ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಮೂಲಕ ಅವಮಾನವಾಗಿದೆ. ಅವಮಾನವಾದ ಸ್ಥಳದಲ್ಲೇ ಭಗವಂತ ಸನ್ಮಾನ ಮಾಡಿಸುವ ಕೆಲಸ ಮಾಡುತ್ತಾನೆಂಬ ವಿಶ್ವಾಸವಿದೆ. ಈ ಬಾರಿಯ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಗೆಲ್ಲಬೇಕೆಂದು ಭಗವಂತನಲ್ಲಿ ಆಶಿಸುತ್ತೇನೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿನ ಗೋವಿಂದ ಕಲ್ಯಾಣ ಮಂಟಪದಲ್ಲಿ ಬುಧವಾರ ಭಾರತೀಯ ಜನತಾ ಪಕ್ಷದಿಂದ ಹಮ್ಮಿಕೊಂಡಿದ್ದ ಬಳ್ಳಾರಿ ಗ್ರಾಮಾಂತರ ಮತ್ತು ಕೌಲ್ ಬಜಾರ್ ಮಂಡಲ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಹಲವು ಕಾರಣಗಳಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರರೂ ಕೂಡ ನಿಮ್ಮೆಲ್ಲರ ಆಶೀರ್ವಾದಿಂದ ಮತ್ತೊಮ್ಮೆ ಬಿಜೆಪಿ ಬಳ್ಳಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡವ ಹಾಗೂ ಬಿಜೆಪಿಗೆ 370 ಲೋಕಸಭಾ ಸ್ಥಾನ ಹಾಗೂ ಎನ್‌ಡಿಎ ಒಕ್ಕೂಟಕ್ಕೆ 400 ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು” ಎಂದರು.
“ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದಿಂದ ಕೊಡುಗೆ ನೀಡಬೇಕು. ಜತೆಗೆ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಶ್ರೀರಾಮುಲು ಅವರನ್ನು ಗೆಲ್ಲಿಸುವ ಕೆಲಸವನ್ನು ತಾವೆಲ್ಲರೂ ಮಾಡಬೇಕು” ಎಂದರು.
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, “ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಸೋತಿರುವುದು ನಮಗೆ ಬೇಸರ ತರಿಸಿದೆ. ಆದರೆ ಬಿಜೆಪಿ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಿದೆ. ರಾಮುಲು ಅವರನ್ನು ಗೆಲ್ಲಿಸುವ ಮೂಲಕ ಬೇಸರ ಹೋಗಲಾಡಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು, ಕ್ಷೇತ್ರದ ಮತದಾರರು ಮಾಡಬೇಕು” ಎಂದರು.
ಇದೇ ವೇಳೆ ಹಿರಿಯ ಮುಖಂಡ ರಾಮಲಿಂಗಪ್ಪ ಅವರು ಪಕ್ಷದ ಬ್ಯಾನರ್‌ನಲ್ಲಿ ಫೋಟೋ ಹಾಕದೇ ಇರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, “ಜಿಲ್ಲೆಯಲ್ಲಿ ಕುರುಬ ಸಮುದಾಯದ ಮುಖಂಡರನ್ನು ಕಡೆಗಣಿಸಲಾಗಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಮಾಜದ ಅಂಕು, ಡೊಂಕು ತಿದ್ದಲು ಚುಟುಕು ಕವನಗಳು ಉತ್ತಮ ಅಸ್ತ್ರ: ಸಾಹಿತಿ ಜೆ.ಕಲೀಂಬಾಷಾ
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ವೈ ಎಂ ಸತೀಶ್, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕ, ಹಿರಿಯ ಮುಖಂಡರುಗಳಾದ ಗುತ್ತಿಗೆನೂರು ವಿರುಪಾಕ್ಷ ಗೌಡ, ರಾಮಲಿಂಗಪ್ಪ, ಮುರಹರಿಗೌಡ, ಒಬಳೇಶ್ ಸೇರಿದಂತೆ ಇತರರು ಇದ್ದರು.