುಸ್ಲಿಮರು ಹಾಗೂ ಇತರ ಸಮುದಾಯಗಳ ಮೇಲೆ ಸಲಿಂಗ ಮದುವೆ ಪದ್ಧತಿ ಪರಿಣಾಮ ಬೀರುತ್ತದೆ. ಹೀಗಾಗಿ, ಈ ವಿಷಯ ಕುರಿತು ಎಲ್ಲ ರಾಜ್ಯಗಳ ಅಹವಾಲು ಆಲಿಸುವುದು ಅಗತ್ಯ’ ಎಂದರು.
‘ಇದೇ ಕಾರಣಕ್ಕಾಗಿಯೇ ನಾವು ವೈಯಕ್ತಿಕ ಕಾನೂನುಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಆದರೆ, ಆ ಕಾನುನುಗಳನ್ನು ನಾವು ಪರಿಗಣಿಸಬೇಕು ಎಂದು ನೀವು ಬಯಸುತ್ತಿದ್ದೀರಿ. ಪ್ರತಿಯೊಂದರ ಕುರಿತು ವಿಚಾರಣೆ ನಡೆಸುವಂತೆ ನಮ್ಮನ್ನು ಬಲವಂತ ಮಾಡಬೇಡಿ’ ಎಂದು ನ್ಯಾಯಪೀಠ ಹೇಳಿತು.
‘ಹಾಗಾದರೆ, ಕೇಂದ್ರದ ನಿಲುವನ್ನು ಆಲಿಸದೇ ನಿರ್ಣಯಿಸದಂತಾಗುತ್ತದೆ’ ಎಂದು ಮೆಹ್ತಾ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯನ್ಯಾಯಮೂರ್ತಿ ಚಂದ್ರಚೂಡ್, ‘ನಾವು ಮಧ್ಯಮ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಒಂದು ವಿಷಯವನ್ನು ಇತ್ಯರ್ಥಪಡಿಸುವ ಸಲುವಾಗಿ ನಾವು ಪ್ರತಿಯೊಂದು ವಿಷಯವನ್ನು ಇತ್ಯರ್ಥಪಡಿಸಬೇಕಾಗಿಲ್ಲ’ ಎಂದರು.
ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು ಕೇಂದ್ರದ ನಿಲುವನ್ನು ಬೆಂಬಲಿಸಿದರು.
ಜಮಿಯತ್–ಉಲೇಮಾ–ಎ–ಹಿಂದ್ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಅರ್ಜಿದಾರರೊಬ್ಬರ ಪರ ಮುಕುಲ್ ರೋಹ್ಟಗಿ ವಾದ ಮಂಡಿಸಿದರು. ಬುಧವಾರವೂ ವಿಚಾರಣೆ ಮುಂದುವರಿಯಲಿದೆ.
ಸಾಲಿಸಿಟರ್ ಜನರಲ್ – ಸಿಜೆಐ ನಡುವೆ ಬಿರುಸಿನ ಮಾತುಗಳಿಗೆ ಸಾಕ್ಷಿಯಾದ ಸಲಿಂಗ ವಿವಾಹ ಪ್ರಕರಣ
ಸಲಿಂಗ ವಿವಾಹಕ್ಕೆ ಕಾನೂನು ಮನ್ನಣೆ ನೀಡುವುದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಯೋಚಿಸುವುದಾಗಿ ಕೇಂದ್ರ ಸರ್ಕಾರ ಹೇಳುವುದರೊಂದಿಗೆ ಕಾವೇರಿದ ಕಲಾಪಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಸಾಕ್ಷಿಯಾಯಿತು.
ಅರ್ಜಿಗಳ ನಿರ್ವಹಣೆಗೆ ಯೋಗ್ಯವೇ ಎನ್ನುವುದರ ಕುರಿತಂತೆ ಕೇಂದ್ರ ಸರ್ಕಾರದ ವಾದವನ್ನು ಮೊದಲು ಆಲಿಸಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿರಸ್ಕರಿಸುವುದರೊಂದಿಗೆ ಈ ಬೆಳವಣಿಗೆ ನಡೆಯಿತು.
ವಿಷಯವು ಶಾಸಕಂಗದ ವ್ಯಾಪ್ತಿಗೆ ಬರುವುದರಿಂದ ಅರ್ಜಿಗಳು ನಿರ್ವಹಣೆಗೆ ಯೋಗ್ಯವೇ ಎನ್ನುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಾದವನ್ನು ಮೊದಲು ಆಲಿಸಬೇಕು ಎಂದು ಮೆಹ್ತಾ ವಾದ ಆರಂಭಿಸಿದರು. ಈ ವಿಚಾರ ಸಂಸತ್ತಿನ ವ್ಯಾಪ್ತಿಗೆ ಬರುವುದರಿಂದ ಈ ಮನವಿ ಮಾಡುತ್ತಿದ್ದೇನೆ ಎಂದರು.
“ನಾವು ಪ್ರಾಥಮಿಕ ಆಕ್ಷೇಪಣೆ ಎತ್ತುವ ಅರ್ಜಿಯನ್ನು ಸಲ್ಲಿಸುತ್ತಿದ್ದೇವೆ. ನ್ಯಾಯಾಲಯವು ಈ ವಲಯವನ್ನು ಪ್ರವೇಶಿಸಲು ಸಾಧ್ಯವೇ ಅಥವಾ ಸಂಸತ್ತಷ್ಟೇ ಅದನ್ನು ಮಾಡಬಹುದೇ? ಸಮಾಜೋ- ನ್ಯಾಯಿಕ ಸಂಸ್ಥೆಯನ್ನು ರಚಿಸುವ ಅಥವಾ ರೂಪಿಸುವ ಕಾರ್ಯವನ್ನು ನ್ಯಾಯಾಲಯ ಮಾಡಬೇಕೆ, ಇಲ್ಲವೇ ಶಾಸಕಾಂಗ ಮಾಡಬೇಕೆ ಎಂಬ ಚರ್ಚೆ ಮೊದಲುಗೊಳ್ಳಬೇಕಿದೆ” ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ಸುದ್ದಿ ನೋಟ | ಸುಪ್ರೀಂ ಕೋರ್ಟ್ನಲ್ಲಿ ಸಲಿಂಗ ವಿವಾಹ ಮಾನ್ಯತೆಗೆ ಸಲ್ಲಿಸಿದ ಅರ್ಜಿಗಳ ವಿಚಾರಣೆ
ಆದರೆ, ಪ್ರಕರಣದ ವಿಸ್ತೃತ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ನ್ಯಾಯಾಲಯ ಕೆಲ ಸಮಯದವರೆಗೆ ಅರ್ಜಿದಾರರ ಅಹವಾಲುಗಳನ್ನು ಆಲಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದರು.
“ನಾವು ವಿಚಾರಣಾರ್ಹತೆಯ ಕುರಿತ ವಾದಗಳನ್ನು ಆಲಿಸಬೇಕು. ಅದು ನಮ್ಮ ಮನಸ್ಸಿನಿಂದ ಮರೆಯಾಗದು. ಮುಂದಿನ ಹಂತದಲ್ಲಿ ನಿಮ್ಮ ವಾದ ಆಲಿಸಲಿದ್ದೇವೆ. ನಮಗೆ ಮೊದಲಿಗೆ ಪ್ರಕರಣದ ಒಂದು ಚಿತ್ರಣ ದೊರೆಯಬೇಕಿದೆ. ಮೊದಲು 15 ರಿಂದ 20 ನಿಮಿಷಗಳು ಅರ್ಜಿದಾರರ ವಾದವನ್ನು ಆಲಿಸೋಣ. ಅಹವಾಲು ತಿಳಿಯೋಣ. ಅರ್ಜಿದಾರರ ವಾದವನ್ನು ನಾವು ಮುಂಚಿತವಾಗಿಯೇ ತಡೆಯಲು ಸಾಧ್ಯವಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ “ಈ ವಿಚಾರವನ್ನು ನಿರ್ಧರಿಸಲು ಯಾವ ಸಾಂವಿಧಾನಿಕ ವೇದಿಕೆ ಸೂಕ್ತ ಎನ್ನುವುದರ ಬಗ್ಗೆ ನನ್ನ ವಾದವಿರಲಿದೆ. ಈ ವಿಚಾರವನ್ನು ಪ್ರಸ್ತಾಪಿಸುವ ವೇಳೆ ನಾವು ಪ್ರಕರಣದ ವಿಚಾರಣಾರ್ಹತೆಯ ಬಗ್ಗೆ ಚರ್ಚಿಸಲು ಹೋಗುವುದಿಲ್ಲ” ಎಂದರು.
ಈ ಹಂತದಲ್ಲಿ ಮುಖ್ಯ ನ್ಯಾಯಮೂರ್ತಿ “ಮೊದಲು ಪ್ರಕರಣದ ಚಿತ್ರಣವನ್ನು ತಿಳಿಯೋಣ” ಎಂದರು. ಪಟ್ಟು ಬಿಡದ ಮೆಹ್ತಾ ತಮ್ಮ ಪ್ರಾಥಮಿಕ ವಾದಕ್ಕೆ ಅವರು ಉತ್ತರಿಸಲಿ ಎಂದು ಒತ್ತಾಯಿಸಿದರು.
ಆಗ ಸಿಜೆಐ “ಇಲ್ಲಿ ನಾನು ಉಸ್ತುವಾರಿಯಾಗಿದ್ದೇನೆ, ಪ್ರಕರಣ ಹೇಗೆ ನಡೆಯಬೇಕು ಎನ್ನುವುದನ್ನು ನಾನೇ ನಿರ್ಧರಿಸುತ್ತೇನೆ… ನಾವು ಅರ್ಜಿದಾರರನ್ನು ಮೊದಲು ಆಲಿಸೋಣ. ನ್ಯಾಯಾಲಯಲ್ಲಿ ಹೇಗೆ ವಿಚಾರಣೆ ನಡೆಯಬೇಕು ಎಂದು ನಿರ್ದೇಶಿಸುವುದಕ್ಕೆ ನಾನು ಯಾರಿಗೂ ಅವಕಾಶ ನೀಡುವುದಿಲ್ಲ” ಎಂದು ತಿರುಗೇಟು ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ, ವಿಚಾರಣೆಯಲ್ಲಿ ಭಾಗವಹಿಸಬೇಕೆ ಬೇಡವೇ ಎಂಬ ಬಗ್ಗೆ ನಿರ್ಧರಿಸಲು ಸರ್ಕಾರ ಸಮಯ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
“ಸರ್ಕಾರ ವಿಚಾರಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳುತ್ತಿರುವಿರೇನು?” ಎಂದು ನ್ಯಾ ಸಂಜಯ್ ಕಿಶನ್ ಕೌಲ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೆಹ್ತಾ ”ದಕ್ಷಿಣ ಭಾರತದ ರೈತರು ಅಥವಾ ಉತ್ತರ ಭಾರತದ ವ್ಯಾಪಾರಸ್ಥರು ಏನು ಯೋಚಿಸುತ್ತಾರೆ ಎಂಬುದು ನಮಗಾರಿಗೂ ತಿಳಿದಿರುವುದಿಲ್ಲ” ಎಂದು ಮಾರ್ಮಿಕವಾಗಿ ಹೇಳಿದರು.
ಈ ನಡುವೆ, “ಪ್ರಕರಣ ಮುಂದೂಡುವುದನ್ನು ಹೊರತುಪಡಿಸಿ ಯಾವುದೇ ಮನವಿ ಪರಿಗಣಿಸುತ್ತೇವೆ” ಎಂದು ಸಿಜೆಐ ಸ್ಪಷ್ಟಪಡಿಸಿದರು.
“ವಿಚಾರಣೆಯಲ್ಲಿ ಭಾಗವಿಸುವುದೋ ಬೇಡವೋ ಎಂಬುದನ್ನು ನಿರ್ಧರಿಸುವುದಾಗಿ ಸರ್ಕಾರ ಹೇಳುವುದು ಸರಿಯಾಗಿ ಕಾಣುತ್ತಿಲ್ಲ. ಇದು ಬಹು ಮುಖ್ಯ ವಿಚಾರ” ಎಂದು ನ್ಯಾಯಮೂರ್ತಿ ಕೌಲ್ ನುಡಿದರು. ಬಳಿಕ ನ್ಯಾಯಾಲಯ ಅರ್ಜಿದಾರರ ವಿಚಾರಣೆ ನಡೆಸಿತು.