ಬೆಂಗಳೂರಿನ ನಗರ್ತ ಪೇಟೆಯಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ನಡೆದಿದ್ದ ಪ್ರತಿಭಟನೆಯು ಈಗ ಬಿಜೆಪಿಗೆ ಮುಳುವಾಗಿದೆ. ದ್ವೇಷ ಭಾಷಣಗೈದಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಮತ್ತೊಂದು ಎಫ್ಐಆರ್ ಬೆಂಗಳೂರಿನಲ್ಲಿ ದಾಖಲಾಗಿದೆ.
ECI ನಿರ್ದೇಶನದಂತೆ, ಬೆಂಗಳೂರು ಚುನಾವಣಾಧಿಕಾರಿಗಳು 21.03.2024 ರಂದು ಬೆಂಗಳೂರಿನ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ RP ಕಾಯ್ದೆಯ 123 (3A), 125 ಮತ್ತು 123 (3) ರ ಅಡಿ ಕೇಂದ್ರ ಸಚಿವೆ ಮತ್ತು ಸಂಸದರಾದ Ms ಶೋಭಾ ಕರಂದ್ಲಾಜೆ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
— Chief Electoral Officer, Karnataka (@ceo_karnataka) March 21, 2024
ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ಚುನಾವಣಾ ಆಯೋಗವು, “ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಯವರು ಮಾ.21ರಂದು ಬೆಂಗಳೂರಿನ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಜನಪ್ರತಿನಿಧಿ ಕಾಯ್ದೆಯ 123 (3A), 125 ಮತ್ತು 123 (3) ಯ ಅನ್ವಯ ಕೇಂದ್ರ ಸಚಿವೆ ಮತ್ತು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಎಫ್ಐಆರ್ ದಾಖಲಾಗಿದೆ” ಎಂದು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.
ತಮಿಳುನಾಡಿನಲ್ಲೂ ದಾಖಲಾಗಿತ್ತು ಎಫ್ಐಆರ್
ಬೆಂಗಳೂರಿನ ನಗರತ್ ಪೇಟೆಯಲ್ಲಿ ನಡೆದಿದ್ದ ‘ಲೌಡ್ ಸ್ಪೀಕರ್’ ಘಟನೆಗೆ ಸಂಬಂಧಿಸಿದಂತೆ ಮುಸ್ಲಿಂ ಯುವಕರ ವಿರುದ್ದ ನಿನ್ನೆ ಬಿಜೆಪಿ ಹಾಗೂ ಸಂಘಪರಿವಾರ ನಡೆಸಿದ ಪ್ರತಿಭಟನೆಯ ವೇಳೆ ಬಿಜೆಪಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮಿಳುನಾಡಿನ ಜನರನ್ನು ಅವಹೇಳನಗೈದಿರುವುದಕ್ಕೆ ತಮಿಳುನಾಡಿನಲ್ಲಿ ಎಫ್ಐಆರ್ ದಾಖಲಾಗಿತ್ತು.
‘ತಮಿಳುನಾಡಿನ ಜನರು ಬೆಂಗಳೂರಿನ ಕೆಫೆಗಳಲ್ಲಿ ಬಾಂಬ್ ಇಡುತ್ತಿದ್ದಾರೆ’ ಎಂದು ಹೇಳಿಕೆ ನೀಡಿದ್ದ ಶೋಭಾ ಕರಂದ್ಲಾಜೆ ವಿರುದ್ಧ ಮಧುರೈನಲ್ಲಿ ತಮಿಳುನಾಡು ಪೊಲೀಸರು ಬುಧವಾರ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು.
ಶೋಭಾ ಕರಂದ್ಲಾಜೆ ಹೇಳಿದ್ದೇನು?
ಪ್ರತಿಭಟನೆಯ ವೇಳೆ ಶೋಭಾ ಕರಂದ್ಲಾಜೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಬೆಂಗಳೂರಿನ ರಾಮೇಶ್ವರಂ ಕೆಫೆ ಘಟನೆಯನ್ನು ಉಲ್ಲೇಖಿಸಿದ್ದರು. ಮಾತಿನ ವೇಳೆ, “ತಮಿಳುನಾಡಿನ ಜನರು ಅಲ್ಲಿ ತರಬೇತಿ ಪಡೆದು ಇಲ್ಲಿ ಬಂದು ಬಾಂಬ್ ಹಾಕುತ್ತಾರೆ. ಕೆಫೆಯಲ್ಲಿ ಬಾಂಬ್ ಇಟ್ಟಿದ್ದೂ ಕೂಡ ಅಲ್ಲಿಂದ ಬಂದವರು” ಎಂದು ಹೇಳಿಕೆ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
FIR against Union Minister and BJP leader @ShobhaBJP in Madurai, Tamil Nadu under 153, 153 A, 505 (1) (b) 505 (2) for linking Tamils to the Rameshwaram Cafe blast in Bengaluru. https://t.co/DcbYwTSnqm
— Mohammed Zubair (@zoo_bear) March 20, 2024
ಈ ಬಗ್ಗೆ ಪ್ರತಿಕ್ರಿಯಿಸಿದ್ದ ತಮಿಳುನಾಡು ಸಿಎಂ ಸ್ಟ್ಯಾಲಿನ್, “ಕೇಂದ್ರದ ಬಿಜೆಪಿ ಸಚಿವೆ ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ. ಬೇಜವಾಬ್ದಾರಿತನದಿಂದ ಕೂಡಿದ ಹೇಳಿಕೆ ಇದು. ತಮಿಳರು ಮತ್ತು ಕನ್ನಡಿಗರ ನಡುವೆ ಒಡಕುಂಟು ಮಾಡಲು ಈ ಹೇಳಿಕೆ ನೀಡಿದ್ದಾರೆ. ಶಾಂತಿ, ಸೌಹಾರ್ದತೆ ಮತ್ತು ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಉಂಟು ಮಾಡಿರುವ ಶೋಭಾ ವಿರುದ್ಧ ಚುನಾವಣಾ ಆಯೋಗ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದರು. ಅಲ್ಲದೇ, ಡಿಎಂಕೆ ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಿತ್ತು. ತನ್ನ ಹೇಳಿಕೆಯು ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ, ಶೋಭಾ ಕರಂದ್ಲಾಜೆ ತಮಿಳುನಾಡಿನ ಜನರ ಕ್ಷಮೆಯಾಚಿಸಿದ್ದರು.
