ಬಾಂಡ್ ದಂಧೆ ಎಂದು ಹೇಳಬಹುದಾದ ಚುನಾವಣಾ ಬಾಂಡ್ ಸೇರಿದಂತೆ ಎಲೆಕ್ಟೊರಲ್ ಟ್ರಸ್ಟ್, ಇತರೆ ದೇಣಿಗೆ, ಪಾರ್ಟಿ ಫಂಡ್‌ಗಳ ಮೂಲಕ ಬಿಜೆಪಿಯು ಬರೋಬ್ಬರಿ 12,930 ಕೋಟಿ ರೂಪಾಯಿ ಚಂದಾವನ್ನು ಪಡೆದುಕೊಂಡಿದೆ ಎಂದು ಆಡಿಟ್ ರಿಪೋರ್ಟ್ ಲೆಕ್ಕಾಚಾರದಲ್ಲಿ ಸ್ಕ್ರೋಲ್ ವೆಬ್‌ಸೈಟ್ ಹೇಳಿದೆ. ಈ ಸಂಖ್ಯೆಯನ್ನು ನಾವು ನೋಡಿದಾಗ ಕಾಂಗ್ರೆಸ್ ಸೇರಿದಂತೆ ಇತರೆ ರಾಷ್ಟ್ರೀಯ ಪಕ್ಷಗಳು ಆರ್ಥಿಕವಾಗಿ ಬಿಜೆಪಿಗಿಂತ ಭಾರೀ ದುರ್ಬಲವಾಗಿರುವುದು ಕಂಡುಬರುತ್ತದೆ.
ಬಿಜೆಪಿಗೆ ಚುನಾವಣಾ ಬಾಂಡ್ ಮೂಲಕ 8251.8 ಕೋಟಿ ರೂಪಾಯಿ ದೇಣಿಗೆ ಲಭಿಸಿದೆ. ಇದರ ಜೊತೆಗೆ, ಚುನಾವಣಾ ಟ್ರಸ್ಟ್, ನಗದು ಬ್ಯಾಂಕ್ ವರ್ಗಾವಣೆಯೂ ಸೇರಿದಂತೆ ಸುಮಾರು 4,700 ಕೋಟಿ ದೇಣಿಗೆ ಪಡೆದಿದೆ. ಬಿಜೆಪಿಯು ಒಟ್ಟು ಬರೋಬ್ಬರಿ 12,930 ಕೋಟಿ ರೂ. ಚಂದಾ ವಸೂಲಿ ಮಾಡಿದೆ ಎಂದು ಸ್ಕ್ರೋಲ್ ವರದಿ ಮಾಡಿದೆ.
ವಿಪಕ್ಷಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತಿರುವ ಬಿಜೆಪಿ
ಈ ನಡುವೆ ಕಾಂಗ್ರೆಸ್‌ನ ಖಾತೆಯಲ್ಲಿರುವ ಹಣವನ್ನು ಬಳಸದಂತೆ ನಿರ್ಬಂಧ ಹೇರಲಾಗಿದೆ. ಇದು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಕೇಂದ್ರ ಸರ್ಕಾರವು ವಿಪಕ್ಷಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಪ್ರಯತ್ನದ ಭಾಗವಾಗಿದೆ ಎಂದು ಹೇಳಲಾಗಿದೆ.
“ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೇ ಕಾಂಗ್ರೆಸ್‌ನ ಖಾತೆಯಲ್ಲಿರುವ ಹಣವನ್ನು ಕಿತ್ತುಕೊಳ್ಳಲಾಗುತ್ತಿದೆ. ನಮಗೆ ₹210 ಕೋಟಿ ದಂಡ ವಿಧಿಸಲಾಗಿದೆ. ನಮ್ಮನ್ನು ಆರ್ಥಿಕವಾಗಿ ಸೋಲಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಕಾಂಗ್ರೆಸ್ ವಿರುದ್ಧ ಕ್ರಿಮಿನಲ್ ಕ್ರಮ ತೆಗೆದುಕೊಂಡಿದೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
LIVE: Press Conference | AICC HQ, New Delhi https://t.co/EkQlg4Re4d
— Rahul Gandhi (@RahulGandhi) March 21, 2024
ಚುನಾವಣಾ ಬಾಂಡ್ ಮೂಲಕ ಕಾಂಗ್ರೆಸ್ ಗಳಿಸಿದ ಒಟ್ಟು ಚಂದಾ 2,000 ಕೋಟಿ ರೂ.ಗಿಂತ ಕಡಿಮೆ ಇದೆ. ಇದು ಕಡಿಮೆ ಮೊತ್ತವೇನಲ್ಲವಾದರೂ, ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ಪಡೆದಿರುವ ಚಂದಾ ಕಡಿಮೆಯೇ. ಇನ್ನು ಸಿಪಿಐಎಂ, ಸಿಪಿಐ ಸೇರಿದಂತೆ ಎಡಪಕ್ಷಗಳು ಬಾಂಡ್ ಮೂಲಕ ಚಂದಾ ಪಡೆದಿಲ್ಲವೆಂದು ಘೋಷಿಸಿವೆ.
ಯಾವುದೇ ರಾಜಕೀಯ ಪಕ್ಷಕ್ಕೂ ಬಾಂಡ್‌ನಿಂದ ಮಾತ್ರ ಚಂದಾ ಸಿಗುವುದಲ್ಲ. ಬೇರೆ ಬೇರೆ ರೂಪದಲ್ಲಿ ಪಕ್ಷಗಳಿಗೆ ದೇಣಿಗೆ, ಹಣ ದೊರೆಯುತ್ತದೆ. ಸದ್ಯಕ್ಕೆ ಚುನಾವಣಾ ಬಾಂಡ್ ಮತ್ತು ಕೆಲವು ಹಣದ ಮೂಲವನ್ನು ಸೇರಿಸಿದರೆ ಬಿಜೆಪಿ ಬಳಿ 12,930 ಕೋಟಿ ರೂಪಾಯಿ ಇದೆ. ಇನ್ನು ಬೇರೆ ಆದಾಯವನ್ನು ಸೇರಿಸಿದರೆ ಇನ್ನಷ್ಟು ಹೆಚ್ಚಾಗಬಹುದು.
ಆದರೆ, ವಿಪಕ್ಷ ಕಾಂಗ್ರೆಸ್ ಬಳಿ ಇರುವುದು 2,000 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತ. ಅದು ಚುನಾವಣಾ ಬಾಂಡ್, ಟ್ರಸ್ಟ್, ಪಾರ್ಟಿ ಫಂಡ್ ಎಲ್ಲವನ್ನೂ ಒಳಗೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಆರ್ಥಿಕ ಅಂತರ ಅಗಾಧವಾಗಿದೆ. ಈ ಅಗಾಧ ಅಂತರದ ನಡುವೆಯೂ ಈಗ ಕಾಂಗ್ರೆಸ್‌ನ ಖಾತೆಯನ್ನೇ ಸೀಝ್ ಮಾಡಲಾಗಿದೆ. ಈಗಿನ ಚುನಾವಣೆಯಲ್ಲಿ ಹಣ ಇರುವ ಪಕ್ಷ ಅದ್ದೂರಿಯಾಗಿ ಪ್ರಚಾರ ಮಾಡಿದರೆ, ಆರ್ಥಿಕವಾಗಿ ಹಿಂದುಳಿದಿರುವ ಪಕ್ಷಗಳು ಪ್ರಚಾರದಲ್ಲಿ ಹಿಂದೆ ಬೀಳಬಹುದು.
1,000 ರೂ. ದೇಣಿಗೆ ನೀಡಿದ ಕೋಟ್ಯಾಧಿಪತಿಗಳು!
ಬಿಜೆಪಿಯು ಚುನಾವಣಾ ಬಾಂಡ್ ಮೂಲಕ 8,251.8 ಕೋಟಿ ರೂಪಾಯಿ ಪಡೆದಿರುವುದು ಮಾತ್ರವಲ್ಲದೆ, ತಾನು 2014ರಲ್ಲಿ ಅಧಿಕಾರಕ್ಕೆ ಬರುವ ಮುನ್ನವೇ ಹಲವಾರು ದೇಣಿಗೆ ಅಭಿಯಾನವನ್ನು ನಡೆಸಿದೆ. ಬಿಜೆಪಿ ಬೆಂಬಲಿಗರು ತಮ್ಮ ಆಸ್ತಿಪಾಸ್ತಿ ಮಾರಿ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿರುವ ಉದಾಹರಣೆಗಳು ಕೂಡಾ ಇದೆ. ಆದರೆ ಇತ್ತೀಚೆಗೆ ಬಿಜೆಪಿಯ ಕೋಟ್ಯಾಧಿಪತಿ ನಾಯಕರುಗಳು ಮಾತ್ರ ಒಂದೆರಡು ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬರೋಬ್ಬರಿ 1,000 ರೂ. ಚಂದಾವನ್ನು ನೀಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತವನ್ನು ದಾನ ಮಾಡಿದವರ ಪಟ್ಟಿಯಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಸ್ಮೃತಿ ಇರಾನಿ ಕೂಡಾ ಸೇರಿದ್ದಾರೆ. 2019ರ ಮಾಹಿತಿ ಪ್ರಕಾರ ಸ್ಮೃತಿ ಇರಾನಿಯ ಆದಾಯ ಸುಮಾರು 8,000 ಕೋಟಿ ರೂಪಾಯಿ ಆಗಿದೆ. ಆದರೆ, ಅವರು ಪಕ್ಷಕ್ಕೆ ಕೊಟ್ಟ ದೇಣಿಗೆ 1,000 ರೂ. ಮಾತ್ರ.
ಇನ್ನು ಪ್ರಧಾನಿ ಮೋದಿ, ಗೃಹ ಮಂತ್ರಿ ಅಮಿತ್ ಶಾ, ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಅವರು 2,000 ರೂ. ದೇಣಿಗೆ ನೀಡಿದ್ದಾರೆ. ಜಿಲ್ಲೆಯ ನಾಯಕರುಗಳು ಪಕ್ಷಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿರುವಾಗ ಕೇಂದ್ರದ ನಾಯಕರುಗಳು ಮಾತ್ರ ಒಂದೆರಡು ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ.
ಬಿಜೆಪಿಯ ದೇಣಿಗೆ ಅಭಿಯಾನಗಳು!
2014ರಲ್ಲಿ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಲು ಬಿಜೆಪಿ ಚಂದಾ ಅಭಿಯಾನ ಮಾಡಿದೆ. ಆಗ ಬಿಜೆಪಿ ಪಕ್ಷಕ್ಕೆ ದಾನ ನೀಡಿದವರ ಹೆಸರು, ಫೋಟೋ ಟ್ವೀಟ್ ಮಾಡಿತ್ತು. 2018ರಿಂದ 2023ರವರೆಗೆ ಬೇರೆ ಬೇರೆ ಪಕ್ಷಗಳಿಗೆ ನೀಡಲಾದ ದೇಣಿಗೆಯಲ್ಲಿ ಬಿಜೆಪಿಗೆ ಇತರೆ ಪಕ್ಷಕ್ಕಿಂತ ಅತ್ಯಧಿಕ ಚಂದಾ ಪಡೆದಿದೆ. 2014ರಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದ ರಾಜ್‌ನಾಥ್ ಸಿಂಗ್ ನರೇಂದ್ರ ಮೋದಿಯನ್ನು ಗೆಲ್ಲಿಸಲು ನಿಮ್ಮ ಒಂದು ತಿಂಗಳ ವೇತನವನ್ನು ದಾನವಾಗಿ ನೀಡಿ ಎಂದು ಬಿಜೆಪಿ ನಾಯಕರುಗಳಿಗೆ ಹೇಳಿದ್ದರು.
Stand with PM Modi for safe and secure borders of India.
To elect Shri @narendramodi as the Prime Minister again, donate to BJP through NaMo App and get an opportunity to meet him. Also win exciting merchandise. https://t.co/eAMBvvjxkt #NaMoAgain pic.twitter.com/nMkoGmnOej
— BJP (@BJP4India) December 8, 2018
2018ರಲ್ಲಿ ಬಿಜೆಪಿ ಒಂದು ಟ್ವೀಟ್ ಮಾಡಿದೆ. ಅದರಲ್ಲಿ, ಪ್ರಧಾನಿ ಮೋದಿ ಯೋಧರೊಂದಿಗೆ ಇರುವ ಚಿತ್ರವನ್ನು ಸೇರಿಸಲಾಗಿದೆ. “ಮೋದಿ ಯೋಧರಿಗಾಗಿ ಕೆಲಸ ಮಾಡುತ್ತಾರೆ. ಸುರಕ್ಷಿತ ಭಾರತಕ್ಕಾಗಿ ಜೊತೆಯಾಗಿ, ಮತ್ತೆ ಮೋದಿ ಪ್ರಧಾನಿಯಾಗಲು ದೇಣಿಗೆ ನೀಡಿ” ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ. ಇಲ್ಲಿ ಯೋಧರನ್ನು ಬಳಸಿಕೊಂಡು ಬಿಜೆಪಿ ತನ್ನ ಪ್ರಚಾರ ಮಾಡಿ, ಪಕ್ಷಕ್ಕೆ ದೇಣಿಗೆ ಕೇಳಿರುವುದು ಖಂಡನಾರ್ಹವಾದರೂ, ಅದರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ.
ಇದಾಗಿ ನಾಲ್ಕು ವರ್ಷದ ಬಳಿಕ ಅಗ್ನಿವೀರ್ ಯೋಜನೆ ಜಾರಿ ಮಾಡಲಾಯಿತು. ಈ ಯೋಜನೆಯಡಿ 17ರಿಂದ 21 ವರ್ಷದ ಯುವಕರನ್ನು ಕೇವಲ ನಾಲ್ಕು ವರ್ಷಕ್ಕಾಗಿ ನೇಮಿಸಲಾಗುತ್ತದೆ. ಯೋಧರಿಗೆ ನೀಡುವ ಪಿಂಚಣಿ ಹಣವನ್ನು ಉಳಿಸಲು ಸರ್ಕಾರ ಮಾಡಿರುವ ಪ್ಲ್ಯಾನ್ ಇದು ಎಂದು ವಿಪಕ್ಷಗಳು ಆರೋಪಿಸಿವೆ.
ಇನ್ನು ಬಿಜೆಪಿ 2021ರ ಡಿಸೆಂಬರ್ 25ರಂದು ಒಂದು ಟ್ವೀಟ್ ಮಾಡಿ 2021ರ ಡಿಸೆಂಬರ್ 25ರಿಂದ 2022ರ ಫೆಬ್ರವರಿ 11ರವರೆಗೆ ಒಂದು ಅಭಿಯಾನ ಮಾಡುವ ಬಗ್ಗೆ ತಿಳಿಸಿದೆ. “ಕ್ಯಾಂಪೇನ್ ಟು ಮೇಕ್ ಇಂಡಿಯಾ ಗ್ರೇಟ್” ಎಂಬ ಅಭಿಯಾನ ಇದಾಗಿದೆ. ಈ ಟ್ವೀಟ್‌ನಲ್ಲಿ ಅಟಲ್ ಬಿಹಾರಿ ವಾಜಪೇಯಿ, ದೀನ್ ದಯಾಲ್ ಉಪಾಧ್ಯಯರ ಪುಣ್ಯತಿಥಿಗಾಗಿ ಐದು ರೂಪಾಯಿಯಿಂದ ಹಿಡಿದು ಒಂದು ಸಾವಿರ ರೂಪಾಯಿವರೆಗೆ ಚಂದಾ ನೀಡಲು ಬಿಜೆಪಿ ಮನವಿ ಮಾಡಿದೆ. ಇನ್ನು 2018ರಲ್ಲಿ ಧನತ್ರಯೋದಶಿ ಸಂದರ್ಭದಲ್ಲಿಯೂ ಬಿಜೆಪಿ ಚಂದಾ ನೀಡಿ ಎಂದು ಕೇಳಿದೆ.
2018ರಲ್ಲಿ ಚುನಾವಣಾ ಬಾಂಡ್ ಜಾರಿಯಾಗಿದೆ. ಈ ವರ್ಷದಲ್ಲಿ ಬಿಜೆಪಿ ಹಲವಾರು ಚಂದಾ ಅಭಿಯಾನವನ್ನು ಮಾಡಿದೆ. 2017-18ರಿಂದ 2022-23ರ ನಡುವೆ ಬಿಜೆಪಿಗೆ ಸದಸ್ಯತ್ವ ಶುಲ್ಕ ಮತ್ತು ಅಜೀವನ ಸಂಯೋಗ ನಿಧಿಯಿಂದ 209 ಕೋಟಿ ರೂಪಾಯಿ ಲಭಿಸಿದೆ. ಇದರಲ್ಲಿ 170 ಕೋಟಿ ಅಜೀವನ ಸಂಯೋಗ ನಿಧಿಯಿಂದಲೇ ಲಭಿಸಿದೆ.
ಐನ್ನೂರು ರೂಪಾಯಿಗೆ ದಾಖಲೆ, ಕೋಟಿಗಿಲ್ಲ!
ಬಿಜೆಪಿಗೆ ನೀವು ಐನ್ನೂರು ರೂಪಾಯಿ ದೇಣಿಗೆ ನೀಡಿದರೂ ಇಮೇಲ್, ಮೊಬೈಲ್ ನಂಬರ್‌ಗಳನ್ನು ನೀಡಬೇಕಾಗುತ್ತದೆ. ಫಾರ್ಮ್‌ನಲ್ಲಿ ನಿಮ್ಮ ಎಲ್ಲ ಮಾಹಿತಿ ಭರ್ತಿ ಮಾಡಬೇಕಾಗುತ್ತದೆ. 25 ಸಾವಿರಕ್ಕಿಂತ ಅಧಿಕ ದೇಣಿಗೆ ನೀಡಿದರೆ ಪ್ಯಾನ್ ಕಾರ್ಡ್ ಮಾಹಿತಿ ಕೂಡಾ ನೀಡಬೇಕಾಗುತ್ತದೆ. ಈ ಹಿಂದೆ ದೇಣಿಗೆ ನೀಡಿದವರ ಹೆಸರನ್ನು ಬಿಜೆಪಿಯೇ ಟ್ವೀಟ್ ಮಾಡಿದೆ. ಆದರೆ ವಿಶೇಷವೆಂದರೆ ಬಿಜೆಪಿಗೆ ಚುನಾವಣಾ ಬಾಂಡ್ ಮೂಲಕ ಕೋಟ್ಯಾಂತರ ರೂಪಾಯಿ ಚಂದಾ ನೀಡಿದವರ ಮಾಹಿತಿಯನ್ನೇ ಪಕ್ಷ ಹೊಂದಿಲ್ಲ ಎಂದು ಹೇಳಿದೆ. ಯಾರು ಈ ದೇಣಿಗೆ ನೀಡಿರುವುದು ಎಂಬ ರೆಕಾರ್ಡ್ ನಾವು ಹೊಂದಿಲ್ಲ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಹೇಳಿದೆ.
ಜನ ಸಾಮಾನ್ಯರು ನೀಡುವ ಐನ್ನೂರು ರೂಪಾಯಿಗೂ ಇಮೇಲ್, ಮೊಬೈಲ್ ಸಂಖ್ಯೆ, ಹೆಸರು ಮೊದಲಾದ ದಾಖಲೆ ಕೇಳುವ ಬಿಜೆಪಿಯು ತನಗೆ ದೊರೆತ ಕೋಟ್ಯಾಂತರ ರೂಪಾಯಿ ದೇಣಿಗೆಯ ಪ್ರಮುಖ ದಾಖಲೆಯನ್ನು ಹೊಂದಿಲ್ಲವೆಂದರೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ.