ಬೀದರ್‌ | ಜಿಲ್ಲೆಯಲ್ಲಿ ತೀವ್ರ ಬರ; ನೀರಿಗಾಗಿ ತೆಲಂಗಾಣಕ್ಕೆ ಹೊರಟ ತಾಂಡಾ ಜನರು

Date:

Advertisements

ಬೀದರ್‌ ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರಿದಂತೆ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಮುಂಗಾರು-ಹಿಂಗಾರು ಮಳೆ ದೊಡ್ಡ ಪ್ರಮಾಣದಲ್ಲಿ ಕೈಕೊಟ್ಟ ಪರಿಣಾಮ ಕೆರೆ, ಕಟ್ಟೆ, ಬಾವಿ, ಕೊಳ್ಳಗಳೆಲ್ಲ ಬತ್ತಿವೆ. ಅಂತರ್ಜಲ ಮಟ್ಟ ಪಾತಾಳ ಸೇರಿದೆ.

ಜಿಲ್ಲೆಯ 120 ಕ್ಕೂ ಅಧಿಕ ಗ್ರಾಮಗಳಲ್ಲಿ ಜಲಕ್ಷಾಮದ ಆತಂಕ ಎದುರಾಗಿದೆ. ಅದರಲ್ಲೂ ಔರಾದ ಪಟ್ಟಣ ಸೇರಿದಂತೆ ತಾಲೂಕಿನ ಕೆಲವೆಡೆ ಗ್ರಾಮ, ತಾಂಡಾಗಳಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಬೇಸಿಗೆ ಆರಂಭದಲ್ಲೇ ನೀರಿನ ಬವಣೆ ತಲೆದೋರಿದೆ. ಮಹಿಳೆಯರು, ಮಕ್ಕಳು ಪ್ರತಿನಿತ್ಯವೂ ನೀರಿಗಾಗಿ ಹೊಲ, ಗದ್ದೆಗಳಿಗೆ ಅಲೆದಾಡುತ್ತಿದ್ದಾರೆ.

ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಔರಾದ ತಾಲೂಕಿನ ವಿಜಯನಗರ ತಾಂಡಾ (ಬಾರ್ಡರ್)ದಲ್ಲಿ ಕಳೆದ ಎರಡು ವರ್ಷಗಳಿಂದ ನೀರಿನ ಕೊರತೆ ಇದೆ. ಆದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ತಾಂಡಾ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ.

Advertisements

ನೀರಿಗಾಗಿ ತೆಲಂಗಾಣದತ್ತ ಹೊರಟ ಜನರು:

ಜಂಬಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ವಿಜಯನಗರ ತಾಂಡಾದಲ್ಲಿ ಪ್ರತಿ ಬೇಸಿಗೆ ವೇಳೆ ಮಾತ್ರ ನೀರಿನ ಸಮಸ್ಯೆ ಇಲ್ಲ. ಮಳೆಗಾಲ, ಚಳಿಗಾಲದಲ್ಲೂ ನೀರಿನ ಸಮಸ್ಯೆ ಇದ್ದೇ ಇದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದ ಕಾರಣದ 2 ಕಿ.ಮೀ. ಅಂತರದಲ್ಲಿರುವ ಪಕ್ಕದ ತೆಲಂಗಾಣ ರಾಜ್ಯದ ಖರಸಗುತ್ತಿ ಗ್ರಾಮದಿಂದ ನೀರು ತರುವುದು ನಮಗೆ ರೂಢಿಯಾಗಿದೆ ಎಂಬುದು ತಾಂಡಾ ನಿವಾಸಿಗಳು ಅವಲತ್ತುಕೊಳ್ಳುತ್ತಾರೆ.

ತಾಂಡಾದಲ್ಲಿ ಸುಮಾರು 200 ಕ್ಕೂ ಅಧಿಕ ಮನೆಗಳಿವೆ, ಬಹುತೇಕರು ಜಾನುವಾರು ಸಾಕಾಣಿಕೆ ಉದ್ಯೋಗ  ಸೇರಿದಂತೆ ಕೃಷಿ ಕಾರ್ಮಿಕರಿದ್ದಾರೆ. ಆದರೆ ತೀವ್ರವಾಗಿ ಕಾಡುತ್ತಿರುವ ನೀರಿನ ಸಮಸ್ಯೆಯಿಂದ ಜನರಿಗೆ ದಿಕ್ಕುದೋಚದಂತಾಗಿದ್ದು, ಹಗಲಿರುಳು ನೀರು ಎಲ್ಲಿಂದ ತರುವುದು ಎಂಬುದೇ ಚಿಂತೆಯಾಗಿದೆ.

ಹಳ್ಳ  ಹಿಡಿದ ಜೆಜೆಎಂ :

JJM work 1
ಬಳಕೆಯಾಗದೇ ಪಾಳು ಬಿದ್ದ ಜೆಜೆಂ ಯೋಜನೆಯಲ್ಲಿ ಅಳವಡಿಸಿದ ನೀರಿನ ನಳ

ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವದ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಜಲ ಜೀವನ್ ಮಿಷನ್ (ಜೆಜೆಂ) ಯೋಜನೆಯಡಿ ವಿಜಯನಗರ ತಾಂಡಾದಲ್ಲಿ ಕಾಮಗಾರಿ ಏನೋ ಪೂರ್ಣಗೊಂಡಿದೆ. ಆದರೆ ಜೆಜೆಂ ಯೋಜನೆಯ ನಲ್ಲಿಯಲ್ಲಿ ನೀರು ಯಾವಾಗ ಬರುತ್ತದೆ ಎಂದು ಬಾಯ್ತೆರೆದು ಕಾದು ಕುಳಿತುಕೊಳ್ಳುವಂತಾಗಿದೆ.

ತಾಂಡಾ ಜನರಿಗೆ ಆಸರೆ ಒಂದೇ ಕೊಳವೆ ಬಾವಿ :

“ವಿಜಯನಗರ ತಾಂಡಾದಲ್ಲಿ ಇರುವ ಎರಡು ಕೊಳವೆ ಬಾವಿಗಳ ಪೈಕಿ ಒಂದು ಬತ್ತಿ ಹೋಗಿದೆ. ಒಂದರಲ್ಲಿ ಸ್ವಲ್ಪ ನೀರು ಬರುತ್ತದೆ, ಅದು ತಾಂಡಾದ ಸುಮಾರು 1,500 ಕ್ಕೂ ಅಧಿಕ ಜನಸಂಖ್ಯೆಗೆ ಸಾಕಾಗುತ್ತಿಲ್ಲ. ಹೀಗಾಗಿ ಬೇರೆಯವರ ಹೊಲದಲ್ಲಿರುವ ಬೋರವೆಲ್‌ಗೆ ಹೋಗಿ ಬೇಡಿಕೊಂಡ ನೀರು ತರುತ್ತಿದ್ದೇವೆ. ದ್ವಿಚಕ್ರ ವಾಹನ ಇದ್ದವರು ಪಕ್ಕದ ತೆಲಂಗಾಣ ರಾಜ್ಯದ ಗ್ರಾಮದಿಂದ ನೀರು ತರಬೇಕಾದ ಪರಿಸ್ಥಿತಿ ಎದುರಾಗಿದೆ. ಅಲ್ಲಿಯೂ ಅವರು ಬೈದು ಓಡಿಸುತ್ತಿದ್ದಾರೆ” ಎನ್ನುತ್ತಾರೆ ತಾಂಡಾ ಜನರು.

“ನೀರಿನ್ ಸಲೇಕ್‌ ಬೇಗನಾ ರಾತ್ರಿ ಇಲ್ಲೇ ಮಕೊಲಾತಿದೆವ್‌, ಪೂರಾ ತಾಂಡಾ ಮಂದಿಗಿ ಒಂದೇ ಬೋರ್‌ ದಿಕ್ಕದಾ, ಅದೂಕ್ಬಿ ನೀರ್‌  ಬರಲುವ್‌, ಮುಂಜಾನಿ, ಸಂಜಿಗಿ ತೋಡೆ ಬರ್ತಾವ್‌, ಅದ್ಕೆ ನಂಗಾ-ನಿಂಗಾ ಅಂತ ನೀರಿನ ಸಲೇಕ್‌ ಎಲ್ಲೋರ್‌ ಝಗ್ಡಾ ಆಡ್ಕೊಂಡಿ ಹೊಡ್ಕೊಲತಾವ್‌, ನಮ್‌ ಕಷ್ಟ ಯಾರ್‌ ನೋಡಲುವ್‌, ನಾವ್ ನೀರಿನ ಕಡೆದ್ ಸತ್ತಿ ಬದ್ಕಲತಿದೇವ್‌‌, ಖರೇ ಯಾರ್ಬೀ ನಮ್‌ ಗೋಳು ಕೇಳಲುರ್” ಅಂತ ತಾಂಡಾದ ಮಹಿಳೆಯೊಬ್ಬರು ಈದಿನ.ಕಾಮ್‌ ದೊಂದಿಗೆ ಮಾತನಾಡಿ ಗೋಳು ತೋಡಿಕೊಂಡರು.

“ನಮ್ಮ ತಾಂಡಾದಲ್ಲಿ ನೀರಿನ ಸಮಸ್ಯೆ ಬಹಳ ಇದೆ, ಶಾಲಾ ಕಾಲೇಜಿಗೆ ಹೋಗುವ ಮಕ್ಕಳು, ಮಹಿಳೆಯರು, ವೃದ್ಧರು ನೀರಿಗಾಗಿ ರಾತ್ರಿ ನಿದ್ದೆ ಮಾಡ್ತಾ ಇಲ್ಲ. ಒಂದೇ ಬೋರ್‌ವೆಲ್ ಇದೆ, ಅದಕ್ಕೂ ಸ್ವಲ್ಪ ನೀರು ಬರ್ತಾವೆ. ನಮಗೆ ಹೊಸ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯತ್‌ ಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು” ಎಂದು ತಾಂಡಾ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಲ್ಲೆಲ್ಲೂ ಪುರುಷರದೇ ಪಾರುಪತ್ಯ; ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟು

ಈ ಬಗ್ಗೆ ಬೀದರ್ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ್ ದಿಲೀಪ್ ಬದೋಲೆ ಈದಿನ.ಕಾಮ್‌ ದೊಂದಿಗೆ ಮಾತನಾಡಿ, “ಬೇಸಿಗೆ ಕಾಲದಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡಲು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಎಲ್ಲ ತಾಲೂಕು ಮಟ್ಟದಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಔರಾದ ತಾಲೂಕಿನ ವಿಜಯನಗರ ತಾಂಡಾದಲ್ಲಿನ ನೀರಿನ ಸಮಸ್ಯೆ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತರುತ್ತೇನೆ” ಎಂದು ಹೇಳಿದರು.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X