ಚಾಮರಾಜನಗರ ಲೋಕಸಭಾ ಕ್ಷೇತ್ರ ಎಸ್‌ಸಿ ಮೀಸಲು ಕ್ಷೇತ್ರ. ಈ ಹಿಂದೆ ಮೈಸೂರು ಜಿಲ್ಲೆಗೆ ಸೇರಿತ್ತು. ಭಾರತದ 50ನೇಯ ಸ್ವಾತಂತ್ರ್ಯ ಮಹೋತ್ಸವದ ನೆನಪಿನಾರ್ಥ ಅಂದಿನ ಮುಖ್ಯ ಮಂತ್ರಿಗಳಾದ ಜೆ.ಎಚ್. ಪಟೇಲ್ ಆಗಸ್ಟ್ 15, 1997ರಂದು ಚಾಮರಾಜ ನಗರ ಜಿಲ್ಲೆಯಾಗಿ ಚಾಲನೆ ನೀಡಿದರು.
ಚಾಮರಾಜನಗರ ರಾಜಕಾರಣಿಗಳಿಗೆ ʼಶಾಪಗ್ರಸ್ತʼ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿದೆ. ಇಲ್ಲಿಗೆ ಕಾಲಿಟ್ಟರೆ ಅಧಿಕಾರ ಹೋಗುತ್ತದೆ ಅನ್ನುವ ನಂಬಿಕೆ ರಾಜಕೀಯ ವಲಯದಲ್ಲಿತ್ತು. ಆದರೆ ಮೌಢ್ಯಗಳ ಕಡು ವಿರೋಧಿ ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೂ ಜಿಲ್ಲೆಗೆ ಪದೇ ಪದೇ ಬಂದು ಹೋಗಿದ್ದಾರೆ. ಈ ಬಾರಿಯೂ ಮೊನ್ನೆಯಷ್ಟೇ ಧ್ರುವನಾರಾಯಾಣ್ ಪುಣ್ಯಸ್ಮರಣೆ ಕಾರ್ಯಕ್ಕೆ ಹೋಗಿ ಬಂದಿದ್ದಾರೆ.
ಇದು ಬರದ ನಾಡು, ಮೂಲಭೂತ ಸೌಕರ್ಯ ವಂಚಿತ ನಗರ, ಜಿಲ್ಲೆಯಾದರು ಸಹ ಇದುವರೆಗೆ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂಬ ನೋವು ಕ್ಷೇತ್ರದ ಜನರಲ್ಲಿದೆ.
ಜಿಲ್ಲೆಯಂತೆ ಕಂಗೊಳಿಸುವುದೆ ಇಲ್ಲ
ಚಾಮರಾಜ ನಗರ ವನಸಿರಿಯನ್ನೇ ಹೊದ್ದು ಮಲಗಿದೆ. ಒಂದು ಕಡೆ ಮಲೆ ಮಹದೇಶ್ವರ ಬೆಟ್ಟ. ಕಾವೇರಿ ಮೀಸಲು ಅರಣ್ಯ ಪ್ರದೇಶ, ಇನ್ನೊಂದು ಕಡೆ ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ, ಮತ್ತೊಂದೆಡೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ. ಎಲ್ಲಿ ನೋಡಿದರೂ ಬೆಟ್ಟ ಗುಡ್ಡಗಳು, ವನ್ಯ ಜೀವಿಗಳಿಗೆ ಆಶ್ರಯ ತಾಣ. ಹಿಮವದ್ ಗೋಪಾಲ ಸ್ವಾಮಿ, ಮಲೆ ಮಹದೇಶ್ವರ, ಬಿಳಿಗಿರಿ ರಂಗನಾಥ, ಚಾಮರಾಜೇಶ್ವರ ದೇವಾಲಯ, ಯಳಂದೂರಿನ ಬಳೆ ದೇವಾಲಯ, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು.
ಸಾಂಸ್ಕೃತಿಕವಾಗಿ ವರನಟ ಡಾ. ರಾಜ್ ಕುಮಾರ್ ಹುಟ್ಟಿದ ಮಣ್ಣು ಸಿಂಗಾನಲ್ಲೂರು. ಜಾನಪದ ಸಾಹಿತ್ಯಕ್ಕೆ ಮೆರುಗು ತಂದ ಪುಣ್ಯಭೂಮಿ, ಚಿಕ್ಕಾನಲ್ಲೂರು ಸಿದ್ದಪ್ಪಾಜಿ, ರಾಜಪ್ಪಾಜಿ, ಚನ್ನಾಜಮ್ಮ, ಬೊಪ್ಪಣ್ಣಪುರದ ಮಂಟೆದ ಲಿಂಗಯ್ಯ ಜನರ ಜೀವನದಲ್ಲಿ ಹಾಸು ಹೊಕ್ಕಾಗಿದ್ದಾರೆ.
ಬದನವಾಳಿಗೆ 1927ರಲ್ಲಿ ಮಹಾತ್ಮ ಗಾಂಧಿ ಭೇಟಿ ಕೊಟ್ಟು ಮೂರು ದಿನಗಳ ಕಾಲ ವಾಸ್ತವ್ಯ ಮಾಡಿದ್ದರು. ಈಗಲು ಕೈಮಗ್ಗ, ನೂಲು ನೆಯ್ಯುವುದು, ಖಾದಿ ಬಟ್ಟೆ ಸಿದ್ಧವಾಗುತ್ತದೆ. ಹೋಗೇನಕಲ್ ಫಾಲ್ಸ್ ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣ.
ಚಾಮರಾಜನಗರ ಎಷ್ಟು ಖ್ಯಾತಿಯೋ ಹೊಂದಿದಿಯೋ, ನರಹಂತಕ ಕಾಡುಗಳ್ಳ ವೀರಪ್ಪನ್ ನಿಂದಾಗಿ ಅಷ್ಟೇ ಕುಖ್ಯಾತಿ ಹೊಂದಿದ್ದನ್ನು ಮರೆಯುವಂತೆ ಇಲ್ಲ. ಡಾ. ರಾಜ್‌ಕುಮಾರ್ ಅವರನ್ನು ಹೊತ್ತೊಯ್ದ ಸಂದರ್ಭ ಇಡೀ ದೇಶವೇ ಚಾಮರಾಜನಗರದ ಕಡೆ ತಿರುಗಿ ನೋಡುವಂತೆ ಆಗಿತ್ತು. ಕೃಪಾಕರ ಸೇನಾನಿ, ಕಾಮಗೆರೆ ನಾಗಪ್ಪ ಅಪಹರಣ, ರಾಮಾಪುರ ಪೊಲೀಸ್ ಠಾಣೆ ಮೇಲಿನ ಗುಂಡಿನ ದಾಳಿ, ಪಾಲಾರ್ ಬಾಂಬ್ ಸ್ಫೋಟ ರಾಜ್ಯದ ಗಮನ ಸೆಳೆದಿದ್ದವು.
ಚಾಮರಾಜ ನಗರ ಲೋಕಸಭಾ ಕ್ಷೇತ್ರಕ್ಕೆ ಮೈಸೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಸೇರುತ್ತವೆ. ಅದರಲ್ಲಿ ಹೆಗ್ಗಡದೇವನ ಕೋಟೆ, ಟಿ.ನರಸೀಪುರ, ನಂಜನಗೂಡು, ವರುಣಾ. ಇದರಲ್ಲಿ ಬಹುತೇಕ ಎಸ್‌ಸಿ ಹಾಗೂ ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರಗಳು ಸೇರಿವೆ.
ಇದರಲ್ಲಿ ವಿಶೇಷ ಅಂದ್ರೆ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ.
ಚಾಮರಾಜ ನಗರ ಲೋಕಸಭಾ ಕ್ಷೇತ್ರದಲ್ಲಿ 17 ಲಕ್ಷದ 57 ಸಾವಿರದ 616 ಮತದಾರರಿದ್ದಾರೆ. 8 ಲಕ್ಷದ 69 ಸಾವಿರದ 389 ಪುರುಷರು, 8 ಲಕ್ಷದ 88 ಸಾವಿರದ113 ಮಹಿಳೆಯರು, 114 ಲಿಂಗತ್ವ ಅಲ್ಪಸಂಖ್ಯಾತ ಮತದಾರರನ್ನು ಹೊಂದಿದೆ.
ಇದುವರೆಗೆ 17 ಸಂಸದರನ್ನು ಕಂಡಿದೆ
1952 ಎನ್. ರಾಚಯ್ಯ, ಕಾಂಗ್ರೆಸ್
1957, 1962, 1967 ಹಾಗೂ 1971 ಎಸ್.ಎಂ. ಸಿದ್ದಯ್ಯ, ಕಾಂಗ್ರೆಸ್
1977 ಬಿ. ರಾಚಯ್ಯ, ಕಾಂಗ್ರೆಸ್
1980, 1984, 1989 ಹಾಗೂ 1991 ವಿ. ಶ್ರೀನಿವಾಸ್ ಪ್ರಸಾದ್, ಕಾಂಗ್ರೆಸ್(ಐ) ಹಾಗೂ ಕಾಂಗ್ರೆಸ್
1996 ಮತ್ತು 1998 ಎ. ಸಿದ್ದರಾಜು, ಜನತಾದಳ
1999 ವಿ. ಶ್ರೀನಿವಾಸ್ ಪ್ರಸಾದ್, ಜನತಾದಳ (ಸಂಯುಕ್ತ)
2004 ಕಾಗಲವಾಡಿಶಿವಣ್ಣ, ಜಾತ್ಯತೀತ ಜನತಾದಳ
2009 ದ್ರುವ ನಾರಾಯಣ್, ಕಾಂಗ್ರೆಸ್
2019 ವಿ. ಶ್ರೀನಿವಾಸ್ ಪ್ರಸಾದ್, ಭಾರತೀಯ ಜನತಾ ಪಾರ್ಟಿ
ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಗಮನಿಸಿದಾಗ ವಿ. ಶ್ರೀನಿವಾಸ್ ಪ್ರಸಾದ್ ಹೆಚ್ಚು ಬಾರಿ ಹಲವು ಪಕ್ಷಗಳಿಂದ ಸಂಸದರಾಗಿ ಆಯ್ಕೆ ಆಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಹಿರಿತನಕ್ಕೆ ಗೌರವ ಕೊಡದೆ ಮಂತ್ರಿ ಸ್ಥಾನದಿಂದ ತೆಗೆದು ಅವಮಾನಿಸಿದೆ ಎಂದು ಜನರ ಮುಂದೆ ಹೋದಾಗ ಅನುಕಂಪದ ಅಲೆಯಲ್ಲಿ ಕೇವಲ 1,817 ಮತಗಳ ಅಂತರದಲ್ಲಿ ಧ್ರುವ ನಾರಾಯಣ್ ಅವರ ಎದುರು ಗೆದ್ದು ಮೊದಲ ಭಾರಿ ಬಿಜೆಪಿ ಖಾತೆ ತೆರೆಯಲು ಕಾರಣರಾದರು. ಈಗ ಧ್ರುವ ನಾರಾಯಣ್ ಇಲ್ಲ.
ಆದರೆ, ಈ ಭಾರಿ ಅಂತಹ ಸನ್ನಿವೇಶ ಕ್ಷೇತ್ರದಲ್ಲಿ ಇಲ್ಲ ಮೂಲಭೂತ ಸೌಲಭ್ಯಗಳು, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದ್ದು. ಈ ಭಾರಿ ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮತ ಹಾಕುವ ದಾಟಿಯಲ್ಲಿದೆ ಮತದಾರರ ಅಭಿಪ್ರಾಯ. ಅಲ್ಲದೇ ಧ್ರುವನಾರಾಯಣ್ ಅಕಾಲಿಕ ಅಗಲಿಕೆಯು ಸಹ ಜನರಿಗೆ ಮರೆಯಲು ಸಾಧ್ಯವಾಗಿಲ್ಲ. ಜನರ ಒಲವು ಯಾರ ಕಡೆಗೆ ಎಂಬುದು ಅಭ್ಯರ್ಥಿಗಳ ಘೋಷಣೆಯ ನಂತರ ಗೊತ್ತಾಗಲಿದೆ.

ಚಾಮರಾಜನಗರ ಲೋಕಸಭಾ ಕ್ಪೇತ್ರದ ಪ್ರಮಾಣ ಅಭಿವೃದ್ಧಿ ಗಾಗಿ ಮಲ್ಲಿಕಾರ್ಜುನ ಖರ್ಗೆಯವರ ಆಗಮನವಾಗಲಿ..!!
ಶಾಪಗ್ರಸ್ಥ ಜಿಲ್ಲೆ ಯೆಂದೆ ಕರೆಯಲ್ಪಡುವ,ಎರಡು ರಾಜ್ಯಗಳೊಂದಿಗೆ ಗಡಿಗಳನ್ನು ಹಂಚಿಕೊಂಡಿರುವ,ಆನೇಕ ಧಾರ್ಮಿಕ ಸ್ಥಳಗಳು,ಮೀಸಲು ಅರಣ್ಯ ಪ್ರದೇಶಗಳು, ಪ್ರವಾಸಿ ಸ್ಥಳಗಳನ್ನು ಹೊಂದಿರುವ 17 ಸಂಸದರನ್ನು ಖಂಡಿರುವ ಚಾಮರಾಜನಗರ ಜಿಲ್ಲೆಯೂ ಇಲ್ಲಿಯವರೆಗೂ ಅಭಿವೃದ್ಧಿ ಯನ್ನೇ ಕಾಣದಿರುವುದು ದುರಂತ.ಕನ್ನಡದ ಕಂಠೀರವ ಡಾ. ರಾಜ್ ರ ತವರು ಜಿಲ್ಲೆಯಾಗಿರುವ ಚಾಮರಾಜನಗರವೂ ಅಭಿವೃದ್ಧಿ ಯಲ್ಲಿ ಬಹಳ ಹಿಂದೆ ಉಳಿದಿದೆ.ಇಲ್ಲಿನ ರಾಜಕಾರಣಿಗಳು ಕೇವಲ ಚುನಾವಣೆಯ ಸಮಯದಲ್ಲಷ್ಟೇ ಕ್ಷೇತ್ರದ ಅಭಿವೃದ್ಧಿ ಯ ಬಗ್ಗೆ ಮಾತಾನಾಡುತ್ತಾರೆಯೇ ವಿನಃ ಗೆದ್ದನಂತರ ದೂರದ ಮೈಸೂರು ಬೆಂಗಳೂರು ಕಡೆ ಹೊರಟರೇ ಕ್ಷೇತ್ರದ ಕಡೆ ಸುಳಿಯುವುದು ಕೇವಲ ವೇದಿಕೆ ಕಾರ್ಯಕ್ರಮಗಳು ಆದಾಗ ಮಾತ್ರ ಅದು ಬಿಟ್ಟರೆ ಜನರ ಸಂಪರ್ಕಕ್ಕೆ ಸಿಗುವುದಿಲ್ಲ.ಇಲ್ಲಿಮ ಜನರ ಕಷ್ಟಕ್ಕೆ ಸ್ಪಂಧಿಸುವುದಿಲ್ಲ.ಚಾಮರಾಜನಗರ ಲೋಕಸಭಾ ವ್ಯಾಪ್ತಿಯಲ್ಲಿ ಬರುವ,ವರುಣಾ,ಟಿ.ನರಸೀಪುರ, ನಂಜನಗೂಡು ಕ್ಷೇತ್ರಗಳು ತಕ್ಕ ಮಟ್ಟಿಗ ಅಭಿವೃದ್ಧಿ ಯನ್ನ ಕಂಡಿರಬಹುದು ಆದರೆ ಇನ್ನುಳಿದ ಕ್ಷೇತ್ರಗಳಲ್ಲಿ ಅಭಿವೃದ್ದಿ ಶೂನ್ಯ.ಚಾಮರಾಜನಗರ ಜಿಲ್ಲೆಗೆ ಬರುವ ಗ್ರಾಮಗಳಲ್ಲಿ ಅಭಿವೃದ್ದಿ ಎಂದರೆ ಅಚ್ಚರಿಯ ಪದವೆಂದೂ ಆಶ್ಚರ್ಯ ಪಡುವಂತಾಗಿದೆ..ರಸ್ತೆಗಳು ಕುಡಿಯುವ ನೀರು ಶಾಲೆಗಳು, ಇನ್ನೂ ಆನೇಕ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವುದಂತು ಸತ್ಯ..ಯುವಕರು ನಿರುದ್ಯೋಗದ ಸಮಸ್ಯೆಯಿಂದ ಬೇರೆ ನಗರದ ಕಡೆ ಗುಳೆ ಹೋಗುತ್ತಿದ್ದಾರೆ ಇಂತಃ ಎಲ್ಲಾ ಕೊರತೆಗಳಿಗೆ ಅಂತ್ಯ ಆಡಲು ಸಮರ್ಥ ನಾಯಕರು.ಕ್ಷೇತ್ರದ ಅಭಿವೃದ್ಧಿ ಗೆ ಶ್ರಮಿಸುವ ಸಂಸದರ ಅಗತ್ಯ ಅತ್ಯಗತ್ಯ ಈ ನಿಟ್ಡಿನಲ್ಲಿ ನೋಡುವುದಾದರೆ ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ಸೂಕ್ತವಾದಂತಃ ವ್ಯಕ್ತಿ ಎನ್ನುವುದು ನನ್ನ ಅಭಿಪ್ರಾಯ. ಏಕೆಂದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅವರ ಕಾರ್ಯವೈಖರಿ ಆ ಜಿಲ್ಲೆಗೆ ವಿಶೇಷ ಸ್ಥಾನಮಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಅವರ ಪರಿಶ್ರಮ ಬಹಳ ದೊಡ್ಡದು ಹಾಗಾಗಿ ನಮ್ಮಕ್ಷೇತ್ರಕ್ಕೇ ಈ ಭಾರಿ ಅವರೇ ಅಭ್ಯರ್ಥಿಯಾದರೆ ಚಾಮರಾಜನಗರ ಕ್ಷೇತ್ರವು ಮತ್ತೇ ಕಾಂಗ್ರೆಸ್ ತೆಕ್ಕೆಗೆ ಬರುವುದರಲ್ಲಿ ಎರಡು ಮಾತಿಲ್ಲ.ಅವರನ್ನು ಹೊರತು ಪಡಿಸಿ ಹೊಸಬರಿಗೆ ಮಣೆ ಹಾಕಿದರೆ ಸೋಲು ಕಟ್ಟಿಟ್ಟ ಬುತ್ತಿ