ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಸಿಂದಗಿ ತಾಲೂಕಿನ ಯರಗಲ ಗ್ರಾಮದ ಮೈಬೂಬಸಾಹೇಬ ಆಯ್ಕೆಯಾಗಿದ್ದಾರೆ.
ಯರಗಲ ಗ್ರಾಮದವರಾದ ಮೈಬೂಬಸಾಹೇಬ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಹುಟ್ಟೂರಲ್ಲಿ ಪಡೆದುಕೊಂಡು ಉನ್ನತ ಶಿಕ್ಷಣವನ್ನು ವಿದ್ಯಾಕಾಶಿ ಧಾರವಾಡದಲ್ಲಿ ಮುಗಿಸಿ, ಪ್ರಸ್ತುತ ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಮಹಿಳಾ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
ಇವರ ಕಥೆ, ಕವನ, ಗಜಲ್, ವಿಮರ್ಶೆಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ವಿಜಯವಣಿ , ಸುದ್ದಿದಿನ, ಮಿಂಚುಳ್ಳಿ, ಲೇಖನಿ, ಓದುಗದೊರೆಯಂತಹ ದಿನಪತ್ರಿಕೆಗಳು ಪ್ರಕಟಿಸುತ್ತಿವೆ. ಚಂದನವಾಹಿನಿ ಗಜಲ್ ಹರಟೆಕಟ್ಟೆ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡು ರಾಜ್ಯದಾದ್ಯಂತ ಪ್ರಸಾರ ಮಾಡಿತ್ತು.
ಎಳೆಯ ವಯಸ್ಸಿನಲ್ಲಿಯೇ ಭರವಸೆಯ ಸಾಹಿತಿಯಾಗಿ ಗುರುತಿಸಿಕೊಂಡಿರುವ ಇವರಿಗೆ ಕರುನಾಡ ಸಾಹಿತ್ಯ ರತ್ನ, ಯುವಸಾಧಕ ರತ್ನ, ತ.ರಾ.ಸು ರತ್ನ-2019, ಕಹಳೆ ಕಥಾಸಾಧಕ-2021 ಜ್ಞಾನಜ್ಯೋತಿಯಂತಹ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇವರ ಸಮಗ್ರ ಸಾಹಿತ್ಯಕ್ಕಾಗಿ ದಲಿತ ಸಾಹಿತ್ಯ ಪರಿಷತ್ತು ನೀಡುವ 2022ನೇ ಸಾಲಿನ ದಲಿತ ಸಾಹಿತ್ಯ ಪುರಸ್ಕಾರವು ಇವರಿಗೆ ಲಭಿಸಿದೆ.
2021-22ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಧನಸಹಾಯದೊಂದಿಗೆ ‘ಆಜಾದ್ ಮದಿರೆಯ ಸುತ್ತ’ ಎನ್ನುವ ಗಜಲ್ ಸಂಕಲನ ಪ್ರಕಟಿಸಿ ಸರ್ಕಾರಿ ಶಾಲೆಗಳಿಗೆ ಹಂಚಿದ್ದು, ಇವರು 19ನೇ ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಆಯ್ಕೆಯಾಗಿದ್ದಕ್ಕೆ, ಗತ ವೈಭವ ಸಾಹಿತ್ತಿಕ ಸಂಸ್ಥೆಯ ರಾಜ್ಯ ಅಧ್ಯಕ್ಷರಾದ ಡಾ.ಷಕೀಬ್ .ಎಸ್ ಹಾಗೂ ರಾಜ್ಯ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.